ಕನ್ನಡ ಚಿತ್ರರಂಗದಿಂದ ಹಿಂದಿ ಚಿತ್ರರಂಗದತ್ತ ಮುಖ ಮಾಡಿರುವ ಕನ್ನಡದ ನಾಯಕ ನಟಿಯರ ಸಂಖ್ಯೆ ಸಾಕಷ್ಟಿದೆ. ಈಗ ಆ ಸಾಲಿಗೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗುತ್ತಿದೆ. ಆ ಹೆಸರೇ ಸಪ್ತಮಿ ಗೌಡ. ಹೌದು, ‘ಕಾಂತಾರ’ ಸಿನಿಮಾದ ಲೀಲಾ ಪಾತ್ರದ ಮೂಗುತಿ ಸುಂದರಿಯಾಗಿ ಸಿನಿಪ್ರಿಯರ ಮನಗೆದ್ದಿರುವ ಸಪ್ತಮಿ ಗೌಡ ಈಗ ಬಾಲಿವುಡ್‌ನತ್ತ ಚಿತ್ತ ಹರಿಸಿದ್ದಾರೆ.
‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟಿ ಸಪ್ತಮಿ ಗೌಡ ಹಿಂದಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದರು. ಅದು ‘ದಿ ವಾಕ್ಸಿನ್ ವಾರ್’. ‘ಕಾಶ್ಮೀರಿ ಫೈಲ್ಸ್’ ಮೂಲಕ ಸಂಚಲ ಸೃಷ್ಟಿಸಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಗೌಡ ಕೂಡಾ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸೆ.28ರಂದು ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೇಲೆ ಸಪ್ತಮಿ ನಿರೀಕ್ಷೆ ಇಟ್ಟಿದ್ದಾರೆ.
ಅಂದಹಾಗೆ, ಇದು ನೈಜ ಘಟನೆಗಳನ್ನು ಆಧರಿಸಿ ಮಾಡಲಾಗಿರುವ ಚಿತ್ರ. ಮುಖ್ಯವಾಗಿ ಕೋವಿಡ್ ಸಮಯದಲ್ಲಿನ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ತಮ್ಮ ಹೊಸ ಬಾಲಿವುಡ್ ಸಿನಿಮಾದತ್ತ ಗಮನ ಹರಿಸಿರುವ ಸಪ್ತಮಿ, ತಮ್ಮ ಮೊದಲ ಹಿಂದಿ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.