ಸಿನಿಮಾ: ಅವತಾರ ಪುರುಷ-2
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಪಕ: ಪುಷ್ಕರ ಮಲ್ಲಿಕಾರ್ಜುನಯ್ಯ
ತಾರಾಬಳಗ: ಶರಣ್, ಆಶಿಕಾ ರಂಗನಾಥ್, ಸಾಧುಕೋಕಿಲ, ಶ್ರೀನಗರದ ಕಿಟ್ಟಿ, ಬಾಲಾಜಿ ಮನೋಹರ್.
ಸಿಂಪಲ್ ಕಥೆಗಳನ್ನು ಎಫೆಕ್ಟಿವ್ ಆಗಿ ತೆರೆಮೇಲೆ ಕಟ್ಟಿಕೊಡುವ ನಿರ್ದೇಶಕ ಸಿಂಪಲ್ ಸುನಿ ಅವತಾರ ಪುರುಷ-2 ಬಿಡುಗಡೆಯಾಗಿದೆ. ಚಿತ್ರದ ವಿಮರ್ಶೆ ಇಲ್ಲಿದೆ.
ಸಿನಿಮಾ ಕಥೆ:
ತ್ರಿಶಂಕು ಮಣಿಯ ಸುತ್ತ ಇಡೀ ಸಿನಿಮಾ ಸುರಳಿ ಸುತ್ತಿಕೊಂಡಿದೆ. ತ್ರಿಶಂಕು ಮಣಿಗಾಗಿ ಜೋಯಿಸರ ಮನೆ ಸೇರಿದ್ದ ಶರಣ್ ಮುಖವಾಡ ಶ್ರೀನಗರ ಕಿಟ್ಟಿಯಿಂದ ಕಳಚಿ ಬೀಳುತ್ತದೆ. ಶರಣ್ ಹಾಗೂ ಶ್ರೀನಗರ ಕಿಟ್ಟಿ ತ್ರಿಶಂಕು ಮಣಿಗಾಗಿ ನಡೆಸೋ ಕಾದಾಟ ‘ಅವತಾರ ಪುರುಷ -2′(Avathara Purusha 2) ರೋಚಕತೆಯ ಭಾಗ. ಇಬ್ಬರ ಕಾದಾಟದಲ್ಲಿ ತ್ರಿಶಂಕು ಮಣಿ ಯಾರ ಪಾಲಾಗುತ್ತೆ ಅನ್ನೋದು ಸಿನಿಮಾದ ಕುತೂಹಲದ ಭಾಗ.
ನಿರ್ದೇಶನ:
‘ಅವತಾರ ಪುರುಷ-2′(Avthara Purusha-2) ಒಂದು ಕಾಲ್ಪನಿಕ ಕಥೆ. ಕಾಲ್ಪನಿಕ ಕಹಾನಿ ಎಂದ ಮೇಲೆ ಲಾಜಿಕ್ಗೆ ನೋ ಎಂಟ್ರಿ. ಹೋಗ್ಲಿ ತೆರೆಮೇಲೆ ಮ್ಯಾಜಿಕ್ ಮಾಡಿದ್ಯಾ ಅಂದ್ರೆ ಅದು ದೂರದ ಮಾತು. ಲಾಜಿಕ್ ಇಲ್ಲದ ಫ್ಯಾಂಟಸಿ ಕತೆಯನ್ನು ಎಫೆಕ್ಟಿವ್ ಆಗಿ ಕಟ್ಟಿಕೊಡುವಲ್ಲಿ ಸಿಂಪಲ್ ಕಥೆಗಳ ಸರದಾರ ಸೋತಿದ್ದಾರೆ. ಕಾಲ್ಪನಿಕ ಕಥೆಗಳಲ್ಲಿ ಇರಬೇಕಾದ ಕೌತುಕತೆ ಇಲ್ಲಿಲ್ಲ. ಚಿತ್ರಕಥೆಯಲ್ಲಿ ಹಿಡಿತ ಕೈ ತಪ್ಪಿದೆ. ಫ್ಲ್ಯಾಶ್ಬ್ಯಾಕ್ಗಳು ನೋಡುಗರನ್ನು ಹೈರಾಣು ಮಾಡುತ್ತವೆ. ಒಂದು ಸಿನಿಮಾದಲ್ಲಿ ಇರಬೇಕಾದ ಎಲ್ಲಾ ಎಲಿಮೆಂಟ್ಗಳೂ ಇಲ್ಲಿದ್ದರೂ ಗ್ರಿಪ್ ಕಳೆದುಕೊಂಡ ನಿರ್ದೇಶಕರು ನೋಡುಗರನ್ನು ತ್ರಿಶಂಕು ಸ್ಥಿತಿಗೆ ತಂದಿಟ್ಟಿದ್ದಾರೆ
ಕಲಾವಿದರ ಅಭಿನಯ:
ಶರಣ್(Shran) ಸಿನಿಮಾದಲ್ಲಿ ಹಾಸ್ಯ ಅವಿಭಾಜ್ಯ ಅಂಗ ಅನ್ನೋದು ಗೊತ್ತಿರೋ ವಿಷ್ಯ. ಇಲ್ಲಿ ಶರಣ್ ಹಾಸ್ಯ ಚಟಾಕಿಯಿಂದ ದೂರ ಉಳಿದು ಮಂಕಾಗಿದ್ದಾರೆ. ಮಂತ್ರವಾದಿಯಾಗಿ ಅವರ ಗೆಟಪ್ ಇಷ್ಟವಾಗುತ್ತೆ. ಒಂದೆರಡು ಕಡೆ ಅವರ ಕಾಮಿಡಿ ಟೈಮಿಂಗ್ ವರ್ಕಾಗಿದ್ದು ಬಿಟ್ಟರೆ ಬೇರೆಲ್ಲೂ ಮಜಾ ನೀಡಿಲ್ಲ. ಮೊದಲ ಭಾಗದಲ್ಲಿ ಪವರ್ ಫುಲ್ ಎಂಟ್ರಿ ಕೊಟ್ಟಿದ್ದ ಶ್ರೀನಗರ ಕಿಟ್ಟಿ ಪಾತ್ರ ಎರಡನೇ ಭಾಗದಲ್ಲಿ ಜಾಳಾಗಿದೆ. ನಟಿ ಆಶಿಕಾ ರಂಗನಾಥ್(Ashika Ranganath) ಪಾತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಿರಿಯ ನಟಿಯರಾದ ಭವ್ಯ, ಸುಧಾರಾಣಿ ಹೀಗ್ ಬಂದು ಹಾಗೆ ಹೋಗ್ತಾರೆ ಬಿಟ್ರೆ ಮನಸ್ಸಲ್ಲಿ ಉಳಿಯಲ್ಲ. ಸಾಧು ಕೋಕಿಲ ಅವರನ್ನು ಹಾಸ್ಯವಿಲ್ಲದೆ ತೆರೆಮೇಲೆ ಕಲ್ಪಿಸಿಕೊಳ್ಳೋದು ಕಷ್ಟ. ಅಶುತೋಷ್ ರಾಣಾ, ಬಾಲಾಜಿ ಮನೋಹರ್ ಗಮನ ಸೆಳೆಯುತ್ತಾರೆ.
ಸಿನಿಮಾ ಹೇಗಿದೆ:
ಹಾರಾರ್ ಸಿನಿಮಾವೊಂದಕ್ಕೆ ಬೇಕಾದ ಯಾವ ಗುಣಗಳು ಸಿನಿಮಾ ಅಂಗಳದಲ್ಲಿಲ್ಲ. ನಕ್ಕು ಹಗುರಾಗುವ ಹಾಸ್ಯವೂ ಇಲ್ಲ, ಭಯ ಹುಟ್ಟಿಸುವ ದೃಶ್ಯವೂ ಇಲ್ಲ. ಸಿನಿಮಾದಲ್ಲಿ ಬರುವ ತ್ರಿಶಂಕು ಮಣಿಯ ಹೆಸರಿನಂತೆ ಸಿನಿಮಾವೂ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಸಾಧು ಮಹಾರಾಜ್, ಶರಣ್(Sharan) ಇದ್ದರೂ ಹಾಸ್ಯ ಮಾಯವಾಗಿದೆ. ಟೋಟಲ್ ಆಗಿ ಹೇಳ್ಬೇಕು ಅಂದ್ರೆ ಸಂಥಿಂಗ್ ಈಸ್ ಮಿಸ್ಸಿಂಗ್ ಅಂತಾರಲ್ಲಾ ಅದರ ಪ್ರಮಾಣ ಇಲ್ಲಿ ದುಪ್ಪಟ್ಟಿದೆ.