ಈ ಬಣ್ಣದ ಬದುಕೇ ಹಾಗೆ ಕೆಲವರನ್ನು ಅವರ ಕೊನೆಗಾಲದ ವರೆಗೆ ಬಣ್ಣದ ಕ್ಷೇತ್ರದಲ್ಲೇ ಉಳಿಸಿಕೊಂಡರೆ,ಇನ್ನು ಕೆಲವರನ್ನು ಅವಕಾಶಗಳಿಲ್ಲದೆ ತೆರೆಮರೆಗೆ ಸರಿಸುತ್ತದೆ. ಆದ್ರೆ ಇನ್ನು ಕೆಲ ಕಲಾವಿದರೂ ಅವಕಾಶಗಳು ತಮ್ಮನ್ನ ಅರಸಿ ಬರ್ತಿದ್ದರೂ ಸಹ,ನಾನಾ ಕಾರಣಗಳಿಂದಾಗಿ ಅವರೇ ನಟನಾ ವೃತ್ತಿಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅಂಥವರಲ್ಲಿ ಬೆರಳೆಣಿಕೆಯಷ್ಟು ಜನ ಹಲವು ವರ್ಷಗಳ ನಂತ್ರ ಮತ್ತೆ ಕಂ ಬ್ಯಾಕ್ ಮಾಡಿದ್ದೂ ಇದೆ.ಹಾಗೇ ಕರೆಸಿಕೊಳ್ಳೋ ಶಕ್ತಿ ಬಹುಶಃ ಈ ಬಣ್ಣದ ಜಗತ್ತಿಗೆ ಮಾತ್ರನೇ ಇರ್ಬೇಕು.
ನಾವ್ ಯಾಕ್ ಈಗ ಈ ವಿಚಾರ ಹೇಳ್ತಾ ಇದೀವಿ ಗೊತ್ತಾ?90ರ ದಶಕದಲ್ಲಿ ಬಾಲನಟಿಯಾಗಿ ಸ್ಟಾರ್ ನಟರ ಜೊತೆ ನಟಿಸಿದ್ದ ಸಿಂಧು ರಾವ್ ಮತ್ತೆ ಕಿರುತೆರೆಗೆ ಕಮ್ಬ್ಯಾಕ್ ಮಾಡಿದ್ದಾರೆ.ಹೌದು ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ರವಿಚಂದ್ರನ್, ಶಿವಣ್ಣ ಜೊತೆ ತೆರೆಹಂಚಿಕೊಂಡಿದ್ದ ನಟಿ ಸಿಂಧು ರಾವ್ ಹಲವು ವರ್ಷಗಳ ಬ್ರೇಕ್ ನಂತ್ರ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಕ್ಯೂಟ್ ಆಗಿ ಮಾತಾಡ್ತಾ ಅಟ್ಯ್ರಾಕ್ಟ್ ಮಾಡ್ತಿದ್ದ ಈ ದುಂಡು ಮೊಗದ ಚೆಲುವೆ ಸಿಂಧು ರಾವ್ ಯಶಸ್ಸಿನತ್ತ ಓಡ್ತಾ ಇದ್ದಾಗಲೇ ಯಾಕೆ ತೆರೆ ಮರೆಗೆ ಸರಿದ್ರು ಅನ್ನೋ ಪ್ರಶ್ನೆ ಅವರ ಅಭಿಮಾನಿಗಳಲ್ಲಿತ್ತು.ಅದಕ್ಕೀಗ ಉತ್ತರದೊಂದಿಗೆ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ ಆಗಿನ ಬಾಲನಟಿ.
ನಟನೆಯಿಂದ ಬಿಗ್ ಬ್ರೇಕ್ ತಗೊಂಡು ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದ ಸಿಂಧು, ತದನಂತ್ರದ ವೈವಾಹಿಕ ಬದುಕಿನ ಜಂಜಾಟದಲ್ಲಿ ಆಕ್ಟಿಂಗ್ಗೆ ಗುಡ್ ಬೈ ಹೇಳಿದ್ದರು. ಆ ನಂತರ ಕೋವಿಡ್ ಸಮಯದಲ್ಲಿ ಅವರು ಗುಬ್ಬಿಮರಿ ಸಿನಿಮಾ, ಸಿಲ್ಲಿ ಲಲ್ಲಿ ಎರಡನೇ ಭಾಗದಲ್ಲಿ ನಟಿಸಿ ಮತ್ತೆ ಮರೆಯಾಗಿದ್ದರು.90ರ ದಶಕದಲ್ಲಿ ಬಾಲನಟಿಯಾಗಿ ಮಿಂಚಿದ್ದ ಸಿಂಧು ರಾವ್ ಕಿರುತೆರೆಯಲ್ಲಿ ಪ್ರಸಾರವಾಗ್ತಿರೋ ನೂತನ ಸೀರಿಯಲ್ ಸೀತಾ ರಾಮ ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ್ದಾರೆ.
ವೈಷ್ಣವಿ ಗೌಡ, ಗಗನ್ ನಟನೆಯ ‘ಸೀತಾರಾಮ’ (Seetharama) ಧಾರಾವಾಹಿಯಲ್ಲಿ ನಾಯಕನ ಚಿಕ್ಕಮ್ಮನ ಪಾತ್ರದಲ್ಲಿ ಸಿಂಧು ನಟಿಸುತ್ತಿದ್ದು,ಈ ಹಿಂದೆ ಡಾ.ವಿಷ್ಣುವರ್ಧನ್ ಜೊತೆ ‘ನಾನೆಂದು ನಿಮ್ಮವನೇ’ ನಂತರ ರಾಯರು ಬಂದರು ಮಾವನ ಮನೆಗೆ, ಮದರ್ ಇಂಡಿಯಾ, ಕಲಾವಿದ, ಆಯುಧ, ಮೌನರಾಗ, ಒಂದಾಗೋಣ ಬಾ, ಪುಟ್ಮಲ್ಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ವರ್ಷ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಕೊನೆಯ ತಂಗಿಯಾಗಿ ನಟಿಸಿದ್ದರು. ಮೌನರಾಗ ಚಿತ್ರದ ನಟನೆಗಾಗಿ ಸಿಂಧುಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ದೊರೆತಿದ್ದು ಮತ್ತೆ ಸಿಂಧು ರಾವ್ ಅವರನ್ನ ಕಿರುತೆರೆಯಲ್ಲಿ ನೋಡಿದ ಅಭಿಮಾನಿಗಳು ಸಂತಸಗೊಂಡಿದ್ದಾರೆ.