-ದಿಢೀರ್ ಶ್ರೀಮಂತಿಕೆಯ ಆಸೆ ಮತ್ತು ರೈಸ್ ಪುಲ್ಲಿಂಗ್ ವಂಚನೆ!
-ಆಂಧ್ರ ಗಡಿ ಭಾಗದ ಬಹು ಕೋಟಿ ದಂಧೆ!
ಮತ್ತೊಮ್ಮೆ ರೈಸ್ ಪುಲ್ಲಿಂಗ್ ದಂಧೆ ಸದ್ದು ಮಾಡಿದೆ. ಹಣವಂತ ಕುಳಗಳಿಗೆ ಸಂಪತ್ತು ವೃದ್ಧಿಸುವ ಆಸೆ ಕುದುರಿಸಿ ಕೋಟಿ ಕೋಟಿ ಮುಂಡಾಯಿಸೋ ಈ ದಂಧೆಯ ಹಿಂದೆ ದೊಡ್ಡದೊಂದು ದಂಡೇ ಕಾರ್ಯಗತವಾಗಿರೋದು ಹಳೇ ಸಂಗತಿ. ಇದೀಗ ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಂಥಾದ್ದೇ ಒಂದು ಖದೀಮರ ದಂಡಿಗೆ ಕೈಕೋಳ ತೊಡಿಸಿದ್ದಾರೆ. ಇದೀಗ ಇಂಥಾದ್ದೇ ಒಂದು ಗ್ಯಾಂಗು ಹೊಸಕೋಟೆಯಲ್ಲಿ ಪೊಲೀಸರ ಕೈಗೆ ತಗುಲಿಕೊಂಡಿದೆ. ನೆರೆಯ ಆಂಧ್ರಪ್ರದೇಶ ಮೂಲದ ಈ ಚಾಲಾಕಿ ವಂಚಕರಿಂದ ಈಗ ಫ್ರೆಶಾಗಿ ಮುಂಡಾಯಿಸಿಕೊಂಡಾತನೇನು ಅಮಾಯಕನಲ್ಲ. ಈತ ಜನಪ್ರತಿನಿಧಿಯಾಗಾಗಿ ವಿಧಾನಸೌಧ ಸೇರಿಕೊಳ್ಳುವ ಅವಕಾಶದಿಂದ ಸ್ವಲ್ಪದರಲ್ಲೇ ಗೋತಾ ಹೊಡೆದಿದ್ದ ಆಸಾಮಿ. ಕಾಂಗ್ರೆಸ್ನಲ್ಲಿ ತುಸು ಪ್ರಭಾವ ಹೊಂದಿರೋ ನಾಯಕ. ಈತ ಬೆಂಗಳೂರಿನ ವಿಧಾನಸಭಾ ಕ್ಷೇತ್ರವೊಂದರ ಪರಾಜಿತ ಕಾಂಗ್ರೆಸ್ ಕ್ಯಾಂಡಿಡೇಟು. ಸದರಿ ಮೂರ್ತಿಗಳು ಅಖಂಡ ಅರೂವರೆ ಕೋಟಿ ಕಾಸನ್ನು ವೃತ್ತಿಪರ ಕಳ್ಳರ ಕೈಗಿಟ್ಟು ಸರಿಯಾಗಿಯೇ ಪಿಗ್ಗಿಬಿದ್ದಿದ್ದಾರೆ!
ದಿಢೀರ್ ಶ್ರೀಮಂತಿಕೆಯ ಆಸೆ
ಈ ಹಣವಂತರಿಗೆ ಮತ್ತಷ್ಟು ಹಣ ರೊಪ್ಪಂಥ ತಿಜೋರಿ ಸೇರಲಿ ಎಂಬ ಅತಿಯಾಸೆ ಇರುತ್ತದಲ್ಲಾ? ಅದೇ ಭೂಮಿಕೆಯಲ್ಲಿ ಪಕ್ಕಾ ಮೌಢ್ಯದೊಂದಿಗೆ ರೂಪುಗೊಂಡ ದಂಧೆ ರೈಸ್ಪುಲ್ಲಿಂಗ್. ಇದು ಅಪ್ಪಟ ನಾಮ ತೀಡುವ ಸ್ಕೀಮೆಂಬ ವಿಚಾರ ಅದೆಷ್ಟು ಬಾರಿ ಸಾಬೀತಾದರೂ ಜನ ಮಾತ್ರ ಮುಠ್ಠಾಳರಂತೆ ಬಲಿಯಾಗುತ್ತಲೇ ಇರುತ್ತಾರೆ. ಆದರೆ ಈ ಪ್ರಕರಣ ಮಾತ್ರ ತುಸು ಡಿಫರೆಂಟು. ಬೆಂಗಳೂರು ಸೀಮೆಯಲ್ಲಿ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿರುವ ಆ ವ್ಯಕ್ತಿ ಈ ವಂಚನೆಯ ಜಾಲಕ್ಕೆ ಸಿಕ್ಕಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾದೇಟಿಗೆ ಮಹಾ ವಂಚಕರಾದ ಬೆಂಗಳೂರಿನ ಹಲಸೂರು ನಿವಾಸಿಗಳಾದ, ನೇರವಾಗಿ ಆಂಧ್ರ ಮೂಲದ ರೈಸ್ ಪುಲ್ಲಿಂಗ್ ಕಿಂಗ್ ಪಿನ್ನುಗಳ ಸಂಪರ್ಕವಿರುವ ಖದೀಮರು ಸಿಕ್ಕಿಬಿದ್ದಿದ್ದಾರೆ. ವಿಂಥಾ ವಂಚಕರನ್ನು ನಂಬಿ ಕಾಸು ಕಳೆದುಕೊಳ್ಳುವವರು ಅಮಾಯಕರೇನಲ್ಲ. ಈಗ ಪಿಗ್ಗಿ ಬಿದ್ದಿರುವಾತನ ಹಿನ್ನೆಲೆ ಗಮನಿಸಿದರೆ ಎಲ್ಲವೂ ಸ್ಪಷ್ಟವಾಗುತ್ತೆ. ಮೂಲತಃ ತುಮಕೂರಿನ ಕೊರಟಗೆರೆವರು. ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಈತ ಕೊರಟೆಗೆರೆ ಭಾಗದಲ್ಲಿ ರಾಜಕೀಯ ಮುಖಂಡರಾಗಿದ್ದವರು.. ಇದಕ್ಕೂ ಮೊದಲು ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ನಂತರ ತುಮಕೂರು ಜಿ.ಪಂ ಅಧ್ಯಕ್ಷರೂ ಆಗಿದ್ದರು.
ಇಂಥಾ ಆಸಾಮಿ ಈ ರಾಜಕೀಯದ ಹುಚ್ಚಿಗೆ ಬಿದ್ದು ಅದೆಷ್ಟು ಕಾಸು ಕಳಕೊಂಡಿದ್ದರೋ ಗೊತ್ತಿಲ್ಲ. ಆದರೆ ಉಳಿಕೆ ಕಾಸು ದುಪ್ಪಟ್ಟಾಗಿ ತಿಜೋರಿ ಲಕಲಕಿಸಲಿ ಎಂಬ ಭಯಾನಕ ಆಸೆ ಅವರೊಳಗೆ ಉಲ್ಬಣಿಸಿದ್ದು ಅವರ ಕೆಲ ಸ್ನೇಹಿತರ ಮೂಲಕ. ಮಾಡಲು ಕ್ಯಲಸಿಲ್ಲದ ಮನಸು ಬೇರೆ ಹಾದಿಯತ್ತ ಹೊರಳೋದು ಮಾಮೂಲಿ. ಅಂತೆಯೇ ಆತ ಅಪ್ಪಟ ವಂಚಕರ ಜಾಲಕ್ಕೆ ಬಿದ್ದು ಬಿಟ್ಟಿದ್ದರು. ಅಷ್ಟಕ್ಕೂ ಆತನ ಸ್ನೇಹಿತರ ಸಂಪರ್ಕದಲ್ಲಿದ್ದದ್ದು ಅಂತಾರಾಜ್ಯ ರೈಸ್ಪುಲ್ಲಿಂಗ್ ವಂಚಕರ ಗ್ಯಾಂಗು. ಅದಾಗಲೇ ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಕರ್ನಾಟಕದ ಗಡಿಭಾಗದಲ್ಲಿ ಕೋಟಿ ಕೋಟಿ ಮುಂಡಾಯಿಸಿದ್ದ ಈ ತಂಡ ರೈಸ್ಪುಲ್ಲಿಂಗ್ ದಂಧೆಯಲ್ಲಿ ನಟೋರಿಟಿ ಹೊಂದಿದೆ.
ಆಂಧ್ರದ ವಂಚಕರು
ಈ ರೈಸ್ಪುಲ್ಲಿಂಗ್ ಮಾಫಿಯಾದ ಕಿಂಗ್ಪಿನ್ಗಳೆಲ್ಲ ಆಂಧ್ರಪ್ರದೇಶದವರು. ಮಿಕಗಳು ಸಿಕ್ಕಾಕ್ಷಣ ಕಣ್ಕಟ್ಟು ಮಾಡಿ ಯಾಮಾರಿಸುವ ಘಳಿಗೆಯಲ್ಲಿ ಈ ಲೀಡರುಗಳೇ ಬಂದಿರುತ್ತಾರೆ. ಯಾವ ಪ್ರದೇಶಕ್ಕೆ ಹೋದರೂ ಸ್ಥಳೀಯ ಖದೀಮರದ್ದೊಂದು ಗ್ಯಾಂಗು ಕಟ್ಟಿ ಅವರ ಮೂಲಕವೇ ವ್ಯವಹಾರ ಕುದುರಿಸುವುದು ಈ ಐನಾತಿಗಳ ಚಾಲಾಕಿ ಬುದ್ಧಿ. ಹಾಗೆಯೇ ಬೆಂಗಳೂರಿನಲ್ಲೂ ಒಂದು ಸ್ಥಳೀಯರ ಗ್ಯಾಂಗು ಈ ದಂಧೆಯಲ್ಲಿ ಸಕ್ರಿಯವಾಗಿತ್ತು. ಹಲಸೂರು ನಿವಾಸಿಗಳಾದ ಸಗಾಯ್ ರಾಜ್, ಪ್ರಭು, ವೆಂಕಟೇಶ್ ಮತ್ತು ಡಿ.ಜೆ.ಹಳ್ಳಿಯ ಸಂತೋಷ ಕುಮಾರ್ ಆ ತಂಡದ ಪ್ರಮುಖರು. ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಆ ರಾಜಕಾರಣಿಗೆ ಪರಿಚಯವಾದದ್ದು ಇದೇ ಗ್ಯಾಂಗು. ಕೃಷ್ಣಮೂರ್ತಿ ಹಣವಂತ ಕುಳ ಎಂಬುದು ಸಾಬೀತಾಗುತ್ತಲೇ ಈ ಗ್ಯಾಂಗು ಚೌರ ಮಾಡಲು ಸನ್ನದ್ಧವಾಗಿತ್ತು.
ಎದುರಿಗೆ ಮಿಕವನ್ನು ಕೂರಿಸಿಕೊಂಡ ಈ ಖದೀಮರು ತಮ್ಮ ಬಳಿ ಸಂಪತ್ತು ವೃದ್ಧಿಗೊಳಿಸುವ ಅತ್ಯಮೂಲ್ಯದ ಲೋಹದ ಪಾತ್ರೆ ಇದೆ. ಇದನ್ನು ಮನೆಯಲ್ಲಿಟ್ಟರೆ ಹಣಕಾಸು, ಸಂಪತ್ತು ಏಕಾಏಕಿ ವೃದ್ಧಿಸುತ್ತೆ ಅಂತೆಲ್ಲ ನಂಬಿಸಿದ್ದಾರೆ. ಹೀಗೆ ತಮ್ಮಿಂದ ಇಂಥಾ ಅಮೂಲ್ಯ ಲೋಹದ ವಸ್ತು ಖರೀದಿಸಿ ಮನೇಲಿಟ್ಟುಕೊಂಡವರು ಭಾರೀ ಕುಬೇರರಾದ ರಂಗು ರಂಗಿನ ಸುಳ್ಳು ಕಥೆಗಳನ್ನೂ ರಸವತ್ತಾಗಿಯೇ ಒದರಿದ್ದಾರೆ. ಜೊತೆಗೆ ಆಂಧ್ರಪ್ರದೇಶದಿಂದ ಬಂದ ದಂಧೆಕೋರರು ಥರಥರದ ಕಣ್ಕಟ್ಟನ್ನೂ ನಡೆಸಿದ್ದಾರೆ. ಇದೆಲ್ಲವನ್ನು ನೀಟಾಗಿ ನೋಡಿ, ಕೇಳಿಸಿಕೊಂಡ ಕೃಷ್ಣಮೂರ್ತಿಯೊಳಗೆ ತಮ್ಮ ಸಂಪತ್ತು ವೃದ್ಧಿಸಿಕೊಳ್ಳುವ ಆಸೆ ಕೆರಳಿದೇಟಿಗೆ ವಿವೇಚನೆಯಿಲ್ಲದೆ ಏಕಾಏಕಿ ವ್ಯವಹಾರ ಕುದುರಿಸಲು ಮುಂದಾಗಿದ್ದಾರೆ. ಕಡೆಗೆ ಚೌಕಾಸಿ ನಡೆದು ಆರೂವರೆ ಕೋಟಿಗೆ ಮಾತುಕತೆ ನಡೆದಿದೆ. ಕಡೆಗೂ ಆ ಮಿಕ ಅಖಂಡ ೬.೫ ಕೋಟಿ ಯನ್ನು ಕಳ್ಳರ ಕೈಗಿಟ್ಟು ಆ `ಅತ್ಯಮೂಲ್ಯ’ ಲೋಹದ ಪಾತ್ರೆಯನ್ನು ಖರೀದಿಸಿದ್ದರು. ಇದಾದದ್ದು ವರ್ಷಗಳ ಹಿಂದೆ ವರ್ಷ.
ಅದು ತಗಡು ಪಾತ್ರೆ!
ಹಾಗೆ ಬಹುದೊಡ್ಡ ಮೊತ್ತ ಕೊಟ್ಟು ಲೋಹದ ಪಾತ್ರೆ ಖರೀದಿಸಿ ತಂದು ಮನೆಯಲ್ಲಿಟ್ಟ ಆತ ಭಯಭಕ್ತಿಯಿಂದಲೇ ಪೂಜೆ ಪುನಸ್ಕಾರ ಮಾಡಿದ್ದರು. ಇನ್ನು ಸ್ವಲ್ಪವೇ ದಿನದಲ್ಲಿ ತಮ್ಮ ಆಸ್ತಿಪಾಸ್ತಿಯೆಲ್ಲ ಇಮ್ಮಡಿಸುತ್ತೆ ಅಂತ ಹಿರಿ ಹಿರಿ ಹಿಗ್ಗಿದರು. ಅದೇನೋ ಪವಾಡ ನಡೆಯುತ್ತೆ ಅಂತ ಕಾದೇ ಕಾದರು. ಆದರೆ ದಿನವುರುಳಿ, ವಾರವಾಗಿ, ತಿಂಗಳೇ ಮಗುಚಿಕೊಂಡರೂ ಆರೂವರೆ ಕೋಟಿಯ ಹಳೇ ಲೋಹದ ಪಾತ್ರೆಯ ಕಡೆಯಿಂದ ಅದ್ಯಾವ ಚಮಾತ್ಕಾರವೂ ನಡೆಯಲಿಲ್ಲ. ಈ ಆಸಾಮಿ ಸಂಪತ್ತು ಮರಿಹಾಕಲೂ ಇಲ್ಲ. ಆದರೆ ಈ ಪಾತ್ರೆ ಕೆಲಸ ಮಾಡುತ್ತಿಲ್ಲ ಅಂತ ತಿಳಿಸಿ ಪರಿಹಾರ ಕೇಳೋಣವೆಂದುಕೊಂಡರೆ ಯಾವ ಖದೀಮರೂ ಸಿಗಲಿಲ್ಲ. ಸಂಪತ್ತು ದ್ವಿಗುಣವಾಗೋದು ಹಾಳುಬೀಳಲಿ, ಇದ್ದ ಸಂಪತ್ತಿನಲ್ಲಿ ಆರೂವರೆ ಕೋಟಿ ಅನ್ಯಾಯವಾಗಿ ಹೊಗೆ ಹಾಕಿಸಿಕೊಂಡಿದೆಯೆಂಬ ಸತ್ಯ ಜನನಾಯಕನಿಗೆ ಗೊತ್ತಾದದ್ದು ಆವಾಗಲೆ!
ಈತನಿಗೆ ಈ ದಂಧೆಕೋರರನ್ನು ಪರಿಚಯ ಮಾಡಿಸಿದ್ದರಲ್ಲಾ? ಅವರೇ ಪ್ರಯತ್ನಿಸಿದರೂ ಅವರ್ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಅಷ್ಟರಲ್ಲಾಗಲೇ ಇದು ರೈಸ್ಪುಲ್ಲಿಂಗ್ ದಂಧೆಯ ಪಕ್ಕಾ ವಂಚನೆ ಎಂಬುದು ಸಾಬೀತಾಗಿತ್ತು. ಆದರೆ ಪೊಲೀಸರಿಗೆ ವಿಚಾರ ಮುಟ್ಟಿಸುವ ಹೊರತಾಗಿ ಬೇರ್ಯಾವ ಹಾದಿಗಳೂ ಇರಲಿಲ್ಲ. ಆದುದರಿಂದಲೇ ಆತ ಸೀದಾ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡರಾದರೂ, ಇದೊಂದು ಅಂತಾರಾಜ್ಯ ಮಾಫಿಯಾ ಆದ್ದರಿಂದ ಈ ಪ್ರಕರಣ ಸಿಸಿಬಿ ಪೊಲೀಸರಿಗೆ ವರ್ಗಾವಣೆಗೊಂಡಿತ್ತು. ತಕ್ಷಣವೇ ಸಿಸಿಬಿ ಡಿಸಿಪಿ ಆರೋಪಿಗಳನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದರು. ಸಿಸಿಬಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ರೈಸ್ಪುಲ್ಲಿಂಗ್ ದಂಧೆಕೋರರ ಬೇಟೆಗೆ ತಂಡ ಸಜ್ಜಾಗಿತ್ತು.
ಅತ್ಯಮೂಲ್ಯ ಲೋಹದ ಪಾತ್ರೆಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುವ ಪ್ರಕರಣಗಳು ಬಾಗೇಪಲ್ಲಿ, ಚಿಕ್ಕ ಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತವೆ. ಈ ಸುಳಿವು ಹಿಡಿದ ಸಿಸಿಬಿ ಪೊಲೀಸರು ಬಹುಬೇಗನೆ ಮಿಂಚಿನ ಕಾರ್ಯಾಚರಣೆ ನಡೆಸಿ ಬೆಂಗಳೂರು ಮೂಲದ ನಾಲ್ವರನ್ನು ಸೆರೆ ಹಿಡಿದಿದ್ದಾರೆ. ಸಿಸಿಬಿ ಪೊಲೀಸರೀಗ ಆ ನಾಲ್ಕೂ ಮಂದಿಯನ್ನು ಪೀಣ್ಯ ಪೋಲೀಸರಿಗೊಪ್ಪಿಸಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ ಈ ದಂಧೆ ತಂಡದ ಮುಖ್ಯಸ್ಥರು ಆಂಧ್ರಪ್ರದೇಶ ಮತ್ತು ತಮಿಳು ನಾಡುಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಮಾಹಿತಿಯಾಧಾರದಲ್ಲಿ ಕಿಂಗ್ಪಿನ್ಗಳನ್ನು ಬಲೆಗೆ ಕೆಡವಿಕೊಳ್ಳಲು ಇನ್ಸ್ಪೆಕ್ಟರ್ ಮತ್ತು ತಂಡ ಸನ್ನದ್ಧವಾಗಿದೆ.
ಇದು ಪಕ್ಕಾ ವಂಚನೆ ಅಂತ ಗೊತ್ತಿದ್ದರೂ ಈ ಹಣವಂತರು ಅತಿಯಾಸೆಗೆ ಬಿದ್ದು ಕಾಸು ಕಳಕೊಂಡು ಕಂಗಾಲಾಗುತ್ತಾರೆ. ಉದೀಗ ಅಂಥಾದ್ದೇ ಒಂದು ದೊಡ್ಡ ಗ್ಯಾಂಗನ್ನು ಹೊಸಕೋಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅವರಂತೂ ರೈಸ್ ಪುಲ್ಲಿಂಗ್ ವಂಚನೆಗೆ ಬಳಸುವ ಹಳೇ ಲೋಹದ ಪಾತ್ರಗಳದ್ದೊಂದು ದೊಡ್ಡ ಗೋಡಾನನ್ನೇ ಮಾಡಿಕೊಂಡಿದ್ದರು. ಈಗೊಂದಷ್ಟು ಕಾಲದಿಂದ ರೈಸ್ ಪುಲ್ಲಿಂಗ್ ದಂಧೆ ಸದ್ದು ಮಾಡಿರಲಿಲ್ಲ. ಆದರೆ, ಆಂಧ್ರದ ಗಡಿ ಭಾಗದ ಕರ್ನಾಟಕ ಪ್ರದೇಶದಲ್ಲಿ ಇಂಥಾ ವಂಚಕರು ಈ ಕ್ಷಣಕ್ಕೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳೇಯ ಲೋಹದ ಪಾತ್ರೆಗಳಿಂದ ಯಾವ ಪವಾಡವೂ ನಡೆಯೋದಿಲ್ಲ. ಇಂಥಾ ಯಾವ ಉದಾಹರಣೆಗಳೂ ಇಲ್ಲ ಅಂತ ಪೊಲೀಸರು ಅದೆಷ್ಟೇ ಹೇಳಿದರೂ ಅತಿಯಾಸೆ ಎಂಬುದು ಕೆಲಸ ಕೊಡುತ್ತಲೇ ಇದೆ. ತೀರಾ ಕೃಷ್ಣಮೂರ್ತಿಯಂಥಾ ರಾಜಕೀಯ ಮುಖಂಡರೇ ಈ ರೀತಿ ಪಿಗ್ಗಿ ಬಿದ್ದರೆ ಮಿಕ್ಕವರ ಗತಿಯೇನು?
ಸಿಡಿಲು ಬಡಿದ ಪಾತ್ರೆ ಪವಾಡ ಮಾಡುತ್ತಾ?
ನಮ್ಮಲ್ಲಿ ಚಿತ್ರವಿಚಿತ್ರವಾದ ನಂಬಿಕೆಗಳು ಹರಡಿಕೊಂಡಿವೆ. ಧಾರ್ಮಿಕ ನೆಲೆಗಟ್ಟಿನಲ್ಲಿನ ಇಂಥಾ ನಂಬಿಕೆಗಳು ಮೂಢನಂಬಿಕೆಯನ್ನೇ ಹೊದ್ದುಕೊಳ್ಳುವುದೂ ಇದೆ. ಇಂಥಾ ಮೌಢ್ಯಪೂರಿತ ವಿಚಾರಗಳನ್ನೇ ಕೆಲ ಮಂದಿ ದಂಧೆಗೆ ಬಳಸಿಕೊಂಡು ಮುಂಡಾಯಿಸುತ್ತಾರೆ. ಈ ರೈಸ್ಪುಲ್ಲಿಂಗ್ ದಂಧೆಯ ಮೂಲವಿರುವುದೂ ಅಲ್ಲಿಯೇ. ಕೆಲವೊಂದು ಲೋಹದ ವಸ್ತುಗಳತ್ತ ಸಿಡಿಲು ಬಹು ಬೇಗನೆ ಬಡಿಯುತ್ತೆ. ಹಿಂದಿನ ಕಾಲದಲ್ಲಿ ಇಂಥಾ ಲೋಹದ ವಸ್ತುಗಳನ್ನೇ ಪಾತ್ರೆ, ಪಗಡೆ ಸೇರಿದಂತೆ ದಿನಬಳಕೆಗೆ ಬಳಸುತ್ತಿದ್ದರು. ಇಂಥವಕ್ಕೆ ಕೆಲ ಬಾರಿ ಸಿಡಿಲು ಬಡಿಯುತ್ತಿತ್ತು. ಅದೇಕೋ ಗೊತ್ತಿಲ್ಲ, ಇಂಥಾ ಸಿಡಿಲು ಬಡಿದ ಲೋಹದ ಪಾತ್ರೆಗಳು ಮನೇಲಿದ್ದರೆ ಒಳ್ಳೆಯದಾಗುತ್ತೆ ಅಂತೊಂದು ನಂಬಿಕೆ ಬೆಳೆದು ಬಂದಿದೆ.
ಕೆಲವರು ಹೇಳೋ ಪ್ರಕಾರ ಹೀಗೆ ಸಿಡಿಲು ಬಡಿದ ಲೋಹದ ಪಾತ್ರೆಯ ಮುಂದೆ ಅಕ್ಕಿ ಇಟ್ಟರೆ ಅದು ಆಯಸ್ಕಾಂತದಂತೆ ಸೆಳೆದುಕೊಳ್ಳುತ್ತದೆ. ಹೀಗೆ ಅಕ್ಕಿ ಸೆಳೆದರೆ ಅದು ಶುಭ ಸೂಚಕವೆಂಬುದು ನಂಬಿಕೆ. ಇದೇ ನಂಬಿಕೆ ಈವತ್ತ ರೈಸ್ಪುಲ್ಲಿಂಗ್ ದಂಧೆಯಾಗಿ ರೂಪಾಂತರ ಹೊಂದಿದೆ. ರೈಸ್ಪುಲ್ಲಿಂಗ್ ಎಂಬುದು ವಂಚನೆಯ ಹೆಸರು. ಈ ಹೆಸರಿನಲ್ಲಿ ವಂಚಿಸುವವರು ಶ್ರೀಮಂತರ ಬಗ್ಗೆಯೇ ಆಸಕ್ತಿ ಹೊಂದಿರುತ್ತಾರೆ. ತಮ್ಮ ಬಳಿ ಅತ್ಯಮೂಲ್ಯ ಲೋಹದ ಪಾತ್ರೆ ಇದೆ. ಇದನ್ನು ಖರೀದಿಸಿ ಮನೆಯಲ್ಲಿಟ್ಟುಕೊಂಡರೆ ಹಣ ದ್ವಿಗುಣವಾಗುತ್ತದೆ ಎಂದು ಆರೋಪಿಗಳು ನಂಬಿಸುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳನ್ನು ನೀಡುತ್ತಾರೆ. ತಮ್ಮ ಮಾತು ನಂಬಿದವರಿಂದ ಲಕ್ಷಾಂತರ ಅಥವಾ ಕೋಟ್ಯಂತರ ರೂ. ಪಡೆದುಕೊಂಡು ಹಳೆಯ ಕಾಲದ ಲೋಹದ ಪಾತ್ರೆ ನೀಡುತ್ತಾರೆ. ಪಾತ್ರೆ ಪಡೆದು ಕೆಲ ದಿನಗಳ ಬಳಿಕ ಯಾವುದೇ ಬದಲಾವಣೆ ಕಾಣಿಸದೇ ಇದ್ದಾಗ ಪಾತ್ರೆ ಖರೀದಿಸಿದವರಿಗೆ ತಾವು ವಂಚನೆಗೊಳಗಾಗಿದ್ದು ಗೊತ್ತಾಗುತ್ತದೆ. ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿರುತ್ತಾರೆ. ಈ ಕೃತ್ಯದಲ್ಲಿ ಆಂಧ್ರಪ್ರದೇಶದ ಮೂಲದ ವಂಚಕರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಅಧಿಕ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಅದು ಬಹುಕೋಟಿ ವ್ಯವಹಾರ
ರೈಸ್ ಪುಲ್ಲಿಂಗ್ ವ್ಯವಹಾರವನ್ನು ನೆಚ್ಚಿಕೊಂಡು, ಕಂಡೋರಿಗೆಲ್ಲ ದಿಢೀರ್ ಶ್ರೀಮಂತಿಕೆಯ ಭ್ರಮೆ ಬಿತ್ತುತ್ತಿರುವರು ಮಾತ್ರ ಸದ್ದಿಲ್ಲದೇ ಕೋಟಿ ಕೋಟಿ ಬಾಚಿಕೊಂಡು ಹಾಯಾಗಿದ್ದಾರೆ. ದಾಳಿಗಳಾದಾಗ, ಮೋಸ ವಂಚನೆಯ ದೂರು ದಾಖಲಾದಾಗ ಈ ವ್ಯವಹಾರದ ಕಿಂಗ್ ಪಿನ್ನುಗಳು ಯಾರನ್ನೋ ಸರೆಂಡರ್ ಮಾಡಿಸಿ ಬಚಾವಾಗುತ್ತಾರಷ್ಟೆ. ನಮ್ಮಲ್ಲಿ ಮೌಢ್ಯದ ಕಾರುಬಾರು ಜೋರಾಗಿದೆ. ಪರಿಶ್ರಮದ ಮೇಲಷ್ಟೇ ನಂಬಿಕೆಯಿಟ್ಟು ಕೆಲಸ ಮಾಡುತ್ತಾ, ಆ ಮೂಲಕ ಮಾತ್ರವೇ ಕಾಸು ಸಂಪಾದನೆ ಮಾಡುವ ಇಚ್ಚಾಶಕ್ತಿಯಾಗಲಿ, ವ್ಯವಧಾನವಾಗಲಿ ಬಹುತೇಕರಿಗೆ ಇದ್ದಂತಿಲ್ಲ. ಒಂದಷ್ಟು ಮಟ್ಟಿಗೆ ಹಣ ಸಂಪಾದನೆ ಮಾಡಿದವರಿಗೂ ಕೂಡಾ ಸಲೀಸಾಗಿ ಕೋಟಿ ಕೋಟಿ ಕೂಡಿಟ್ಟುಕೊಳ್ಳಬೇಕೆಂಬ ಆಸೆ ಇರುತ್ತೆ.
ಅದು ಒಂದು ರೀತಿಯಲ್ಲಿ ಅತಿಯಾಸೆ ಅಂದರೂ ತಪ್ಪೇನಿಲ್ಲ. ಇಂಥಾ ಹಣವಂತರ ಅತಿಯಾಸೆಯೇ ರೈಸ್ ಪುಲ್ಲಿಂಗ್ ದಂಧೆಯ ನಿಜವಾದ ಬಂಡವಾಳ. ಯಾಕೆಂದರೆ, ಬಡವರ್ಯಾರೂ ಇಷ್ಟೊಂದು ದೊಡ್ಡ ಮೊತ್ತದ ಕಾಸು ಹೂಡಿಕೆ ನಡೆಸಿ ದಿಢೀರ್ ಶ್ರೀಮಂತರಾಗೋ ಧೈರ್ಯ ಮಾಡೋದಿಲ್ಲ. ಎಲ್ಲೋ ಕೆಲವಾರು ಪ್ರಕರಣಗಳಲ್ಲಿ ಸಾಲ ಸೋಲ ಮಾಡಿ ಬಡವರೂ ಕೂಡಾ ಈ ದಂಧೆಗೆ ಬಲಿಯಾದ ಉದಾಹರಣೆಗಳಿದ್ದಾವೆ. ನಿಖರವಾಗಿ ಹೇಳಬೇಕೆಂದರೆ ರೈಸ್ ಪುಲ್ಲಿಂಗ್ ಸೇರಿದಂತೆ ಯಾವ ಪವಾಡಗಳೂ ಕೂಡಾ ಈ ಜಗತ್ತಿನಲ್ಲಿ ನಡೆಯೋದಿಲ್ಲ. ಕಾಸು ಮಾಡಿಕೊಳ್ಳೋದು, ಬದುಕು ಕಟ್ಟಿಕೊಳ್ಳೋದರಲ್ಲಿ ಪವಾಡವೇನಾದರೂ ಸಂಭವಿಸಿದರೆ ಅದು ಹಾರ್ಡ್ ವರ್ಕ್ ಮೂಲಕ ಮಾತ್ರ ಸಾಧ್ಯ. ಹಣವಂತ ಮಿಕಗಳಿಗೆ ಇಂಥಾ ಸತ್ಯ ಅರ್ಥ ಆಗೋದ್ಯಾವಾಗ?