ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ಲಾಗಿ ರಿಲೀಸ್ ಆಗಿರೋ, ತೆಲುಗು ಹೀರೋ ತೇಜ ಸಜ್ಜಾ ನಟನೆಯ ʻಹನುಮಾನ್ʼ ಸಿನಿಮಾ ಸಿಲ್ವರ್ ಸ್ಕ್ರೀನ್ ಮೇಲೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಸಿನಿಮಾ ಮಂದಿ ಕೂಡ ʻಹನುಮಾನ್ʼ ಚಿತ್ರಕ್ಕೆ ಬಹುಪರಾಕ್ ಹಾಕ್ತಿದ್ದಾರೆ. ಇತ್ತೀಚೆಗಷ್ಟೇ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವಣ್ಣ ತೆಲುಗು ʻಹನುಮಾನ್ʼ ನೋಡಿ ಮೆಚ್ಚಿಕೊಂಡಿದ್ದರು.
ಇದೀಗ, ಸೌತ್ ಸುಂದರಿ ಸಮಂತಾ ಹನುಮಾನ್ ಚಿತ್ರ ಕೊಂಡಾಡಿದ್ದಾರೆ. ಚಿತ್ರದ ತಾರಾಬಳಗವನ್ನೆಲ್ಲಾ ಪ್ರಶಂಸಿಸಿರೋ ಮನಂ ಚೆಲುವೆ, ತೇಜ್ ಸಜ್ಜಾ ನಟನೆ ಹಾಗೂ ಕಾಮಿಕ್ ಟೈಮಿಂಗ್‌ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಿನಿಮಾ ಮ್ಯೂಸಿಕ್ ಹಾಗೂ ನಿರ್ದೇಶಕರ ಕೈಚಳಕಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿರೋ ಯಶೋಧೆ, ಹನುಮಾನ್ ಪಾರ್ಟ್2 ನೋಡೋದಕ್ಕೆ ಕಾತುರಳಾಗಿದ್ದೇನೆ ಅಂತ ಟ್ವೀಟ್ ಮೂಲಕ ತಿಳಿಸಿದ್ದಾರೆ.
‘ಹನುಮಾನ್’ ಈ ವರ್ಷದ ಆರಂಭದಲ್ಲೇ ಬಂಗಾರದ ಬೆಳೆ ತೆಗೆದಿರೋ ತೆಲುಗು ಸಿನಿಮಾ. 25 ಕೋಟಿ ವೆಚ್ಚದಲ್ಲಿ ತಯ್ಯಾರಾದ ಈ ಚಿತ್ರ ಎರಡನೇ ವಾರಕ್ಕೆ ಎಂಟ್ರಿಕೊಡುವಷ್ಟರಲ್ಲಿ 150 ಕೋಟಿ ಕಲೆಕ್ಷನ್ ಮಾಡಿದೆ. ಸಂಕ್ರಾಂತಿಗೆ ಕಣಕ್ಕಿಳಿದು ಸ್ಟಾರ್ ನಟರ ಸಿನಿಮಾಗಳಿಗೆ ಟಕ್ಕರ್ ಕೊಟ್ಟಿರೋ ತೇಜ್ ನಟನೆಯ ಹನುಮಾನ್ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಮೂಟೆ ಕಟ್ಟುತ್ತಿದೆ. ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿರುವ ಹನು-ಮಾನ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂದ್ಹಾಗೇ, ʻಹನುಮಾನ್ʼ ದೇವರ ಬಗ್ಗೆ ಇರುವ ಸಿನಿಮಾವಲ್ಲ. ಬದಲಾಗಿ ಒಬ್ಬ ವ್ಯಕ್ತಿಗೆ ಹನುಮಾನ್ ಪವರ್ ಬಂದ್ರೆ ಆತ ಸೂಪರ್ ಹೀರೋ ಹೇಗೆ ಆಗುತ್ತಾನೆ ಅನ್ನೋದು ಸಿನಿಮಾ. ಇದೊಂದು ಫ್ಯಾಂಟಸಿ ಮೂವೀಯಾದ್ರೂ ಕಂಟೆಂಟ್ ತುಂಬಾ ಚೆನ್ನಾಗಿದೆ. ಕಾಮಿಡಿ , ಆಕ್ಷನ್ , ಪ್ರೀತಿ ಎಲ್ಲವನ್ನೂ ಒಳಗೊಂಡಿರೋ ʻಹನುಮಾನ್ʼ ಸಿನಿಮಾ ಚಿತ್ರಪ್ರೇಮಿಗಳ ಮನಸೂರೆಗೊಳ್ತಿದೆ. ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರ ಬೆಳ್ಳಿಭೂಮಿ ಮೇಲೆ ನಾಗಾಲೋಟ ಮುಂದುವರೆಸಿದೆ.