ಸೌತ್-ನಾರ್ತ್ ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಎದುರುನೋಡ್ತಿದ್ದ ಸಿನಿಮಾ `ಸಲಾರ್’. ಕೆಜಿಎಫ್ ಸರಣಿ ಸಿನಿಮಾ ನಂತರ ಕ್ಯಾಪ್ಟನ್ ನೀಲ್ `ಖಾನ್ಸಾರ್’ ಕೋಟೆ ಕಟ್ಟಿದ್ದರಿಂದ ಆ ಕೋಟೆಯೊಳಗೆ ಪ್ರವೇಶ ಮಾಡಲಿಕ್ಕೆ ಕಲಾಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾದಿದ್ದರು. ಕೊನೆಗೂ ಆ ದಿನಕ್ಕೆ ಡಿಸೆಂಬರ್ 22 ಸಾಕ್ಷಿಯಾಯ್ತು. ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ದೃಶ್ಯಬ್ರಹ್ಮ ನೀಲ್ ಕಲ್ಪನೆಯಲ್ಲಿ ಕೆತ್ತಲಾದ `ಸಲಾರ್’ ಪ್ರಪಂಚ ನೋಡಲಿಕ್ಕೆ ನುಗ್ಗಿಬಂದರು. ನಿನ್ನೆ ರಾತ್ರಿಯಿಂದ ಒಂಟಿಕಾಲಲ್ಲಿ ನಿಂತು ಚಿತ್ರಮಂದಿರ ಪ್ರವೇಶ ಮಾಡಿದ ಚಿತ್ರಪ್ರೇಮಿಗಳನ್ನ `ಸಲಾರ್’ ಹೊಸದೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ನೀಲ್ ಕಟ್ಟಿದ `ಸಲಾರ್’ ಕೋಟೆ ಕಲಾಭಿಮಾನಿಗಳ ಕಣ್ಣುಕುಕ್ಕಿದೆ. ಖಾನ್ಸಾರ್ ಸಾಮ್ರಾಜ್ಯ, ಗದ್ದುಗೆ ಏರಲು ನಡೆಯುವ ಗುದ್ದಾಟ, ರಾಜಕೀಯ ಕುತಂತ್ರ, ದೇವ ಹಾಗೂ ವರದ ಸ್ನೇಹ, ಹಾಲಿವುಡ್ ಲೋಕವನ್ನ ಕಣ್ಮುಂದೆ ತಂದು ನಿಲ್ಲಿಸುವಂತಹ ಆ್ಯಕ್ಷನ್ ಸೀಕ್ವೆನ್ಸ್ಗಳು, ವೈಲೆನ್ಸ್ ಹೀಗೆ ಎಲ್ಲದೂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು, ಪ್ಯಾನ್ ಇಂಡಿಯಾ ತುಂಬೆಲ್ಲಾ `ಸಲಾರ್’ ಗೆಲುವಿನ ರಣಕೇಕೆ ಹಾಕಿದೆ.
`ಸಲಾರ್’ ಸಿನಿಮಾ ಡಾರ್ಲಿಂಗ್ ಪ್ರಭಾಸ್ ಮೇಯ್ನ್ ಲೀಡ್ ಅನ್ನೋದಕ್ಕಿಂತ ಹೆಚ್ಚಾಗಿ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಎನ್ನುವ ಕಾರಣಕ್ಕೆ ಕುತೂಹಲ ಕೆರಳಿಸಿತ್ತು. ಕೆಜಿಎಫ್ ಮಾಲೀಕರ ಮನಿಯಲ್ಲಿ `ಸಲಾರ್’ ಸಾಮ್ರಾಜ್ಯ ತಲೆ ಎತ್ತುತ್ತಿದ್ದರಿಂದ ನಿರೀಕ್ಷೆ ಆಲ್ ಓವರ್ ಇಂಡಿಯಾ ತಲೆ ಎತ್ತಿ ನೋಡುತ್ತಿತ್ತು. ಫೈನಲೀ, ಈ ದಿನ `ಸಲಾರ್’ ನೋಡಿ ಸಿನಿಮಾ ಪ್ರೇಮಿಗಳು ಸೆಲ್ಯೂಟ್ ಹೊಡೆದಿದ್ದಾರೆ. ಸುಂಟರಗಾಳಿ, ಬಿರುಗಾಳಿ ಯಾವಾಗ್ಲೋ ಒಂದೇ ಸಲಾನೇ ಬರೋದು, ಅದು ಬರುತ್ತೆ ಅನ್ನಬೇಕಾದರೆ ಒಂದು ಭಯ ಇರುತ್ತೆ, ಬಂದೋದ್ಮೇಲೆ ಅದರ ಹವಾ ಇರುತ್ತೆ ಅಂತ ಯಶ್ ಡೈಲಾಗ್ನ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ಸಿಲ್ವರ್ ಸ್ಕ್ರೀನ್ ಮೇಲೆ `ಸಲಾರ್’ ಬಿರುಗಾಳಿ ಜೋರಾಗಿದೆ. ಗಂಟೆಗೆ 50 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಸೋಲ್ಡ್ ಔಟ್ ಆಗ್ತಿದ್ದು, ವಲ್ರ್ಡ್ವೈಡ್ 15 ಸಾವಿರಕ್ಕೂ ಹೆಚ್ಚು ಪರದೆಗಳ ಮೇಲೆ `ಸಲಾರ್’ ಸೀಸ್ಫೈರ್ ಕಿಚ್ಚು ಹಚ್ಚಿದೆ. ರಿಲೀಸ್ ಆದ ಎಲ್ಲಾ ಕಡೆ ಶೋಗಳು ಹೌಸ್ಫುಲ್ ಆಗಿದ್ದು, ಮೊದಲ ದಿನವೇ 100 ಕೋಟಿ ಕಲೆಕ್ಷನ್ ಆಗೋದು ಪಕ್ಕಾ ಎನ್ನಲಾಗ್ತಿದೆ.
ಕೆಜಿಎಫ್ ನಂತರ ಮತ್ತೊಂದು ಬ್ಲಾಕ್ಬಸ್ಟರ್ ಹಿಟ್ಗಾಗಿ ಹೊಂಬಾಳೆ ಕಾದುಕುಳಿತಂತೆ, ಒಂದೇ ಒಂದು ಗೆಲುವಿಗಾಗಿ ಡಾರ್ಲಿಂಗ್ ಪ್ರಭಾಸ್ ಐದಾರು ವರ್ಷಗಳಿಂದ ಎದುರುನೋಡ್ತಿದ್ದರು. ಸಾಹೋ, ರಾಧೆಶ್ಯಾಮ್, ಆದಿಪುರುಷ್ ನಂತಹ ಬಹುಕೋಟಿ ವೆಚ್ಚದ ಸಿನಿಮಾಗಳಿಗೆ ಪ್ರಭಾಸ್ ಬಣ್ಣಹಚ್ಚಿದ್ರೂ ಕೂಡ ಗೆಲುವು ದಕ್ಕಲಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನ ಕಾಯ್ದುಕೊಳ್ಳಲಾಗಲಿಲ್ಲ. ಆದರೆ, `ಸಲಾರ್’ ಸಿನಿಮಾದಿಂದ ಪ್ರಭಾಸ್ ಭರ್ಜರಿಯಾಗಿ ಕಂಬ್ಯಾಕ್ ಮಾಡುತ್ತಾರೆ. ಬಿಗ್ ಬ್ರೇಕ್ ಪಡೆದುಕೊಂಡು ಡಾರ್ಲಿಂಗ್ ಹಳೆಯ ಫಾರ್ಮ್ಗೆ ಮರಳ್ತಾರೆ. ಸೋಲಿನ ಸುಳಿಗೆ ಸಿಕ್ಕಿ ಒದ್ದಾಡ್ತಿರೋ ಮಿರ್ಚಿ ಹೀರೋನಾ ನೀಲ್ ಸಾಹೇಬ್ರು ಮೇಲಕ್ಕೆ ಎತ್ತುತ್ತಾರೆ. ಗೆಲುವಿನ ಗದ್ದುಗೆ ಏರಿ ಪ್ರಭಾಸ್ ಗಹಗಹಿಸ್ತಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬಂದಿದ್ವು. ಅದರಂತೇ, ಸಾಹೋ ಹೀರೋ ಸೋಲಿಗೆ ಸೆಡ್ಡು ಹೊಡೆದಿದ್ದಾರೆ. ದೇವನಾಗಿ ಧಗಧಗಿಸಿ ಪ್ಯಾನ್ ಇಂಡಿಯಾ ಪ್ರೇಕ್ಷಕರಿಂದ ಬಹುಪರಾಕ್ ಹಾಕಿಸಿಕೊಂಡಿದ್ದಾರೆ. `ಲಯನ್, ಚೀತಾ, ಟೈಗರ್, ಎಲಿಫೆಂಟ್ ಗಿಂತ ಡೈನೋಸಾರ್ ಉರುಫ್ ರೆಬೆಲ್ ಸ್ಟಾರ್ ಪ್ರಭಾಸ್ ಎಷ್ಟು ವೈಲೆನ್ಸ್ ಅನ್ನೋದನ್ನ `ಸಲಾರ್’ ಮೂಲಕ ನೀಲ್ ಸಾಹೇಬ್ರು ಸಾಬೀತುಪಡಿಸಿದ್ದಾರೆ.
`ಸಲಾರ್’ ಇಂಡಿಯಾದ ಬಿಗ್ಗೆಸ್ಟ್ ಆ್ಯಕ್ಷನ್ ಸಾಗಾ ಅಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಟ್ರೇಡ್ಮಾರ್ಕ್ನಂತೆ ನೀಲ್ಗಾರು `ಸಲಾರ್’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ಗಳನ್ನ ಕಂಪೋಸ್ ಮಾಡಿಸಿದ್ದಾರೆ. ಹಾಲಿವುಡ್ ಲೋಕವನ್ನೂ ಮೀರಿಸೋ ಲೆವೆಲ್ಗೆ ಸಾಹಸ ದೃಶ್ಯಗಳನ್ನ ಕಟ್ಟಿಕೊಟ್ಟು ಸಿನಿಮಾ ಪ್ರೇಮಿಗಳನ್ನ ಥಂಡಾ ಹೊಡೆಸಿದ್ದಾರೆ. ಸೆಕೆಂಡ್ ಹಾಫ್ನಲ್ಲಿ ಬರುವ ಕಾಟೇರಮ್ಮ ಫೈಟ್ ಹಾಗೂ ಕ್ಲೈಮ್ಯಾಕ್ಸ್ನಲ್ಲಿನ ಪ್ರಭಾಸ್ ರಕ್ತಸಿಕ್ತ ಕಟೌಟ್ ಕಲಾಭಿಮಾನಿಗಳ ಎದೆನಡುಗಿಸುತ್ತೆ. ದ್ವಿಪಾತ್ರದಲ್ಲಿ ಕಾಣಸಿಗುವ ಪ್ರಭಾಸ್ ಮಾಸ್ ಅವತಾರ ನಯಾ ಮೇನಿಯಾವನ್ನೇ ಸೃಷ್ಟಿಸುವಂತಿದೆ. ಸಾಕಷ್ಟು ಎಲಿವೇಶನ್ ಸೀನ್ಸ್ ‘ಸಲಾರ್’ ಚಿತ್ರದಲ್ಲಿದೆ. ಡಾರ್ಕ್ ಶೇಡ್, ಸಿನಿಮಾಟೋಗ್ರಫಿ, ಪಾತ್ರಗಳ ಆರ್ಭಟ, ರವಿಬಸ್ರೂರು ಹಿನ್ನೆಲೆ ಸಂಗೀತ ಎಲ್ಲವೂ ನೀಲ್ ಸಿನಿಮಾಗಳನ್ನೇ ಕಣ್ಮುಂದೆ ತರುತ್ತವೆ. ಎಮೋಷನ್ ಮಾತ್ರ ಅಷ್ಟಾಗಿ ವರ್ಕ್ ಆಗಲಿಲ್ಲ ಎಂದೇ ಹೇಳಬೇಕು. ಕ್ಲೈಮ್ಯಾಕ್ಸ್ನಲ್ಲಿ ಪ್ರಭಾಸ್, ಪೃಥ್ವಿ ಇಬ್ಬರೂ ರಾಕ್ಷಸರಂತೆ ಅಬ್ಬರಿಸಿ ಹುಬ್ಬೇರಿಸುತ್ತಾರೆ.
ಪ್ರಶಾಂತ್ ನೀಲ್ ಈಗಾಗಲೇ ಹೇಳಿದಂತೆ ಇದು ‘ಉಗ್ರಂ’ ಚಿತ್ರ ಕಥೆನೇ. ಗುಜರಾಜ್, ಪಾಕಿಸ್ತಾನ ನಡುವೆ ಖಾನ್ಸರ್ಎನ್ನುವ ಒಂದು ಪ್ರದೇಶ ಇದೆ. ಅಲ್ಲಿ ರಾಜ ಮನ್ನಾರ್ ಆಳ್ವಿಕೆ ನಡೆಸುತ್ತಾನೆ. 101 ಭಾಗಗಳಾಗಿ ವಿಭಾಗಸಲ್ಪಟ್ಟ ಆ ಪ್ರದೇಶದಲ್ಲಿ 3 ಬೇರೆ ಬೇರೆ ಸಮುದಾಯದ ಜನರಿದ್ದಾರೆ. ಅವರಲ್ಲೇ ರಾಜನ ಕುರ್ಚಿಗಾಗಿ ಆಂತರ್ಯುದ್ಧಗಳು, ರಾಜಕೀಯ, ಕುತಂತ್ರ ನಡೆಯುತ್ತಿರುತ್ತದೆ. ಅಲ್ಲಿ ದೇವ, ವರದ ಎನ್ನುವ ಇಬ್ಬರು ಸ್ನೇಹಿತರ ಕಥೆಯನ್ನು ಹೇಳಲಾಗಿದೆ. ರಾಜಮನ್ನಾರ್ ಬಳಿಕ ಆತನ ಮಗ ವರದನಿಗೆ ಆ ಕುರ್ಚಿ ಸಿಗಬೇಕು ಎನ್ನುವುದು ಕೆಲವರ ವಾದ. ಆದರೆ ವರದನನ್ನೇ ಇಲ್ಲವಾಗಿಸಿ ಚುಕ್ಕಾಣಿ ತಾವು ಹಿಡಿಯಬೇಕು ಎಂದು ಹವಣಿಸುವವರ ದೊಡ್ಡ ದಂಡೇ ಇದೆ. ಸ್ನೇಹಿತನಿಗಾಗಿ ಏಣು ಬೇಕಾದರೂ ಮಾಡಲು ಸಿದ್ಧನಾಗಿರುವ ದೇವ, ಆ ಕುರ್ಚಿಯನ್ನು ವರದನಿಗೆ ಧಕ್ಕಿಸಿಕೊಡುತ್ತಾನಾ? ಇಲ್ವಾ? ಎಂದು ಕಥೆ ಮುಂದುವರೆಯುತ್ತದೆ.
ಪ್ರಭಾಸ್ ಹಾಗೂ ಪೃಥ್ವಿರಾಜ್ ತಮ್ಮ ತಮ್ಮ ಪಾತ್ರಗಳನ್ನು ಆವರಿಸಿಕೊಂಡಿದ್ದಾರೆ. ಶೃತಿ ಹಾಸನ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಇನ್ನುಳಿದಂತೆ ಜಗಪತಿ ಬಾಬು, ಈಶ್ವರಿ ರಾವ್, ಪ್ರಮೋದ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಭಾರವ ಆಗಿ ಬಾಬಿ ಸಿಂಹ ಪಾತ್ರ ಕಥೆಗೆ ತಿರುವು ಕೊಡುತ್ತದೆ. ಟೆಕ್ನಿಕಲಿ ಸಿನಿಮಾ ಅದ್ಭುತ ಎಂದೇ ಹೇಳಬೇಕು. ಖಾನ್ಸರ್ನಗರವನ್ನು ತೋರಿಸಿರುವ ಪರಿಯೇ ಅದ್ಭುತ ಎನಿಸುತ್ತದೆ. ಭಾರೀ ಸೆಟ್ಗಳನ್ನು ಹಾಕಿ, ಮತ್ತಷ್ಟು ಗ್ರಾಫಿಕ್ಸ್ ಮಾಡಿ ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಪ್ರಶಾಂತ್ ನೀಲ್. ಭುವನ್ ಸಿನಿಮಾಟೋಗ್ರಫಿ ಅದಕ್ಕೆ ದೊಡ್ಡ ಶಕ್ತಿ ತುಂಬಿದೆ. ರವಿಬಸ್ರೂರು ಬಿಜಿಎಂ ಚಿತ್ರಕ್ಕೆ ತಕ್ಕನಾಗಿದೆ. ಕಮರ್ಷಿಯಲ್ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ನೀಲ್ ಬೆರಗು ಮೂಡಿಸುತ್ತಾರೆ. ಕನ್ನಡದ ಉಗ್ರಂ ಸಿನಿಮಾನ ಕೆಜಿಎಫ್ ಸ್ಟೈಲ್ನಲ್ಲಿ ತೋರಿಸಿದ್ದಾರೆನ್ನುವುದು ಕೆಲವರ ಕಮೆಂಟ್ ಆದರೂ ಕೂಡ `ಖಾನ್ಸಾರ್’ ಕೋಟೆ ಕಂಡು ದಿಗ್ದಿಗ್ಭ್ರಾಂತಗೊಂಡಿದ್ದಾರೆ. ದೇವ-ವರದನ ಸ್ನೇಹಕ್ಕೆ ಸಲಾಂ ಹೊಡೆಯುತ್ತಾ, ನೀಲ್ ಸಾಹೇಬ್ರೇ, ಹೊಂಬಾಳೇ ಮಾಲೀಕರೇ `ಸಲಾರ್- ಪಾರ್ಟ್2′ ಗೆ ಮುಹೂರ್ತ ಫಿಕ್ಸ್ ಮಾಡಿ ಎನ್ನುತ್ತಿದ್ದಾರೆ.