ಹೊರಗೆ ಸೌಂದರ್ಯ ಕಾಳಜಿಯ ರಂಗು ರಂಗಿನ ಬೋರ್ಡು, ಒಳಗೆ ಕಾಮದ ಕಥಕ್ಕಳಿ… ಇದು ಬೆಂಗಳೂರಿನ ತುಂಬಾ ಹಬ್ಬಿಕೊಂಡಿರುವ ಮಸಾಜ್ ಸೆಂಟರ್ ಅರ್ಥಾತ್ ಸ್ಪಾಗಳ ಅಸಲಿ ಅಂತರಾಳ. ಐಟಿ ಸಿಟಿಯ ನಿಯಾನ್ ದೀಪಗಳಾಚೆಗಿನ ಮಿಣುಕು ಕತ್ತಲಲ್ಲಿ ನಡೆಯುವ ವೇಶ್ಯಾ ದಂಧೆಯದ್ದೇ ಒಂದು ತೂಕವಾದರೆ, ಬೃಹತ್ ಮಹಲುಗಳಲ್ಲಿ ನಡೆಯುವ ಇಂಥಾ ಮಸಾಜ್ ಪಾರ್ಲರುಗಳಲ್ಲಿ ಚಾಲ್ತಿಯಲ್ಲಿರುವ ಸೆಕ್ಸ್ ರ್‍ಯಾಕೆಟ್ಟಿನದ್ದೇ ಮತ್ತೊಂದು ತೂಕ. ಇತ್ತೀಚೆಗಂತೂ ನಗರದ ತುಂಬಾ ಇಂಥಾ ಹೈಟೆಕ್ ವೇಶ್ಯಾ ಅಡ್ಡೆಗಳು ಎಗ್ಗಿಲ್ಲದೆ ದಂಧೆ ನಡೆಸುತ್ತಿವೆ. ಪಿಂಪ್‌ಗಳಂತೂ ಯಾವುದೇ ಭಯವಿಲ್ಲದೆ ಗಿರಾಕಿ ಹುಡುಕಿ ಕಾಸು ಪೀಕುವ ಕೆಲಸದಲ್ಲಿ ಫುಲ್ ಬ್ಯುಸಿ. ಅರೇ, ಈ ಡಿಪಾರ್ಟ್‌ಮೆಂಟಿನ ಮಂದಿ ಏನು ಮಾಡುತ್ತಿದ್ದಾರೆ, ಯಾಕೆ ಇಂಥಾ ದಂಧೆಕೋರರ ಬುಡಕ್ಕೆ ಬಿಸಿ ನೀರು ಕಾಯಿಸುವ ಕೆಲಸ ಮಾಡುತ್ತಿಲ್ಲ ಎಂಬೆಲ್ಲ ಪ್ರಶೆಗಳನ್ನಿಟ್ಟುಕೊಂಡು ಕೆದಕಲು ಹೋದರೆ ಸ್ಪಾ ಮಾಫಿಯಾದ ಅಂತರಾಳ ಜಾಹೀರಾಗುತ್ತೆ. ಇಂಥಾ ಸ್ಪಾಗಳಲ್ಲಿ ನರಳುತ್ತಿರುವ ಬಡ ಹೆಣ್ಣುಮಕ್ಕಳ ಕಣ್ಣೀರ ಕಥನ ನಿಜಕ್ಕೂ ಆಘಾತ ಮೂಡಿಸುತ್ತದೆ.
ಭಯಾನಕ ದಂಧೆ
ಬೆಂಗಳೂರಿನ ಸಖಲ ಏರಿಯಾಗಳಲ್ಲಿಯೂ ಈ ಪ್ರಳಯಾಂತಕ ಮಸಾಜ್ ಸೆಂಟರುಗಳು ತಲೆಯೆತ್ತಿವೆ. ಅದರಲ್ಲಿ ಬಹುತೇಕವು ವೇಶ್ಯಾ ದಂಧೆಯ ಕಾರಸ್ಥಾನಗಳಾಗಿ ಬದಲಾಗಿವೆ. ಮರ್ಯಾದಸ್ಥರು ವಾಸಿಸುವ ಪ್ರದೇಶಗಳಲ್ಲಿ ಇಂಥಾ ಅಡ್ಡೆಗಳು ತಲೆಯೆತ್ತಿ ನೆಮ್ಮದಿಯಾಗಿ ಓಡಾಡಲೂ ಆಗದ ಪರಿಸ್ಥಿತಿ ಇದೆ. ಇಂಥಾ ಅಡ್ಡೆಗಳ ಸುತ್ತ ಪುಂಡ ಪೋಕರಿಗಳು ಎಣ್ಣೆ ಹೊಡೆದು ಓಲಾಡಿದರೂ, ಅಲ್ಲಿ ಬೇರೆ ದಂಧೆ ನಡೆಯುತ್ತಿದೆ ಅಂತ ಮೇಲು ನೋಟಕ್ಕೇ ಗೊತ್ತಾದರೂ ಪೊಲೀಸ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಏಕೆ ತೆಪ್ಪಗಿದ್ದಾರೆ ಅಂತ ನೋಡ ಹೋದರೆ ಇಂಥಾ ಸ್ಪಾ ದಂಧೆಯ ನಿಜವಾದ ತಾಕತ್ತಿನ ಅರಿವಾಗುತ್ತೆ. ಬೆಂಗಳೂರಿನಲ್ಲಿ ವಿಜೃಂಭಿಸಿರುವ ಸ್ಪಾ ರೂಪದ ವೇಶ್ಯಾ ಅಡ್ಡೆಗಳಿಗೂ ಘಟಾನುಘಟಿಗಳಿಗೂ ನೇರಾ ನೇರ ಸಂಬಂಧವಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲೀಯ ವ್ಯಾಪಕವಾಗಿ ಹರಿದಾಡುತ್ತಿದೆ.
ಇಲ್ಲಿ ಈ ದಂಧೆಯನ್ನು ಸುಸೂತ್ರವಾಗಿಸುವ ಮಧ್ಯವರ್ತಿಗಳಿದ್ದಾರೆ. ಬೆಂಗಳೂರಿನ ಅಷ್ಟೂ ಹೈಟೆಕ್ ದಂಧೆಯ ಬಾಸುಗಳಿಗೂ ಖಾಸಾ ನೆಂಟರಂಥವರಿದ್ದಾರೆ. ಪಿಂಪ್‌ಗಳ ಪಾಲಿಗೂ ಆತ್ಮ ಸಖರಾಗಿರುವವರ ಸಂಖ್ಯೆ ದೊಡ್ಡದಿದೆ. ನಗರದ ಮುಖ್ಯ ಮಸಾಜ್ ಸೆಂಟರುಗಳಿಗೆ ಪ್ರತೀ ತಿಂಗಳು ಮಾಮೂಲಿ ವಸೂಲಿ ಮಾಡಿ ಆಯಕಟ್ಟಿನ ಮಂದಿಗೆ ತಲುಪಿಸುವ ಕಸುಬೇ ಒಂದಷ್ಟು ಮಂದಿಯ ಫುಲ್‌ಟೈಂ ಡ್ಯೂಟಿ. ಹಾಗಂತ ಈ ಮಂದಿ ಇಂಥಾ ಸ್ಪಾಗಳಿಂದ ಎತ್ತುತ್ತಿರುವ ಕಾಸೇನು ಕಡಿಮೆ ಮೊತ್ತದ್ದಲ್ಲ. ಪ್ರತೀ ಅಡ್ಡೆಯಿಂದಲೂ ಇಂಥಾ ಮಧ್ಯವರ್ತಿಗಳು ತಿಂಗ ತಿಂಗಳು ಕನಿಷ್ಠ ನಲವತ್ತು ಸಾವಿರ ಫಿಕ್ಸ್ ಮಾಡಿಕೊಂಡಿದ್ದಾರೆ. ಮಾಂಸದ ಅಡ್ಡೆಗಳಿಗೆ ಈ ರೀತಿ ಮಂತ್ಲಿ ಫಿಕ್ಸ್ ಆಗಿರೋದರಿಂದಲೇ ಅವುಗಳ ಕಾರುಬಾರು ಅತಿಯಾಗಿಹೋಗಿದೆ. ಅಂದಹಾಗೆ, ಈ ಮಧ್ಯವರ್ತಿಗಳು ಪ್ರತೀ ತಿಂಗಳು ಕಡಿಮೆಯೆಂದರೂ ಎಂಬತ್ತು ಲಕ್ಷಕ್ಕೂ ಮೀರಿ ವಸೂಲಿ ಮಾಡುತ್ತಾರೆಂದರೆ, ಈ ದಂಧೆಯ ಖದರು ಅದೆಂಥಾದ್ದಿರಬಹುದೆಂದು ಅರಿವಾಗುತ್ತದೆ.
ಭರ್ಜರಿ ಕಾಸು
ಕೆಲ ವರ್ಷಗಳ ಹಿಂದೆ ಪ್ರತಿಷ್ಟಿತ ಏರಿಯಾಗಳಿಗೆ ಮಾತ್ರ ಸೀಮಿತವಾಗಿದ್ದ ಇಂಥಾ ಬಾಡಿ ಮಸಾಜ್ ಸೆಂಟರ್‌ಗಳು ಈವತ್ತು ಗಲ್ಲಿ ಗಲ್ಲಿಗಳಲ್ಲಿಯೂ ಪಿತಗುಡಲಾರಂಭಿಸಿದೆ. ಹಾದಿ ಬಿಟ್ಟ ಹೈವಾನ್‌ಗಳ ಪಾಲಿಗಿದು ಅಕ್ಷರಶಃ ಲಾಭದಾಯಕ ದಂಧೆ. ಸದ್ಯ ಈ ದಂಧೆಯಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಸಕ್ರಿಯರಾಗಿದ್ದಾರಾದರೂ, ಇದರ ಡಾನ್‌ಗಳಂತಿರುವ ಹಳೇ ಖದೀಮರೇ ಇಂದಿಗೂ ಮೆರೆಯುತ್ತಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಏಳೆಂಟು ಹೈಟೆಕ್ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ. ಇವರೆಲ್ಲ ರಾಜಾರೋಷವಾಗಿಯೇ ದಂಧೆ ನಡೆಸುತ್ತಿದ್ದಾರೆ. ಇಂಥಾ ಸ್ಪಾಗಳ ಹಳೇ ಕುಳವಾದ ಒಬ್ಬನ ಖಾಸಾ ಆಸಾಮಿಗಳೇ ಈ ವ್ಯವಹಾರ ನಡೆಸುತ್ತಿದ್ದಾರೆ. ಗಮನೀಯ ಅಂಶವೆಂದರೆ, ಉತ್ತರ ಭಾರತ ಮತ್ತು ನಮ್ಮಲ್ಲಿಯ ಬಡ ಹೆಣ್ಣು ಮಕ್ಕಳೇ ಈ ದಂಧೆಗೆ ಬಲಿಯಾಗುತ್ತಿದ್ದಾರೆ.
ಈ ಪ್ರಮುಖ ಸ್ಪಾಗಳ ಬಾಸ್‌ಗಳಿದ್ದಾರಲ್ಲಾ? ಇವರೆಲ್ಲರೂ ಘಟಾನುಘಟಿಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ, ಆದುದರಿಂದಲೇ ಒಂದು ರೂಪಾಯಿ ಆಚೀಚೆ ಆಗುವಂತಿಲ್ಲ ಅಂತಲೂ ಮಧ್ಯವರ್ತಿಗಳು ಹಲುಬಾಡುತ್ತಾರಂತೆ. ಇದಲ್ಲದೆ ಸಣ್ಣ ಮಟ್ಟದಲ್ಲಿ ನಡೆಯುವ ದಂಧೆಕೋರರಿಂದಲೂರಿಂಥವರು ವಾರದ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದಾನೆಂಬ ಆರೋಪಗಳೂ ಇವೆ. ಹಾಗಂತ ಈ ಮಧ್ಯವರ್ತಿಗಳಿಗೆ ಕಲೆಕ್ಷನ್ ಸಲೀಸು. ಯಾಕೆಂದರೆ, ಸರ್ಕಾರಿ ಸಂಬಳವಾದರೂ ಒಂದೆರಡು ದಿನ ವೈತ್ಯಾಸವಾಗಬಹುದು. ಆದರೆ ಈ ದಂಧೆಕೋರರು ನಿಗಧಿತ ದಿನದಂದೇ ಪಕ್ಕಾ ಪೇಮೆಂಟ್ ಮಾಡುತ್ತಾರೆ. ಇವರೆಲ್ಲರ ಕೈಕೆಳಗೆ ನೂರಾರು ಪಿಂಪ್‌ಗಳು ಸಕ್ರಿಯರಾಗಿದ್ದಾರೆ. ಇಲ್ಲಿಗೆ ಹೆಚ್ಚಿನದಾಗಿ ಉತ್ತರಭಾರತ ಮೂಲದ ಹುಡುಗೀರನ್ನೇ ಪಿಂಪ್‌ಗಳ ಮೂಲಕ ಕರೆಸಿಕೊಳ್ಳಲಾಗುತ್ತಿದೆ.
ಆಯುಕ್ತರಾದ ದಯಾನಂದ್ ಅವರು ಈ ದಂಧೆಯನ್ನು ಮಟ್ಟ ಹಾಕಲು ಗಂಭೀರವಾಗಿ ಚಿಂತಿಸಿ ಕ್ರಮ ಕೈಗೊಳ್ಳಬೇಕಿದೆ. ಇಂಥಾ ಅಡ್ಡೆಗಳಿಂದ ನಗರದ ಸ್ವಾಸ್ಥ್ಯ ಹಾಳಾಗೋದಲ್ಲದೆ ಅಮಾಯಕರೂ ಕೂಡಾ ಈ ಚಕ್ರಸುಳಿಗೆ ಸಿಕ್ಕು ಕಂಗಾಲಾಗುತ್ತಿದ್ದಾರೆ. ಈ ದಂಧೆಯನ್ನು ಬೇರು ಸಮೇತ ಕಿತ್ತೊಗೆದು, ಇಂಥಾ ದುಷ್ಟರನ್ನೇ ಆದಾಯ ಮೂಲವಾಗಿಸಿಕೊಂಡಿರುವ ಇಲಾಖೆಯ ಮಂದಿಗೂ ಚುರುಕು ಮುಟ್ಟಿಸುವ ಕೆಲಸ ಆಯುಕ್ತರ ಕಡೆಯಿಂದ ಆಗಬೇಕಿದೆ.
ಸ್ಪಾ ಅಂದ್ರೆ ಸಮುದ್ರ!
ಈ ಮಸಾಜ್ ಸೆಂಟರುಗಳು ಬೆಂಗಳೂರಿನಂಥಾ ನಗರಗಳಲ್ಲಿ `ಸ್ಪಾ’ ಹೆಸರಿನಲ್ಲಿ ಭಾರೀ ದಂಧೆ ನಡೆಸುತ್ತಿವೆ. ಹೊರಗೆ ರಂಗು ರಂಗಿನ ಬೋರ್ಡು ತಗುಲಿಸಿಕೊಂಡಿರುವ ಇಂಥಾ ಸ್ಪಾಗಳ ಒಳಗಿನದ್ದು ಅಕ್ಷರಶಃ ಕತ್ತಲ ಸಾಮ್ರಾಜ್ಯ. ವೆರೈಟಿ ವೆರೈಟಿಯಾಗಿ ಮೈ ಉಜ್ಜಿಸಿಕೊಳ್ಳುವ ಜೊತೆ ಜೊತೆಗೇ ಇಲ್ಲಿ ನಡೆಯೋದು ಅಕ್ಷರಶಃ ಹಡಬೆ ದಂಧೆ. ಒಟ್ಟಾರೆಯಾಗಿ ಅದು ಕೊಳಕು ಕೊಚ್ಚೆಯ ಸಮೃದ್ಧ ಸಮುದ್ರ. ಅಷ್ಟಕ್ಕೂ ಈ `ಸ್ಪಾ’ ಅಂದರೆ ಏನರ್ಥ ಅಂತ ಹುಡುಕುತ್ತಾ ಸಾಗಿದರೆ ಕೆಲ ಕೌತುಕದ ಅಂಶಗಳು ಅನಾವರಣಗೊಳ್ಳುತ್ತವೆ. ಅಸಲಿಗೆ ಸ್ಪಾ ಎಂಬೋ ಪದ ಸ್ಪ್ಯಾನಿಷ್ ಭಾಷೆಯದ್ದು. ಅದರ ಅರ್ಥವೂ ಸಮುದ್ರ ಎಂದೇ. ಈಗ್ಗೆ ಸಾವಿರಾರು ವರ್ಷಗಳ ಹಿಂದೆ ಅದೆಷ್ಟೇ ಶ್ರೀಮಂತಿಕೆಯಿದ್ದರೂ ಸೌಂದರ್ಯದ ಖಯಾಲಿಯೆ ಮಸಾಜ್ ಸೆಂಟರುಗಳು ಇರಲಿಲ್ಲವಲ್ಲಾ? ಇದಕ್ಕೆಂದೇ ಆಗಿನ ರಾಜಮಹಾರಾಜರು ಪ್ರಾಕೃತಿಕ ಹಾದಿಯೊಂದನ್ನು ತಲಾಷು ಮಾಡಿದ್ದರು.
ಇಂಥಾ ರಾಜರುಗಳು ವರ್ಷದ ನಿರ್ಧಿಷ್ಟ ಅವಧಿಯೊಂದರಲ್ಲಿ ರಾಣಿ ಮತ್ತು ಸಖಿಯರ ಸಂಗಡ ಸಮೀಪದ ಕಡಲ ತೀರದಲ್ಲಿ ಮೊಕ್ಕಾಂ ಹೂಡುತ್ತಿದ್ದರು. ಅವರ ಜೊತೆ ಆಸ್ಥಾನ ವೈದ್ಯರ ಹಾಜರಿಯೂ ಇರುತ್ತಿತ್ತು. ಅಲ್ಲಿ ಅವರು ಬಿಸಿಲಿನ ಝಳಕ್ಕೆ ಹದವಾಗಿ ಮೈಯೊಡ್ಡುತ್ತಾ, ಸಮುದ್ರದ ಅಂಚಿನಲ್ಲಿ ಸಿಗುವ ಜವುಳು ಮಣ್ಣನ್ನು ಮೈಯಿಡೀ ಮೆತ್ತಿಕೊಂಡು ಸೌಂದರ್ಯದ ಒನಪು ಹೆಚ್ಚಿಸೋ ಕಸರತ್ತು ನಡೆಸುತ್ತಿದ್ದರು. ಇನ್ನು ಅಗತ್ಯ ಬಿದ್ದರೆ ಆಸ್ಥಾನ ವೈದ್ಯರಿಂದ ಗಿಡಮೂಲಿಕೆ ಅರೆಸಿ ಪೂಸಿಕೊಳ್ಳುತ್ತಿದ್ದರು. ಇಂಥಾ ಕಡಲತೀರದ ಸೌಂದರ್ಯ ಸಂಬಂಧೀ ಕಸರತ್ತು ಇದೀಗ ಆಧುನಿಕ ವಿಶ್ವದಲ್ಲಿ ಸ್ಪಾಗಳ ಹೆಸರಲ್ಲಿ ಚಾಲ್ತಿಯಲ್ಲಿದೆ. ಆದರೆ ಅಂದು ನಿಜಕ್ಕೂ ಪ್ರಾಕೃತಿಕ ಚಿಕಿತ್ಸೆಯ ನೆರಳಲ್ಲಿದ್ದ ಸ್ಪಾ ಎಂಬ ಕಲ್ಪನೆ ಈವತ್ತು ತೊಗಲಿನ ದಂಧೆಯ ದಾವಾನಲವಾಗಿ ಮಾರ್ಪಾಡು ಹೊಂದಿರುವುದು ವಿಪರ್ಯಾಸ.
ಮೈತುಂಬ ಕಾಯಿಲೆ!
ಇದೀಗ ಬೆಂಗಳೂರಿನಲ್ಲಿ ತಲೆ ಎತ್ತಿರುವ ಬಹುತೇಕ ಮಸಾಜ್ ಸೆಂಟರುಗಳು ವೇಶ್ಯಾವಾಟಿಕೆಯ ಬಲದಿಂದಲೇ ಮೆರೆದಾಡುತ್ತಿವೆ. ಆದರೆ ಇಲ್ಲಿ ನಡೆಯುವ ಮಸಾಜ್ ಆಗಲಿ, ಇತರೇ ಸೌಂದರ್ಯವರ್ಧಕ ಚಿಕಿತ್ಸೆಗಳಾಗಲಿ ಯಾವ ರೀತಿಯಿಂದಲೂ ಸೇಫ್ ಅಲ್ಲ. ಸಾವಿರಾರು ರೂಪಾಯಿ ಸುರಿದು ಇಂಥಾ ಅಡ್ಡಾಗಳಿಗೆ ಎಡತಾಕಿ ಬರಬಾರದ ಕಾಯಿಲೆ ಅಂಟಿಸಿಕೊಂಡು ಹೇಳಿಕೊಳ್ಳಲಾರದೆ ಒದ್ದಾಡುವ ಅನೇಕರಿದ್ದಾರೆ. ಇಲ್ಲಿನ `ಕಾಮ ಚಿಕಿತ್ಸೆ’ ಅನುಭವಿಸಿ ಏಡ್ಸ್‌ನಂಥಾ ಮಹಾಮಾರಿ ಅಚಿಟಿಸಿಕೊಂಡು ಲೆಕ್ಕವಿಲ್ಲದಷ್ಟು ಮಂದಿ ಗೋಣು ಚೆಲ್ಲಿದ್ದಾರೆ.
ಕೆಲ ಬಾರಿ ಇಂಥಾ ಸ್ಪಾಗಳ ಅನಾಚಾರಗಳು ಗಿರಾಕಿಗಳಿಂದಲೇ ಹೊರಬೀಳುವುದೂ ಇದೆ. ಅದೇ ರೀತಿಯದ್ದೊಂದು ಪ್ರಕರಣ ಕೆಲ ತಿಂಗಳ ಹಿಂದೆ ನಡೆದಿತ್ತು. ಖಾಸಗಿ ಕಂಪೆನಿಯೊಂದರ ನೌಕರನೊಬ್ಬ ಈ ಸ್ಟೋರಿಯ ದುರಂತ ನಾಯಕ. ಈತ ಹೈಪ್ರೊಫೈಲ್ ಜನರಂತೆ ತೆವಲಿಗೆ ಬಿದ್ದು ದೊಮ್ಮಲೂರಿನ ಕುಖ್ಯಾತ ಮಸಾಜು ಸೆಂಟರ್ ಬ್ರಿಗೇಡ್ ಸ್ಪಾಗೆ ಎಂಟ್ರಿ ಕೊಟ್ಟಿದ್ದ. ಇದು ಮಸಾಜಿನ ಹೆಸರಲ್ಲಿ ತೊಗಲೋದ್ಯಮ ನಡೆಸುವ ಕುಖ್ಯಾತ ಅಡ್ಡೆ. ಇಂಥಾದ್ದರ ಒಳ ಹೋದವನನ್ನು ಅರೆಬೆತ್ತಲು ಮಲಗಿಸಿ ಎಣ್ಣೆ ನೀವಿದಾಕೆಯೇ ಕೆಡವಿಕೊಂಡಿದ್ದಳು. ಈ ಆಸಾಮಿಯೂ ಯಾವ ಖಬರೂ ಇಲ್ಲದೆ ಸುಖ ಸಾಗರದಲ್ಲಿ ಮಿಂದೆದ್ದಿದ್ದ.
ಹಾಗೆ ಬ್ರಿಗೇಡ್ ಸ್ಪಾದ ಟ್ರೀಟ್‌ಮೆಂಟ್ ಅನುಭವಿಸಿ ಅದೇ ಮತ್ತಲ್ಲಿ ಕೆಲಸಕ್ಕೆ ಹೋಗುತ್ತಿದ್ದೆವನಿಗೆ ಆಫೀಸಿನಲ್ಲಿಯೇ ಸಣ್ಣಗೆ ಜ್ವರ ಕಾಣಿಸಿಕೊಂಡಿತ್ತು. ವಾರಗಟ್ಟಲೆ ಟ್ರೀಟ್‌ಮೆಂಟ್ ತೆಗೆದುಕೊಂಡರೂ ಜ್ವರ ಮಾತ್ರ ಬಿಡಲಿಲ್ಲ. ಇದೇ ತಿಂಗಳಾರಭ್ಯ ಮುಂದುವರೆದು ಕಡೆಗೊಂದು ದಿನ ರಕ್ತ ಪರೀಕ್ಷೆ ನಡೆಸಿದರೆ ಮಹಾ ಶಾಕ್ ಕಾದಿತ್ತು. ಆ ರಿಪೋರ್ಟು ಹೆಚ್‌ಐವಿ ಪಾಸಿಟಿವ್ ಎಂಬುದನ್ನು ಸಾರಿ ಹೇಳುತ್ತಿತ್ತು. ಈ ಮಹಾಶಯನಿಗೆ ಇದು ಬ್ರಿಗೇಡ್ ಸ್ಪಾದ ಕೊಡುಗೆ ಎಂಬುದು ಪಕ್ಕಾ ಆದೇಟಿಗೆ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಈ ಸ್ಪಾದ ಅಸಲಿ ಕಥೆ ತೆರೆದಿಟ್ಟಿದ್ದ. ಆಯುಕ್ತರು ತಕ್ಷಣ ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು.
ಹಾಗೆ ಸಿಸಿಬಿ ಪೊಲೀಸರು ರೇಡು ಬೀಳುತ್ತಲೇ ಬ್ರಿಗೇಡ್ ಸ್ಪಾದ ಅಕರಾಳ ವಿಕರಾಳ ರೂಪ ಜಾಹೀರಾಗಿತ್ತು. ಅಂದಹಾಗೆ ಈ ಸ್ಪಾಗೆ ಗಿರಾಕಿ ಹುಡುಕಿ ಕೊಡುವ ಕಸುಬು ಮಾಡುತ್ತಿದ್ದ ಝಕೌಲಾ ಹಾಗೂ ಸಮೀರ್ ಲಾಮಾ ಎಂಬಿಬ್ಬರು ಉತ್ತರಪ್ರದೇಶ ಮೂಲದ ಪಿಂಪ್‌ಗಳೂ ತಗುಲಿಕೊಂಡಿದ್ದರು. ಇಂಥಾ ಐನಾತಿಗಳ ಸಂಪರ್ಕದಿಂದ ಇಂಥಾ ಸ್ಪಾಗಳಿಗೆ ಹೋಗಿ ಮಲಗೆದ್ದು ಬಂದರೆ ಮೈತುಂಬಾ ಕಾಯಿಲೆ ಖಂಡಿತ. ಹಾಗಂತ ಇದನ್ನು ಲೈಟ್ ಆಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ, ಯಾರದ್ದೋ ದಂಧೆಗಳಿಗೆ ಮತ್ಯಾರದ್ಗದೋ ಮನೆಯ ಹೆಣ್ಣುಮಕ್ಕಳು ಸಿಕ್ಕಿ ನರಳುತ್ತಿದ್ದಾರೆ. ಕಾಮಿಷ್ಟರ ತೆಕ್ಕೆಗೆ ಸಿಕ್ಕ ಅದೆಷ್ಟೋ ಬಡಪಾಯಿ ಹೆಣ್ಣು ಜೀವಗಳ ಸಂಕಟ ಹೊರ ಜಗತ್ತಿಗೆ ದಾಟಿಕೊಳ್ಳೋದೇ ಇಲ್ಲ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸದಿದ್ದರೆ ಬಡ ಹೆಣ್ಣು ಮಕ್ಕಳಿಗೆ ಉಳಿಗಾಲವಿಲ್ಲ.