2021ರಲ್ಲಿ ನಿಖಿಲ್ ಕುಮಾರ್ ಹೀರೋ ಆಗಿ ಅಭಿನಯಿಸಿದ್ದ ‘ರೈಡರ್’ ಸಿನಿಮಾ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನಿಖಿಲ್ ಕುಮಾರ್ ನಟನೆಯ ನಾಲ್ಕನೆ ಸಿನಿಮಾ ಇದಾಗಿದ್ದು, ಇದೀಗ ಈ ಸಿನಿಮಾ ಯು-ಟ್ಯೂಬ್ ನಲ್ಲಿ ದಾಖಲೆ ಬರೆದಿದೆ. ಹೌದು, ನಿಖಿಲ್ ಕುಮಾರ್ ಅಭಿನಯದ ‘ರೈಡರ್’ ಸಿನಿಮಾ ಹಿಂದಿ ವರ್ಷನ್ ಯೂಟ್ಯೂಬ್ ನಲ್ಲಿ ಬರೋಬ್ಬರಿ 100 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ. ಈ ಮೂಲಕ ಹಿಂದಿ ವಲಯದಲ್ಲೂ ನಿಖಿಲ್ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿದ ಮನ್ನಣೆ ಸಿಕ್ಕಿದೆ.
ಕನ್ನಡ ಸಿನಿಮಾಗಳು ತನ್ನ ಸ್ವಂತ ನೆಲದಲ್ಲಿಯೇ ಈ ಪರಿ ವೀಕ್ಷಣೆಗಳಿಸುವುದು ತುಂಬ ವಿರಳ. ಹಾಗಿರುವಾಗ ನಿಖಿಲ್ ಸಿನಿಮಾ ಹಿಂದಿ ಭಾಷೆಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿರುವುದು ಸಂತಸದ ವಿಚಾರವಾಗಿದೆ ಎನ್ನುವುದು ಅಭಿಮಾನಿಗಳ ಮಾತು. ವಿಜಯ್ ಕುಮಾರ್ ಕೊಂಡ ಸಾರಥ್ಯದಲ್ಲಿ ಬಂದ ‘ರೈಡರ್’ ಔಟ್ ಅಂಡ್ ಔಟ್ ಮಾಸ್ ಎಂಟಟೈನರ್ ಚಿತ್ರ. ನಿಖಿಲ್ ಜೊತೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಕಾಶ್ಮೀರಾ ಪರದೇಶಿ ನಾಯಕಿಯಾಗಿ ಮಿಂಚದ್ದರು. ಈ ಮೂಲಕ ಕಾಶ್ಮೀರಾ ಮೊದಲ ಬಾರಿಗೆ ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅರ್ಜುನ್ ಜನ್ಯಾ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.
‘ರೈಡರ್’ ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಸಿನಿಮಾ. ಬಳಿಕ ಈ ಚಿತ್ರ ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದೆ. ‘ರೈಡರ್’ ನಿಖಿಲ್ ಸಿನಿಮಾ 100 ಮಿಲಿಯನ್ ವೀಕ್ಷಣೆ ಕಂಡಿರುವ ಬಗ್ಗೆ ಬಾಲಿವುಡ್ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.