-ರಾತ್ರಿ ಬೆಳಕು ಮೂಡಿಸೋ ವಿಚಿತ್ರ ಸಿಮೆಂಟ್!
-ಪೈಪುಗಳೊಳಗೆ ಹೈಟೆಕ್ ಆಫೀಸ್-ಮನೆ!
ಇಲ್ಲಿ ಮಾಲಿಶ್ ಮಾಡುತ್ತಾರೆ. ಹಾಗೆಂದು ನಲಿಯುವ ಉಲಿಯುವ ಅಂಗನೆಯರಿಂದ ಅಂಗ ಮರ್ಧನ ಮಾಡುವುದಿಲ್ಲ. ಅಥವಾ ತಿಲಕ ಇಟ್ಟು, ತೈಲ ಹಚ್ಚಿ ಅಂಗ ಮರ್ಧನ ಮಾಡುವುದೂ ಇಲ್ಲ. ಅಷ್ಟೆಲ್ಲಾ ಏಕೆ ಒಣ ಹಸ್ತ ಇಟ್ಟು, ಹಿಸುಕಿ ಹಿಸುಕಿ ಮಾಲಿಶ್ ಕೂಡ ಇಲ್ಲಿ ನಡೆಯದು. ಆದರೂ ಜನ ಇಲ್ಲಿಗೆ ಬರುತ್ತಾರೆ. ಮಾಲಿಶ್ ಮಾಡಿಸಿಕೊಳ್ಳುತ್ತಾರೆ? ಉರಗಗಳೇ ಆ ಕೆಲಸ ಮಾಡುತ್ತವೆ. ನಾಲ್ಕು ಹೆಬ್ಬಾವುಗಳನ್ನು ಮೈ ಮೇಲೆ ಹರಿಯ ಬಿಡುತ್ತಾರೆ. ಇವುಗಳ ಒಟ್ಟು ತೂಕ ೨೫೦ ಕೆ.ಜಿ. ಮೈ ಮೇಲೆ ಹರಿದಾಡುತ್ತಿದ್ದರೆ ಮಾಲೀಶು ಮಾಡಿದ ಅನುಭವ. ಮಣ ಘಾತ್ರದ ಭಾರಕ್ಕೆ ಎಂಥಾ ನೋವಿದ್ದರೂ ಪರಾರಿಯಂತೆ. ಆದರೆ ಈ ಹಾವಿನ ಭಾರದಿಂದಲೇ ಬಾಡಿ ಪೈನ್ ಬಂದರೆ ಏನು ಮಾಡಬೇಕೆಂದು ಯಾರೂ ಹೇಳಿಲ್ಲ.
ಸರ್ಪ ಮರ್ಧನ

ಇಲ್ಲ. ಬಾಯಿ ಬಿಡಬಾರದು ಅಷ್ಟೇ. ಬಾಯಿ ಬಿಟ್ಟು ಉಸುರಿದರೆ ಉರಗ ಅಪಾಯ ಮಾಡಬಹುದು. ಅಯ್ಯೋ ಅದಲ್ಲ ರೀ…! ಹಾವೇ ಬಾಯಿ ಹಾಕಿ ಕಚ್ಚಿದರೇ? ನೊ ಚಾನ್ಸ್. ಕಚ್ಚದ ಹಾವುಗಳನ್ನು ಮಾತ್ರವೇ ಈ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ ಮೃಗಾಲಯದ ಮ್ಯಾನೇಜರ್ ಡೇನಿಯಲ್ ಮೈಕೇಲ್. ನಮಗೆ ಸರ್ಪದಿಂದ ಕಡಿಸಿಕೊಳ್ಳುವುದು ಗೊತ್ತು. ಫಿಲಿಪೈನ್ಸ್ನವರಿಗೆ ದುಡಿಸಿಕೊಳ್ಳುವುದು ಗೊತ್ತು. ನಮ್ಮಲ್ಲೂ ಹೀಗೆ ಹಾವು ಬಿಡುವ ಮಸಾಜ್ ಬಂದರೇ? ‘ಹಾವು ಬಿಡ್ತೀನಿ… ಹಾವು ಬಿಡ್ತೀನಿ ಅಂತ ಯಡಿಯೂರಪ್ಪ ಹೇಳುತ್ತಾರೆ… ಬಿಡ್ತಾನೇ ಇಲ್ಲ’ ಎಂದು ಸಿದ್ದರಾಮಯ್ಯ ಆಗಾಗ ಚೇಡಿಸುತ್ತಾರೆ. ಸಿದ್ದು ಸಂಕಟದಿಂದ ಪಾರಾಗಲು ಯಡಿಯೂರಪ್ಪ ಹಾವು ಬಿಡುವ ಈ ಕೆಲಸಕ್ಕೆ ಕೈ ಹಾಕಬಹುದಲ್ಲವೇ?
ಜೈಲಿಗೆ ಬನ್ನಿ…
ಚಂದಾ ಎತ್ತಿ, ಸಾಲ ಮಾಡಿ ಯಾಂಗ್ ಸಿಯಾಕ್ ೧೯ ಮಿಲಿಯನ್ ಡಾಲರ್ಗಳಲ್ಲಿ ಈ ಕಟ್ಟಡ ನಿರ್ಮಿಸಿದ್ದಾನೆ. ಇಲ್ಲಿದ್ದು ಬಂದರೆ ಮನಸ್ಸು ಹಗುರಾಗುತ್ತದಂತೆ. ತನ್ನನ್ನು ತಾನು ಅರಿತುಕೊಳ್ಳಲು ಸಹಕಾರಿಯಂತೆ. ಧ್ಯಾನ ಮಾಡಲು ಪ್ರಶಾಂತ ಸ್ಥಳವಂತೆ. ಇದೇನು ಆಶ್ರಮವೇ? ಅಥವಾ ಮಂದಿರ-ಮಠವೇ? ನೊ ನೊ ನೊ… ಅದ್ಯಾವುದೂ ಅಲ್ಲ – ಜೈಲಿದು. ಅಲಿಯಾಸ್ ಖಾಸಗಿ ಜೈಲು. ಈ ಜೈಲಿಗೆ ಹಕ್ಕಿಯಾಗಲು ಅಪರಾಧಿಯಾಗಬೇಕಿಲ್ಲ. ಬದಲಿಗೆ ಯಾಂಗ್ ಸಿಯಾಕ್ ಕೇಳುವ ಮೊತ್ತ ಪಾವತಿಸಿದರೆ ಸಾಕು. ವಾರ, ೧೫ ದಿನ, ತಿಂಗಳ ಕಾಲ ಜೈಲಿನ ಸುಖ ಅನುಭವಿಸಿ ಪ್ರೆಶ್ ಆಗಿ ಹೊರಬಹುದು. ಅಪರಾಧ ಮಾಡದಿದ್ದರೂ ಜೈಲು ಹಕ್ಕಿಯಾಗುವ ಯೋಗಾಯೋಗ ಪಡೆದುಕೊಳ್ಳಲು ದಕ್ಷಿಣ ಕೊರಿಯಾಕ್ಕೆ ತೆರಳಬೇಕು.
ಎಲ್ಲಾ ಓ.ಕೆ. ಈ ಜೈಲು ಶಿಕ್ಷೆಯಾಕೆ? ಕೊರಿಯನ್ನರಿಗೆ ಕೆಲಸದ ಒತ್ತಡ. ಅದರ ನಿವಾರಣೆಗೆ ಎಷ್ಟೋ ವೇಳೆ ಕೆಲವರು ಹಲವರು ದಿನಗಳ ಕಾಲ ಮನೆಯೊಳಗೆ ತಮ್ಮನ್ನು ಕೂಡಿ ಹಾಕಿಕೊಳ್ಳುವರಂತೆ. ಹಾಗೆ ಮನೆಯಲ್ಲಿನ ಏಕಾಂತ ವಾಸವು ‘ಡಿಪ್ರೆಶನ್’ಗೆ ದೂಕಲಿದೆ. ಬದಲಿಗೆ ಸಾಮೂಹಿಕವಾಗಿ ಕಾಲ ಕಳೆದು, ಯೋಗ, ಧ್ಯಾನ, ಕಸರತ್ತು ಮಾಡಿದರೆ ಮಾನಸಿಕ ಒತ್ತಡ ತಗ್ಗಲಿದೆಯಂತೆ. ಹೀಗಾಗಿ ಖಾಸಗಿ ಜೈಲಿನ ಬ್ಯುಸಿನೆಸ್ ಆ ರಾಷ್ಟ್ರದಲ್ಲಿ ಚಾಲನೆಯಾಗಿದೆ. ಇಲ್ಲಿಗೆ ಬರಲಿಕ್ಕೇ ಒತ್ತಡ ಹೆಚ್ಚಾದರೆ ಅಥವಾ ಇಲ್ಲಿಗೆ ಬಂದ ನಂತರ ಡಿಪ್ರೆಶನ್ ಕಾಡಿದರೆ? ಉತ್ತಮ ಪ್ರಶ್ನೆ ಆದರೆ ದೇವರಾಣೆ ಉತ್ತರ ಗೊತ್ತಿಲ್ಲ.
ದಾರಿದೀಪ

ರಸ್ತೆಗೆ ದೀಪಗಳನ್ನು ಅಳವಡಿಸುವ ಬದಲು -ದಾರಿನೇ ದೀಪವಾಗಿದ್ದರೇ? ಏನು ಕಿಂಡಲ್ಲಾ? ಇಲ್ರೀ ಸಂಭವನೀಯ ದಿಟ. ಮೆಕ್ಸಿಕೊದ ಮಿಜೋವಾನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಮಿಚಿಗನ್ ಯೂನಿವರ್ಸಿಟಿಯ ಡಾ|| ಜೋಸ್ ಕಾರ್ಲಿಯೊಸ್ ರುಬಿಯೊಸ್ ಎಂಬ ವಿಜ್ಞಾನಿ ಹಾಗೂ ಆತನ ತಂಡದ ಪರಿಣಿತರ ಪ್ರಯೋಗವಿದು. ರಾತ್ರಿಯ ವೇಳೆ ಬೆಳಕು ಚಿಮ್ಮಿಸುವ ರಾಸಾಯನಿಕ ಸಿಮೆಂಟ್ ಆವಿಷ್ಕರಿಸಿದ್ದಾರೆ. ಇದನ್ನು ಬಳಸಿ ಕಟ್ಟಡ, ಫುಟ್ಪಾತ್, ರಸ್ತೆ ಮಾಡಿದರೆ ಸಾಕು. ಹಗಲು ಶೇಖರಣೆಯಾದ ಸೌರಶಕ್ತಿಯು ರಾತ್ರಿಯಲ್ಲಿ ೧೨ ತಾಸು ಬೆಳಕು ನೀಡುತ್ತವೆ. ಹಾಲಿ ನೀಲಿ, ಹಸಿರು ಬಣ್ಣಗಳ ರಸ್ತೆಗಳ ಮಾತ್ರವೇ ಇದೆ. ಮುಂದಿನ ದಿನಗಳಲ್ಲಿ ಅನ್ಯ ಬಣ್ಣಗಳ ರಸ್ತೆಗಳನ್ನೂ ನಿರ್ಮಿಸಬಹುದಾಗಿದೆ. ಬೆಳಕಿನ ಪ್ರಖರತೆ ಹೆಚ್ಚಿಸುವ ಮತ್ತು ತಗ್ಗಿಸುವ ಕೆಲಸಗಳೂ ನಡೆಯುತ್ತಿವೆ.
ಈ ನೂತನ ಸಿಮೆಂಟ್ ಪರಿಸರ ಸ್ನೇಹಿಯಾಗಿರಲಿದೆ. ಕೇವಲ ಮರಳು, ಮಣ್ಣು ಮತ್ತು ವಿಶೇಷ ಧೂಳಿನ ಕಣಗಳಿಂದ ಮಾತ್ರ ಈ ಸಿಮೆಂಟ್ ಕೂಡಿದೆ. ಇದರಿಂದ ನಿರ್ಮಿಸಿದ ರಸ್ತೆ ೧೦೦ ವರ್ಷ ಬಾಳಿಕೆ ಬರಲಿದೆಯಂತೆ. ಇಂತಹ ರಸ್ತೆಗಳು ನಿಜಕ್ಕೂ ದಾರಿದೀಪವೇ ಸರಿ. ನಮ್ಮಲ್ಲೂ ಇಂತಹ ರಸ್ತೆಗಳು ಬಂದರೆ ಹೇಗೆ? ದೇವರಾಣೆಗ್ಲೂ ಬರಲ್ಲ! ೧೦೦ ವರ್ಷ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸಿದರೆ ನಮ್ಮ ಭ್ರಷ್ಟ ಶಾಸಕರು, ಪಾಲಿಕೆ ಸದಸ್ಯರ ಗತಿ ಏನಾಗಬೇಡ? ಹಾಗೆಯೇ ಲಂಚ ಕಬಳಿಸುವ ಅಧಿಕಾರಿಗಳು, ಕಂಟ್ರಾಕ್ಟರ್ಗಳ ಗತಿ ಅಧೋಗತಿಯಾಗಲಿದೆ!
ಅಷ್ಟಾವಕ್ರಾ….

ಹಿಂದೆ ಎಂದೋ ಪುರಾಣ ಕಾಲದಲ್ಲಿದ್ದ ಅಷ್ಟಾವಕ್ರನನ್ನು ನೆನಪಿಸುತ್ತಾನೆ ಈತ. ಈತನ ವರ್ಣನೆ ಹೀಗಿದೆ…ಕಿವಿಯೊಳಗೆ ಬೆರಳಲ್ಲಾ ಕೈ ಇಡಬಹುದು. ವಾಲೆ ಬದಲಿಗೆ ‘ಬಾಲೆ’ (ಟೆನ್ನಿಸ್) ತೋರಿಸಬಹುದು. ಕಿವಿಗೆ ೪.೩ ಇಂಚುಗಳ ಸುತ್ತಳತೆಯ ರಂದ್ರ ಮಾಡಿಕೊಂಡಿದ್ದಾನೆ. ಕಿವಿಯ ಹೊರಗೆಲ್ಲಾ ಗುಬ್ಬಿ ಮೊಳೆಯಂತಹ ವಾಲೆಯನ್ನು ಚುಚ್ಚಿಕೊಮಡಿದ್ದಾನೆ. ಮುಖ, ಮೈ ಮೇಲೆಲ್ಲಾ ಹಚ್ಚೆ ಹುಯ್ಸಿಕೊಂಡಿದ್ದಾನೆ. ಅಲ್ಲದೆ ಹೊಳೆಯುವ ಲೋಹದ ತುಣುಕುಗಳನ್ನು ಕಾಣಬಹುದು. ಮೂಗಿನ ಹೊಳ್ಳೆಗಳಲ್ಲೂ ದೊಡ್ಡ ತೂತು ಇದೆ. ನಾಲಿಗೆ ಸೀಳಿಸಿಕೊಂಡಿದ್ದಾನೆ. ಹಲ್ಲಿಗೆ ಸ್ಟೀಲಿನ ತುಣುಕುಗಳನ್ನು ಮೆತ್ತಿಕೊಂಡಿದ್ದಾನೆ. ಕಣ್ಣುಕೂಡ ಬಿಟ್ಟಿಲ್ಲ. ಒಂದು ಕಣ್ಣು ಕೆಂಪಾಗಿದೆ…
ತಲೆ ಮೇಲೆ ಕೊಂಬಿದ್ದರೆ ಚೆನ್ನಾಗಿರುತ್ತಿತ್ತು ಅಂದ್ರಾ? ಯೆಸ್! ಅದೂ ಇದೆ. ಈ ಕೊಂಬು ಪಡೆಯಲು ಆಗಾಗ ಸಿಲಿಕೊನೆ ಇಂಜಕ್ಶನ್ ಚುಚ್ಚಿಕೊಳ್ಳುತ್ತಾನೆ. ಅಷ್ಟಾವಕ್ರನ ಅಪರಾವತಾರಿ ಅಲ್ಲವೇ ಇವನು? ಅಲ್ಲ. ಅಸಹ್ಯದ ಪರಮಾವಧಿ. ಒಂದಾನೊಂದು ಕಾಲದಲ್ಲಿದ್ದ ಈಜಿಪ್ತ್ನ ರಾಜ ಫರೋಹ್ ಟುಟಾಂಕ್ಹಂ ಎಂಬಾತ ಹೀಗೆ ಅಲಂಕಾರ ಮಾಡಿಕೊಳುತ್ತಿದ್ದನಂತೆ. ಅದನ್ನೇ ಈತ ನಕಲು ಮಾಡುತ್ತಿದ್ದಾನಂತೆ. ಈತ ಪರರಿಗೂ ತನ್ನ ತೆವಲನ್ನು ಅಂಟಿಹಾಕಲು ‘ಸಿನ್ ಸಿಟಿ ಬಾಡಿ ಮಾಡಿಫಿಕೇಶನ್ ಮತ್ತು ಟ್ಯಾಟೂ ಶಾಪ್’ ತೆರೆದು ವ್ಯಾಪಾರಕ್ಕೆ ಕೂತಿದ್ದಾನೆ. ಈತನ ‘ಕಿವಿ’ ಗಿನ್ನೀಸ್ ಬುಕ್ಗೆ ಸೇರಿದೆ. ಕಿವಿಯಿಂದಲೇ ನ್ಯೂಸ್ ಮಾಡಿರುವ ಈತನ ಹೆಸರು ಕಾಲಾಕೈವಿ… ಕಾಲ ನಮ್ಮ ಕೈಗೆ ಬಂದ್ರೇ ಕಿವಿಲೂ ನ್ಯೂಸ್ ಮಾಡಬಹುದು.
ಊಟ ಮಾಡ್ಕೊಳಿ!

ಚಿತ್ರ-ವಿಚಿತ್ರವಾದ ಹೋಟೆಲ್ಗಳಿಗೆ ಜಪಾನ್ ಬೇಜಾನ್ ಪ್ರಸಿದ್ಧಿ ಪಡೆದಿದೆ. ಗೂಬೆ ಹೋಟೆಲ್, ಅಳುಬುರುಕರ ಹೋಟೆಲ್, ಹೀಗೆ ಹಲವು ವಿಧದಗಳ ಹೋಟೆಲ್ ಇಲ್ಲಿದೆ. ಈ ಪಟ್ಟಿಗೆ ಹೋಸ ಸೇರ್ಪಡೆ ಎಂದರೆ ‘ಅಡುಗೆ ಮಾಡ್ಕೊಳಿ…ಊಟ ಮಾಡ್ಕೊಳಿ’ ಎಂಬ ಹೋಟೆಲ್. ೧೨ ಸೀಟುಗಳ ಈ ಹೊಟೆಲ್ನಲ್ಲಿ ಉಚಿತವಾಗಿ ಊಟ ಮಾಡಬಹುದು. ಆದರೆ ಅದಕ್ಕೆ ಪ್ರತಿಯಾಗಿ ನಾಲ್ಕು ತಾಸು ಕೆಲಸ ಮಾಡಬೇಕು. ಕೆಲಸ ಮಾಡಲಾರೆ ಎಂದರೆ ನಿಶ್ಚಿತ ಹಣ ಕೊಟ್ಟು ಉಂಡು ಬರಬೇಕು. ಮತ್ತೊಬ್ಬರ ಪರವಾಗಿ ಸೇವೆಸಲ್ಲಿಸಿ ಅವರನ್ನು ಊಟಕ್ಕೆ ಕೂರಿಸಿ ಸುಮಾರು ನಾಲ್ಕು ತಾಸು ದುಡಿಯಬಹುದು.ಹಲವು ಆಫರ್ಗಳು ಈ ಹೊಟೆಲ್ನಲ್ಲಿವೆ.
ನಮ್ಮದೇ ಊಟವನ್ನು ಪಡೆಯಲು ೫೦ ನಿಮಿಷಗಳ ಕೆಲಸ ಅಡುಗೆ ಕೆಲಸ ಮಾಡಬೇಕು. ಅಂದರೆ ತರಕಾರಿ ಹೆಚ್ಚುವುದು, ತೊಳೆಯುವುದು, ಬೇಯಿಸುವುದು ಮುಂತಾದವು ಮಾಡಬೇಕು. ಐಬಿಎಂನಲ್ಲಿ ಎಂಜಿನಿಯರ್ ಆಗಿದ್ದ ಸೆಖಾಯಿ ಕೊಬಯಾಷಿಯ ಕಲ್ಪನೆಯ ಕೂಸಿದು. ‘ಮಿರಾಯಿ ಶಿಕುಡೊ’ ಹೆಸರಿನ ಈ ಹೋಟೆಲ್ ಜಪಾನ್ನ ಟೊಕಿಯೊ ಸಮೀಪದ ಜಿಂಬೊಚೋ ಜಿಲ್ಲೆಯಲ್ಲಿದೆ. ನಮ್ಮಲ್ಲೂ ಇಂತಹ ಹೋಟೆಲ್ ಬಂದರೆ ಹೇಗೆ? ಇಂತಹ ಹಲವು ಹೋಟೆಲ್ಗಳು ನಮ್ಮಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ ಘೋಷಣೆಯಾಗಿಲ್ಲ. ಬಿಲ್ ಪಾವತಿಸದೆ ಬಂದಾಗ ಹಿಟ್ಟು ರುಬ್ಬಿಸುವ, ಪಾತ್ರೆ ತೊಳೆಸುವ ಹೋಟೆಲ್ಗಳಿಲ್ಲವೇ?! ಇದೂ ಒಂದು ರೀತಿಯಲ್ಲಿ ಜಪಾನ್ನ ಮಿರಾಯಿ ಶಿಕುಡೊಗೆ ಟ್ಯಾಲಿ ಆಗುತ್ತದೆ ಅಲ್ಲವೇ?!
ಸಿಂಗ್ನ ‘ಅವತಾರ’
ಶೆಟ್ಟಿ ಸಿಂಗರಿಸಿಕೊಳ್ಳುವಷ್ಟರಲ್ಲಿ ಪಟ್ಟಣ ಹಾಳಾಯ್ತು ಎನ್ನುವ ರೂಢಿ ಮಾತನ್ನು ‘ಸಿಂಗ್ ಸಿಂಗರಿಸಿಕೊಳ್ಳುವಷ್ಟರಲ್ಲಿ ಪಟ್ಟಣ ಹಾಳಾಯ್ತು’ ಎಂದು ತಿದ್ದಬೇಕಿದೆ. ಏಕೆಂದರೆ ಈ ಸರ್ಧಾರ್ಜಿ ಸಿಂಗರಿಸಿಕೊಂಡು ಸಿದ್ದವಾಗಲು ೮-೯ ಗಂಟೆಗಳು ಸಮಯ ತೆಗೆದುಕೊಳ್ಳುತ್ತಾನೆ. ಈತನ ತಲೆಯ ಮೇಲಿರುವ ಮೂಟೆ ಏನು? ಅದು ಮೂಟೆಯಲ್ಲ- ಮುಂಡಾಸು! ಇದರ ಉದ್ದ ೬೪೫ ಮೀಟರ್ಗಳು. ಇದನ್ನು ಮಡಚಿ, ತಲೆಗೆ ಸುತ್ತಿಕೊಳ್ಳುತ್ತಾನೆ. ತೂಗಿದರೆ ೩೦ಕೆ.ಜಿ.ಗಳಿವೆ. ಸುತ್ತಿಕೊಳ್ಳಲು ೬ ತಾಸು ಬೇಕು. ಆರಂಭದಲ್ಲಿ ೧೫೦ ಮೀಟರ್ ಬಟ್ಟೆಯಿಂದ ಮುಂಡಾಸು ಮಾಡಿಕೊಳ್ಳುತ್ತಿದ್ದ. ಆನಂತರ ೩೦೦ಕ್ಕೇ ಏರಿ ಈಗ ಹತ್ತಿರ ಹತ್ತಿರ ಕಿಲೋಮೀಟರ್ ದೂರದ ಬಟ್ಟೆ ಈತನ ತಲೆಯನ್ನು ಅಲಂಕರಿಸುತ್ತಿದೆ. ವಯಸ್ಸು ೬೦ ದಾಟಿದ್ದರೂ ಶೋಕಿ ಕಮ್ಮಿಯಾಗಿಲ್ಲ. ವಿಶ್ವದ ಅತಿ ಉದ್ಧದ ಮುಂಡಾಸು ಧರಿಸುವನೆಂಬ ಖ್ಯಾತಿ ಇವನಿಗಿದೆ. ಭಾರಿ ಬಳೆ, ಖಡ್ಗ, ಸಿಕ್ಖ್ ಧರ್ಮದ ಸಂಕೇತವುಳ್ಳ ಪದಕ, ನಮ್ಮ ದಾಸಯ್ಯರು, ಕೊರಗಯ್ಯಗಳು ಧರಿಸುವಂತಹ ಗಂಟೆಗಳೂ ಇವನ ಮೇಲಿರಲಿದೆ.
ಮುಂತಾದ ಆಭರಣಗಳ ಭಾರ ೧೫ ಕೆ.ಜಿ.ಗಳು. ಒಟ್ಟಾರೆ ಈತನ ಶಿರದ ಮೇಲಿನ ತೂಕ ೪೫ ಕೆ.ಜಿ.ಗಳು. ಕೈಗಳಿಗ ಧರಿಸುವ ಬಳೆಗಳೂ ಭಾರದ್ದೇ. ಸುಮಾರು ೧೫-೨೦ ಕೆಜಿಗಳಾಗಲಿವೆ. ಅರ್ಧಟನ್ ಗೂ ಅಧಿಕ ಭಾರದ ಹೊತ್ತು ಸಂಚಾರಕ್ಕೆ ಹೊರಡುತ್ತಾನೆ. ಆದರೆ ಅಷ್ಟರಲ್ಲಾಗಲೇ ಸಂಜೆಯಾಗಿರುತ್ತದೆ! ಈತ ಲಕ್ಷಣವಾಗಿ ಬೈಕ್ ಕೂಡ ಓಡಿಸುತ್ತಾನೆ. ಇವುಗಳನ್ನು ಧರಿಸಿ ಬೀದಿಗಿಳಿಯಲು ೮-೯ ತಾಸುಗಳೇ ಬೇಕಾಗುತ್ತದೆ. ಅಲಂಕಾರಕ್ಕೇ ಅಪಾರ ಸಮಯ ವ್ಯರ್ಥಮಾಡುವ ಈತನ ಹೆಸರು ದೇವತ್ ಸಿಂಗ್ ಅವತಾರ್ ಸಿಂಗ್ ಮೌನಿ. ‘ಭಾರ’ತದ ಪಂಜಾಬ್ನ ಪಾಟಿಯಾಲದಲ್ಲಿಯೇ ಇವನ ವಾಸ. ಮಾಮೂಲಿ ದಿನಗಳೇ ಹೀಗಿರುವಾಗ ಇನ್ನು ಈತ ಅಲಂಕಾರಕ್ಕೇ ಅಂತ ಕೂತರೆ ಹೇಗೆ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಅವತಾರ್ ಸಿಂಗ್ ಉತ್ತರಿಸಬೇಕು.
ಪೈಪಲ್ಲೂ ಲೈಫು

‘ಪೈಪೇ ಬದುಕಿನ ಮೂಲವಯ್ಯ-ಪೈಪೇ ಜೀವನದ ಸಾರವಯ್ಯ!’ ಇದು ಶಿವಶರಣರು ಹೇಳಿದ ಮಾತಲ್ಲ. ಬದಲಿಗೆ ಪೈಪ್ಗಳಿಂದ ನೀರು ಹರಿಸಿ, ಬೆಳೆ ತೆಗೆದವರು. ಪೈಪ್ಗಳಿಂದ ಹರಿದು ಬರುವ ನೀರು ಕುಡಿದವರ ಡೈಲಾಗ್ಗಳು. ಪೈಪ್ನಿಂದಲೇ ಜೀವನ ಸಾಗದಲ್ಲವೇ? ಉರುಳುವ ಪೈಪ್ನಿಂದಲೂ ಕುಟುಂಬ ಕಟ್ಟಿಕೊಳ್ಳಬಹುದು. ಅದು ನಮ್ಮ ದೇಶದ ಬಡವರಿರಲಿ, ಹಾಂಕಾಂಗ್ನಲ್ಲಿಯೇ ಇರಲಿ. ಪೈಪ್ ಲೈಪ್ ಅನಿವಾರ್ಯ! ವಿಶ್ವದ ದುಭಾರಿ ನಗರಗಳಲ್ಲಿ ಹಾಂಕಾಂಗ್ಗೆ ಅಗ್ರ ಪಂಕ್ತಿಯಿದೆ. ಅಲ್ಲಿ ಅಡ್ಡಗಲ ನಗರ ಬೆಳೆಸಲು ಭೂಮಿಯೇ ದಕ್ಕುತ್ತಿಲ್ಲ. ಎತ್ತರೆತ್ತರಕ್ಕೆ ಗಗನದೆತ್ತರಕ್ಕೆ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿ ‘ಉನ್ನತ’ ಬದುಕು ನಡೆಸುತ್ತಿದ್ದಾರೆ.
ಖಾಲಿ ಜಾಗದಲ್ಲಿ ಅಂದರೆ ಮೆಟ್ರೊ ಹಾದುಹೋಗುವ ಪಿಲ್ಲರ್ ಕೆಳಗೆ, ಬೃಹತ್ ಅಪಾರ್ಟ್ಮೆಂಟ್ಗಳ ಖಾಲಿ ಜಾಗದಲ್ಲಿ ಕ್ಲುಪ್ತವಾಗಿ ದೊಡ್ಡ ನೀರಿನ ಪೈಪ್ಗಳನ್ನು ಅಳಡಿಸಿ ಅಲ್ಲಿಯೂ ಕಚೇರಿ, ಮನೆಗಳನ್ನು ನಿರ್ಮಿಸುವ ಪ್ರಯೋಗ ಯಶಸ್ಸು ಕಂಡಿದೆ. ಈಗಾಗಲೆ ಸುಮಾರು ೨೫ ಪೈಪ್ಹೌಸ್ಗಳ ನಿರ್ಮಾಣವಾಗಿದೆ. ನಮ್ಮ ಬಡವರ ಪೈಪ್ಗಳು ಅಲ್ಲಿ ಹೈಟೆಕ್ ಟಚ್ ಪಡೆದು ‘ಜೀವ’ತಳೆಯುತ್ತಿವೆ. ಅರೆ ಈ ಪೈಪ್ಗಳು ಉರುಳಿ ಹೋಗದೆ? ಖಂಡಿತ ಇಲ್ಲ. ಭದ್ರವಾಗಿ ಫಿಕ್ಸ್ ಮಾಡಲಾಗಿರುತ್ತದೆ. ಗ್ರೌಂಡ್ ಪ್ಲೋರ್ನಲ್ಲಿ ಐಷಾರಾಮಿಯಾಗಿರುವ ಈ ಪೈಪ್ಗಳದ್ದೇ ಬೃಹತ್ ಪ್ಲಾಟ್ ನಿರ್ಮಾಣಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ನಮ್ಮಲ್ಲೂ ಇಂತಹ ಪೈಪುಗಳು ಬಂದರೆ ಹೇಗೆ? ನಮ್ಮಿಂದಲೇ ಅಲ್ಲಿಗೆ ಪೈಪ್ ಲೈಫ್ ವರ್ಗಾವಣೆಯಾಗಿರಬೇಕು. ಅಂತಿರುವಾಗ ಮತ್ತೆ ತರುವ ಮಾತೇಕೆ?!
ಕಾಷ್ಟ ಅರಳಿ ಕಲೆಯಾಗಿ…
ವೃಕ್ಷಗಳ ಹನನ ಹಲವರ ಕಣ್ಣಲ್ಲಿ ನೀರು ತರಿಸುತ್ತದೆ. ಇಂತಹವರಿಗೆ ಕತ್ತರಿಸಿದ ಮರಗಳ ಕಾಷ್ಟ ನೋಡುವುದೂ ಕಷ್ಟವೇ. ಶಿಲ್ಪಿ ಗಾಬಿರಿಜಿಯಾ ಕತ್ತರಿಸಿದ ಕಾಷ್ಟಗಳಲ್ಲಿ ಕಲೆ ಅರಳಿಸಿದ್ದಾನೆ. ೩ ವರ್ಷಗಳಿಂದಲೂ ಇವನಿಗೆ ಇದೇ ಹವ್ಯಾಸ ವೃತ್ತಿ ಎಲ್ಲವೂ. ರಸ್ತೆ ಬದಿ, ಉದ್ಯಾನ, ತೋಟ, ಹೀಗೆ ಎಲ್ಲೆಲ್ಲಂದರಲ್ಲಿ ತನ್ನ ಕಲ್ಪನೆಗೆ ತಕ್ಕಂತೆ ಕಾಷ್ಟದ ಕಲೆ ಅರಳಿಸಿ, ಭೇಷ್ ಎನಿಸಿಕೊಂಡಿದ್ದಾನೆ. ೪೨ವರ್ಷಗಳ ಗಾಬಿರಿಜಿಯ ಕೆಲವು ಕಾಲ ಅರಣ್ಯ ಅಭಯಂತರನಾಗಿ ಸೇವೆ ಸಲ್ಲಿಸಿದ್ದ. ತನ್ನೊಳಗಿನ ‘ಕಲಾಕಾರ್’ನನ್ನು ಹಿಡಿದಿರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ರಾಜೀನಾಮೆ ಇತ್ತ. ತನ್ನದೇ ಆವಿಷ್ಕಾರದ ‘ಚೈನ್ ಸಾ’ ಎಂಬ ಗರಗಸದಿಂದ ಕಲೆ ಅರಳಿಸುತ್ತಿದ್ದಾನೆ.
ಕಾಷ್ಟಗಳಲ್ಲಿ ಕಲೆ ಅರಳಿಸುವುದು ಸುಲಭದ ಕೆಲಸವಲ್ಲ. ಹಲವು ತಿಂಗಳು ಏಕಾಗ್ರತೆಯಿಂದ ಕೆಲಸ ಮಾಡಬೇಕಾಗುತ್ತದಂತೆ. ಶಿಲ್ಪ ಮೂಡಿಸುವ ಮೊದಲು ತನ್ನ ಕಲ್ಪನೆಯ ಚಿತ್ರವನ್ನು ಕಾಗದಲ್ಲಿ ಮೂಡಿಸಿ ನಂತರ ಅವುಗಳಿಗೆ ಆಕೃತಿ ಕೊಡುತ್ತಾ ಬಂದಿದ್ದಾನೆ. ಕೆಲವೊಮ್ಮೆ ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎಂಬಂತೆ ಆಗಿರುವುದೂ ಉಂಟು. ಹಾಗೆಂದು ಈತ ತನ್ನ ಪ್ರಯತ್ನ ನಿಲ್ಲಿಸಿಲ್ಲ. ಗಾಬರಿ ಹುಟ್ಟಿಸದ ಗಾಬಿಜಿರಿ ಚಿತ್ರಗಳನ್ನು ರೊಮೆನಿಯಾ ಕ್ರೆಯೊವಾ ಪಟ್ಟಣದಲ್ಲಿ ಕಾಣಬಹುದು. ನಮ್ಮಲ್ಲೂ ಕಾಷ್ಟ ಕಲೆ ಅರಳಿಸಿದರೆ ಹೇಗೆ? ಬೇಡ… ಶಿಲ್ಪಿಗಳಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಹಲವು ಮರಗಳಿಗೆ ಕೊಡಲಿ ಪೆಟ್ಟು ಬೀಳಬಹುದು.
ಪಾತರಗಿತ್ತಿ ‘ಪುಕ್ಕಾ’

ಕೆಲಸವಿಲ್ಲದ ಮೋಚಿ ಬೆಕ್ಕಿನ ತಲೆ ಬೋಳಿಸಿದ! ಎಂಬ ಮಾತಿದೆ. ಅದೇ ಮಾತನ್ನು ಕೊಂಚ ಬದಲಿಸಿ ಕೆಲಸವಿಲ್ಲದ ಕಾಸ್ಟ್ಯೂಮ್ ಡಿಸೈನರ್ ಚಿಟ್ಟೆಗೆ ಪುಕ್ಕ ಹೊಲಿದಳು ಎಂದು ಹೇಳಬಹುದು. ಇದು ವ್ಯಂಗ್ಯವಲ್ಲ ಸತ್ಯ. ಮೊನಾರ್ಕ್ ಜಾತಿಯ ಚಿಟ್ಟೆಗಳಿಗೆ ಆಧಾರವೆಂದರೆ ಅದರ ಅಗಲವಾದ ರೆಕ್ಕೆಗಳು. ಅದೇ ಅವುಗಳಿಗೆ ಅಂದ ನೋಡಲು ಚೆಂದ. ರೆಕ್ಕೆ ತುಂಡಾಗಿ ನೆಲಕ್ಕೆ ಅಪ್ಪಳಿಸಿದರೆ ಮನಕಲಕಲಿದೆ. ಇಂತಹದ್ದೊಂದು ಹತಭಾಗ್ಯ ಪಾತರಗಿತ್ತಿ ರೊಮಿ ಮಿಲೊಸ್ಕಿ ಎಂಬ ಕಾಸ್ಟ್ಯೂಮ್ ಡಿಸೈನರ್ ಮನೆ ಹೊಕ್ಕಿತು. ಅದರ ದುಸ್ತಿತಿ ಅರಿತ ರೊಮಿ ಸರಿ ಹೊಂದುವ ಕಸೂತಿ ಹೊಲಿದಳು. ತಡಮಾಡದೆ ರೆಕ್ಕೆಗೆ ಹೊಲಿದಳು. ಅವಳ ನಾಜೂಕಿನ ಕೆಲಸ ಚಿಟ್ಟೆಗೂ ತೃಪ್ತಿ ತಂದಿತು. ಕೆಲವೇ ಕ್ಷಣಗಳಲ್ಲಿ ಹಾರಿ ಹೋಯಿತು.
ಮೊನಾರ್ಕ್ ಚಿಟ್ಟೆಗಳ ಆಯುಷ್ ಅಲ್ಪದ್ದು. ೨ರಿಂದ ೪ ವಾರಗಳು ಮಾತ್ರ. ಅಲ್ಪ ಆಯುಷ್ಯದ ಚಿಟ್ಟೆಯ ರೆಕ್ಕೆಯನ್ನು ಹೊಲಿದು ಕಸೂತಿತಜ್ಞೆ ಎಂಬುದನ್ನು ಸಾಬೀತು ಪಡಿಸಿದಳು. ಅಮೆರಿಕದ ಟೆಕ್ಸಾಸ್ನಲ್ಲಿರುವ ವಸ್ತ್ರವಿನ್ಯಾಸಕಿಯ ಈ ಸರ್ಜರಿ ಭರ್ಜರಿ ಯಶಸ್ಸಿ ಕಂಡಿದೆ. ಆದರೆ ರೆಕ್ಕೆ ಉದುರಿಬಿದ್ದ ಚಿಟ್ಟೆಗಳೆಲ್ಲಾ ಇವಳ ಮನೆಯ ಮುಂದೆ ಸರ್ಜರಿಗಾಗಿ ಕಾದಿರುವುದು ಮಾತ್ರ ಶುದ್ಧ ಸುಳ್ಳು. ನಮ್ಮ ವಸ್ತ್ರವಿನ್ಯಾಸಕಿಯರು ಕಿಸೆಯಲ್ಲಿರುವ ಕಾಸು ಕಮಾಯಿಸಲು ಬಟ್ಟೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ಕಾಸಿಲ್ಲದಿದ್ದರೂ ಅಮೆರಿಕದ ರೊಮಿ ಚಿಟ್ಟೆಗೆ ವಿನ್ಯಾಸ ಮಾಡಿದ್ದಾಳೆ.