SadhuKokila: ಸ್ಯಾಂಡಲ್‌ವುಡ್ ಅಂಗಳದ ಖ್ಯಾತ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಕಲಕಲಾ ವಲ್ಲಭ ಸಾಧು ಕೋಕಿಲ(SadhuKokila). ಅಭಿಮಾನಿಗಳ ಪ್ರೀತಿಯ ಸಾಧು ಮಹಾರಾಜ್ ನಟನೆಗೆ ತಲೆ ಬಾಗದವರಿಲ್ಲ, ಶಬ್ಬಾಶ್ ಹೇಳದವರಿಲ್ಲ. ನಟನೆಯಲ್ಲಿ ಈ ಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿರುವ ಸಾಧು ಇಂದು ಸಂಭ್ರಮದ ಕ್ಷಣವೊಂದನ್ನು ಹಂಚಿಕೊಂಡು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಕಳೆದ ಕೆಲ ದಿನಗಳಿಂದ ಪ್ರತಿಷ್ಠಿತ ಕ್ಯಾನ್ಸ್ ಫೆಸ್ಟಿವಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಬಿಟೌನ್ ಸ್ಟಾರ್ ನಟ-ನಟಿಯರು, ಸೌತ್ ಚಿತ್ರರಂಗದ ಕೆಲ ನಟಿಯರು ಕೂಡ ಈ ಫೆಸ್ಟಿವಲ್‌ನಲ್ಲಿ ಭಾಗಿಯಾಗಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಪ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕ್ಯಾನ್ಸ್ ಫೆಸ್ಟಿವಲ್ ನಲ್ಲಿ ಹೆಮ್ಮೆಯ ಸಾಧು ಕೋಕಿಲ್(SadhuKokila) ಕೂಡ ಭಾಗವಹಿಸಿದ್ದಾರೆ. ಅಲ್ಲಿ ಸಾಧು ಮಹಾರಾಜ್ ತಮ್ಮ ಸ್ನೇಹಿತ, ಸಂಗೀತ ದಿಗ್ಗಜ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್. ರೆಹಮಾನ್(A.R.Rahman) ಭೇಟಿಯಾಗಿದ್ದಾರೆ.
ಆ ಭೇಟಿಯಲ್ಲೇ ಫೋಟೋ ಕ್ಲಿಕ್ಕಿಸಿಕೊಂಡು ಸಾಧು ಸಂಭ್ರಮಿಸಿದ್ದಾರೆ. ಜೊತೆಗೆ ಕಳೆದ ದಿನಗಳನ್ನು ನೆನೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎ.ಆರ್.ರೆಹಮಾನ್ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಬಹಳ ವರ್ಷಗಳ ನಂತರ ನಡೆದ ಅನಿರೀಕ್ಷಿತ ಭೇಟಿ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಒಂದು ಕ್ಷಣ. ತುಂಬಾ ವರ್ಷಗಳ ಹಿಂದೆ ಇಬ್ಬರು ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳು ನೆನಪಾದವು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಸಾಧು.