ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸಾಲಿನಲ್ಲಿ ನಿಂತಿದ್ದ ಚಿತ್ರ ಶಾಕುಂತಲಂ. ಪೌರಾಣಿಕ ಸಿನಿಮಾ ಎನ್ನುವ ಕಾರಣಕ್ಕೆ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರವೂ ಇದಾಗಿತ್ತು. ಗುಣಶೇಖರ್ ನಿರ್ದೇಶನ ಮತ್ತು ಸಮಂತಾ ನಟನೆಯ ಚಿತ್ರ ಎನ್ನುವ ಕಾರಣಕ್ಕೆ ಕಲಾಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಕೊನೆಗೂ ಈ ಚಿತ್ರ ತೆರೆಗೆ ಬಂದಿದೆ. ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕ ಈಗ ಚಿತ್ರದ ಕುರಿತು ಏನು ಹೇಳುತ್ತಿದ್ದಾರೆನ್ನುವ ಕುತೂಹಲವೂ ಇದೆ. ಹಾಗಾದ್ರೆ ಶಾಕುಂತಲಂ ಚಿತ್ರ ಹೇಗಿದೆ? ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಏನು? ಅದರ ಫುಲ್ ಡಿಟೈಲ್ಸ್ ಇಲ್ಲಿದೆ.

ಬಾಹುಬಲಿ ಸಿನಿಮಾ ಬಂದ ಮೇಲೆ ಐತಿಹಾಸಿಕ, ಪೌರಾಣಿಕ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಪ್ರೇಕ್ಷಕರು ಕೂಡ ಹಿಸ್ಟ್ರಾರಿಕಲ್ ಸಿನಿಮಾಗಳನ್ನು ಹೆಚ್ಚು ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ. ಹೀಗಾಗಿಯೇ ರುದ್ರಮ್ಮ ದೇವಿ ಸಿನಿಮಾ ಖ್ಯಾತಿಯ ನಿರ್ದೇಶಕ ಗುಣಶೇಖರ್, ಕಾಳಿದಾಸ ಕೆತ್ತಿದ ಅಭಿಜ್ಞಾನ ಶಾಕುಂತಲಂ ಪ್ರೇಮಕಾವ್ಯವನ್ನು ತೆರೆಮೇಲೆ ತರುವುದಕ್ಕೆ ಆಸೆಪಟ್ಟಿದ್ದರು. ಅದ್ರಂತೆಯೇ ಈಗ ಶಾಕುಂತಲಂ ಸಿನಿಮಾ ಮಾಡಿ, ಪ್ರೇಕ್ಷಕರ ಮಡಿಗೆ ಹಾಕಿದ್ದಾರೆ. ಈ ಚಿತ್ರವು ಈಗ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಶಾಕುಂತಲೆಯಾಗಿ ಸೌತ್ ಸುಂದರಿ ಸಮಂತಾ ಕಾಣಿಸಿಕೊಂಡರೆ, ದುಷ್ಯಂತನ ಪಾತ್ರದಲ್ಲಿ ದೇವ್‍ಮೋಹನ್ ಮಿಂಚಿದ್ದಾರೆ.
ಅಂದ ಹಾಗೆ, ಪ್ರೇಕ್ಷಕರಿಗೆ ಶಾಕುಂತಲಂ ಕಥೆ ಗೊತ್ತಿಲ್ಲದೇನು ಅಲ್ಲ. ವಿಶ್ವಾಮಿತ್ರ ಹಾಗೂ ಮೇನಕೆಯ ಮಗಳಾದ ಶಾಕುಂತಲೆ, ಕಣ್ವಮುನಿ ಮಹರ್ಷಿಗಳ ಆಶ್ರಮದಲ್ಲಿ ಬೆಳೆದಿದ್ದು, ಪುರು ಸಾಮ್ರಾಜ್ಯದ ರಾಜ ದುಷ್ಯಂತ ಒಮ್ಮೆ ಕಣ್ವಮುನಿ ಆಶ್ರಮಕ್ಕೆ ಬಂದಾಗ, ಆತನನ್ನು ನೋಡಿ ಶಾಕುಂತಲೆಗೆ ಪ್ರೇಮಾಂಕುರ ಆಗಿದ್ದು, ಇವರಿಬ್ಬರು ಗಾಂಧರ್ವ ವಿವಾಹ ಮಾಡಿಕೊಂಡಿದ್ದು, ದುರ್ವಾಸ ಮುನಿ ಶಾಪವಿಟ್ಟಿದ್ದು, ಅದರ ಪರಿಣಾಮದಿಂದಲೇ ದುಷ್ಯಂತನು ಶಾಕುಂತಲೆಯನ್ನು ಮರೆತಿದ್ದು, ಮತ್ತೆ ಆಕೆಯ ನೆನಪಾಗಿ ಹಿಂತಿರುಗಿ ಬಂದಿದ್ದು ಸೇರಿದಂತೆ ಈ ಪ್ರೇಮ ಕಥೆಯ ಸುತ್ತಣ ಚಿತ್ರಣವೂ ಚಿತ್ರಪ್ರೇಮಿಗಳಿಗೆ ಗೊತ್ತೇ ಇದೆ. ಆದರೂ ಶಾಕುಂತಲೆ ಹಾಗೂ ದುಷ್ಯಂತನ ಪ್ರೇಮಕಾವ್ಯವನ್ನು ದೃಶ್ಯರೂಪಕದಲ್ಲಿ ನೋಡ್ಬೇಕು, ಬೆಳ್ಳಿಪರದೆ ಮೇಲೆ ಸಿನಿಮಾ ನೋಡ್ತಾ ನೋಡ್ತಾ ಹಾಗೆಯೇ ಕಳೆದು ಹೋಗಬೇಕು ಅಂತ ಬಂದಿದ್ದ ಪ್ರೇಕ್ಷಕನಿಗೆ ಮನರಂಜನೆಗಿಂತ ಬೇಸರವೇ ಆಗಿದ್ದು ಹೆಚ್ಚು.

ಹೌದು, ಶಾಕುಂತಲಂ ಸಿನಿಮಾವು ಚಿತ್ರಪ್ರೇಮಿಗಳಿಗೆ ಸಿಕ್ಕಾಪಟ್ಟೆ ಬೋರ್ ಹೊಡೆಸಿದೆ. ಬೆರಗುಗೊಳಿಸಬೇಕಿದ್ದ ವಿಎಫೆಕ್ಟ್ ಬಿದ್ದು ಬಿದ್ದು ನಗುವಂತೆ ಮಾಡಿದೆ. ದಂಗಾಗಿಸಬೇಕಿದ್ದ ಸಾಹಸ ಸನ್ನಿವೇಶಗಳು ಕಾಮಿಡಿ ಸೀನ್‍ಗಿಂತ ಕೆಟ್ಟದಾಗಿದ್ದು, ಛೋಟಾ ಭೀಮ್ ಅನುಭವ ನೀಡುತ್ತವೆ. ಸ್ಟೋರಿ ಟೆಲ್ಲಿಂಗ್ ರೀತಿ ಜಾನಿ ಜಾನಿ ಯಸ್ ಪಾಪ, ಟೆಲ್ಲಿಂಗ್ ಗ್ಲಾಸ್ ನೋ ಪಾಪ ಎನ್ನುವಂತಿದೆ ಕಥಾ ಪುರಾಣ. ಇಡೀ ಸಿನಿಮಾವನ್ನು ತ್ರಿಡಿ ನ ಎಫೆಕ್ಟ್ ನಲ್ಲಿ ತೋರಿಸ್ಬೇಕು ಎನ್ನುವ ನಿರ್ದೇಶಕರ ಹುಚ್ಚು ಸಾಹಸವೇ ಶಾಕುಂತಲಂ ಚಿತ್ರದ ಸಕ್ಸಸ್ ಗೆ ಮುಳುವಾಗಿದೆ. ಇಷ್ಟಾಗಿಯೂ ಇಲ್ಲಿ ಇಷ್ಟವಾಗುವುದು ಸಮಂತಾ ಅವರ ಅಭಿನಯ.
ಮಯೋಸೈಟಿಸ್ ಎನ್ನುವ ಮಾರಣಾಂತಿಕ ಖಾಯಿಲೆಗೆ ತುತ್ತಾಗಿ, ಸಾವು-ಬದುಕಿನ ನಡುವೆ ಹೋರಾಟ ಮಾಡುವಾಗಲೂ ಶಾಕುಂತಲಂ ಪಾತ್ರಕ್ಕೆ ಅವರು ಜೀವ ತುಂಬಿದ ರೀತಿ ಅದ್ಬುತವಾಗಿದೆ. ಸಮಂತಾ ಕಣ್ಣಲ್ಲಿ ಕಾಂತಿಯಿಲ್ಲ, ಮುಖದಲ್ಲಿ ಕಳೆಯಿಲ್ಲ ಅಂತ ಕಾಮೆಂಟ್ ಮಾಡುವವರು ಚಿತ್ರಮಂದಿರಕ್ಕೆ ಹೋಗಿ ಒಂದು ಸಲ ಚಿತ್ರ ನೋಡಿದರೆ ಗೊತ್ತಾಗುತ್ತೆ. ನಟನೆ ಅಂತ ಬಂದಾಗ ಸಮಂತಾ ಹೇಗೆಲ್ಲ ತಮ್ಮ ಬದ್ಧತೆ ತೋರುತ್ತಾರೆನ್ನುವುದು ಈ ಚಿತ್ರದಲ್ಲಿನ ಅವರ ಪಾತ್ರದಲ್ಲೂ ಸಾಬೀತು. ಉಳಿದಂತೆ ದುಷ್ಯಂತನ ಪಾತ್ರಧಾರಿ ದೇವ್‍ಮೋಹನ್ ನಟನೆಯೂ ಚೆನ್ನಾಗಿದೆ. ಪ್ರಕಾಶ್ ರಾಜ್, ಮೋಹನ್ ಬಾಬು, ಕಬೀರ್ ಬೇಡಿ, ಕಬೀರ್ ದುಹಾನ್ ಸಿಂಗ್, ಅದಿತಿ ಬಾಲನ್, ಮಧೂ, ಸೇರಿದಂತೆ ಹಲವು ಕಲಾವಿದರು ಅವರವರ ಪಾತ್ರವನ್ನು ಪೋಷಣೆ ಮಾಡಿದ ರೀತಿಯೂ ಸೊಗಸಾಗಿದೆ.

ಇಂಟ್ರೆಸ್ಟಿಂಗ್ ಅಂದರೆ ಪುಷ್ಪರಾಜ್ ಪುತ್ರಿಯ ಎಂಟ್ರಿ. ಅದಾಗಲೇ ಪ್ರೇಕ್ಷಕರು ಸುಸ್ತು ಹೊಡೆದಿದ್ದರು. ಕುಂಟುತ್ತಾ ಸಾಗಿದ ಕಥೆ, ಕಣ್ಣನ್ನೇ ಮಂಜಾಗಿಸಿದ ಮೇಕಿಂಗ್, ನಿದ್ದೆಗೆಳೆದ ವಿ ಫೆಕ್ಸ್ ಎಫೆಕ್ಟ್ , ಬಡಿದೆಬ್ಬಿಸದ ಸಂಗೀತ ಸಿನಿಮಾ ಪ್ರೇಮಿಗಳು ಆಕಳಿಸುವಂತೆ ಮಾಡಿತ್ತು. ಅದೇ ಹೊತ್ತಿಗೆ ಪ್ರವೇಶ ಪಡೆಯುವ ಪುಷ್ಪರಾಜ್ ಪುತ್ರಿ ಅಲ್ಲಿವರೆಗಿನ ಆಯಾಸವನ್ನೇ ಮರೆಸಿಬಿಡುತ್ತಾರೆಂದರೆ ಅತಿಶಯೋಕ್ತಿಯೇನಲ್ಲ. ಫ್ಲವರ್ ಅಲ್ಲ ಫೈಯರ್ ಅಂತ ಸಿಂಹ ಏರಿ ಬಂದ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ, ಖಡಕ್ ಡೈಲಾಗ್ ಹೊಡೆದರೆ ಸಿಳ್ಳೆ ಚಪ್ಪಾಳೆ ಮುಗಿಲೆತ್ತರಕ್ಕೇರುತ್ತವೆ. ಮೊದಲ ಚಿತ್ರವಾದ್ರೂ ಆಕೆಯ ಸ್ಕ್ರೀನ್ ಪ್ರಸೆನ್ಸ್ ಹಾಗೂ ಡೈಲಾಗ್ ಡೆಲಿವರಿ ಕೇಳಿ ಪ್ರೇಕ್ಷಕರು ಹುಚ್ಚೆದ್ದು ಸೀಟಿ ಹೊಡೆಯುತ್ತಾರೆ. ತಂದೆಗೆ ತಕ್ಕ ಮಗಳು ಅಂತ ಕೂಗಿ ಕೂಗಿ ಹೇಳುತ್ತಾರೆ. ಆ ಮಟ್ಟಿಗೆ ಸೊರಗಿ ಹೋದ ಶಾಕುಂತಲಂ ಗೆ ಎನರ್ಜಿ ಬೂಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್ ಪುತ್ರಿ. ಅದೇ ಈ ಚಿತ್ರದ ಪ್ಲಸ್ ಪಾಯಿಂಟ್.