ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಬೇಕಿದ್ದ, ಮೆಗಾ ಪ್ರಿನ್ಸ್ ರಾಮಚರಣ್ ನಟಿಸಬೇಕಿದ್ದ ಆ ಸಿನಿಮಾ ರೌಡಿಬಾಯ್ ವಿಜಯ್ ದೇವರಕೊಂಡ ಪಾಲಾಗಿದೆಯಂತೆ. ಸದ್ಯ ಹೀಗೊಂದು ಸುದ್ದಿ ಟಿಟೌನ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ. ರಾಕಿಭಾಯ್ ಕೈ ಬಿಟ್ಟ, ರಾಮ್ಚರಣ್ ಟೇಕಾಫ್ ಮಾಡ್ಬೇಕಿದ್ದ ಆ ಸಿನಿಮಾಗೆ ಲೈಗರ್ ಆನ್ಬೋರ್ಡ್ ಆಗೋದು ಪಕ್ಕಾ ಎನ್ನುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಹಾಗಾದ್ರೆ? ಅದು ಯಾವ್ ಸಿನಿಮಾ? ಏನ್ ಕಥೆ? ಆ ಕುರಿತಾದ ಪಿನ್ ಟು ಪಿನ್ ಡೀಟೈಲ್ಸ್ ಹೇಳ್ತಾ ಹೋಗ್ತೀವಿ ಕೇಳಿ.
ಮಾನ್ಸ್ಟರ್ ಯಶ್ಗೆ ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಅವರು ಒಂದು ಸಿನಿಮಾ ಮಾಡ್ಬೇಕಿತ್ತು. ಇನ್ನೇನು ಇಬ್ಬರು ಕೂಡಿ ಅಖಾಡಕ್ಕೆ ಇಳಿಯುತ್ತಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಕೊನೆಗೆ ರಾಕಿಭಾಯ್ಗೆ ಕಥೆ ಇಷ್ಟವಾಗಲಿಲ್ಲ ಅನ್ನೋ ಕಾರಣಕ್ಕೆ ಸಿನ್ಮಾನ ರಿಜೆಕ್ಟ್ ಮಾಡಿದ್ರು ಅಂತ ಸುದ್ದಿಯಾಯ್ತು. ಅದಾಗಿ ಸ್ವಲ್ಪ ದಿನಕ್ಕೆ ಯಶ್ಗಾಗಿ ಮಾಡಿದ್ದ ಕಥೆನಾ ನರ್ತನ್ ಅವ್ರು ಮೆಗಾಪ್ರಿನ್ಸ್ ರಾಮ್ಚರಣ್ ತೇಜಾಗೆ ಮಾಡೋದಕ್ಕೆ ಹೊರಟಿದ್ದಾರೆ ಅಂತ ಬಿಗ್ ಬ್ರೇಕಿಂಗ್ ನ್ಯೂಸ್ ಬಂತು. ಇದಕ್ಕೆ ಸಾಕ್ಷಿಯೆಂಬಂತೆ ನರ್ತನ್, ರಾಮ್ಚರಣ್ ತೇಜಾ ಬರ್ತ್ಡೇಗೆ ಸ್ಪೆಷಲ್ಲಾಗಿ ಶುಭಕೋರಿದ್ದರು. ಆಗ ಇಬ್ಬರ ಕಾಂಬಿನೇಷನ್ನಲ್ಲಿ ಸಿನ್ಮಾ ಬರೋದು ಫಿಕ್ಸ್ ಅಂತ ಎಲ್ಲರೂ ಷರಾ ಬರೆದಿದ್ದರು. ಆದ್ರೀಗ, ರಾಮ್ಚರಣ್ ಕೂಡ ನರ್ತನ್ ಸಿನಿಮಾದಿಂದ ದೂರ ಉಳಿದಿದ್ದಾರೆನ್ನಲಾಗ್ತಿದೆ. ಚೆರ್ರಿ ಜಾಗಕ್ಕೆ ವಿಜಯ್ ಬಂದಿದ್ದಾರೆನ್ನುವ ಸುದ್ದಿ ಸ್ಪೋಟಕಗೊಂಡಿದೆ.
ಹೌದು, ಸೌತ್ ಸಿನ್ಮಾ ಇಂಡಸ್ಟ್ರಿಯ ಕಿಸ್ಸಿಂಗ್ ಸ್ಟಾರ್, ವರ್ಲ್ಡ್ ಫೇಮಸ್ ಲವ್ವರ್ ವಿಜಯ್ ದೇವರಕೊಂಡ ಜೊತೆ ಮಫ್ತಿ ಡೈರೆಕ್ಟರ್ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರಂತೆ. ಮೊದಲು ರಾಕಿಂಗ್ಸ್ಟಾರ್ ನಂತರ ರಾಮ್ಚರಣ್ಗೆ ಹೇಳಿದ್ದ ಕಥೆಯನ್ನ ಈಗ ರೌಡಿಬಾಯ್ಗೆ ಒಪ್ಪಿಸಿದ್ದಾರಂತೆ. ಕಥೆ ಕೇಳಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಯುವಿ ಕ್ರಿಯೇಶನ್ಸ್ ಸಂಸ್ಥೆ ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹೂಡಲಿದೆಯಂತೆ. ಅಷ್ಟಕ್ಕೂ, ಈ ಸುದ್ದಿನಾ ಡೈರೆಕ್ಟರ್ ಆಗ್ಲೀ, ಪ್ರೊಡಕ್ಷನ್ ಹೌಸ್ ಆಗ್ಲೀ ಕನ್ಫರ್ಮ್ ಮಾಡಿಲ್ಲ. ಆದರೆ, ತೆಲುಗು ಫಿಲ್ಮ್ ನಗರದಲ್ಲಿ ಮಾತ್ರ ಈ ಸುದ್ದಿ ಸುನಾಮಿ ಎಬ್ಬಿಸ್ತಿದೆ. ರಾಕಿಂಗ್ ಸ್ಟಾರ್ ಹಾಗೂ ರಾಮ್ಚರಣ್ ಕೈ ಬಿಟ್ಟ ಕಥೆನಾ ರೌಡಿಬಾಯ್ ಕೈಗೆತ್ತಿಕೊಳ್ಳೋದು ಪಕ್ಕಾ ಅನ್ನೋ ಖಬರ್ ಕೇಕೆ ಹೊಡೆಯುತ್ತಿದೆ.
ಸದ್ಯ ವಿಜಯ್ ಫ್ಯಾಮಿಲಿ ಸ್ಟಾರ್ ಸಿನ್ಮಾದಲ್ಲಿ ಬ್ಯುಸಿಯಾಗಿದ್ದಾರೆ. ಗೌತಮ್ ತಿನ್ನೂರಿ ನಿರ್ದೇಶನದ ಸಿನಿಮಾಗೆ ಕಾಲ್ಶೀಟ್ ನೀಡಿದ್ದಾರೆ. ಇದಲ್ಲದೇ ಮತ್ತೆರಡು ಸಿನ್ಮಾಗಳು ರೌಡಿಬಾಯ್ ಕೈಯಲ್ಲಿವೆ. ಈ ಮಧ್ಯೆ ನರ್ತನ್ ಸಿನಿಮಾಗೆ ವಿಜಯ್ ಹೆಸರು ಕೇಳಿಬಂದಿದ್ದು ಅದ್ಯಾವಾಗ ಅಧಿಕೃತವಾಗಿ ಹೊರಬೀಳುತ್ತೆ ಅನ್ನೋದನ್ನ ಕಾದುನೋಡಬೇಕು. ಪ್ರಸ್ತುತ ನಿರ್ದೇಶಕ ನರ್ತನ್ ಕೂಡ ಹ್ಯಾಟ್ರಿಕ್ ಹೀರೋ ಜೊತೆ ‘ಭೈರತಿ ರಣಗಲ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಣ್ಣ ಅವರ ಹೋಮ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ‘ಮಫ್ತಿ’ ಸಿನಿಮಾದ ಭೈರತಿ ರಣಗಲ್ ಪಾತ್ರವನ್ನೇ ಮುಖ್ಯವಾಗಿರಿಸಿಕೊಂಡು ಈ ಸಿನಿಮಾ ತಯ್ಯಾರಿಸಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.