ನಟರಾಕ್ಷಸ ಡಾಲಿ ಧನಂಜಯ್ ಅವರಿಗೆ ಆ. 23 ರಂದು ಹುಟ್ಟುಹಬ್ಬದ ಸಂಭ್ರಮ. ಧನಂಜಯ್ ಜನ್ಮದಿನದ ಅಂಗವಾಗಿ ಹೊಸ ಸಿನಿಮಾಗಳ ಪೋಸ್ಟರ್, ಟೀಸರ್ ಉಡುಗೊರೆಯಾಗಿ ಸಿಕ್ಕಿದೆ. ಅದರಂತೆ ‘ಬಡವ ರಾಸ್ಕಲ್’ ಚಿತ್ರತಂಡದಿಂದ ಡಾಲಿ ಬರ್ತ್ ಡೇ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಮಧ್ಯರಾತ್ರಿ 12 ಗಂಟೆಗೆ ಟೈಟಲ್ ಹಾಗೂ ಫಸ್ಟ್ ಲುಕ್ ಮೋಶನ್ ಪೋಸ್ಟರ್ ಅನೌನ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ’ಅಣ್ಣ ಫ್ರಂ ಮೆಕ್ಸಿಕೋ’ ಎಂಬ ಟೈಟಲ್ ಇಡಲಾಗಿದೆ.
2021ರಲ್ಲಿ ತೆರೆಗೆ ಬಂದ ‘ಬಡವ ರಾಸ್ಕಲ್’ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ‘ಡಾಲಿ ಪಿಕ್ಚರ್ಸ್’ ನಡಿ ನಿರ್ಮಿಸಿ ನಟಿಸಿದ್ದ ‘ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇಂದು ’ಅಣ್ಣ ಫ್ರಂ ಮೆಕ್ಸಿಕೋ’ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪೆಂಡೆಂಟ್ ಆಭರಣ ಧರಿಸಿ, ಸೂಟ್ ತೊಟ್ಟಿರುವ ಧನಂಜಯ್ ಲುಕ್ ರಿವೀಲ್ ಮಾಡದೇ ಚಿತ್ರತಂಡ ನಿರೀಕ್ಷೆ ಹೆಚ್ಚಿಸಿದೆ.
’ಅಣ್ಣ ಫ್ರಂ ಮೆಕ್ಸಿಕೋ’ ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕ ಆ್ಯಕ್ಷನ್ ಎಂಟರ್ ಟೈನರ್ ಚಿತ್ರವಾಗಿದ್ದು, ಅಜ್ಜಿ ಮೊಮ್ಮಗನ ಬಾಂಧವ್ಯದ ಕಥೆಯೂ ಸಿನಿಮಾದಲ್ಲಿರಲಿದೆ. ಸತ್ಯ ರಾಯಲ್ ನಿರ್ಮಾಣದಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದು, ನವೆಂಬರ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದ್ದು, ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.