ದೃಶ್ಯಬ್ರಹ್ಮ ಪ್ರಶಾಂತ್ ನೀಲ್ ನಿರ್ದೇಶನದ, ಡಾರ್ಲಿಂಗ್ ಪ್ರಭಾಸ್ ನಟನೆಯ `ಸಲಾರ್’ ರೆಕಾರ್ಡ್ ಬ್ರೇಕಿಂಗ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದು, ಗ್ಲೋಬಲ್ ಮಾರ್ಕೆಟ್ ಶೇಕ್ ಮಾಡಿ ಕೋಟಿ ಕೋಟಿ ಹಣವನ್ನ ಕೊಳ್ಳೆಹೊಡೆದಿದ್ದು ನಿಮಗೆಲ್ಲ ಗೊತ್ತಿರೋ ವಿಚಾರ. ತಾಜಾ ಸಮಾಚಾರ ಏನಂದರೆ ಸಲಾರ್ ಸಿನಿಮಾಗಾಗಿ ದುಡಿದವರೆಲ್ಲರಿಗೂ ಹೊಂಬಾಳೆ ಸಂಸ್ಥೆ ಪಾರ್ಟಿ ಕೊಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಐಷರಾಮಿ ಹೋಟೆಲ್‌ವೊಂದರಲ್ಲಿ ಅದ್ದೂರಿ ಔತಣಕೂಟ ಏರ್ಪಡಿಸಿ, ಸಲಾರ್‌ಗಾಗಿ ಶ್ರಮಿಸಿದವರನ್ನೆಲ್ಲಾ ಗ್ರ್ಯಾಂಡ್ ಆಗಿ ವೆಲ್‌ಮಾಡಿಕೊಂಡು ಸಕ್ಸಸ್‌ನ ಸೆಲಬ್ರೇಟ್ ಮಾಡಿದೆ.
ಅಂದ್ಹಾಗೇ, ಸಲಾರ್ ಸಕ್ಸಸ್ ಪಾರ್ಟಿಗೆ ಡಾರ್ಲಿಂಗ್ ಪ್ರಭಾಸ್, ಶ್ರುತಿಹಾಸನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಜಗಪತಿ ಬಾಬು ಸೇರಿದಂತೆ ಪರಭಾಷಾ ಕಲಾವಿದರು ಆಗಮಿಸಿದ್ದರು. ಸಲಾರ್‌ನಲ್ಲಿ ಧಗಧಗಿಸಿದ್ದ ಕನ್ನಡದ ಕಲಾವಿದರು ಕೂಡ ಭಾಗಿಯಾಗಿದ್ದರು. ಅಚ್ಚರಿ ಅಂದರೆ ಸಲಾರ್ ಸಕ್ಸಸ್ ಸೆಲಬ್ರೇಷನ್‌ಗೆ ಟಿಟೌನ್ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಅವರ ಪುತ್ರ ಅಕ್ಕಿನೇನಿ ಅಖಿಲ್ ಬಂದಿದ್ರು. ಅಷ್ಟಕ್ಕೂ, ಅಖಿಲ್ ಸಲಾರ್ ಸಿನಿಮಾದ ಪಾತ್ರಧಾರಿ ಅಲ್ಲ, ಅದಾಗ್ಯೂ ಸಲಾರ್ ಪಾರ್ಟಿಗೆ ಬಂದಿದ್ದು ಕುತೂಹಲದ ಜೊತೆಗೆ ಸಣ್ಣ ಅನುಮಾನ ಮೂಡಿಸಿದೆ. ಹೊಂಬಾಳೆ ಸಂಸ್ಥೆ ಅಕ್ಕಿನೇನಿ ಅಖಿಲ್‌ಗೆ ಸಿನಿಮಾ ಮಾಡ್ತಿದೆಯಾ ಎನ್ನುವ ಸಂಶಯ ಸಿನಿಮಾ ಪ್ರೇಮಿಗಳನ್ನ ಕಾಡುವಂತೆ ಮಾಡಿದೆ.
ನಿಮಗೆಲ್ಲ ಗೊತ್ತಿರೋ ಹಾಗೇ ಹೊಂಬಾಳೆ ಸಂಸ್ಥೆ ಈಗ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಕೆಜಿಎಫ್, ಕಾಂತಾರ ನಂತರ ಪರಭಾಷಾ ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡ್ತಿದೆ. ಧೂಮಂ ಸಿನಿಮಾ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಹೊಂಬಾಳೆ ಮಾಲೀಕರು, ಸಲಾರ್ ಮೂಲಕ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ದು, ಈಗ ರಘುತಾತ ಚಿತ್ರದ ಮೂಲಕ ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಹೀಗಿರುವಾಗ ಟಿಟೌನ್ ಹೀರೋ ಅಖಿಲ್‌ಗೆ ಸಿನಿಮಾ ಮಾಡೋದ್ರಲ್ಲಿ ಡೌಟ್ ಇಲ್ಲ. ಸದ್ಯ ಅಖಿಲ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ರೂ ಕೂಡ ಹ್ಯಾಂಡ್ಸಮ್ ಹೀರೋ ಅಖಿಲ್‌ಗೆ ಯಶಸ್ಸು ಸಿಕ್ಕಿಲ್ಲ. ಸ್ಟಾರ್ ಫ್ಯಾಮಿಲಿಯಿಂದ ಬಂದ್ರೂ ಕೂಡ ಸ್ಟಾರ್ ಹೀರೋ ಎನಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ. ಈ ಟೈಮ್‌ಗೆ ಹೊಂಬಾಳೆ ಸಂಸ್ಥೆ ಅಖಿಲ್‌ನ ಕೈ ಹಿಡಿಯಲು ಮುಂದಾಯ್ತಾ? ಸಲಾರ್ ಮೂಲಕ ಪ್ರಭಾಸ್‌ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟ ಹಾಗೇ ಟಿಟೌನ್ ಹೀರೋ ಅಖಿಲ್‌ಗೆ ಗೆಲುವು ದಕ್ಕಿಸಿಕೊಡಲು ಹೊಂಬಾಳೆ ಮುಂದಾಯ್ತಾ? ಹೀಗೊಂದಿಷ್ಟು ಪ್ರಶ್ನೆಗಳು ಎದ್ದಿವೆ.
ಅಷ್ಟಕ್ಕೂ, ಅಖಿಲ್‌ಗೆ ಏನಾಗಿದೆಯೋ ಏನೋ ಗೊತ್ತಿಲ್ಲ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಸಲಾರ್ ಪಾರ್ಟಿಗೆ ಬಂದಿದ್ದರು. ನೋವಲ್ಲೂ ಪಾರ್ಟಿನಲ್ಲಿ ಭಾಗಿಯಾಗಿದ್ದಾರೆ ಅಂದರೆ ಹೊಂಬಾಳೆ ಮಾಲೀಕರ ಜೊತೆ ಸಿನಿಮಾ ಮಾಡೋದು ಖರ್ರೆ ಇರಬಹುದಾ ಎನ್ನುವ ಅನುಮಾನ ದಟ್ಟವಾಗುತ್ತೆ. ಅದೇನೇ ಇರಲಿ, ದೊಡ್ಡ ದೊಡ್ಡ ಸಿನಿಮಾಗಳನ್ನ ಮಾಡಿ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡ್ತಿರೋ ಹೊಂಬಾಳೆ ಮಾಲೀಕರಿಗೆ ಒಂದು ಬಿಗ್ ಸೆಲ್ಯೂಟ್ ಹೇಳಲೇಬೇಕು. ಸದ್ಯ, ರೆಕಾರ್ಡ್ ಬ್ರೇಕಿಂಗ್ ಬ್ಲಾಕ್‌ಬಸ್ಟರ್ ಸಲಾರ್‌ನಿಂದ ವಿಜಯ್ ಕಿರಗಂದೂರ್ ಖಜಾನೆ ಕೇಕೆ ಹೊಡೆಯುತ್ತಿದೆ. ವಲ್ರ್ಡ್ ವೈಡ್ ಬಾಕ್ಸ್ ಆಫೀಸ್‍ನಲ್ಲಿ ಸುಮಾರು 700 ಕೋಟಿ ಗಳಿಕೆ ಕಂಡು, ವಿಶ್ವದಾದ್ಯಂತ ಬೆಳ್ಳಿತೆರೆ ಮೇಲೆ ಗೆಲುವಿನ ನಾಗಾಲೋಟ ಮುಂದುವರೆಸಿದೆ. 270 ಕೋಟಿ ಬಂಡವಾಳ ಹೂಡಿ ಖಾನ್ಸಾರ್‌ಕೋಟೆ ಕಟ್ಟಿದ ಮಾಲೀಕರಿಗೆ ಹೆಸರು ದುಡ್ಡು ಕೀರ್ತಿ ಎಲ್ಲವೂ ದಕ್ಕಿದೆ. ಕೆಜಿಎಫ್, ಕಾಂತಾರ ನಂತರ ಸಲಾರ್‌ಸಿನಿಮಾದಿಂದನೂ ದೊಡ್ಡ ಮಟ್ಟದ ಗೆಲುವು ಕಂಡಿರೋ ಹೊಂಬಾಳೆ, ಮತ್ತಷ್ಟು ಪ್ಯಾನ್‌ಇಂಡಿಯಾ ಪ್ರಾಜೆಕ್ಟ್‌ಗಳತ್ತ ಚಿತ್ತ ನೆಟ್ಟಿದೆ. ಬಘೀರ, ಯುವ, ಟೈಸನ್, ರಘು ತಾತಾ, ಕಾಂತಾರ-1, ರಿಚರ್ಡ್‌ಆಂಟನಿ ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣದ ಹಂತದಲ್ಲಿವೆ. ಈ ವರ್ಷ ಒಂದೊಂದಾಗಿ ತೆರೆಗೆ ಬರಲು ಭರದಿಂದ ಸಜ್ಜಾಗುತ್ತಿವೆ