ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪರಭಾಷೆಗೆ ಲಗ್ಗೆ ಇಟ್ಟಿರುವುದು ನಿಮಗೆಲ್ಲ ಗೊತ್ತಿರೋ ವಿಚಾರ. 2016ರಲ್ಲಿ ಮೊದಲ ಭಾರಿಗೆ ಶಿವಣ್ಣ ಕರುನಾಡಿನಿಂದ ಕಾಲು ಹೊರಗಿಟ್ಟರು. ಎನ್ಟಿಆರ್ ಕುಟುಂಬದ ಜೊತೆಗಿದ್ದ ಒಡನಾಟದಿಂದ ನಂದಮೂರಿ ಬಾಲಕೃಷ್ಣ ಅವ್ರೊಟ್ಟಿಗೆ `ಗೌತಮಿಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅನಂತರ ಕನ್ನಡ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದ ಹ್ಯಾಟ್ರಿಕ್ ಹೀರೋ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿನ ಸ್ನೇಹ-ಸಂಬಂಧಕ್ಕೆ ಸಾಕ್ಷಿಯಾಗಿ `ಜೈಲರ್’ ಚಿತ್ರದ ಭಾಗವಾದರು. ಮಂಡ್ಯ ಮೂಲದ ಡಾನ್ ನರಸಿಂಹನ ಪಾತ್ರಕ್ಕೆ ಬಣ್ಣ ಹಚ್ಚಿದರು. ಕೆಲವೇ ಕೆಲವು ನಿಮಿಷಗಳ ಕಾಲವಷ್ಟೇ ತೆರೆಮೇಲೆ ಬರುವ ಶಿವಣ್ಣನ ಈ ಪಾತ್ರ ಅದೆಷ್ಟರ ಮಟ್ಟಿಗೆ ಹವಾ ಎಬ್ಬಿಸಿದೆ ಅಂದರೆ, ತೆಲುಗು, ತಮಿಳು, ಮಲೆಯಾಳಂ ಈ ಮೂರು ಇಂಡಸ್ಟ್ರಿಯ ಸಿನಿಮಾಮಂದಿ ನಮ್ಮ ಕರುನಾಡ ಚಕ್ರವರ್ತಿಯ ಮನೆಮುಂದೆ ಕ್ಯೂ ನಿಲ್ಲುವಷ್ಟು.
ಅಚ್ಚರಿ ಅಂದರೆ ದೊಡ್ಮನೆ ದೊರೆ ಮನೆಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಎಷ್ಟೋ ಜನ ನಿರ್ದೇಶಕರು, ನಿರ್ಮಾಪಕರು ಈಗಲೂ ಕ್ಯೂ ನಿಂತಿದ್ದಾರೆ. ಮುತ್ತಣ್ಣ ಒಪ್ಪಿಕೊಂಡಿರೋ ಸಿನಿಮಾಗಳನ್ನ ಆದಷ್ಟು ಬೇಗ ಮುಗಿಸಿಕೊಟ್ಟು ನಮಗೊಂದು ಕಾಲ್ಶೀಟ್ ಕೊಡ್ತಾರೆ ಅಂತ ಕಾಯ್ತಿದ್ದಾರೆ. ಹೀಗಿರುವಾಗಲೇ ಕಾಲಿವುಡ್, ಟಾಲಿವುಡ್, ಮಾಲಿವುಡ್ ಸಿನಿಮಾ ಇಂಡಸ್ಟ್ರಿಯವರು ನಮ್ಮ ಮಾಸ್ ಲೀಡರ್ ನ ಅಲ್ಲೆ ಲಾಕ್ ಮಾಡಿಕೊಳ್ಳೋಕೆ ನೋಡ್ತಿದ್ದಾರೆ. ರಜನಿಕಾಂತ್ ಅಳಿಯ ಧನುಷ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಚಿತ್ರ ಮುಗಿಸಿಕೊಟ್ಟು ಶಿವಣ್ಣ ವಾಪಾಸ್ ಬರ್ತಾರೆ ಎಂದುಕೊಳ್ಳುತ್ತಿರುವಾಗಲೇ, ಮಲೆಯಾಳಂ ಸಿನಿಮಾ ಇಂಡಸ್ಟ್ರಿಯವರು ಮಾಸ್ ಲೀಡರ್ನ ಕ್ಯಾಚ್ ಹಾಕ್ಕೊಂಡಿದ್ದಾರೆ. ಸೈಕಲ್ ಗ್ಯಾಪ್ನಲ್ಲಿ ಕರುನಾಡ ಚಕ್ರವರ್ತಿಯ ಕಾಲ್ಶೀಟ್ ಪಡೆದು ಅಗ್ರಿಮೆಂಟ್ಗೆ ಸೈನ್ ಹಾಕಿಸಿಕೊಂಡಿದ್ದಾರೆ.
ಇದು ಅಂತೆ-ಕಂತೆ ಸುದ್ದಿಯಾಗಿದ್ದರೆ ಪರವಾಗಿರಲಿಲ್ಲ. ಆದರೆ, ಸ್ವತಃ ಶಿವಣ್ಣನೇ ಈ ಸುದ್ದಿನಾ ಕನ್ಫರ್ಮ್ ಮಾಡಿದ್ದಾರೆ. ಮಾಲಿವುಡ್ಗೆ ಎಂಟ್ರಿಕೊಡುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಮ್ಯಾನ್ ಆಫ್ ಮಲ್ಟಿಟ್ಯಾಲೆಂಟೆಡ್ ಅಂತಾನೇ ಕರೆಸಿಕೊಳ್ಳುವ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಜೊತೆ ಕೈ ಜೋಡಿಸಿರುವುದಕ್ಕೆ ಕರುನಾಡ ಚಕ್ರವರ್ತಿ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಆದರೆ, ಯಾವ ಸಿನಿಮಾ? ಏನ್ ಕಥೆ? ಎಂಬುದನ್ನು ಗುಟ್ಟಾಗಿಯೇ ಇರಿಸಿ ಶಿವಣ್ಣ ಫ್ಲೈಟ್ ಏರಿದ್ದರಿಂದ ಚರ್ಚೆ ಜೋರಾಗಿದೆ. ಭಜರಂಗಿ ಗ್ರೀನ್ ಸಿಗ್ನಲ್ ಕೊಟ್ಟಿರೋದು ಟೈಸನ್ ಸಿನಿಮಾಗಾ ಅಥವಾ ಲೂಸಿಫರ್ ಪಾರ್ಟ್-2 ಚಿತ್ರಕ್ಕಾ ಎನ್ನುವ ಕುತೂಹಲ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿದೆ.
ಅಂದ್ಹಾಗೇ, ಟೈಸನ್ ಹಾಗೂ ಎಂಪುರಾನ್ ಈ ಎರಡು ಬಹುನಿರೀಕ್ಷಿತ ಚಿತ್ರಗಳೇ. ಟೈಸನ್ ಹೊಂಬಾಳೆ ಪ್ರೊಡಕ್ಷನ್ ಎನ್ನುವ ಕಾರಣಕ್ಕೆ ಕುತೂಹಲ ಕೆರಳಿಸಿದರೆ, ಎಂಪುರಾನ್ ಚಿತ್ರ ಲೂಸಿಫರ್ ಸೀಕ್ವೆಲ್ ಎನ್ನುವ ಕಾರಣಕ್ಕೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈ ಎರಡು ಚಿತ್ರಗಳಿಗೆ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನವಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಟಗರು ಶಿವ ಎಂಟ್ರಿಕೊಡ್ತಿರೋ ಸುದ್ದಿ ಹೊರಬಿದ್ಮೇಲಂತೂ ಆ ನಿರೀಕ್ಷೆ ಡಬಲ್ ಆಗಿದೆ. ಸ್ಯಾಂಡಲ್ವುಡ್ ಮಾತ್ರವಲ್ಲ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯ ಪ್ರೇಕ್ಷಕವಲಯ ಕಣ್ಣರಳಿಸಿ ಕಾಯುವಂತಾಗಿದೆ.
ಇನ್ನೂ `ಜೈಲರ್’ ಸಿನಿಮಾದಿಂದ ಮಾಸ್ ಲೀಡರ್ ಮೇನಿಯಾ ಮುಗಿಲೆತ್ತರಕ್ಕೇರಿದೆ. ಡಾನ್ ನರಸಿಂಹನ ಪಾತ್ರ ಸಣ್ಣದಾದರೂ ಕೂಡ ಸೆಂಚುರಿ ಸ್ಟಾರ್ ಸ್ವ್ಯಾಗ್ಗೆ, ಕಣ್ಣಲ್ಲಿರೋ ಖದರ್ಗೆ ಎಲ್ರೂ ಕಳೆದೋಗಿದ್ದಾರೆ. ಕರುನಾಡ ಚಕ್ರವರ್ತಿನಾ ನಮಗೆ ಕೊಟ್ಟುಬಿಡಿ ಎನ್ನುವ ಲೆವಲ್ಲಿಗೆ ತಮಿಳು ಮಂದಿ ಫಿದಾ ಆಗಿದ್ದಾರೆ. ಇತ್ತ ಕನ್ನಡಿಗರು ಇರೋದೊಂದೇ ಕೊಹಿನೂರ್ ಕಣ್ರಪ್ಪ ಹಂಗೆಲ್ಲಾ ನಿಮಗೆ ಬಿಟ್ಟುಕೊಡೋದಕ್ಕೆ ಆಗಲ್ಲ ಅಂತ ರಿಯಾಕ್ಟ್ ಮಾಡ್ತಿದ್ದಾರೆ. ಇಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿರೋ ಶಿವಣ್ಣ, ಕಳೆದ 37 ವರ್ಷಗಳಿಂದ ಗಂಧದಗುಡಿಯ ರಜತಪರದೆಯನ್ನ ಬೆಳಗುತ್ತಾ ಬಂದಿದ್ದರು. ಆದ್ರೀಗ, ಸ್ನೇಹ, ಪ್ರೀತಿ, ಬಾಂದವ್ಯಕ್ಕೆ ಬೆಲೆಕೊಟ್ಟು ಆಪ್ತರ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಕೆಲ ಪಾತ್ರಗಳು ಕರುನಾಡ ಚಕ್ರವರ್ತಿಯನ್ನೇ ಡಿಮ್ಯಾಂಡ್ ಮಾಡ್ತಿರೋದ್ರಿಂದ ಅವುಗಳನ್ನ ಒಪ್ಪಿಕೊಳ್ಳಬೇಕಿದೆ. ಗಡಿಯ ಹಂಗು ತೊರೆದು ಧಗಧಗಿಸಬೇಕಿದೆ. ಅದೇ ಕೆಲಸವನ್ನ ಹ್ಯಾಟ್ರಿಕ್ ಹೀರೋ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. ತೆಲುಗು-ತಮಿಳು ನಂತ್ರ ಮಲೆಯಾಳಂ ಸಿನಿಮಾ ಒಪ್ಪಿಕೊಂಡಿದ್ದಾರೆ.
ಸದ್ಯ ಶಿವಣ್ಣನ ಕೈಯಲ್ಲಿ ಒಂದು ಡಜನ್ಗಿಂತ ಜಾಸ್ತಿ ಸಿನಿಮಾಗಳಿವೆ. ಹೆಚ್ಚು ಕಮ್ಮಿ ಮೂರ್ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವಷ್ಟು ಸಿನಿಮಾಗಳನ್ನ ಸೆಂಚುರಿ ಸ್ಟಾರ್ ಒಪ್ಪಿಕೊಂಡಿದ್ದಾರೆ. ಘೋಸ್ಟ್, ಭೈರತಿ ರಣಗಲ್, ಕಬ್ಜ-2, ಕರಟಕ ದಮನಕ, 45, ಸೇರಿದಂತೆ ಇನ್ನೂ ಅನೇಕ ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ. ಈ ಮಧ್ಯೆ ಮಲೆಯಾಳಂ ಸೂಪರ್ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಗೆ ಸೈ ಎನ್ನುವ ಮೂಲಕ ಶಿವಣ್ಣ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. 60ರಲ್ಲೂ ಹ್ಯಾಟ್ರಿಕ್ ಹೀರೋಗಿರುವ ಡಿಮ್ಯಾಂಡ್ ಕಂಡು ಕೆಲವರು ಮೂಗಿನ ಮೇಲೆ ಬೆರಳಿಟ್ಕೊಂಡಿದ್ದಾರೆ. ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಆಯ್ತು ನೆಕ್ಸ್ಟ್ ಬಾಲಿವುಡ್ ಗೆ ಲಗ್ಗೆ ಇಡೋದು ಫಿಕ್ಸು ಎನ್ನುತ್ತಿದ್ದಾರೆ.