ಸುಮಾರು 12 ವರ್ಷಗಳ ಹಿಂದೆ ತೆರೆಕಂಡಿದ್ದ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಹಾಡುಗಳು ಜನಮನ ಗೆದ್ದಿದ್ದು, ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಈಗ ಅದೇ ಸಿನಿಮಾದ ಸೀಕ್ವೇಲ್ ಆಗಿ ‘ಸಂಜು ವೆಡ್ಸ್ ಗೀತಾ-2’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ.
‘ಸಂಜು ವೆಡ್ಸ್ ಗೀತಾ’ ಸಿನಿಮಾವನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರೇ ‘ಸಂಜು ವೆಡ್ಸ್ ಗೀತಾ-2’ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಮೊದಲ ಭಾಗದಲ್ಲಿದ್ದ ಬಹುತೇಕ ಎಲ್ಲ ಕಲಾವಿದರೂ ಈ ಸಿನಿಮಾದಲ್ಲೂ ಇರಲಿದ್ದು, ನಾಯಕಿ ಮಾತ್ರ ಬದಲಾಗಿದ್ದಾರೆ. ‘ಸಂಜು ವೆಡ್ಸ್ ಗೀತಾ’ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿದ್ದು, ‘ಸಂಜು ವೆಡ್ಸ್ ಗೀತಾ-2’ ಸಿನಿಮಾದಲ್ಲಿ ರಮ್ಯಾ ಬದಲು ರಚಿತಾ ರಾಮ್ ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ‘ಅಶೋಕಾ ಹೋಟೆಲ್’ನಲ್ಲಿ ‘ಸಂಜು ವೆಡ್ಸ್ ಗೀತಾ-2’ ಸಿನಿಮಾದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ಶ್ರೀನಗರ ಕಿಟ್ಟಿ, ರಚಿತಾ ರಾಂ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಮುಹೂರ್ತ ದೃಶ್ಯಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಿದರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ‘ನಾಗಶೇಖರ್ ಮೂವೀಸ್’ ಹಾಗೂ ‘ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್’ ಸಹಯೋಗದೊಂದಿಗೆ ‘ಮಹಾನಂದಿ ಕ್ರಿಯೇಶನ್ಸ್’ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
‘ಸಂಜು ವೆಡ್ಸ್ ಗೀತಾ-2’ ಸಿನಿಮಾದ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದು, ಕವಿರಾಜ್ ಸಾಹಿತ್ಯವಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ. ‘ಸಂಜು ವೆಡ್ಸ್ ಗೀತಾ-2’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ನಟ ಅಭಿಷೇಕ್ ಅಂಬರೀಶ್, ಐಎಎಸ್ ಅಧಿಕಾರಿ ಮಂಜುನಾಥ್, ನಟ ಆದಿತ್ಯ, ನಾಗತಿಹಳ್ಳಿ ಚಂದ್ರಶೇಖರ್, ಫಿಲಂ ಚೇಂಬರ್ ಅಧ್ಯಕ್ಷ ಭಾ. ಮ ಹರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.