‘ಕೆಂಡಸಂಪಿಗೆ’ ಸಿನಿಮಾದ ಖ್ಯಾತಿಯ ನಟ ವಿಕ್ಕಿ ವರುಣ್ ಈಗ ನಿರ್ದೇಶಕರಾಗುತ್ತಿದ್ದಾರೆ. ವಿಕ್ಕಿ ವರುಣ್ ನಿರ್ದೇಶನದ ಚೊಚ್ಚಲ ಸಿನಿಮಾಕ್ಕೆ ‘ಕಾಲಾಪತ್ಥರ್’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ಹೊಸ ರೀತಿಯಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ.
ಹೌದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ‘ಕಾಲಾಪತ್ಥರ್’ ಸಿನಿಮಾದ ಐದು ಹಾಡುಗಳನ್ನು ಸೇರಿಸಿ ‘ಸೌಂಡ್ಸ್ ಆಫ್ ಕಾಲಾಪತ್ಥರ್’ ಎಂಬ ಹೆಸರಿನಲ್ಲಿ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
‘ಭುವನ್ ಮೂವೀಸ್’ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ‘ಕಾಲಾಪತ್ಥರ್’ ಸಿನಿಮಾದಲ್ಲಿ ವಿಕ್ಕಿ ವರುಣ್ ಗೆ ಧನ್ಯಾ ರಾಮಕುಮಾರ್ ನಾಯಕಿಯಾಗಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಬಗ್ಗೆ ಮಾತನಾಡುವ ವಿಕ್ಕಿ ವರುಣ್, ‘ನಿರ್ದೇಶಕನಾಗುವ ನನ್ನ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ. ಎಲ್ಲರ ಸಹಕಾರದಿಂದ ‘ಕಾಲಾಪತ್ಥರ್’ ಸಿನಿಮಾ ನಾವು ಅಂದುಕೊಂಡ ಹಾಗೆ ಅದ್ಭುತವಾಗಿ ಮೂಡಿಬಂದಿದೆ. ಏನಾದರೂ ಹೊಸತು ಮಾಡಬೇಕು ಎಂದೆನಿಸಿ ‘ಸೌಂಡ್ಸ್ ಆಫ್ ಕಾಲಾಪತ್ಥರ್’ ವಿಡಿಯೋವನ್ನು ಬಿಡುಗಡೆ ಮಾಡಿದ್ದೇವೆ’ ಎಂದಿದ್ದಾರೆ.
‘ಕಾಲಾಪತ್ಥರ್’ ಚಿತ್ರದಲ್ಲಿ ಐದು ಹಾಡುಗಳಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಗೀತರಚನೆ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡುಗಳನ್ನು ಹಾಡಿದ್ದಾರೆ. ಸದ್ಯದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.