ಕೆಂಪು ಮಣ್ಣಿನ ರಕ್ತದ ಗತವೈಭವ ಎಂತಹದ್ದು ಅನ್ನೋದನ್ನ ಎಲ್ಲರೂ ಮರೆತೋಗಿದ್ದಾರೆ. ಅದನ್ನು ನೆನಪು ಮಾಡಿಕೊಡುವ ಸಲುವಾಗಿ ನೆನಪಿರಲಿ ಪ್ರೇಮ್ ಅಖಾಡಕ್ಕಿಳಿಯುತ್ತಿದ್ದಾರೆ.
ಸ್ಯಾಂಡಲ್ವುಡ್ನ ಸ್ಫುರದ್ರೂಪಿ ನಟರ ಪೈಕಿ ನೆನಪಿರಲಿ ಪ್ರೇಮ್ ಕೂಡ ಒಬ್ಬರು. ಇಂದು ಅವರ ಹುಟ್ಟುಹಬ್ಬ. 48ನೇ ವಸಂತಕ್ಕೆ ಕಾಲಿಟ್ಟಿರುವ ಲವ್ಲಿಸ್ಟಾರ್ ಪ್ರೇಮ್ಗೆ ಆತ್ಮೀಯರಿಂದ, ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ವಿಶೇಷ ಅಂದರೆ ಜನ್ಮದಿನದ ಸಂಭ್ರಮದಲ್ಲಿರುವ ಚಾರ್ಮಿನರ್ ಹೀರೋ, ಹೊಸ ಸಿನಿಮಾದ ಗುಟ್ಟು ಬಿಟ್ಟುಕೊಟ್ಟು ಫ್ಯಾನ್ಸ್ಗೆ ಸರ್ಪೈಸ್ ಕೊಟ್ಟಿದ್ದಾರೆ.
ಪ್ರೇಮಂಪೂಜ್ಯಂ ಸಿನಿಮಾದ ನಂತರ ಪ್ರೇಮ್ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ಆದ್ರೀಗ ಹೊಸದೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರದ ಪೋಸ್ಟರ್ ಹಂಚಿಕೊಂಡು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ಮರೆತು ಹೋಗಿರುವ ಕೆಂಪು ಮಣ್ಣಿನ ರಕ್ತದ ಗತವೈಭವ ನೆನಪಿಸಲು ಬರುವುದಾಗಿ ದೊಡ್ಡದಾಗಿ ಸೂಚನೆ ನೀಡಿದ್ದಾರೆ.
ಇದು ಪ್ರೇಮ್ ನಟನೆಯ 27ನೇ ಚಿತ್ರ, ನಿರ್ದೇಶಕ ಕೀರ್ತಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸುಮಾರು 20 ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿರುವ, ನಿರ್ದೇಶಕ ಪಿಎನ್ ಸತ್ಯ, ಆರ್ ಚಂದ್ರು, ಅರಸು ಅಂತಾರೆಯವರ ಗರಡಿಯಲ್ಲಿ ಪಳಗಿರುವ ಕೀರ್ತಿ, ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ಕುಮಾರ್ ಜೊತೆ ಅಂದೊಂದಿತ್ತು ಕಾಲ ಅನ್ನೋ ಸಿನಿಮಾಗೆ ಡೆಬ್ಯೂ ಡೈರೆಕ್ಟ್ ಮಾಡಿದ್ದಾರೆ. ಈ ಚಿತ್ರದ ಬಿಡುಗಡೆಗೂ ಮೊದಲೇ ನಿರ್ದೇಶಕ ಕೀರ್ತಿಯವರಿಗೆ ಲವ್ಲಿಸ್ಟಾರ್ ಕಾಲ್ಶೀಟ್ ಸಿಕ್ಕಿದೆ. ಪ್ರೇಮ್ ಅವ್ರನ್ನ ಹಿಂದ್ಯಾರು ತೋರಿಸಿರದ ಅವತಾರದಲ್ಲಿ ತೋರಿಸಬೇಕು ಅಂತ ಹೊರಟಿರೋ ಕೀರ್ತಿ, ಚಾರ್ಮಿನರ್ ಚೆಲುವನ್ನ ಆ್ಯಕ್ಷನ್ ಹೀರೋ ಪಟ್ಟಕ್ಕೇರಿಸುತ್ತಿದ್ದಾರೆ.
ಪ್ರೇಮ್ಗಾಗಿ ರಕ್ತಸಿಕ್ತ ಕಥೆಯೊಂದನ್ನ ನಿರ್ದೇಶಕ ಕೀರ್ತಿ ಸಿದ್ದಪಡಿಸಿದ್ದಾರೆ. 1980ರ ದಶಕದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ನಡೆದಂತಹ ನೈಜ ಘಟನೆಯನ್ನ ಆಧಾರವಾಗಿಟ್ಟುಕೊಂಡಿದ್ದಾರೆ. ಇದೊಂದು ರಕ್ತಸಿಕ್ತ ಕಥೆಯಾಗಿದ್ದು, ಚಿತ್ರದಲ್ಲಿ ಪ್ರೇಮ್ ರಾ ಅಂಡ್ ರಗಡ್ ಲುಕ್ನಲ್ಲಿ ಮಿಂಚಲಿದ್ದಾರೆ. ಹೈವೋಲ್ಟೇಜ್ ಆ್ಯಕ್ಷನ್ ಸೀನ್ಗೆ ಕಿಚ್ಚು ಹಚ್ಚಿ ಬೆಂಕಿನುಂಡೆಯಂತೆ ಕೆಂಡಕಾರಲಿದ್ದಾರೆ.
ಇಲ್ಲಿವರೆಗೂ ನೀವು ಲವ್ಲಿಸ್ಟಾರ್ ಪ್ರೇಮ್ ಅವ್ರನ್ನ ರೊಮ್ಯಾಂಟಿಕ್ ಹೀರೋ ಆಗಿ ನೋಡಿದ್ದೀರಿ. ಮುಂಬರುವ 27ನೇ ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಪ್ರೇಮ್ ಧಗಧಗಿಸ್ತಾರೆ. ಅದಕ್ಕಾಗಿ ಈಗಿಂದಲೇ ತಯ್ಯಾರಿ ಶುರುವಿಟ್ಟುಕೊಳ್ಳುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಪ್ರೇಮ್ ಸಿನಿಮಾದ ಮುಹೂರ್ತ ನೆರವೇರಲಿದೆ. ಜೂನ್ ಅಂತ್ಯದ ವೇಳೆ ಚಿತ್ರತಂಡ ಶೂಟಿಂಗ್ಗೆ ಹೊರಡಲಿದೆ. ಈ ಚಿತ್ರಕ್ಕೆ ತುಮಕೂರು ಮೂಲದ ನಿರ್ಮಾಪಕ ಮಧುಚಂದ್ರ ಅವರು ಬಂಡವಾಳ ಹೂಡುತ್ತಿದ್ದಾರೆ. ಸಂತೋಷ್ ಮುಂದಿನಮನೆ, ಶರಣ್ ಅಲಮೇಲು ಸಂಭಾಷಣೆ ಚಿತ್ರಕ್ಕಿದ್ದು, ಉಳಿದ ತಂತ್ರಜ್ಞರು ಹಾಗೂ ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ.