ಕಿರುತೆರೆಯಲ್ಲಿ ‘ಮಜಾ ಟಾಕೀಸ್’ ಸೇರಿದಂತೆ ಹಲವು ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಯಶಸ್ವಿಯಾಗಿರುವ ನಟ ಕಂ ನಿರೂಪಕ ಸೃಜನ್ ಲೋಕೇಶ್ ಈಗ ಸಿನಿಮಾ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಹೌದು, ಆಗಾಗ್ಗೆೆ ಕಿರುತೆರೆಯ ಜೊತೆ ಹಿರಿತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದ ಸೃಜನ್ ಲೋಕೇಶ್, ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗುತ್ತಿದ್ದಾರೆ.
ಅಂದಹಾಗೆ, ಸೃಜನ್ ಲೋಕೇಶ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾಕ್ಕೆೆ ‘ಜಿಎಸ್‌ಟಿ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿದೆ. ‘ಸಂದೇಶ್ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಸಂದೇಶ್ ಎನ್. ನಿರ್ಮಿಸುತ್ತಿರುವ ‘ಜಿಎಸ್‌ಟಿ’ ಸಿನಿಮಾದಲ್ಲಿ ಸೃಜನ್ ಲೋಕೇಶ್ ನಿರ್ದೇಶನದ ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದಲ್ಲಿ ರಜಿನಿ ಭಾರಧ್ವಾಜ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರವಿಶಂಕರ ಗೌಡ, ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ನಿವೇದಿತ ಗೌಡ, ತಬಲ ನಾಣಿ, ಮಾ. ಸುಕೃತ್ ಸೃಜನ್ ಲೋಕೇಶ್, ಶೋಭರಾಜ್, ಅಶೋಕ್, ಅರವಿಂದ ರಾವ್, ವಿನೋದ್, ರಮ್ಯಾ ಮೊದಲಾದವರು ‘ಜಿಎಸ್‌ಟಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ‘ಜಿಎಸ್‌ಟಿ’ ಸಿನಿಮಾದ ಶೂಟಿಂಗೆ ನಡೆಯಲಿದ್ದು, ಮುಂದಿನ ವರ್ಷದ ಮಧ್ಯಭಾಗದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.