ನಟಿ ಸಂಗೀತ ಭಟ್ ಕಂ ಬ್ಯಾಕ್ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಕ್ಲಾಂತ’ ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಕ್ಲಾಂತ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಿಗಳನ್ನು ಗ್ಯಾಂಗ್ ಒಂದು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್ ನಿಂದ ಆ ಜೋಡಿ ಹೇಗೆ ತಪ್ಪಿಸಿಕೊಂಡು ಬರ್ತಾರೆ. ಅವರ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬ ಕಥೆಯ ಸಣ್ಣ ಎಳೆಯನ್ನು ‘ಕ್ಲಾಂತ’ ಟೀಸರ್ ನಲ್ಲಿ ಬಿಟ್ಟುಕೊಡಲಾಗಿದೆ.
‘ರಂಗನ್ ಸ್ಟೈಲ್’, ‘ದಗಲು ಬಾಜಿಲು’ ಸೇರಿದಂತೆ ವಿಭಿನ್ನ ಜಾನರ್ ಚಿತ್ರಗಳನ್ನು ನಿರ್ದೇಶಿಸಿರುವ ವೈಭವ್ ಪ್ರಶಾಂತ್ ‘ಕ್ಲಾಂತ’ ಎಂಬ ಈ ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿರುವ ‘ಕ್ಲಾಂತ’ ಸಿನಿಮಾದಲ್ಲಿ ಉಳಿದಂತೆ ಶೋಭರಾಜ್, ವೀಣಾ ಸುಂದರ್, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್ ಜೈನ್, ಯುವ, ತಿಮ್ಮಪ್ಪ ಕುಲಾಲ್, ಸ್ವಪ್ನ, ರಾಘವೇಂದ್ರ ಕಾರಂತ್, ಪಂಚಮಿ ವಾಮಂಜೂರ್, ವಾಮದೇವ ಪುಣಿಂಚತ್ತಾಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ‘ಕ್ಲಾಂತ ಟೀಸರ್ ‘ಎ ಟು ಮ್ಯೂಸಿಕ್’ ಯು-ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಕ್ಲಾಂತ’ ಸಿನಿಮಾವನ್ನು ಕುಕ್ಕೆ ಸುಬ್ರಹ್ಮಣ್ಯ, ಗುಂಡ್ಯ, ಕಳಸ ಸುತ್ತ ಮುತ್ತ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ‘ಅನುಗ್ರಹ ಪವರ್ ಮೀಡಿಯಾ’ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿರುವ ಈ ಸಿನಿಮಾಕ್ಕೆ ಅರುಣ್ ಗೌಡ, ಪ್ರದೀಪ್ ಗೌಡ ಹೇಮಂತ್ ರೈ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದೆ.