34ವರ್ಷದ ಈ ಯುವಕನ ಧ್ವನಿ ಬದಲಾಯಿತು. ಪೌರುಷದ ಧ್ವನಿ ಮಾಯವಾಗಿ ಕೀರಲು ಧ್ವನಿಯಾಯಿತು. ಅಸಲಿಗೆ ಅವನಿಗೆ ತಿಳಿಯಲೇ ಇಲ್ಲ. ಆದರೆ ಯಾರೊಂದಿಗೋ ಮಾತನಾಡುವಾಗ ಅವರು ಹೇಳಿದ ನಂತರ ಪತ್ತೆಯಾಯಿತು. ಉಗುಳು ನುಂಗಿದಿದರೂ ನೋವು ಕಾಡಿತು. ವೈದ್ಯರ ಬಳಿಗೆ ತೆರಳಿದಾಗ ಅವರು ‘ಇದೇ…ಇಲ್ಲೊಂದು ಸಮಸ್ಯೆ’ ಎಂದು ಹೇಳಿ ಪರೀಕ್ಷೆ ಮಾಡಿದರು. ಗಂಟಲಿನ ಎಕ್ಸ್ ರೇ ಎಲ್ಲಾ ತೆಗೆಸಿ ಕೈಲಿ ಹಿಡಿದು ನೋಡಿದರು…ಗಂಟಲು ಕುಸಿದಿತ್ತು. ಗಂಟಲಿನ ನಾಳ, ಅನ್ನದನಾಳ ಹಾಳಾಗಿತ್ತು…ದುರಸ್ಥಿ ಮಾಡುವುದು ಕಷ್ಟವಾಗಿದೆ.
ಆಲ್ ಆಫ್ ಎ ಸಡನ್ ಹೀಗೆಲ್ಲಾ ಆಗಿದ್ದೇಕೆ? ಬರುತ್ತಿದ್ದ ಸೀನು ತಡೆದ ಅಷ್ಟೇನಪ್ಪಾ! ಅಯ್ಯೋ ಜನ ನಂಬುತ್ತಾರೆಂದು ಫೇಸ್‌ಬುಕ್/ವಾಟ್ಸಾಪ್‌ಗಳಲ್ಲಿ ಹೀಗೆಲ್ಲಾ ಸುದ್ದಿ ಹರಿಯ ಬಿಡುತ್ತಾರೆ ಅಲ್ವಾ? ಇಲ್ರೀ…ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ) ಕೂಡ ಇದನ್ನು ದೃಢಪಡಿಸಿದ್ದು ನಂಬಲೇ ಬೇಕಿದೆ. ಮನುಷ್ಯ ಹಿಮಾಲಯ ಏರಬಲ್ಲ, ಚಂದ್ರನ ಅಂಗಳದಲ್ಲೂ ಕಾಲಿಡಬಲ್ಲ. ಆಳದ ಸಮುದ್ರಕ್ಕೆ ಇಳಿದು ಮುತ್ತುರತ್ನಗಳನ್ನು ಹೆಕ್ಕಿ ತರಬಲ್ಲ. ಆದರೆ ತನ್ನದೇ ಸೀನನ್ನು ನಿಯಂತ್ರಿಸಲಾರ. ಕಣ್ಣುಬಿಟ್ಟು ಕೂಡ ಸೀನಲಾರ. ಕಣ್ಣು ತೆರೆದು ಸೀನಲು ಪ್ರಯತ್ನಿಸಿದರೆ ಮೇಲೆ ಹೇಳಿದ ರೀತಿಯಲ್ಲಿ ಸರಣಿ ಅಪಘಾತಗಳು ಸಂಭವಿಸಲಿದೆ. ದೃಷ್ಟಿ ನಾಶವೂ ಆಗಲಿದೆ ಎಂದು ವೈದ್ಯರು ಹೇಳುತ್ತಾರೆ. ನಿಮ್ಮ ನೀತಿ ಪಾಠ ಸಾಕು… ಯುವಕನ ಪಾಡು ಏನಾಯಿತು ಹೇಳಿ? ಊಹೆಗೂ ಮೀರಿದ ಡ್ಯಾಮೇಜ್ ಆಗಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲವು ವೈದ್ಯ ವಿದ್ಯಾರ್ಥಿಗಳಿಗೆ ಸಂಶೋಧನೆಯ ವಸ್ತುವಾಗಿದ್ದಾನೆ!
ವಿಸ್ಕಿ ಚಟ್ಟ
ಚಟ್ಟ ಏರಿದರೂ ಚಟ ಹೋಗದು. ಎಂಬ ಮಾತಿದೆ. ಹೀಗಾಗಿಯೇ ಇರಬೇಕು ಆಂಟೋ ವಿಕ್ಶ್‌ಮ್ಯಾನ್ ಎಂಬ ವಿಸ್ಕಿ ವೀರ ಸಾವಿನಾಚೆಗೂ ಚಿಂತಿಸಿದ್ದಾನೆ! ೫೦ ಸಾವಿರ ಡಾಲರ್‌ಗಳನ್ನು ಖರ್ಚು ಮಾಡಿ ಜಾಕ್ ಡೇನಿಯನಲ್ ವಿಸ್ಕಿ ಬಾಟಲ್ ಆಕಾರದ ಶವ ಪೆಟ್ಟಿಗೆ ನಿರ್ಮಿಸಿದ್ದಾನೆ. ಮರಣಾನಂತರ ೧೦ ಅಡಿ ಉದ್ದದ ಈ ಪೆಟ್ಟಿಗೆಯಲ್ಲಿಯೇ ತನ್ನ ಹೆಣವಿಟ್ಟು ಮಣ್ಣಿಗಿಳಿಸುವಂತೆ ಮನವಿ ಮಾಡಿದ್ದಾನೆ. ಇದೇನು ವಿಚಿತ್ರ ಅಪೇಕ್ಷೆ ರೀ…? ಹೌದು. ವಿಕ್ಶ್‌ಮ್ಯಾನ್ ಸೈನಿಕನಾಗಿದ್ದ. ೨೦೦೭ರ ಇರಾಕ್ ಯುದ್ದದಲ್ಲಿಯೂ ಪಾಲ್ಗೊಂಡಿದ್ದ. ಇವನ ಕಣ್ಣೆದುರೇ ಎದುರಾಳಿಗಳ ಬಾಂಬ್‌ದಾಳಿಗೆ ಸಹ ಸೈನಿಕರು ಆಹುತಿಯಾಗಿದ್ದರು.
ಸಾವು ಬೆಂಬತ್ತುವುದೆಂದು ಅರಿತು ಶವಪೆಟ್ಟಿಗೆ ಮಾಡಿಕೊಂಡು ೨೦೧೪ರಿಂದಲೂ’ಸಾವು’ ಸ್ವಾಗತಿಸುತ್ತಿದ್ದಾನೆ. ಆದರೆ ನಿಧನ-ನಿಧಾನವಾಗುತ್ತಿದೆ. ಬಾಟ್ಲಿ ವಿಷಯ ಹೇಳ್ರೀ… ಇವನಿಗೆ ಜಾಕ್ ಡೇನಿಯಲ್ ವಿಸ್ಕಿ ಎಂದರೆ ಪಂಚಪ್ರಾಣ. ಅದೇ ಬ್ರಾಂಡ್ ಏಕೆ? ಇವನು ಯುದ್ದಭೂಮಿಯಲ್ಲಿ ನಿರತನಾಗಿದ್ದಾಗ ಇವನ ಸಹೋದ್ಯೋಗಿಗಳು ಹತರಾಗಿದ್ದನ್ನು ಕಣ್ಣಾರೆ ಕಂಡಿದ್ದಾನೆ. ಹಲವು ಸಾವುಗಳು ಇವನನ್ನು ಸಾಕಷ್ಟು ಹೈರಾಣು ಮಾಡಿತ್ತು…. ಯುದ್ಧ ಮುಗಿಸಿ ಸ್ವದೇಶಕ್ಕೆ ಮರಳಿದಾಗಲೂ ಕಾಡುತ್ತಿತ್ತು. ಮರೆಯಲು ಈತ ಜಾಕ್ ಡೇನಿಯಲ್ ವಿಸ್ಕಿಗೆ ಮೊರೆ ಹೋದ. ಪೌಂಡ್ ೩,೦೦೦ ಖರ್ಚು ಮಾಡಿ ಬಾಟ್ಲಿ ಆಕಾರದ ಕಾಫಿನ್ ಬಾಕ್ಸ್ ಮಾಡಿಸಿದ್ದಾನೆ. ಇದರಲ್ಲಿ ಹಲವು ವಿಸ್ಕಿ ಬಾಟಲಿಗಳೊಂದಿಗೆ ಮಣ್ಣುಪಾಲಾಗುವ ವಿಚಿತ್ರ ತೆವಲು ಇವನದ್ದು. ತಾಯಿಗೆ ಮಗನ ನಡೆ ಸುತಾರಾಂ ಇಷ್ಟವಾಗಿಲ್ಲ. ಇವನ ಸ್ನೇಹಿತರಿಗೆ ಇವನು ಮೋಜಿನ ವಸ್ತುವಾಗಿದ್ದಾನೆ. ಒಟ್ಟಿನಲ್ಲಿ ಚಟ್ಟ ಹತ್ತುವ ವೇಳೆಯ್ಲಲೂ ‘ಪ್ರಾಣ’ದೊಂದಿಗೆ ‘ಪಂಚಪ್ರಾಣ’ ಕರೆದೊಯ್ಯುವ ಆಸೆ. ಅವರವರ ಹುಚ್ಚು ಅವರವರಿಗೆ ಆನಂದ!
ಮುಖಾಟಿಕೆ
ಯಂಗಾಗಿ ಕಾಣಿಸಲು ಹೆಂಗೆಂಗೋ ಆಡಬೇಕಾಗುತ್ತದೆ. ಅದಕ್ಕೊಂದು ಉದಾಹರಣೆ ಇದು… ರೆಕ್ಕೆಯನ್ನು ಹೋಲುವ ಈ ಪೆಡಲ್‌ನ್ನು ತುಟಿಯಲ್ಲಿರಿಸಿಕೊಂಡು ಬೆಳಿಗ್ಗೆ -ಸಂಜೆ ೩೦ ಕ್ಷಣಗಳ ಕಾಲ ಕತ್ತು ಆಡಿಸಬೇಕು. ರೆಕ್ಕೆ ಮೇಲೆ ಕೆಳಗೆ ಆಡುತ್ತದೆ. ಬೀಳದಂತೆ ಬಾಯಲ್ಲೇ ಬ್ಯಾಲೆನ್ಸ್ ಮಾಡುತ್ತಿದ್ದರೆ ಯುವಕರಾಗಿರಬಹುದು. ಅದು ಹೇಗೆ ಸಾಧ್ಯ? ಬಾಯಿಯಿಂದ ಕಸರತ್ತು ಮಾಡಿದರೆ ಮುಖದ ಸ್ನಾಯುಗಳು, ದವಡೆ, ಮೂಗಿನ ಭಾಗದ ಮಾಂಸಖಂಡಗಳು ಬಲಿಷ್ಠವಾಗುತ್ತದೆ. ಇದರಿಂದಾಗಿ ಸುಕ್ಕುಗಳು ಉಂಟಾಗದು. ಮುಖದ ಕಾಂತಿ ಹೆಚ್ಚುತ್ತದೆ. ಯಂಗಾಗಿ ಕಾಣುವುದು ಖಚಿತ!
ನಿಜವಾಗ್ಲೂ ಆಗುತ್ತಾ? ಗೊತ್ತಿಲ್ಲಾ… ಯುವಕರ ಮೇಲೆ ಇದರ ಪ್ರಭಾವ ಹೆಚ್ಚು. ಹೀಗಾಗಿ ಅವರು ಯಂಗ್‌ಗಾಗಿ ಕಾಣುವುದು ಸಹಜ! ಇನ್ನು ಕಿಶೋರರು ಇದನ್ನು ಬಳಸಲು ಆರಂಭಸಿದರೆ ಸುಮಾರು ೨೦ ವರ್ಷಗಳ ಕಾಲ ಯಂಗ್ ಆಯೇ ಇರಬಹುದು! ಈಸ್ ಇಟ್? ಯಸ್! ಏಕೆಂದರೆ ೪೦ ವರ್ಷಗಳವರೆಗೆ ಯುವಕರೇ ಅಲ್ವಾ?! ಒಂದುವೇಳೆ ಮುಖವೆಲ್ಲಾ ಸುಕ್ಕು ಗಟ್ಟಿದ ಅಜ್ಜ, ಅಜ್ಜಿಯವರು ಮಾಡಿದರೂ ಇದರ ಪ್ರಜೋನ ಲಭ್ಯವೇ? ಹೌದೆನ್ನುತ್ತಾರೆ ಇದರ ತಯಾಕರು. ಜಪಾನ್‌ನ ಶ್ಲಾಬ್ ಎಂಬ ಕಂಪೆನಿಯ ಉತ್ಪನ್ನವಿದು. ಹುಡುಗಾಟಿಕೆ ಎನಿಸುವ ಈ ಉಪಕರಣವನ್ನು ಮುಖಾಟಿಕೆ ಎಂದರೆ ತಪ್ಪಿಲ್ಲ. ನಮ್ಮ ಭಾರತಕ್ಕೂ ಈ ಉಪಕರಣವನ್ನು ತರಿಸಿದರೆ ಹೇಗೆ? ಏನೂ ಬೇಡ…ಎರಡು ಪುಟ್ಟ ಬೀಸಣಿಗೆಯನ್ನು ಬಾಯಲ್ಲಿಟ್ಟುಕೊಂಡು ಮೇಲೆಕೆಳಗೆ ಹಾರಿಸಿದರೆ ಸಾಕಾದೀತು.
ಚಿಕನ್ ಸ್ವಾದ ಉಗುರಲ್ಲೇ
ಉಗುರು ತೋರಿಸಿದರೆ ಹಸ್ತ ನುಂಗುತ್ತಾನೆ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಉಗುರು ತೋರಿಸಿದರೆ ಚಿಕನ್ ಕೇಳ್ತಾನೆ ಅನ್ನುವ ಕಾಲ ಬಂದಿದೆ… ಅದ್ಯಾಕೇ? ಕೆಂಟುಕಿ ಫೈಡ್ ಚಿಕನ್ ಅಲಿಯಾಸ್ ಕೆಎಫ್‌ಸಿ ಎರಡು ಬಗೆಯ ನೈಲ್ ಪಾಲೀಶನ್ನು ಹೊರತಂದಿದೆ. ಈ ಬಣ್ಣವನ್ನು ಉಗುರಿಗೆ ಲೇಪಿಸಿಕೊಂಡು ಅರ್ಧತಾಸಿನ ನಂತರ ಮೂಸಿದರೆ ಥೇಟ್ ಚಿಕನ್ ಸ್ವಾದವೇ ಬರಲಿದೆ. ಬೆರಳು ಚೀಪೋರಿಗೆ ಉತ್ತೇಜನ ಕೊಟ್ಟಂತಾಗಲಿದೆಯಲ್ಲವೇ?
ಹೌದು. ಉಗುರು ಚೀಪೋದು ಕೆಟ್ಟದ್ದು ಸರಿ- ರುಚಿಕರ ಹವ್ಯಾಸವಾಗಬಹುದು. ನಾನ್ ವೆಜ್‌ನ ಹೀಗೆಲ್ಲಾ ಕೈಗೆ ಮೆತ್ತಿಕೊಂಡು ಓಡಾಡಿದರೆ ಅದು ಆಚಾರಕ್ಕೂ ಅಪಚಾರ – ವಿಜ್ಞಾನಕ್ಕೂ ಅಪಚಾರ ಅಲ್ಲವೇ? ಇಲ್ಲ. ಅಸಲಿಗೆ ಇದು ನಾನ್‌ವೆಜ್ ಅಲ್ಲವೇ ಅಲ್ಲವಂತೆ ನಾನಾ ವೆಜ್‌ಗಳನ್ನು ಈ ಉಗುರ ಲೇಪನವನ್ನು ಮೊಸೆಯಲಾಗಿದೆ. ಜುಟ್ಟು ಬಿಟ್ಟ ಬ್ರಾಹ್ಮಣನಿಂದ ಆರಂಭಿಸಿ ಮುಟ್ಟು ನಿಂತ ಮಹಿಳೆ ತನಕ ಯಾರು ಬೇಕಿದ್ದರೂ ಇದನ್ನು ಸವರಿ ಸವಿಯಬಹುದು! ‘ಐಸ್ ಕ್ರೀಮ್ ಕೊಡ್ಸು… ಪಿಜ್ಜಾ ಕೊಡಿಸು’ ಎಂದು ಬಾಯ್ ಫ್ರೆಂಡ್‌ಗಳನ್ನು ಗೋಳು ಹೊಯ್ದುಕೊಳ್ಳುವ ಮಿಟುಲಾಡಿಯರು ಕೂಡ ಈ ಲೇಪನಕ್ಕೆ ಕ್ರೇಜ್ ಹುಟ್ಟಿಸಿಕೊಳ್ಳಲಿದ್ದಾರೆ.
ಎರಡು ಫ್ಲೇವರ್ ಇದೆ ಅಂದ್ರಲ್ಲಾ ರೀ…ಅದ್ಯಾವುದು? ಹಾಟ್&ಸ್ಪೈಸಿ, ಒರಿಜಿನಲ್ ಅಂತೆ. ಸದ್ಯಕ್ಕೆ ಹಾಂಕಾಂಗ್‌ನಲ್ಲಿ ಲಭ್ಯ. ಭಾರತಕ್ಕೆ ಬರಲು ತಡವಾಗದು. ಗಾದೆ: ಕೋಳಿ ಕೇಳಿ ಮಸಾಲೆ ಅರೆಯೋದಿಲ್ಲ-ಕೈ ಮೂಸಿ ಚಿಕನ್ ತಿಂದ್ಯಾ ಅಂತ ಕೇಳೋದಿಲ್ಲ.
ಸ್ಲೀಪ್ ಆಪ್ನಿಯಾ
ಕೂತ ಕೂತಲ್ಲೇ ನಿದ್ದೆ ಜಾರುತ್ತಾರೆ ನೋಡಯ್ಯಾ. ರಾಜ್ಯದ ಸಿಎಂ ಸಿದ್ದರಾಮಯ್ಯನವರು ವಿಧಾನಮಂಡಲವಿರಲಿ, ಸಾರ್ವಜನಿಕ ಸಭೆ ಸಮಾರಂಭಗಳಿರಲಿ…ನಿದ್ದೆಗೆ ಜಾರಿ, ನಿದ್ರಾಮಯ್ಯ, ನಿದ್ದೆ ರಾಮಯ್ಯ ಎಂದೆಲ್ಲಾ ಛೇಡಿಕೆಗೆ ಒಳಗಾಗಿದ್ದಾರೆ. ಯಾಕೆ ಹಾಗೆ? ಅವರಿಗೆ ಸ್ಲೀಪ್ ಆಪ್ನಿಯಾ ಎಂಬ ರೋಗವಿದೆ. ಏನದು ಸ್ಲೀಪ್ ಆಪ್ನಿಯಾ? ನಿದ್ರಾ ಹೀನತೆಯ ಸಮಸ್ಯೆ, ರಾತ್ರಿ ವೇಳೆ ನಿದ್ದೆ ಮಾಡುವಾಗ ನಾಲಗೆ ಹಿಂದಕ್ಕೆ ಜಾರುತ್ತದೆ. ಅದು ಉಸಿರಾಟಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ಆಮ್ಲಜನಕ ಕೊರತೆಯಾಗುತ್ತದೆ. ಮೆದುಳಿಗೆ ಪೂರೈಕೆಯಾಗುವ ಆಕ್ಸಿಜನ್ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಯಾಗುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದಾಗ ಲವಲವಿಕೆ ಮಾಯವಾಗುವುದು.
ಅಗತ್ಯದ ನಿದ್ದೆ ಇವರಿಗೆ ಅಲಭ್ಯ. ಅಲ್ಪ ನಿದ್ದೆಯೂ ಇವರಿಗೆ ಸಮಾಧಾನ ತರದು. ಗೊರಕೆ ಕೂಡ ಇವರನ್ನು ಬಾಧಿಸುತ್ತದೆ. ಗೊರಕೆಯ ವೇಳೆಯಲ್ಲಿ ಉಸಿರಾಟಕ್ಕೆ ತೊಂದರೆಯಾಗಿ, ಆಮ್ಲಜನಕದ ಪೂರೈಕೆ ಕೊರತೆಯಾಗಿ ಪ್ರಾಣಕ್ಕೆ ಅಪಾಯ. ನಿದ್ದೆಯಲ್ಲೇ ನಿಧನರಾಬಹುದು! ಇದೊಂದು ಶಾರೀರಿಕ ಸಮಸ್ಯೆ. ಇದನ್ನು ಉಪೇಕ್ಷೆ ಮಾಡುವಂತಿಲ್ಲ. ಇಂತಹ ಸಮಸ್ಯೆಯುಳ್ಳವರು ಹಗಲು ಹೊತ್ತಿನಲ್ಲಿ ನಿದ್ದೆಗೆ/ತೂಕಡಿಕೆಗೆ ಅನಪೇಕ್ಷಿತವಾಗಿ ಜಾರುತ್ತಾರೆ. ಸಿದ್ದರಾಮಯ್ಯಗೆ ಈ ಕಾಯಿಲೆ ಇರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಯೋಗ, ಪ್ರಾಣಾಯಾಮ ಮುಂತಾದ ಕಸರತ್ತಿನ ಮೂಲಕ ಇದನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಸಿದ್ದರಾಮಯ್ಯನವರನ್ನು ನೆಪಮಾತ್ರಕ್ಕೆ ಉಲ್ಲೇಖ ಮಾಡಲಾಗಿದೆ. ಈ ಕಾಯಿಲೆ ಗುಣಪಡಿಸಲು ಆಪರೇಷನ್ ಕೂಡ ಮಾಡಲಾಗುತ್ತದೆ!
ಕೇಶಕ್ಕೆ ಕಾವಿನ ಕಟಿಂಗ್!
‘ಕತ್ರಿಲಿ ಹೋಗೋದಿಕ್ಕೆ ಕಾದ ಕಂಬಿ ತಂದ್ರು’ ಎಂಬ ಗಾದೆ ಸೃಷ್ಟಿಯಾಗಿರುವ ಸುದ್ದಿ ಇಲ್ಲಿದೆ…. ವಾಂಗ್ ವೈಬು ಕೇಶ ವಿನ್ಯಾಸಕಾರನು ತಲೆ ಬೋಳಿಸಲು ಕತ್ರಿ, ರೇಜರ್, ಬ್ಲೇಡ್‌ಗಳನ್ನು ಬಳಸುವುದಿಲ್ಲ. ಬದಲಿಗೆ ಕಾದ ಕಂಬಿಯಿಂದ ಕೂದಲು ಸುಟ್ಟು ಹೇರ್ ಡ್ರಸ್ ಮಾಡುತ್ತಾನೆ. ೭೨ರ ವಯಸ್ಸಿನಲ್ಲೂ ವೈಬು – ಐಬುಮಾಡದ ನಿಷ್ಣಾತ. ಇವನ ಅಂಗಡಿಗೆ ಮೂರು ಮತ್ತೊಂದು ಜನ ಕೂಡ ಬರೋದಿಲ್ಲ ತಾನೇ…? ಇಲ್ರೀ ಬೇಜಾನ್ ಜನ ತಲೆ ಕೊಡಲು ಬರುತ್ತಾರೆ. ‘ಕತ್ರಿಗಿಂತಲೂ ಕಾದ ಕಂಬಿನೇ ಮೇಲು’ ಎಂಬುದು ಇವನ ಗಿರಾಕಿಗಳ ಗಾದೆಯಾಗಿರಬೇಕು. ಈ ಪಾರಂಪರಿಕ ಕೇಶ ವಿನ್ಯಾಸಕ್ಕೆ ದಾಹೊಜಿಯಾ ಎನ್ನುತ್ತಾರೆ.
೧೯೮೦ರವರೆವಿಗೂ ಹೀಗೆ ತಲೆ ಬೋಳಿಸುವ ಕಲೆ ನೇಪಥ್ಯದಲ್ಲಿಯೇ ಉಳಿದಿತ್ತು. ವಾಂಗ್ ವೈಬು ಅದನ್ನು ಸಂಶೋಧಿಸಿ ಹೊರತೆಗೆದ. ಕೇಶ ಸುಟ್ಟವಾಸನೆಗೆ ಪರಿಹಾರವಿಲ್ಲ ಎನ್ನುವುದೇ ಈ ಕಲೆಯ ಐಬು. ಇದಕ್ಕಿಲ್ಲ ಪರಿಹಾರ ಎನ್ನುತ್ತಾನೆ ವೈಬು. ಅಲ್ಪ ಶುಲ್ಕ ಇರಬೇಕು ಅಲ್ವಾ? ಖಂಡಿತ ಇಲ್ಲ. ದುಭಾರಿ ಶುಲ್ಕ ಪೀಕುತ್ತಾನೆ. ವಿಪರೀತ ರೊಕ್ಕು ಕೊಟ್ಟು ತಲೆ ಬೋಳಿಸಿಕೊಂಡರೂ ಸಮಾಧಾನ ಆಗದಿದ್ದರೆ? ‘ದುಡ್ಡುಹಾಳೂ ತಲೆಯೂ ಬೋಳು’ ಎಂದು ದುಃಖಿಸಬೇಕು ಅಷ್ಟೇ. ಚೀನಾದ ಸಿಚುಯಾನ್ ಪ್ರಾಂತ್ಯದ ಜಿನ್ಸಿ ಪಟ್ಟಣಕ್ಕೆ ತೆರಳಿದರೆ ವೈಬುವಿನ ‘ಕಂಬಿ ಕಟಿಂಗ್’ ಕಾಣಬಹುದು. ಧೈರ್ಯವಿದ್ದರೆ, ರೊಕ್ಕವಿದ್ದರೆ, ಆಸೆಯಾದರೆ ತಲೆಯನ್ನೂ ಬೋಳಿಸಿಕೊಂಡು ಬರಬಹುದು….
ವಿಶೇಷ ಹೋಟೆಲ್
ಭಕ್ತಿ ಭಂಡಾರಿ ಬಸವಣ್ಣನವರ ವಚನಗಳನ್ನು ಹೋಲುವ ಸಂಗತಿ ಇಲ್ಲೇಕೆ ಎಂದು ಯೋಚಿಸುತ್ತಿರುವಿರಾ? ಈ ಜಮಾನದಲ್ಲೂ ಅವರ ವಚನಗಳ ಅಗತ್ಯ ಬಹಳವೇ ಇದೆ. ನಮ್ಮ ಕರುನಾಡ ಮಂದಿಗೆ ಮಾತ್ರವಲ್ಲದೆ, ಆಸ್ಟ್ರೇಲಿಯಾದ ಜನರಿಗೂ ಬೇಕಿದೆ ಅದರಂತೆ ಈ ಹೋಟೆಲ್ ಕಾರ್ಯಾರಂಭ ಮಾಡುತ್ತಿರಬೇಕು. ‘ಗುಡ್ ಮಾರ್ನಿಂಗ್… ಕಾಫಿ ಪ್ಲೀಸ್’, ಎಂದವರಿಗೆ ಕಾಫಿ ಧಾರಣೆ ಯಲ್ಲಿ ರಿಯಾಯಿತಿ ಖಚಿತ. ‘ಒಂದು ಲೋಟ ಕಾಫಿ ಕೊಡಿ..!’ ಆಜ್ಞೆಮಾಡಿದರೆ ರೇಟ್ ಕೊಂಚ ಹೆಚ್ಚಾಗಲಿದೆ. ‘ಏಯ್ ಒಂದು ಕಾಫಿ ತಗೊಂಡುಬಾ’ ಎಂದು ಗುಟುರು ಹಾಕಿದರೆ ಕಾಫಿಯ ರೇಟ್ ದುಭಾರಿಯಾಗಲಿದೆ…ಧಾರಣೆ ಕ್ರಮವಾಗಿ ೪, ೪.೫ ಮತ್ತು ೫ ಡಾಲರ್‌ಗಳಾಗಲಿದೆ.
ಇದರಿಂದೇನು ಲಾಭ? ಶಿಷ್ಟಾಚಾರ, ಸದಾಚಾರ ಕಲಿಸಿದ ತೃಪ್ತಿ ಹೋಟೆಲ್‌ನ ಮಾಲೀಕರಿಗಾಗಲಿದೆ. ಮಾಣಿಗಳಿಗೆ ರಾಜಮರ್ಯಾದೆಯ ಖುಷಿ. ಗ್ರಾಹಕನಿಗೆ ರಿಯಾಯಿತಿಯ ಸಂತಸ. ಪ್ರಿಯ, ಹಿತವಾದ ಮಾತುಗಳನ್ನಾಡಿ ರಿಯಾಯಿತಿ ದರದಲ್ಲಿ ಕಾಫಿ ಕುಡಿಯಬಯಸುವವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಜೆರ್ರೋವ್‌ಗೆ ತೆರಳಬೇಕು. ಸದ್ವಿನಯಗಳೇ ಸದಾ ಶಿವನ ಒಲುಮೆಯಯ್ಯಾ…ಎನ್ನುವ ಬಸವಣ್ಣನವರ ವಚನಕ್ಕೆ ಅಲ್ಲಾದರೂ ಮೌಲ್ಯ ಬರುತ್ತಿದೆಯಲ್ಲಾ ಅದೇ ಸಂತಸ.
ಗುಂಡು ನಿರೋಧಕ ಚರ್ಮ
ನೋಡಲು ವಿಚಿತ್ರವಾಗಿ ಗೋಚರಿಸುವ ಇದು ಗುಂಡು ನಿರೋಧಕ ಚರ್ಮ. ಅತೀ ಸಮೀಪದಿಂದ ಗುಂಡು ಹೊಡೆದರೂ ಇರುವೆ ಕಚ್ಚಿದಷ್ಟು ಕೂಡ ನೋವಾಗದು. So Whಚಿಣ ಈರೀತಿಯ ಹಲವು ಚರ್ಮಗಳು ಈಗಾಗಲೇ ಮಾರು ಕಟ್ಟೆಯಲ್ಲಿದೆಯಲ್ಲ….? ಙouಡಿ ಚಿಡಿe ಡಿighಣ ಆದರೆ ಇದು ಸ್ಟೀಲ್‌ಗಿಂತಲೂ ೫ಪಟ್ಟು ಕಠಿಣವಾಗಿದೆ. ಜೇಡ, ರೇಷ್ಮೆ ಮತ್ತು ಮೇಕೆ ಜೀನ್‌ಗಳನ್ನು ಮಿಶ್ರಣ ಮಾಡಿ, ತಾಂತ್ರಿಕವಾಗಿ ಸಂಯೋಜಿಸಿ ಹೊಸತೊಂದು ಚರ್ಮ ನೇಯ್ದಿದ್ದಾನೆ. ನೋಡಲು ಸ್ಟೀಲ್‌ನಂತೆ ಪಳ ಹೊಳೆಯುತ್ತಿಲ್ಲ. ಆದರೆ ಅದಕ್ಕಿಂತಲೂ ಕಠಿಣವಾಗಿದೆ. ಕುಲಾಂತರಿ ಚರ್ಮವಾದ್ದರಿಂದ ಕೃತಕವಾಗಿ ಬೆಳೆಸಬಹುದು. ಈ ಚರ್ಮ ಸೈನಿಕರು ಧರಿಸಿದರೇ… ಶತ್ರುಪಡೆಯ ನಿರ್ಮೂಲನಗೆ, ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಮಾಜ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬಯಸುವ ಪೊಲೀಸರಿಗೆ ಇದು ಹೇಳಿಮಾಡಿಸಿದ ಚರ್ಮವಾಗಲಿದೆ.
ಗಲಭೆ, ದಂಗೆ, ದೊಂಬಿ ಗಲಾಟೆಗಳನ್ನು ನಡೆಸುವ ಸ್ಥಳದಲ್ಲಿ ಕರ್ತವ್ಯದಲ್ಲಿ ನಿರತವಾಗಿರುವ ಪೊಲೀಸರಿಗೆ ಈ ಬಟ್ಟೆಯಿಂದ ಮಾಡಿದ ಸಮವಸ್ತ್ರ ಉತ್ತಮ ರಕ್ಷಾಕವಚವಾಗಲಿದೆ. ಅಮೆರಿಕದ ಇಟಾರಾಜ್ಯದ ರಾಜಧಾನಿ ಸಾಲ್ಟ್‌ಲೇಕ್‌ನಿಂದ ಬಂದ ವರದಿಯಿದು. ಇಲ್ಲಿನ ಪ್ರಸಿದ್ಧ ವಿಜ್ಞಾನಿ ರ್‍ಯಾಂಡಿ ಲೂಯಿಸ್ ಮತ್ತು ತಂಡದ ಆವಿಷ್ಕಾರವಿದು. ಇದರಲ್ಲಿ ಸಂಪೂರ್ಣ ಯಶಸ್ವಿಯಾಗಲು ಇನ್ನೂ ಕೆಲವು ಕಾಲ ಬೇಕಂತೆ. ಅಲ್ಲಾ ಸ್ವಾಮಿ ಭಯೋತ್ಪಾದಕರಿಗೆ ಇದು ಸಿಕ್ಕರೇ…ಅಪಾಯ ಖಚಿತ ಅಲ್ಲವೇ? ಹೌದು. ಅವರನ್ನು ನಿಯಂತ್ರಿಸುವುದು ಸುಲಭವಲ್ಲ. ಈ ಬಟ್ಟೆಯ ಉತ್ಪಾದನೆ, ಬಳಕೆ, ಮಾರಾಟ ಎಲ್ಲಕ್ಕೂ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅನಾಹುತ ತಪ್ಪಿದ್ದಲ್ಲ. ಕುಲಾಂತರಿ ಎಂದರೆ ‘ಅವಾಂತರಿ’ ಎನ್ನುತ್ತಿದ್ದವರೂ ರ್‍ಯಾಂಡಿ ಸಂಶೋಧನೆಗೆ ಚಂಡಿ ಮಾಡದೆ ಒಪ್ಪಿಕೊಂಡಿದ್ದಾರೆ.
‘ಭೂತ’ದ ಬಾಂಬು!
ಭೂತ್ ಜೊಲೊಕಿಯಾ. ಇದೊಂದು ಥಳಿಯ ಮೆಣಸಿನ ಕಾಯಿ. ಇದರಲ್ಲಿ ೧,೦೦೦,೦೦೦ ಯುನಿಟ್‌ಗಳ ಖಾರ ಇರುತ್ತದೆ. ಸಾಮಾನ್ಯವಾಗಿ ಬಳಸುವ ಮೆಣಸಿನ ಕಾಯಿಗಿಂತಲೂ ೧೦೦೦ ಪಟ್ಟು ಅಧಿಕ ಖಾರಾದಿಂದ ಇದು ಕೂಡಿದೆ. ವಿಶ್ವದ ಅತಿ ಹೆಚ್ಚಿನ ಖಾರಾ ಮೆಣಸಿನ ಕಾಯಿ ಎಂಬ ಖ್ಯಾತಿಗೆ ಇದು ಪಾತ್ರ. ೨೦೦೦ನೇ ಇಸವಿಯಲ್ಲೇ ಇದನ್ನು ದಾಖಲೆ ಎಂದರು ಗಿನ್ನೀಸ್‌ನ ಮಂದಿ. ನಮ್ಮದೇ ಅಸ್ಸಾಂನಲ್ಲಿ ಬೆಳೆಯುತ್ತಾರೆ. ವಿಷಯ ಇಲ್ಲಿಗೆ ಮುಕ್ತಾಯವಾಗಲಿಲ್ಲ. ಇನ್ನೂ ಇದೇ ಓದುತ್ತಾ ಹೋಗಿ… ಈ ಮೆಣಸಿನ ಕಾಯಿಯನ್ನು ತಂದು ಪುಡಿ ಮಾಡಿ, ಗನ್‌ಪೌಡರ್‌ಗೆ ಬದಲಾಗಿ ಬಳಸಬಹುದು. ದೊಂಬಿ, ಗಲಾಟೆ, ಮುಷ್ಕರ, ಲೂಟಿ ಮಾಡುವ ದುಷ್ಕರ್ಮಿಗಳನ್ನು ಚದುರಿಸಲು ಬಳಸಬಹುದು.
ಮೆಣಸಿಕಾಯಿ ಬಾಂಬ್ ಎಸೆದರೆ ಪ್ರಾಣಾಂತಿಕ ಹಲ್ಲೆಯಾಗದು. ಟಿಯರ್‌ಗ್ಯಾಸ್‌ನಂತೆ ಕಣ್ಣಲ್ಲಿ ನೀರು ತರಿಸದು. ಪ್ರಕೃತಿಗೆ ಮಾರಕವೂ ಅಲ್ಲ. ಪರಂತೂ ಖಾರಾ ಕೆಲವೇ ಕ್ಷಣಗಳಲ್ಲಿ ಪಸರಿಸುತ್ತದೆ. ಅವರ ಗಂಟಲು ಬಿರಿಯುವಂತೆ ಮಾಡುತ್ತದೆ. ದುಷ್ಕರ್ಮಿಗಳನ್ನು ಓಟ ಕೀಳುವಂತೆ ಮಾಡುತ್ತದೆ. ಹೇಗಿದೆ ಈ ಮೆಣಸಿನಕಾಯಿ ಬಾಂಬ್? ಅರೇ! ನಮ್ಮ ಮಾತುಗಳಲ್ಲಿ ನಿಮಗೆ ನಂಬಿಕೆ ಬರುತ್ತಿಲ್ಲವೇ? ಬೇಡ ಬಿಡಿ… ದೊಡ್ಡ ಗುಂಪು ಮಾಡಿಕೊಂಡು, ದೆಹಲಿಯ ಡಿಫೆನ್ಸ್ ರಿಸರ್ಚ್ ಲ್ಯಾಬೋರೆಟರಿ ಬಳಿ ತೆರಳಿ ಗಲಾಟೆ ಮಾಡಿ ನೋಡಿ…. ಇದರ ಫಲಿತಾಂಶವನ್ನು ಕಣ್ಣಾರೆ, ಗಂಟ್ಲಾರೆ ಅನುಭವಿಸಬಹುದು!
‘ಕದಾಕೃತಿ’
ಕಲಾಕೃತಿ ಎಲ್ಲರಿಗೂ ಗೊತ್ತು. ಆದರೆ ಕದವೇ ಇಲ್ಲಿ ಕಲೆಯಾಗಿ, ಕಲಾಕೃತಿಯಾಗಿ ಕಟ್ಟಡವೇ ಕ್ಯಾನ್‌ವಾಸ್ ಆಗಿದೆ. ಚೋಯ್ ಜಾಂಗ್ ಹ್ವಾ ಕಲಾವಿದನ ಕೈ ಚಳಕವಿದು. ೧,೦೦೦ ಬಾಗಿಲು ಮಾಡಿ ೧೦ ಮಹಡಿಗಳ ಕಟ್ಟಡದ ಹೊರಗೆ ಇವುಗಳನ್ನು ಜೋಡಿಸಿದ್ದಾನೆ. ಅದೆಷ್ಟು ಮರಗಳನ್ನು ಹಾಳು ಮಾಡಿ ಈ ಕದಾಕೃತಿ ನಿರ್ಮಿಸಿದನೋ…ಹೀಗಾಗ ಬಾರದಿತ್ತು ಅಲ್ವಾ?! ಇಲ್ರೀ ಹಾಗೆಲ್ಲಾ ಏನೂ ಇಲ್ಲಾ…! ಇವನು ಮರುಬಳಕೆಯ ವಸ್ತುಗಳನ್ನು ಬಳಸಿ ಬಾಗಿಲು ಮಾಡಿ ನಂತರ ಏರಿಸಿದ್ದಾನೆ. ಇವನ ಶ್ರಮಕ್ಕೆ ಹಲವು ಬಡಗಿಗಳು/ಕಲಾಕಾರ್‌ಗಳು ನೆರವು ನೀಡಿದ್ದಾರೆ. ಅಕ್ಷರಶಃ ಬಾಗಿಲಿನಂತೆಯೇ ಇವುಗಳನ್ನು ರೂಪಿಸಲಾಗಿದೆ.
ಚಿಲಕ, ಡೋರ್‌ಲಾಕ್, ಹಿಡಿ, ಕೊಂಡಿ… ಇಲ್ಲವು ಇಲ್ಲಿದೆ. ಬಾಗದೆ, ಬಳುಕದೆ ಈ ಬಾಗಿಲ ಬಿಲ್ಡಿಂಗ್ ವೀಕ್ಷಿಸಬಹುದು. ಬಾಗಿಲು ಸಾವಿರ ಇರಬಹುದು. ಹಾಗೆಂದು ‘ಬಾಗಿಲನು ತೆರೆದು ಸೇವೆಯನು ಕೊಡೋ… ಜಾಯೇ’ ಎಂದು ಹಾಡಿದರೂ ಪ್ರವೇಶ ದ್ವಾರವಷ್ಟೇ ಓಪನ್ ಆದೀತು….ಉಳಿದವು ಸದಾಕಾಲ ಬಂದ್. ‘ಸಾವು ಇರದ’ ದ್ವಾರಗಗಳುಳ್ಳ ಈ ಕಟ್ಟಡದ ಮಾಲೀಕನನ್ನು ಏನನ್ನಬಹುದು? ‘ದ್ವಾರ’ಕಾನಾಥ! ಈ ಪಂಚ್ ಹೇಳಿ ಹೊರಟು ಬಿಡಬೇಡಿ…ನಿಲ್ಲಿ… ಈ ಬಿಲ್ಡಿಂಗ್ ಎಲ್ಲಿದೆ ಹೇಳ್ರೀ…? ಓ.ಕೆ. ಓ.ಕೆ…ದಕ್ಷಿಣ ಕೊರಿಯದ ಸಿಯೋಲ್‌ನಲ್ಲಿದೆ.