-ಆಪ್ತ ಜೀವಕ್ಕೆ ಕಂಟಕವೆದುರಾದ ಆಘಾತ!
-ಅವರ ಎನರ್ಜಿಯ ಮುಂದೆ ವಯಸ್ಸೂ ಮಂಡಿಯೂರಿದೆ!
ವಯಸ್ಸು ಐವತ್ತು ಧಾಟಿದರೂ ಇಂದಿಗೂ ಕಾಲೇಜ್ ಸ್ಟೂಡೆಂಟ್ ಆಗಿ, ಹದಿನಾರರ ನಟಿಯರೊಂದಿಗೆ ನಲಿವ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಶಿವರಾಜ್ ಕುಮಾರ್ ಎವರ್ ಗ್ರೀನ್ ಹೀರೋ. ಎಂಥದ್ದೇ ಸಂಗೀತವಿರಲಿ ಅದರ ರಿದಮ್ಮಿಗೆ ಸರಿಯಾಗಿ ಚಿಗರೆಯಂತೆ ಕುಣಿಯುವ ಶಿವಣ್ಣನ ವಯಸ್ಸು ಯಾರೂ ಅಂದಾಜಿಸಲು ಸಾಧ್ಯವಿಲ್ಲ. ಇಂಥ ಶಿವಣ್ಣ ನಟಿಸಿದ ಇತ್ತೀಚಿನ ಬಹಳಷ್ಟು ಸಿನೆಮಾಗಳು ಗೆಲುವು ಸಾಧಿಸಿವೆ. ಹೀಗೆ ಯಶದ ಹಂಗಾಮಾ ಜೋರಾಗಿರುವಾಗಲೇ ಶಿವಣ್ಣ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ತಮ್ಮ ಅನಾರೋಗ್ಯವೂ ಸೇರಿದಂತೆ ಖಾಸಗಿ ಬದುಕಿನ ಒಂದಷ್ಟು ನೋವುಗಳು ಅವರನ್ನು ಹೈರಾಣು ಮಾಡಿ ಹಾಕಿವೆ!
ತಮಗೆ ಕ್ಯಾನ್ಸರ್ ಬಂದಾಗಲೂ ಕೂಡಾ ಶಿವಣ್ಣ ಅದೇ ಎನರ್ಜಿಯೊಂದಿಗೆ ಬೇರೆಯವರಿಗೂ ಧೈರ್ಯ ತುಂಬಿದ್ದರು. ಆದರೆ, ಆ ಸರ್ಜರಿಯ ನೋವು ಹಾಗೂ ತಮ್ಮ ಕುಟುಂಬವನ್ನು ಬಾಧಿಸುತ್ತಿರುವ ಒಂದಷ್ಟು ಆಘಾತಗಳಿಂದಾಗಿ ಶಿವಣ್ಣ ಭಾವುಕರಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಕುಟುಂಬದ ಪುಟ್ಟ ಕೂಸಿಗೂ ಕಾಡಿದ್ದ ಮಾರಕ ರೋಗದ ಬಗ್ಗೆ ಶಿವಣ್ಣ ಮಾತಾಡಿದ್ದರು. ಇದೀಗ ಅವರ ಜೀವದಂಥಾ ಮತ್ತೊಂದು ಜೀವಕ್ಕೆದುರಾಗಿರೋ ಅನಾರೋಗ್ಯದ ಸಂಕಷ್ಟ ಶಿವಣ್ಣರನ್ನು ಮತ್ತೊಂದಷ್ಟು ಅಧೀರರನ್ನಾಗಿಸಿದೆ. ಇದೆಲ್ಲದರಾಚೆಗೂ ಶಿವಣ್ಣ ಮೈ ಕೊಡವಿಕೊಳ್ಳುತ್ತಿರೋ ಪರಿ ಮಾತ್ರ ಅಚ್ಚರಿ. ಅರ್ಜುನ್ ಜನ್ಯಾ ನಿರ್ದೇಶನದ ಚಿತ್ರದಲ್ಲಿ ಅವರ ಪಾತ್ರದ ಚಹರೆಯಂತೂ ಅಭಿಮಾನಿಗಳನ್ನು ಥ್ರಿಲ್ ಆಗಿಸಿರೋದು ನಿಜ.

ಈಗಂತೂ ಶಿವರಾಜ್ ಕುಮಾರ್ ಯಶದ ಇತ್ತುಂಗದಲ್ಲಿದ್ದಾರೆ. ಒಂದು ಕಡೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಾಲಕ್ಕನೇ ದಶಕದ ಯಾನದ ಈ ಸಂದರ್ಭದಲ್ಲಿ ಒಂದರ ಹಿಂದೆ ಒಂದು ಚಿತ್ರಗಳು ಗೆಲುವು ಸಾದಿಸಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೃತ್ತಿ ಬದುಕೇ ಹಾಗೆ… ಒಮ್ಮೆ ಇದ್ದಕ್ಕಿದ್ದಂತೆ ಒಂದರ ಹಿಂದೆ ಒಂದು ಅವರು ನಟಿಸಿದ ಚಿತ್ರಗಳು ನೆಲಕಚ್ಚಿ ಬಿಡುತ್ತವೆ. ಅದರೆ ಬೆನ್ನಿಗೇ `ಶಿವಣ್ಣನ ಜಮಾನಾ ಮುಗೀತು’ ಎಂಬ ಕೂಗೂ ಕೇಳಿಬರುತ್ತಿರುತ್ತದೆ. ಆದರೆ ಶಿವರಾಜ್ ಕುಮಾರ್ ಮಾತ್ರ ಕನ್ನಡ ಚಿತ್ರರಂಗದ ಪಾಲಿಗೆ ಎಂದಿಗೂ ಫಿನಿಕ್ಸ್ ಹಕ್ಕಿಯೇ. ಯಾಕೆಂದರೆ ಅವರ ವೃತ್ತಿ ಬದುಕು ಮುಗಿದೇ ಹೋಯಿತು ಎನ್ನುವಷ್ಟರಲ್ಲೇ ಶಿವಣ್ಣನ ಹೊಸ ಸಿನೆಮಾಗಳೂ ಒಮ್ಮಿಂದೊಮ್ಮೆಲೇ ಆರಂಭವಾಗುತ್ತಲೇ ಇರುತ್ತವೆ. ಅದರ ಮಧ್ಯೆಯೇ ಧುತ್ತನೆ ಬರುವ ಸಿನೆಮಾವೊಂದು ದೊಡ್ಡ ಮಟ್ಟದ ಯಶಸ್ಸನ್ನು ಕೊಟ್ಟು ಮತ್ತೆ ಅವರು ಹತ್ತಾರು ಸಿನೆಮಾಗಳಿಗೆ ಬುಕ್ ಆಗಿ, ಮಿಂಚುತ್ತಲೇ ಇರುವಂತೆ ಮಾಡುತ್ತದೆ… ಇದು ಕಳೆದ ಎರಡು ದಶಕಗಳಿಂದ ನಡೆದುಕೊಂಡು ಬಂದಿರುವ ನಿರಂತರ ಪ್ರಕಿಯೆ.
ವಯಸ್ಸು ಐವತ್ತು ದಾಟಿದರೂ ಇಂದಿಗೂ ಕಾಲೇಜ್ ಸ್ಟೂಡೆಂಟ್ ಆಗಿ, ಹದಿನಾರರ ನಟಿಯರೊಂದಿಗೆ ರೊಮ್ಯಾನ್ಸ್ ಮಾಡೋ ಲವರ್ ಬಾಯ್ ಆಗಿ, ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುವ ಶಿವರಾಜ್ ಕುಮಾರ್ ಎವರ್ ಗ್ರೀನ್ ಹೀರೋ. ಎಂಥದ್ದೇ ಸಂಗೀತವಿರಲಿ ಅದರ ರಿದಮ್ಮಿಗೆ ತಕ್ಕತೆ ಮೈ ಕುಣಿಸುವ ಶಿವಣ್ಣನ ವಯಸ್ಸು ಯಾರೂ ಅಂದಾಜಿಸಲು ಸಾಧ್ಯವಿಲ್ಲ. ಬಹಳಷ್ಟು ಜನ ಹೀರೋಗಳಿಗೆ ನಲವತ್ತು ದಾಟುವ ಹೊತ್ತಿಗೇ ಕುತ್ತಿಗೆಯಲ್ಲಿ ನೆರಿಗೆ ಶುರುವಾಗಿರುತ್ತದೆ. ಆದರೆ ಶಿವರಾಜ್ ಕುಮಾರ್ ತನ್ನ ದೇಹ ಮತ್ತು ಮುಖಕಾಂತಿಯನ್ನು ಇವತ್ತಿಗೂ ಒಂದೇ ರೀತಿ ಮೇಂಟೇನ್ ಮಾಡಿಕೊಂಡು ಬಂದಿದ್ದಾರೆ. ಆನಂದ್ ಚಿತ್ರದಿಂದ ನಾಯಕನಾಗಿ, ಜನುಮದ ಜೋಡಿ, ಚೈತ್ರದ ಚಿಗುರು… ಥರದ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ ದೊರೆ, ಹಗಲುವೇಶದಂಥ ಕಲಾತ್ಮಕ ಚಿತ್ರಗಳಲ್ಲೂ ಕಾಣಿಸಿಕೊಂಡ ಶಿವರಾಜ್ ಕುಮಾರ್ರ ಗೆಲುವಿನ ಸವಾರಿಗೆ ಈ ವರ್ಷದ ಗೆಲುವು ಒಂದು ರೀತಿಯ ಕರ್ಟನ್ ರೈಸರ್ ಆಗಿದೆ. ಇದೀಗ ಶಿವಣ್ಣ ನಟಿಸಿರುವ ಒಂದಷ್ಟು ಚಿತ್ರಗಳು ಚಿತ್ರ ದೊಡ್ಡ ಮಟ್ಟದಲ್ಲಿಯೇ ಸೌಂಡು ಮಾಡಲಾರಂಭಿಸಿವೆ.

ಇನ್ನೂ ಮೊದಲ ಚಿತ್ರ ಮಾಡುವಾಗ ಇರುವಂತಹ ಭಯ, ಶ್ರದ್ಧೆ. ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಸ್ಯಾಂಡಲ್ವುಡ್ ಕಿಂಗ್ ಹೀಗೆ ನೂರಾರು ಬಿರುದುಗಳು. ಲೆಕ್ಕಕ್ಕೆ ಅವರೊಬ್ಬ ಸೂಪರ್ ಸ್ಟಾರ್ ಮಗ. ಆದರೆ ಅವರು ಆ ಸ್ಟಾರ್ ಗಿರಿಯನ್ನೇ ಮೀರಿ ಬೆಳದವರು. ಚಿತ್ರರಂಗಕ್ಕೆ ತಿಂಗಳಿಗೆ ಮೂರರಂತೆ ಹೊಸ ಹೊಸ ಹೀರೋಗಳ ಪ್ರವೇಶವಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಚಿತ್ರರಂಗದಲ್ಲಿ ಯಾರು ಇರುತ್ತಾರೆ, ಯಾರು ಮಾಯವಾಗುತ್ತಾರೆ ಎನ್ನುವುದೇ ಗೊತ್ತಿರುವುದಿಲ್ಲ. ಆದರೆ ಚಿತ್ರರಂಗದಲ್ಲೇ ಮೂವತ್ತು ವರ್ಷ ಉಳಿದು, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗುವುದು ಇತಿಹಾಸವೇ ಆಗುತ್ತದೆ. ಕಳೆದ ಇಷ್ಟೂ ವರ್ಷಗಳಿಂದ ಅಭಿಮಾನಿಗಳ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ, ಹಮ್ಮು-ಬಿಮ್ಮು ಇಲ್ಲದ, ಏಳು ಬೀಳುಗಳನ್ನು ಸಮನಾಗಿ ಕಂಡಿರುವ ತಂದೆಗೆ ತಕ್ಕ ಮಗ ಶಿವರಾಜ್ ಕುಮಾರ್.
ಅದು ಎಂಬತ್ತರ ದಶಕದ ಆಚೀಚೆಯ ಕಾಲಘಟ್ಟ. ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್ನಾಗ್, ಪ್ರಭಾಕರ್, ಶ್ರೀನಾಥ್ ಅವರುಗಳೆಲ್ಲಾ ಹೀರೋಗಳಾಗಿ ಮಿಂಚುತ್ತಿದ್ದರು. ಮತ್ತೆ ಮತ್ತೆ ಅದದೇ ಸಿನಿಮಾಗಳನ್ನು ಕಂಡು ನಿರಾಶೆಗೊಂಡಿದ್ದ ಕನ್ನಡ ಪ್ರೇಕ್ಷಕರು ಹೊಸ ಮುಖಗಳಿಗಾಗಿ ಹಂಬಲಿಸುತ್ತಿದ್ದರು. ಆ ಹೊತ್ತಿನಲ್ಲಿ ರಾಜ್ ಕುಟುಂಬ ಸ್ವಂತ ಬ್ಯಾನರ್ ಮೂಲಕ ತಮ್ಮ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತ್ತು. ಆನಂದ್ ಚಿತ್ರದ ಮೂಲಕ ಶಿವರಾಜಕುಮಾರ್ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ಆ ಮೂಲಕ ಓರ್ವ ಡ್ಯಾನ್ಸಿಂಗ್ ಸ್ಟಾರ್ ಹುಟ್ಟಿದಂತಾಗಿತ್ತು. ನಿರೀಕ್ಷೆಗೂ ಮೀರಿ ಆ ಸಿನಿಮಾ ಇಪ್ಪತೈದು ವಾರ ಯಶಸ್ವೀ ಪ್ರದರ್ಶನ ಗೊಳ್ಳುವ ಮೂಲಕ ಶಿವಣ್ಣನ ಮೊದಲ ಹೆಜ್ಜೆಯೇ ಮಹಾ ಗೆಲುವಿನೊಂದಿಗೆ ಶುಭಾರಂಭಗೊಂಡಿತ್ತು. ಆ ನಂತರ ಹಂತ ಹಂತವಾಗಿ ತೆರೆಗಂಡಿದ್ದ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರಗಳೂ ರಜತಮಹೋತ್ಸವ ಆಚರಿಸಿದ್ದವು. ಇದರೊಂದಿಗೆ ಮೊದಲ ಮೂರೂ ಚಿತ್ರಗಳೂ ಸೂಪರ್ ಹಿಟ್ ಆಗುವ ಮೂಲಕ ರಾಜಣ್ಣನ ಮಗನಿಗೆ ಹ್ಯಾಟ್ರಿಕ್ ಹೀರೋ ಎಂಬ ಬಿರುದಿನ ಗರಿ ಮೂಡಿಕೊಂಡಿತ್ತು.

ಹೀಗೆ ನಿರಂತರವಾಗಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದ್ದ ಶಿವಣ್ಣನ ವೃತ್ತಿ ಬದುಕಿಗೆ ದೊಡ್ಡ ಬೂಸ್ಟರ್ ಡೋಸ್ ಕೊಟ್ಟ ಚಿತ್ರ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಓಂ. ಈ ಚಿತ್ರ ಎಲ್ಲ ರೀತಿಯಿಂದಲೂ ಶಿವಣ್ಣನ ಪಾಲಿಗೆ ವರವಾಗಿತ್ತು. ಇದರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಶಿವಣ್ಣನಿಗೆ ದಕ್ಕಿತ್ತು. ಹಾಗೆ ನೋಡಿದರೆ ಚಿತ್ರರಂಗದಲ್ಲಿ ಓಂ ಸೃಷ್ಟಿಸಿದ್ದು ಎಂದಿಗೂ ಅಳಿಸಲಾರದ ಇತಿಹಾಸ. ತೊಂಬತ್ತರ ದಶಕವಿಡೀ ಶಿವಣ್ಣನ ವೃತ್ತಿ ಬದುಕು ಅಕ್ಷರಶಃ ದೇದೀಪ್ಯಮಾನವಾಗಿತ್ತು. ಜನುಮದ ಜೋಡಿ, ಅಂಡಮಾನ್, ನಮ್ಮೂರ ಮಂದಾರ ಹೂವೆ, ಜೋಡಿ ಹಕ್ಕಿ, ಎ.ಕೆ. ೪೭, ಹೃದಯ ಹೃದಯ ಮುಂತಾದ ಚಿತ್ರಗಳು ಸಾಧಿಸಿದ್ದ ಗೆಲುವು ಮತ್ತು ಅವು ಮೂಡಿಸಿದ್ದ ಛಾಪನ್ನು ಕನ್ನಡ ಚಿತ್ರರಂಗದ ಇತಿಹಾಸ ಯಾವತ್ತಿಗೂ ಮರೆಯುವಂತಿಲ್ಲ. ಅಷ್ಟಕ್ಕೂ ಹೀರೋ ಆಗಲು ಹೇಳಿ ಮಾಡಿಸಿದ ಬಾಹ್ಯ ಗುಣಗಳು ಶಿವಣ್ಣನಿಗಿರಲಿಲ್ಲ. ಆದರೆ ನಟನೆಯ ಕಸುವಿನಿಂದಲೇ ಎಲ್ಲವನ್ನೂ ಮೀರಿಕೊಂಡು ಮುಖ್ಯನಾಯಕರ ಸಾಲಿನಲ್ಲಿ ಮಿಂಚಿದ ಬಗೆ ಮಾತ್ರ ಸರ್ವ ಕಾಲಕ್ಕೂ ಬೆರಗು ಮೂಡಿಸುತ್ತದೆ.
ಶಿವಣ್ಣ ಚಿತ್ರರಂಗಕ್ಕೆ ಬಂದು ದಶಕ ಕಳೆಯುತ್ತಲೇ ಅವರಿಗೆ ಸವಾಲುಗಳು ಎದುರಾಗಿದ್ದವು. ಏಕಾಏಕಿ ಹೊಸಾ ಆಲೋಚನೆ ಹೊಂದಿದ್ದ ರವಿಚಂದ್ರನ್, ರಮೇಶ್, ರಾಮ್ ಕುಮಾರ್, ದೇವರಾಜ್ ಮುಂತಾದವರೂ ಕೂಡಾ ಒಂದು ಹಂತದಲ್ಲಿ ಹೊಸಾ ತಲೆಮಾರಿನ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಹಾದಿಯಲ್ಲಿ ಎಡವಿದ್ದರು. ಶಿವಣ್ಣ ಮಾತ್ರ ಬದಲಾದ ಅಲೆಗಳಿಗೆ ಒಗ್ಗಿಕೊಂಡು ಮುಂದುವರೆದರು. ಐವತ್ತರ ವಯಸ್ಸು ಸಮೀಪಿಸುತ್ತಲೇ ಶಿವಣ್ಣ ವಯಸಾದ ಮುಖ ಭಾವ ಹೊತ್ತು ಕೂರಲಿಲ್ಲ. ಬದಲಾಗಿ ಸಿಕ್ಸ್ ಪ್ಯಾಕ್ ಜೊತೆ ಮಿಂಚುತ್ತಾ ಹೊಸಾ ಹೀರೋಗಳಿಗೇ ಅಚ್ಚರಿ ಮೂಡಿಸಿದ್ದರು.

ಯಾರೇ ನಟನಾದರೂ ಕೂಡಾ ವಯಸ್ಸಾಗುತ್ತಾ ಹೋದಂತೆ ಅದಕ್ಕೆ ತಕ್ಕುದಾದ ಪಾತ್ರಗಳಿಗೆ ಒಗ್ಗಿಕೊಳ್ಳುತ್ತಾ ಸಾಗಬೇಕಾಗುತ್ತದೆ. ಅರವತ್ತಾದರೂ ಹದಿನೆಂಟರ ಹುಡುಗಿಯ ಸೊಂಟ ತಬ್ಬಿ ಕುಣಿದಾಡೋ ಸೂತ್ರಕ್ಕೇ ಕಟ್ಟು ಬಿದ್ದರೆ ಅದು ಸಹಜವಾಗಿಯೇ ಪ್ರೇಕ್ಷಕರಿಗೆ ಮಾತ್ರವಲ್ಲದೆ ಆರಾಧಿಸುವ ಅಭಿಮಾನಿಗಳಿಗೂ ರೇಜಿಗೆ ಮೂಡಿಸುತ್ತದೆ. ಹಿಂದಿಯಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ಅಮಿತಾಭ್ ಬಚ್ಚನ್ ಆ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಪಾಲಿಗೆ ಪಕ್ಕಾ ರೋಲ್ ಮಾಡೆಲ್. ಯಾಕೆಂದರೆ, ಅವರು ವಯಸ್ಸಾಗುತ್ತಲೇ ಅದಕ್ಕೊಪ್ಪುವ ಅಪರೂಪದ ಪಾತ್ರಗಳಲ್ಲಿ ಮಕಾಣಿಸಿಕೊಳ್ಳಲು ಶುರುವಿಟ್ಟಿದ್ದರು. ಆ ನಂತರದಲ್ಲಿಯೇ ಅವರ ಸ್ಟಾರ್ ಗಿರಿ ಮತ್ತಷ್ಟು ಪ್ರಜ್ವಲಿಸಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ವಿಚಾರಕ್ಕೆ ಬಂದರೆ ರಜನೀಕಾಂತ್ ಮತ್ತು ಕಮಲ್ ಹಾಸನ್ ಥರದ ನಟರು ಅಂಥಾ ಸೂಕ್ಷ್ಮತೆಯೊಂದಿಗೆ ಹೆಜ್ಜೆಯಿಟ್ಟಿದ್ದರು. ಆ ಸಾಲಿಗೆ ನಿಸ್ಸಂದೇಹವಾಗಿಯೂ ಸೇರಿಕೊಳ್ಳುವವರು ನಮ್ಮ ಶಿವಣ್ಣ.
ಅವರು ಇತ್ತೀಚಿನ ದಿನಗಳಲ್ಲಿ ನಟಿಸುತ್ತಿರೋ ಸಿನಿಮಾಗಳು, ಪಾತ್ರಗಳೇ ಅವರ ಸೂಕ್ಷ್ಮವಂತಿಕೆಗೆ ಕನ್ನಡಿ ಹಿಡಿಯುವಂತಿವೆ. ಅದು ನೈಜ ನಟನೊಬ್ಬನಿಗಿರಬೇಕಾದ ಪ್ರೌಢ ಮನಃಸ್ಥಿತಿ. ಇ೯ಂಥ ನಟರು ಮೈ ಮರೆತರೆ ಊರುಗೋಲು ಹಿಡಿದು ಬರುವ ಹಂತದಲ್ಲಿಯೂ ಮರ ಸುತ್ತಿಸಿ ಬಿಡುವ ಪ್ರತಿಭೆಗಳು ಎಲ್ಲ ಚಿತ್ರರಂಗದಲ್ಲಿಯೂ ಇದ್ದಾವೆ. ನಾನು ಮಾಡೋದೇ ಇಂಥಾ ಪಾತ್ರಗಳನ್ನು ಎಂಬ ವಿಚಾರವನ್ನು ಮಾತಿಲ್ಲದೆಯೇ ದಾಟಿಸಿ ಬಿಡೋದಿದೆಯಲ್ಲಾ? ಅದು ನಟನೋರ್ವನ ನಿಜವಾದ ತಾಕತ್ತು. ಅಂಥಾ ತಾಕತ್ತು ಹೊಂದಿರೋ ಶಿವಣ್ಣನ ವೃತ್ತಿ ಬದುಕಿನ ಗ್ರಾಫ್ ಉತ್ತುಂಗದಲ್ಲಿದೆ. ಆದರೆ ಖಾಸಗಿ ಬದುಕು ಮಾತ್ರ ಕಾಯಿಲೆ ಕಸಾಲೆಗಳ ಆಘಾತದಲ್ಲಿ ಕಂಗೆಟ್ಟಂತಿದೆ. ಶಿವರಾಜ್ ಕುಮಾರ್ ಅವರು ಆದಷ್ಟು ಬೇಗನೆ ಅದೆಲ್ಲವನ್ನೂ ದಾಟಿಕೊಂಡು, ಮತ್ತದೇ ಎನರ್ಜಿಯೊಂದಿಗೆ ಅಖಾಡಕ್ಕಿಳಿಯಲೆಂಬುದು ಹಾರೈಕೆ!