ಶಂಕರನಾಗ್ ಕನ್ನಡ ಚಿತ್ರರಂಗದ ಒಂದು ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಕರಾಟೆ ಕಿಂಗ್ , 36ರ ಕಿರಿ ವಯಸ್ಸಿನಲ್ಲೇ ನಮ್ಮನ್ನ ದೈಹಿಕವಾಗಿ ಅಗಲಿದ್ರೂ, ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿ,80 ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ಬಳಿಕ ನಡೆದದೆಲ್ಲವೂ ಇತಿಹಾಸವೇ.
ಶಂಕರನಾಗ್ ಮುಂಬೈ ಥಿಯೇಟರ್, ಸಿನಿಮಾರಂಗದಲ್ಲಿ ಬ್ಯುಸಿ ಆಗಿದ್ದಾಗಲೇ ಅರುಂಧತಿ ರಾವ್ ಅನ್ನೋ ಪ್ರತಿಭಾವಂತ ನಟಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದು,ವಿವಾಹ ಬಂಧನಕ್ಕೊಳಗಾದ್ರು. ಆಮೇಲೆ ಈ ದಂಪತಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದು ಇಂದಿಗೂ ಅಚ್ಚಳಿಯದ ನೆನಪು. ಈ ದಂಪತಿಯ ಮಗಳು ಕಾವ್ಯಾ ನಾಗ್ ಹೆಸರು ನೀವು ಕೇಳಿರ್ತೀರಾ.ಅಪ್ಪ ಅಮ್ಮಇಬ್ಬರೂ ಕಲಾವಿದರೇ ಅಂದ ಮೇಲೆ ಹೆಚ್ಚಿನದಾಗಿ ಅವರ ಮಕ್ಕಳು ಚಿತ್ರರಂಗಕ್ಕೆ ಬರೋದು ಕಾಮನ್. ಆದ್ರೆ ಕಾವ್ಯಾನಾಗ್ ಮಾತ್ರ ಕಲಾಲೋಕದಿಂದ ದೂರ ಉಳಿದಿದ್ದಾರೆ. ಸಿನಿಮಾ, ಪ್ರಚಾರ ಇದ್ಯಾವುದರ ಕಡೆಯೂ ತಲೆಹಾಕದೇ, ಸ್ವಂತ ಬ್ಯುಸಿನೆಸ್ ಮಾಡಿ ಕಾವ್ಯಾನಾಗ್ ಹೆಸರು ಮಾಡುತ್ತಿದ್ದಾರೆ.
ಯಸ್, ಶಂಕರ್ ನಾಗ್ ಅವ್ರ ಮುದ್ದಿನ ಮಗಳು ನಮ್ಮ ದೇಶದ ಪರಂಪರೆಯ ಕೊಂಡಿಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ‘ಕೋಕೊನೆಸ್’ ಹೆಸರಲ್ಲಿ ಕಂಪೆನಿ ಶುರು ಮಾಡಿ, ತೆಂಗಿನ ಕಾಯಿ ಎಣ್ಣೆ ತಯ್ಯಾರಿಸುವುದಲ್ಲಿ ಕಾವ್ಯಾನಾಗ್ ತೊಡಗಿಸಿಕೊಂಡಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ತೆಂಗಿನ ಕಾಯಿ ಎಣ್ಣೆ ಬಗ್ಗೆ ಗೊತ್ತಿಲ್ಲ. ಇದರಲ್ಲಿರೋ ಲ್ಯೂರಿಕ್ ಆಸಿಡ್‌ನ ಅಂಶ ತಾಯಿಯ ಹಾಲಿಗೆ ಸಮ ಎನ್ನುವ ಸತ್ಯ ಯಾರಿಗೂ ಗೊತ್ತಾಗ್ತಿಲ್ಲ. ತೆಂಗಿನ ಕಾಯಿಯನ್ನು ತುರಿದು, ಸಂಸ್ಕರಿಸಿ ತೆಂಗಿನ ಹಾಲಿನ ಎಣ್ಣೆ ತಯಾರಿಸುತ್ತಾರೆ. ಇದರಲ್ಲಿ ಅಪಾರ ಔಷಧೀಯ ಗುಣಗಳಿವೆ. ಸೋರಿಯಾಸಿಸ್, ಎಕ್ಸಿಮಾದಂಥ ಸಮಸ್ಯೆಯನ್ನು ಈ ಎಣ್ಣೆಯಿಂದ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಹಾಸಿಗೆ ಹಿಡಿದ ರೋಗಿಗಳಲ್ಲಿ ಬೆಡ್‌ಸೋರ್ ಅನ್ನೋದು ಕಾಮನ್. ಈ ಸಮಸ್ಯೆಯನ್ನು ಸರಿಪಡಿಸೋದು ಬಹಳ ಕಷ್ಟ. ಆದರೆ ಈ ಎಣ್ಣೆ ಶೀಘ್ರವಾಗಿ ಈ ಸಮಸ್ಯೆಯನ್ನು ಗುಣಪಡಿಸುತ್ತದೆ.
ಈ ತೆಂಗಿನ ಎಣ್ಣೆಗೆ ವರ್ಜಿನ್ ಕೋಕೊನೆಟ್ ಆಯಿಲ್ ಅಂತ ಹೆಸರು. ಇದರ ಪರಿಮಳ ಕಾಯಿ ತುರಿಯ ಹಾಗಿರುತ್ತದೆ. ತೆಂಗಿನ ಕಾಯಿ ತುರಿದು ಸಂಸ್ಕರಿಸಿ ಆ ಎಣ್ಣೆಯನ್ನು ಬಿಸಿ ಮಾಡಿ ಮತ್ತೆ ಮೈನಸ್ ಡಿಗ್ರಿಯಲ್ಲಿ ತಣ್ಣಗೆ ಮಾಡಿ ಬಳಸಲಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಈ ಎಣ್ಣೆಗೆ ಮಹತ್ವದ ಸ್ಥಾನ ಇದೆ. ನಮ್ಮ ಪೂರ್ವಜರು ಈ ಎಣ್ಣೆಯನ್ನು ಔಷಧವಾಗಿ, ದಿನ ಬಳಕೆಯಲ್ಲಿ ಬಳಸುತ್ತಿದ್ದರು. ಆದರೆ ಕ್ರಮೇಣ ಇದರ ಬಳಕೆ ಕಡಿಮೆ ಆಗಿ ಕೊಬ್ಬರಿ ಎಣ್ಣೆ ಬಳಕೆ ಅಧಿಕವಾಯ್ತು.ಕಾವ್ಯಾ ನಾಗ್ ಈ ಬಗ್ಗೆ ಸರ್ಚ್ ಮಾಡುವಾಗ ಫಿಲಿಫೈನ್ಸ್‌ನಲ್ಲಿ ಈ ಎಣ್ಣೆ ಉತ್ಪಾದಿಸುತ್ತಿರುವ ಬಗ್ಗೆ ತಿಳಿಯಿತು. ನಮ್ಮ ದೇಶದ ಉತ್ಪನ್ನವೊಂದು ನಮ್ಮ ದೇಶದಲ್ಲೇ ಕಣ್ಮರೆಯಾದದ್ದನ್ನು ಕಂಡು ಇದಕ್ಕೆ ಮರುಜೀವ ಕೊಡಬೇಕು ಅಂತ ಕಾವ್ಯಾ ಈ ಹೊಸ ಉದ್ಯಮ ಕಟ್ಟಿ ಬೆಳೆಸಲು ಮುಂದಾಗಿದ್ದು ಮಾತ್ರವಲ್ಲ ಯಶ ಕಂಡಿದ್ದಾರೆ. ತಂದೆ – ತಾಯಿ ಫೇಮಸ್ ಕಲಾವಿದರಾದ್ರೂ ಸಹ ಅವರ ಹೆಸರು ಎಲ್ಲೂ ಬಳಸದೇ ತನ್ನ ಪರಿಶ್ರಮದ ಮೂಲಕ ದೇಶೀಯ ಉತ್ಪನ್ನ ವಾದ ತೆಂಗಿನಕಾಯಿ ಎಣ್ಣೆಯ ಕಂಪನಿ ನಡೆಸುತ್ತಿದ್ದಾರೆ. ಈ ಮೂಲಕ ಪ್ರಚಾರ ಗೀಳಿಗೆ ಸಿಲುಕದೇ ಕಾವ್ಯಾ ನಾಗ್ ಮಾದರಿ ಸಾಧನೆ ಮಾಡ್ತಿದ್ದಾರೆ ಅಂದ್ರೆ ತಪ್ಪಾಗಲಾರದು.