-ಆತನ ಬೆರಳ ಸನ್ನೆಗೆ ಕ್ರೂರ ಪ್ರಾಣಿಗಳೇ ಮರುಳಾಗುತ್ತವೆ!
-ಕಣ್ಣೊರಸಿ ಸಂತೈಸೋದೇ ಬ್ಯುಸಿನೆಸ್ಸು!
ಲಗೋರಿ ಆಟಕ್ಕೆ ಜೋಡಿಸಿದ ಕಲ್ಲುಗಳು ಕೂಡ ಕಲೆಯಾಗಲಿದೆ. ಚಿತ್ರಕಲಾಪರಿಷತ್ತಿನವರು ಹೇಳಿದರಾ? ಇಲ್ಲ. ಮೈಕೆಲ್ ಗ್ರಾಬ್ ಅಭಿಪ್ರಾಯವಿದು. ಯಾರವನು? ಅಮೆರಿಕದ ಮೈಕೆಲ್ ಗ್ರಾಬ್ ‘ಕಲ್ಗಲಾವಿದ’. ಈತ ತೊಣಚು, ಬೆಣಚು, ನುಣುಪು, ಬಳಪ, ಗ್ರಾನೈಟ್… ಹೀಗೆ ಸಿಕ್ಕ ಕಲ್ಲುಗಳನ್ನು ಸಮತೋಲನದಿಂದ ನಿಲ್ಲಿಸಬಲ್ಲ. ಹರಿವ ಹೊಳೆ ಸಮೀಪವೂ ಅಂಟು ಹಚ್ಚದೆ ‘ಲಗೋರಿ’ ಗೋಪುರ ಕಟ್ಟುವ ಕಲೆ ಇವನಿಗೆ ತಿಳಿದಿದೆ. ಇವನ ಈ ಹುಡುಗಾಟವು ಗುರುತ್ವಾಕರ್ಷಣ ಶಕ್ತಿಗೆ ಸವಾಲಾಗಿದ್ದು, ಇವನ ‘ಸ್ಟೋನ್ ಬ್ಯಾಲೆನ್ಸಿಂಗ್’ ಬುದ್ಧಿಗೆ ಭುವಿ ಮಣಿದು ‘ಭೌತಶಾಸ್ತ್ರ’ ಶರಣಾದಂತಿದೆ.
ಕಲ್ಗಲಾವಿದ

‘ಗ್ರಾವಿಟಿ ಗ್ಲೂ’ ಹೆಸರಿನ ಈ ಕಲೆಯನ್ನು ೫ ವರ್ಷಗಳಿಂದ ಅಭ್ಯಾಸ ಮಾಡಿ ಪಳಗಿದ್ದಾನೆ.ಅಪೇಕ್ಷೆ ಪಟ್ಟವರಿಗೆ ಗುರುವಂತೆ ಕಲಿಸುತ್ತಿದ್ಧಾನೆ. ವಿಶ್ವದ ಏಕಮಾತ್ರ ಪರಿಣಿತ ಗ್ರಾವಿಟಿ ಗ್ಲೂ ಆರ್ಟಿಸ್ಟ್ ಇವನು. ವಸ್ತುಗಳು ಕೂರಲು ಮೂರು ಬಿಂದುಗಳು ಸಾಕಂತೆ. ಅದನ್ನು ಗುರುತಿಸಿ, ಜೋಡಿಸಿದರೆ ಭೂ ಸೆಳೆತಕ್ಕೂ ಬೀಳದು ಎಂಬುದು ಗ್ರಾಬ್ ಅರಿತಿರುವ ಸತ್ಯ. ಇದು ಎಲ್ಲರಿಗೂ ಗೊತ್ತು. ಆದರೆ ಅಳವಡಿಸುವಲ್ಲಿ ವಿಫಲರಾಗಿದ್ದಾರೆ. ಗ್ರಾಬ್ನ ಕಲ್ಗಲೆ ಕಲ್ಲಾಟವಿರಬಹುದು-ಕಳ್ಳಾಟವಲ್ಲ. ಗ್ರಾಬ್ ನಮ್ಮಲ್ಲಿಗೂ ಬಂದರೇ ಒನ್ಮಿಟ್ ಗೇಮ್ ಅಲಿಯಾಸ್ ಸೂಪರ್ ಮಿನಿಟ್ಗಳಲ್ಲಿ ಭಾಗವಹಿಸಿದರೆ ಇವನಿಗೇ ಪ್ರಶಸ್ತಿ ಖಚಿತ. ಇವನು ಬರುವ ಸೂಚನೆ ಹಿಡಿದೋ ಏನೋ… ಚಿತ್ರನಟ ಗಣೇಶ್ ಸೂಪರ್ ಮಿನಿಟ್ನಿಂದ ಸೂಪರ್ ಆಗಿ ಕಣ್ಮರೆಯಾಗಿರಬೇಕು!
‘ತಲೆ ಹೋಕರು’

ಇವರನ್ನು ತಲೆಹೋಕರು ಎನ್ನಲು ಅಡ್ಡಿಯಿಲ್ಲ! ಅಥವಾ ಹಾಗೆಂದರೆ ಅವರಿಗೆ ಕೋಪವೂ ಬಾರದು. ಯಾಕೆ ಅವರಿಗೆ ಅವರಿಗೆ ಕನ್ನಡ ಬರುವುದಿಲ್ವಾ? ಹೌದು! ಆದರೆ ಆ ಕಾರಣಕ್ಕೆ ಅವರನ್ನು ತಲೆ ಹೋಕರು ಎನ್ನುತ್ತಿಲ್ಲ. ಬದಲಿಗೆ ಅವರು ಆಡುತ್ತಿರುವ ಆಟ ‘ತಲೆಊoಚಿx’ ಆಗಿದೆ. ಅಂದರೆ ‘ಊeಚಿಜ ಊoಚಿx’ ಏನದು ಹೆಡ್ ಹೋಕ್ಸ್ ಆಟ? ಎರಡು ಮೀಟರ್ ಉದ್ದ, ೧೬ ಸೆಂ.ಮಿ. ಅಗಲ. ಎರಡು ಸೆಂ.ಮೀ. ದಪ್ಪ ಮತ್ತು ೩-೪ ಕಿಲೋ ಗ್ರಾಂಗಳ ತೂಕದ ಹಲಗೆ ತಲೆಯಮೇಲೆ ಹೊರಬೇಕು. ಎದುರಾಳಿ ಆಟಗಾರನಿಗೂ ಡಿಟೋ…ಡಿಟೋ…. ಅಲ್ಲದೆ ಇಬ್ಬರೂ ತಮ್ಮ ತಲೆಯ ಮೇಲಿನ ಹಲಗೆಯನ್ನು ಬೀಳಿಸಿಕೊಳ್ಳದೆ ಪ್ರತಿಸ್ಪರ್ಧಿಯ ಹಲಗೆಯನ್ನು ಕೆಡವಬೇಕು.
ಹೀಗಾಡುವಾಗ ಕೈಗಳನ್ನು ಬಳಸಬಾರದು-ನಿಯಮ ಸರಳ. ನೋಡುಗರಿಗೆ ಮೋಜು ಆಡುವವರಿಗೆ ಅಪಾಯವಿದೆ. ಅದರಲ್ಲೂ ನೆತ್ತಿಯ ಮೇಲಿನ ಬ್ಯಾಲೆನ್ಸ್ ಇಲ್ಲದಿದ್ದಾಗ, ಹಲಗೆ ಕಾಲಿನ ಮೇಲೆ ಬಿದ್ದರೆ ಬೆರಳಿನ ಮೂಳೆಗಳು ಲಟಕ್ ಎನ್ನಲಿದೆ. ಡಬ್ಬಲ್ಸ್ ಆಡುವಾಗ ಇನ್ನಷ್ಟು ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಇನ್ನಷ್ಟು ಮೂಳೆಗಳು ಮುರಿದಾವು. ಹಗೆತನಕ್ಕಿಂತಲೂ ‘ಹಲಗೆತೋಲನ’ವಿದ್ದವರು ಗೆದ್ದಾರು. ಈ ಚೇಷ್ಟೆಯಾಟಕ್ಕೆ ‘ವುಡ್ಕಾಪ್ಫ್’ ಎನ್ನುವ ಹೊಸ ಹೆಸರೂ ಇದೆ.ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೇ ಮಿಕ್ಸೆಡ್ ಡಬಲ್ಸ್ಗಳಲ್ಲಿ ಈ ಕ್ರೀಡೆಯನ್ನು ಆಡಬಹುದು. ‘ತಲೆ ಪ್ರತಿಷ್ಠೆ’ವುಳ್ಳವರು ಈ ಆಟವಾಡಲು ಝೆಕ್ ಗಣರಾಜ್ಯಕ್ಕೆ ತೆರಳಬೇಕು. ಅಲ್ಲಿ ‘ವುಡ್ಕಾಪ್ಫ್’ ರಾಷ್ಟ್ರಮಟ್ಟದ ಕ್ರೀಡೆಯಾಗಿದೆ.
ಟೊಂಟಾಟೊ

ಹೊಟ್ಟೆಬಾಕ ಮನುಷ್ಯರಿಗೆ ಎಷ್ಟೊಂದು ವಿಧದ ತರಕಾಗಿಗಳಿದ್ದರೂ ಸಾಲದು! ಎಲ್ಲವನ್ನೂ ತಿಂದು ಹಾಕುತ್ತಾರೆ. ಅಷ್ಟೇ ಆಗಿದ್ದರೆ ಹಾಳಾಗಿ ಹೋಗಲಿ ಎನ್ನಬಹುದಿತ್ತು. ಬಿ.ಟಿ. ತಂತ್ರಜ್ಞಾನದಲ್ಲಿ ತರಕಾರಿಯ ಸಿಪ್ಪೆಯಿಂದಲೇ ಗಿಡಬೆಳಸಿ ಫಲ ತೆಗೆದ ಉದಾಹರಣೆಗಳೂ ಇವೆ. ಇದೀಗ ಮಿಶ್ರತಳಿಗಳನ್ನು ಬೆಳೆಸಲು ಹೊರಟಿದ್ದಾನೆ. ಅದರ ಫಲವಾಗಿಯೇ ಬಂದಿದೆ ಟೊಂಟಾಟೋ! – ಕಾಂಡದಲ್ಲಿ ಟೊಮ್ಯಾಟೋ ಅರಳಿದರೆ ಬುಡದಲ್ಲಿ ಪೊಟ್ಯಾಟೊ ಮೂಡಲಿದೆ. ಹಾಗೆಂದು ಇದು ಬಯೋಟೆಕ್ನಾಲಜಿ ಅಥವಾ ಕುಲಾಂತರಿಯಲ್ಲ. ಸ್ವಾಭಾವಿಕವಾಗಿಯೇ ಕಸಿ ಮಾಡಿ ಕೃಷಿ ಮಾಡಲಾಗಿದೆಯಂತೆ.
ಮಾಮೂಲಿ ಟೊಮ್ಯಾಟೋ ಮತ್ತು ಆಲೂಗಡ್ಡೆಯ ರುಚಿಯೇ ಇದೆ. ಟೊಮ್ಯಾಟೋ ಇಳುವರಿ ಅಧಿಕ. ಗಿಡವೊಂದರಲ್ಲಿ ೫೦೦ರವರೆಗೂ ಫಲ ನಿರೀಕ್ಷಿಸಬಹುದು. ಈ ಫಸಲಿಗೆ ವಿಶೇಷ ಆರೈಕೆಯ ಅಗತ್ಯವಿಲ್ಲ. ಟಮೋಟ ಗಿಡಕ್ಕೆ ಸೋಕುವ ಕೀಟ ಬಾಧೆ, ಅದೇ ರೀತಿ ಆಲೂಗಡ್ಡೆಗೆ ಗಿಡವನ್ನು ಕಾಡುವ ಹುಳುಗಳು ಟೊಂಟಾಟೊವನ್ನು ಕಾಡುತ್ತದೆಯೇ? ಎಂಬುದು ಪತ್ತೆಯಾಗಿಲ್ಲ. ಒಂದು ವೇಳೆ ಕಾಡಿದರೆ? ಸ್ವಾಭಾವಿಕ ಗಿಡ ಎನ್ನಲು ಅಡ್ಡಿಯಿಲ್ಲ. ಕಾಡದಿದ್ದರೆ? ಹುಳುವೂ ಸೇವಿಸದ ತರಕಾರಿಯನ್ನು ‘ಹುಳು-ಮಾನವರು’ ತಿನ್ನಬೇಕಾ ಎಂಬ ಪ್ರಶ್ನೆಮೂಡುತ್ತದೆ. ಬ್ರಿಟನ್ನ ಥಾಂಪ್ಸನ್ ಮತ್ತು ಮೋರ್ಗಾನ್ ತೋಟಗಾರಿಕಾ ಸಂಸ್ಥೆಯವರ ಜಂಟಿಯತ್ನವಿದು. ಮನುಜರ ‘ಒನ್ ಟೇಕ್ ಒನ್ ಫ್ರೀ’ ತೆವಲಿಗೆ ಪ್ರಕೃತಿಯಲ್ಲಿನ ತರಕಾರಿ ಗಿಡಗಳೂ ಬಾಗುತ್ತಿವೆಯಲ್ಲವೇ?
ಪ್ರಾಣಿ ಪವಡಿಸುವ ಪುರುಷ…
ಈತ ದೂರದಲ್ಲಿ ನಿಂತು ಚುಚ್ಚು ಮದ್ದನ್ನು ‘ಇಂಜಕ್ಷನ್ ಗನ್’ ಮೂಲಕ ಪ್ರಾಣಿಗಳಿಗೆ ಶೂಟ್ ಮಾಡುವುದಿಲ್ಲ. ಅಥವಾ ಪುಡಿ ತೂರುವುದಿಲ್ಲ. ಮಾಟವಿಲ್ಲ, ತಂತ್ರವಿಲ್ಲ, ಮಂತ್ರವಿಲ್ಲ… ತನ್ನ ಬಲಗೈ ಬೆರಳುಗಳನ್ನು ಆಡಿಸುತ್ತಾ… ಹೋದಂತೆ… ಪ್ರಾಣಿಗಳು ನಿಧಾನವಾಗಿ ಪವಡಿಸುತ್ತವೆ. ಸಿಂಹ, ಜಿಂಕೆ, ಹೆಗ್ಗಣ, ಆನೆ, ಕುರಿಮಂದೆ, ಅಳಿಲು… ಹೀಗೆ ಎಲ್ಲವೂ ಇವನ ಬೆರಳ್ ಸನ್ನೆಗೆ ತಾಚಿಮಾಡುತ್ತವೆ. ಇವನೇ ಪಳಗಿಸಿದ ಪ್ರಾಣಿಗಳು ಇವನ ಸನ್ನೆಯನ್ನು ಅರಿತು ನಿದ್ದೆಗೆ ಜಾರುತ್ತಿರಬೇಕು… ಸರಿಯಾಗಿ ನೋಡಿ ಬರೆಯಿರಿ.ಇಲ್ರೀ…ಇವನು ಜೀವನದಲ್ಲಿ ಕಂಡೇ ಇರದ ಅಮೆರಿಕದ ಮೃಗಾಲಯಕ್ಕೆ ಕರೆದೊಯ್ದು, ಪ್ರಾಣಿಗಳನ್ನು ಮಲಗಿಸುವಂತೆ ಸೂಚಿಸಲಾಯಿತು. ಬೆರಳು ಆಡಿಸುತ್ತಾ ಹೋದಂತೆ ಒಂದೊಂದೇ … ಪ್ರಾಣಿಗಳನ್ನು ಈತ ಮಲಗಿಸಿಬಿಟ್ಟ.
ಪರ್ಮನೆಂಟ್ ಆಗಿ ಮಲಗುತ್ತವಾ? ಇಲ್ಲ. ಇವನು ದೂರ ಸರಿಯುತ್ತಾ ಹೋದಂತೆ… ಅವು ಎಚ್ಚರಗೊಂಡು ಎಂದಿನ ಚಟುವಟಿಕೆಯಲ್ಲಿ ತೊಡಗುತ್ತವೆ. ಹಾಗೆಂದು ಎಲ್ಲಾ ವೇಳೆಯಲ್ಲೂ ‘ಪವಡಿಸುವ’ ಪುರುಷನಾಗಿಲ್ಲ. ಫೇಲ್ ಕೂಡ ಆಗಿದ್ದಾನೆ. ಗಮನ ತಪ್ಪಿದಾಗ ಹೀಗಾಗುವುದೆಂದು ಹೇಳುವನು. ಆದರೆ ಬಹುತೇಕ ಪ್ರಯೋಗಗಳಲ್ಲಿ ಸಫಲವಾಗಿದ್ದಾನೆ. ಕಾಂಜ್ವಾಸೆನ್ಸಿ ಹೆಸರಿನ ಈತನಿರುವುದು ಜಪಾನ್ನಲ್ಲಿ. ಈತನ ಬೆರಳ್ವಿದ್ಯೆಗೆ ಚಿ ಅಥವಾ ಕ್ವಿ ಎನ್ನುತ್ತಾರೆ. ಇದೊಂದು ಪುರಾತನ ವಿದ್ಯೆಯಂತೆ. ಅದರಲ್ಲಿ ಕಾಂಜ್ವಾದು ಪಳಗಿದ ‘ಹಸ್ತ’. ಅಲ್ಲ ಪಳಗಿದ ಬೆರಳು. ಪ್ರಾಣಿಗಳ ಮೇಲೆ ವರ್ಕ್ ಆಗುವ ಇವನ ಬೆರಳ್ವಿದ್ಯೆ ಮನುಷ್ಯರ ಮೇಲೂ ಆಗುತ್ತಾ? ಗೊತ್ತಿಲ್ಲ. ಮನುಷ್ಯರಿಗೆ ಬೆರಳ್ ತೋರಿಸಿದರೇ…ಹಸ್ತನೇ ನುಂಗಿಬಿಡುವ ಅಪಾಯಗಳಿವೆ!
ಕಣ್ಣೊರೆಸೋ ಬ್ಯುಸಿನೆಸ್ಸು

‘ಅಂಬಲಿ ಕುಡಿಯೋನಿಗೆ ಮೀಸೆ ತಿರುವೋರು ಆರು ಜನ!’ ಅನ್ನುವಂತೆ ಅಳೋ ಹೆಣ್ಣಿನ ಕಣ್ಣೊರೆಸಲು ಆರುಜನ ಅನ್ನುವ ಸುದ್ದಿ ಇಲ್ಲಿದೆ… ಸ್ತ್ರೀಯರ ಸಂಕಟನೀಗಿಸಿ, ಅವರ ಕಣ್ಣೀರ ಒರೆಸುವ ಕೆಲಸವನ್ನು ‘ಇಕೆಮಿಸೊ’ ಅಲಿಯಾಸ್ ಸ್ಪುರದ್ರೂಪಿ ಗಂಡುಗಳು ಮಾಡುತ್ತಾರೆ. ಈ ಘನಾಂಧಾರಿ ಕಾರ್ಯ ಮಾಡಲು $೬೫ ನೀಡಬೇಕು. ಹೆಣ್ಣಿನ ಕಣ್ಣೀರಿನ ಬೆಲೆ ಇಷ್ಟೇನಾ? ಹಾಗೇನೂ ಇಲ್ಲ. ಅಳು ನೀಗಿಸಿದ ಪುರುಷನಿಗೆ ಇನ್ನೂ ಹೆಚ್ಚಿನ ರೊಕ್ಕಕೊಟ್ಟರೂ ಅವರು ಮುಲಾಜಿಲ್ಲದೆ ಪಡೆಯುತ್ತಾರೆ. ಎಲ್ಲಾ ಓ.ಕೆ. ಹೆಂಗಸರು ಅಳುವುದೇಕೆ? ಜಪಾನಿನ ವರ್ಕಿಂಗ್ ಲೇಡಿಗಳಿಗೆ ಕೆಲಸದ ಒತ್ತಡ ಅಧಿಕ. ಗುರಿ ಮೀರಿದ ಟಾರ್ಗೆಟ್ಗಳಿರಲಿವೆ. ಅದನ್ನು ನೀಗಿಕೊಳ್ಳಲು ಅಳುತ್ತಾರೆ. ಹಾಗೆ ಅಳು ಬಂದಾಗ ಇವರಿಗೆ ಕರೆ ಮಾಡಿದರೆ ಈ ಆಳುಗಳು ಬಂದು ‘ಅಳು’ ಅಳಿಸಿ ಹಾಕುತ್ತಾರೆ!
ಅಳುವ ಹೆಣ್ಣಿನ ಕಣ್ಣೀರು ಒರೆಸಿ, ತಮಗೆ ತೋಚಿದ ರೀತಿಯಲ್ಲಿ ಸಮಾಧಾನ ಮಾಡುತ್ತಾರೆ. ಧೈರ್ಯ ತುಂಬುತ್ತಾರೆ. ಕಷ್ಟ ಎದುರಿಸುವುದನ್ನು ಹೇಳುತ್ತಾರೆ. ಇವರು ಬರುತ್ತೇವೆಂದು ಕೈ ಕೊಟ್ಟರೆ ಹೇಗೆ? ಅಳುವ ಹೆಣ್ಣಿನ ರೋದನೆ ಹೆಚ್ಚಾಗಬಹುದು. ‘ವನಿತೆ ನೀನು ಅತ್ತರೆ ನಮ್ಮ ಬಾಯಿ ಸಕ್ಕರೆ…’ಎಂದು ಹಾಡುವ ಆರು ಇಕೆಮಿಸೊಗಳು ಅಲ್ಲಿನ ಅಳುಬುರುಕಿಯರ (ಗ)ಮನ ಸೆಳೆದಿದ್ದಾರಂತೆ. ‘ಅಳೊ ಹೆಂಗಸರನ್ನು ನಂಬಿದರೂ, ಕಣ್ಣೊರೆಸುವ ಗಂಡುಗಳನ್ನು ನಂಬಬಾರದು’ ಅನ್ನೋ ಗಾದೆಮಾತು ಸದ್ಯಕ್ಕಂತೂ ಕೇಳಿ ಬಂದಿಲ್ಲ.
ಅದೆಂಥಾ ಶಕ್ತಿ!
ಕೆಲವರು ವರ್ಷಕ್ಕೊಂದು ಮಗುವಿಗೆ ಜನ್ಮ ನೀಡುವಂತೆ ಮಾಡಿ ತಮ್ಮದೇ ನಿಜವಾದ ‘ಶಿಶ್ನ’ದ ತಾಕತ್ತು ಎನ್ನುತ್ತಾರೆ. ಇನ್ನು ಕೆಲವರು ದೂರದವರೆಗೆ ಸಿಡಿಯುವಂತೆ ಮೂತ್ರ ಸಿಂಪಡಿಸಿ ದೌಲತ್ತು ತೋರುತ್ತಾರೆ. ಇದೇ ಅಂಕಣದಲ್ಲಿ ಮಣಘಾತ್ರ ಶಿಶ್ನ ಹೊಂದಿದ್ದವನ ಕುರಿತು ದಾಖಲಿಸಿದ್ದೆವು. ಅದರೆ ಅದ್ಯಾವುದೂ ‘ತಾಕತ್ತಲ್ಲ’ ಅನ್ನುವ ಸತ್ಯ ಈ ಸಂತನಿಂದ ಬಹಿರಂಗವಾಗಿದೆ! ಈ ಸನ್ಯಾಸಿ ತನ್ನ ಸ್ವಂತ ಅಂಗದಿಂದ ಕಾರ್ ಎಳೆದು ಅಚ್ಚರಿ ಮೂಡಿಸಿದ್ದಾನೆ. ಎಲ್ಲಿದ್ದಾನೆ ಈ ಶಿಶ್ನ ಸಂತ? ಅದೆ ರೀ… ಗಂಗಾ, ಯಮುನಾ ಸರಸ್ವತೀ ನದಿಗಳ ಸಂಗಮದಲ್ಲಿ ಈ ಸಾಧು ಕಂಡ. ಅಲಹಾಬಾದ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಇವನ ಶಿಶ್ನ ಮೇಳ ನಡೆಯಿತು!
ತನ್ನ ಶಿಶ್ನಕ್ಕೆ ಹಗ್ಗ ಬಿಗಿದುಕೊಂಡು ಕೆಲ ಮೀಟರ್ಗಳಷ್ಟು ಕಾರ್ ಎಳೆದು ಇದೇ ನೋಡ್ರೋ ನನ್ನ ತಾಕತ್ತು ಎಂದ. ಎಲ್ಲಿ ಉದುರಿ ಬೀಳತ್ತೋ ಅನ್ನೋ ಕಾತುರ ಹಲವರಿಗಿತ್ತು! ಆದರೆ ಅಂಥಾದ್ದೇನೂ ಆಗಲೇ ಇಲ್ಲ. ಒಂದೆರಡು ನಿಮಿಷದ ವಿಶ್ರಾಂತಿಯ ನಂತರ ಈ ಸಂತ ತೆರಳಿದ. ಈ ನಾಗಾ ಸಾಧುವಿನ ತಾಕತ್ತಿನ ಪೋಟೊಗಳು ಅಂತರಜಾಲದಲ್ಲಿ ಜಾಲಾಡುತ್ತಿದ್ದು ವಿಶ್ವಾದ್ಯಂತ ವೈರಲ್ ಆಗಿದೆ. ಕುಂಭಮೇಳಕ್ಕೆ ಹಲವರು ಇದೇ ಕಾರಣಕ್ಕೆ ಮುಗಿಬಿದ್ದು ಹೋಗ್ತಾರೋ ಏನೋ…?! ಪುರುಷರೆಲ್ಲರಿಗೂ ಇದೇ ರೀತಿಯ ತಾಕತ್ತಿನ ಶಿಶ್ನವಿದ್ದರೆ…? ಕಾರ್ಎಳ್ಕೊಂಡು ಓಡಾಡಬಹುದು… ಆದರೆ ಮಕ್ಕಳು ಮರಿ ಆಗತ್ತೋ ಇಲ್ಲವೋ ಡೌಟು!
ಬಿತ್ತಿದರೆ ಬೆಳೆಯುವ ಬರಹದ ಕಡ್ಡಿ
ಈ ಸುದ್ದಿಯನ್ನು ಅಕ್ಷರ ಕೃಷಿ ಎನ್ನಲು ಅಡ್ಡಿಯಿಲ್ಲ. ಬರೆಯುವ ಪೆನ್ಸಿಲನ್ನು ಬೇಡವೆನಿಸಿದಾಗ ಬಿತ್ತಿ, ನೀರೆರದರೆ ಮೊಳಕೆಯೊಡೆದು ಕೊತ್ತಂಬರಿ, ಮೆಣಸು, ಪುದೀನ ಗಿಡವಾಗಲಿದೆ. ಜೋಕಾ? ಇಲ್ರೀ… ಸತ್ಯವಾಗಿ ಪೆನ್ಸಿಲ್ ತುಂಡು ಆದಾಗ ಬಹಳಷ್ಟು ಮಕ್ಕಳು/ಪೋಷಕರು ಅದನ್ನು ಎಸೆಯುತ್ತಾರೆ. ಅನಗತ್ಯವಾಗಿ ಇವುಗಳು ಕಸದ ತೊಟ್ಟಿ ಸೇರುತ್ತಿವೆ. ಇಂತಹ ಪೆನ್ಸಿಲ್ಗಳ ಬದಲು ಮರುಬಳಕೆಯ ಬರಹದಕಡ್ಡಿಗಳನ್ನು ವಿಜ್ಞಾನಿಗಳು ಅವಿಷ್ಕರಿಸಿದ್ದಾರೆ. ಅಮೆರಿಕದ ಮ್ಯಾಸುಚೆಸ್ಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಯೋಗವಿದು. ಇವರ ಆವಿಷ್ಕಾರದ ಬರಹದಕಡ್ಡಿಯಲ್ಲಿ ಸೀಸ ಇರದು. ಆದರೆ ಗ್ರಾಫೈಟ್ ಇದ್ದು ಸೊಗಸಾಗಿ ಬರೆಯಬಹುದು.
ಈ ಬರಹದಕಡ್ಡಿಯಲ್ಲಿ ಗ್ರಾಫೈಟ್ ಮಾತ್ರವಲ್ಲದೆ ಮೃತ್ತಿಕೆಗಳು, ಸೂಕ್ಷ್ಮ ಕಣದ ಬೀಜಗಳಿರಲಿದೆ. ಬೇಡವೆನಿಸಿದಾಗ ನೆಟ್ಟು ನೀರುಣಿಸಿದರೆ ಟೊಮೊಟಾ, ಮೆಣಸು, ತುಳಸಿ, ಕೊತ್ತಂಬರಿ, ಪುದೀನ, ರೊಸ್ಮೆರಿ…ಇಪ್ಪತ್ತು ಬಗೆಯ ಗಿಡಗಳು ಟಿಸಿಲೊಡೆಯಲಿವೆ. ನೀರೆರದು ಬೆಳೆಸಿದಲ್ಲಿ ಮನೆಗಿಷ್ಟು ಕಾಯಿಪಲ್ಲೆಗಳು ಲಭ್ಯ. ಇಷ್ಟೆಲ್ಲಾ ತರಕಾರಿ ಇರುವುದರಿಂದ ಅಗತ್ಯವೆನಿಸಿದಾಗ ಚೆನ್ನಾಗಿ ನೆನಸಿ ಬೇಯಿಸಿ ತರಕಾರಿಯಾಗಿ ಬಳಸಬಹುದೇ? ಗೊತ್ತಿಲ್ಲ. ಅದು ಸಂಭವಿಸಿದರೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳ ಪೆನ್ಸಿಲ್ಗಳೆಲ್ಲಾ ಬಿಸಿಯೂಟದ ಭಾಗವಾಗಿ ಉದರ ಸೇರುವ ಅಪಾಯವಿದೆ! ಅದೆಲ್ಲಾ ಏನಾದರೂ ಇರಲಿ ರೀ…ಪ್ರಯೋಗ ಮುಂದುವರೆದರೆ ಮುಂದೊಂದು ದಿನ ಒನಕೆ ಬಿತ್ತಿ ಮರವನ್ನೇ ಬೆಳೆಸುತ್ತ್ತಾರೋ ಏನೋ?
ಚಕ್ರಗೋಷ್ಠಿ

ಇವರನ್ನು ಏಕ ಚಕ್ರಾಧಿಪತಿಗಳು – ಚಕ್ರ’ವಾಕ್’ರೆನ್ನಬಹುದು. ಆದರೆ ಅಷ್ಟಕ್ಕೆ ಮಾತ್ರ ಇವರು ಸೀಮಿತರಲ್ಲ. ದೊಡ್ಡ ಚಕ್ರವೊಂದರಲ್ಲಿ ೬ ಜನ ಕೂತು ವಾದ್ಯಗೋಷ್ಠಿ ನಡೆಸುತ್ತಾರೆ. ಇದನ್ನು ಚಕ್ರಗೋಷ್ಠಿ ಎನ್ನಲು ಅಡ್ಡಿಯಿಲ್ಲ. ‘ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು’ ಎಂಬುದನ್ನು ಇವರಿಗೆ ಅನ್ವಯಿಸಿ ಹೇಳಬಹುದು! ಏಕೆಂದರೆ ಎಲ್ಲಾ ೬ ಕಲಾವಿದರು ವಾದ್ಯವನ್ನೂ ನುಡಿಸಬೇಕು ಜೊತೆಗೆ ಈ ಚಕ್ರದ ಪೆಡಲ್ ತುಳಿಯಬೇಕು. ಅಲ್ಲದೆ ಕೂತಲ್ಲೇ ಮೇಲೆ-ಕೆಳಗೆ ಅಲುಗಾಡುತ್ತಾ ಅಥವಾ ಅಪ್ಪಾಳೆ ತಿಪ್ಪಾಳೆ ಆಡುತ್ತಿರಬೇಕು. ಒಬ್ಬ ಡ್ರಮ್ಸ್, ಮತ್ತೊಬ್ಬ ಸ್ಯಾಕ್ಸೋಫೋನ್, ಮಗದೊಬ್ಬ ಗಿಟಾರ್…. ಹೀಗೆ ಆರು ವಾದ್ಯಗಳು… ಎಲ್ಲರೂ ಒಂದೇ ಚಕದ್ರದಲ್ಲೇ ಸಾಗುತ್ತಾರೆ.
ಒಬ್ಬರು ಏರು ಪೇರು ಮಾಡಿದರೂ ಒಟ್ಟಾರೆ ಚಕ್ರದ ಬ್ಯಾಲೆನ್ಸ್ ತಪ್ಪಲಿದೆ. ಅಂತೆಯೇ ನುಡಿಸುವ ವಾದ್ಯದ ರಾಗ-ತಾಳ ಬದಲಾದರೂ ಕೇಳುಗರಿಗೆ ಅಭಾಸವಾಗಲಿದೆ. ಹೀಗೆ ಬ್ಯಾಲೆನ್ಸ್ ಮ್ಯೂಸಿಕ್ ಮಾಡುತ್ತಿರುವುದು ನಿಜಕ್ಕೂ ಸೋಜಿಗ. ಸುಮಾರು ೪ಮೀಟರ್ ಎತ್ತರ-೧೫ ಸೆಂ.ಮೀ ಅಗಲದ ಏಕಚಕ್ರದ ರಥಾವರ ಸಾಗಿದರೆ ಇವರ ಬದುಕು ಸಾಗಲಿದೆ. ಜಾತ್ರೆ, ಶಾಪಿಂಗ್ಮಾಲ್ಗಳ ಬಳಿಯಲ್ಲಿ ಇವರ ಕಮಾಲ್ ಬಲುಜೋರಾಗಿದೆ. ಬಾರ್ಸಿಲೋನಕ್ಕೆ ತೆರಳಿದರೆ ಕಿವಿಯಾರೆ ಚಕ್ರಗೋಷ್ಠಿಯನ್ನು ಆಲಿಸಬಹುದು. ಕಣ್ಣಾರೆ ತುಂಬಿಕೊಳ್ಳಬಹುದು. ಹೀಗೆ ಬೀದಿ ಬೀದಿ ತಿರುಗಿ ಕಷ್ಟಪಟ್ಟು ರೊಕ್ಕ ಎತ್ತುವ ಬದಲು ಮೈ ಬಗ್ಗಿಸಿ ದುಡಿಯಬಹುದಲ್ಲವೇ? ಇಲ್ಲ… ಇದೇ ನಮ್ಮ ವೃತ್ತಿ ಎನ್ನುತ್ತಾರೆ ಈ ಏಕ್ರಾಧಿಪತಿಗಳು.
ಕಣ್ಣೀರು ತರಿಸದ ನೀರುಳ್ಳಿ….

ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರಬಾರದೆಂದರೇ ? ಹೆಲ್ಮೆಟ್ ಧರಿಸಿರಬೇಕು. ಇಲ್ಲಾ ಅಂದ್ರೆ ಹೆಚ್ಚುವ ಮುನ್ನ ಚೆನ್ನಾಗಿ ಬೇಯಿಸಿ, ಕಿಟಕಿ ಬಾಗಿಲು ತೆಗೆದು ಮೇಲೆ ಫ್ಯಾನ್ ಹಾಕಿ ಹೆಚ್ಚಿದರೆ ಕಣ್ಣೀರು ಬಾರದು. ಆ ಸರ್ಕಸ್ಗಳಿಲ್ಲದೆ ಈ ಈರುಳ್ಳಿ ಹೆಚ್ಚಿದರೂ ಕಣ್ಣೀರು ಬಾರದು… ಜಪಾನ್ನ ಹೌಸ್ ಫುಡ್ ಗ್ರೂಪ್ಸ್ ಸಂಸ್ಥೆಯ ಈ ತಳಿಗಳಲ್ಲಿ ಕಣ್ಣೀರುತರಿಸುವ ಕಿಣ್ವಗಳು(eಟಿzಥಿmes) ಇರದು. ಘಾಟು ಕಡಿಮೆ. ರುಚಿ ಸೂಪರ್. ದಶಕ ಮೀರಿದ ಪರಿಶ್ರಮಕ್ಕೆ ಈ ಉಳ್ಳಾಗಡ್ಡಿ ಜನ್ಮಿಸಿದೆಯಂತೆ. ಆದರೂ ಪೂರ್ಣ ಪ್ರಮಾಣದ ಯಶಸ್ವು ದೊರೆತಿಲ್ಲವಂಥೆ.
ಅರೆ ನಮ್ಮ ಬಳ್ಳಾರಿ ಈರುಳ್ಳಿ ಕೂಡ ಹೆಚ್ಚುತ್ತಿದ್ದರೆ ಕಣ್ಣೀರು ಬರದಲ್ಲವೇ? ಇಲ್ಲ. ಇದು ಸಂಶೋಧಿತ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿದ್ದು, ಬಳ್ಳಾರಿ ಈರುಳ್ಳಿಗಿಂತಲೂ ಕಣ್ಣೀರು ತರಿಸದ ಉತ್ತಮ ಈರುಳ್ಳಿಯಾಗಿದೆ. ಮಾಮೂಲಿ ಈರುಳ್ಳಿಗಳಂತೆ ಇದು ಹೆಚ್ಚುಕಾಲ ಇರದು. ಗಿಡದಿಂದ ಕೊಯ್ದು ೧-೨ ದಿನಗಳಲ್ಲೇ ತಿಂದು ಹಾಕಬೇಕು. ಇದನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆದು ಮಾರಾಟ ಮಾಡಬಹುದಲ್ಲವೇ? ಹೌದು… ಅಂತಹ ಪ್ರಯೋಗಗಳು ನಡೆಯುತ್ತಲೇ ಇವೆ. ಆದರೆ ಅದೆಲ್ಲವೂ ಪ್ರಯೋಗಾಲಯದ ವ್ಯಾಪ್ತಿಯಿಂದ ಹೊರಗೆ ಬಂದಿಲ್ಲ. ಹೋಗಲಿ ಕಣ್ಣೀರು ತರಿಸದ ಈರುಳ್ಳಿಯ ಇಂಧಿನ ಧಾರಣೆ ಏನು? ರೇಟ್ ಮಾತ್ರ ಕೇಳಬೇಡಿ…ಕಣ್ಣೀರು ತರಿಸಲಿದೆ!
‘ಬ್ರಾ’ಂತಿ!
ಗಂಡು ಬ್ರಾ ತೊಟ್ಟು ಕ್ರಾಂತಿ ಮಾಡುವೆನೆಂದರೆ ಅದನ್ನು ‘ಬ್ರಾ’ಂತಿ ಎನ್ನಬಹುದು. ಈ ‘ಬ್ರಾ’ಂತಿಯೇ ಆಸ್ಟ್ರೇಲಿಯಾದಲ್ಲಿ ಕ್ರಾಂತಿಯಾಗಿದೆ. ಇದಕ್ಕೆ ಕಾರಣವಾಗಿರುವುದು ಗಂಡುಗಳ ಫ್ಯಾನ್ಸಿ ಬ್ರಾಗಳು. ಹಾಗೆಂದು ಇದನ್ನೇನು ಗಂಡುಗಳಿಗೆ ವಿಶೇಷವಾಗಿ ನೇಯ್ದು, ಕಸೂತಿ ಮಾಡಿ ಎದೆಗೆ ತೊಡಿಸಿಲ್ಲ. ಬದಲಿಗೆ ಮಹಿಳೆಯರ ಬ್ರಾಗಳನ್ನೇ ಗಂಡುಗಳ ಎದೆ ಮೇಲೆ ಹಾಕಿಸುತ್ತಿದ್ದಾರೆ. ಗುಂಡ್ರುಗೋವಿಗಳು ಇದನ್ನು ಧರಿಸಿ ಥ್ರಿಲ್ ಅನುಭವಿಸುತ್ತಿದ್ದಾರೆ.
ಹೊಮೆಮಿಸ್ಟರ್ ಕಂಪೆನಿಯ ರೇಷ್ಮೆ, ನೈಲಾನ್, ಸ್ಯಾಟಿನ್ ಬಟ್ಟೆಗಳ ಬ್ರಾ , ಪ್ಯಾಂಟಿ ಧರಿಸಿದರೆ ಗಂಡುಗಳ ಉನ್ಮಾದ-ಉತ್ಸಾಹ ಹೆಚ್ಚಲಿದೆಯಂತೆ. ಅದೆಲ್ಲಕ್ಕಿಂತಲೂ ಕಾಮಹೆಚ್ಚಾಗಿ ‘ಟಪ್ಪಾಂಗುಚ್ಚಿ’ಯ ಮೂಡ್ ಬರಲಿದೆಯಂತೆ. ನೆಚ್ಚಿನ ಪ್ರಿಯತಮೆಯೇ ಮೈಮೇಲೆ ಇಳಿದಂತೆ ಆಗಲಿದೆಯಂತೆ… ಹೀಗೆ ಹಲವು ಅಂತೆ – ಕಂತೆಗಳು ಬಿಕರಿಗಿಟ್ಟ ಬ್ರಾ ಹಿಂದಿನ ಜಾಹೀರಾತುಗಳು ಮೂಡಿ ಬಂದಿವೆ. ‘ಬ್ರಾ’ಗಳ ಹಿಂದೆ ಕೈ ಚಳಕ ಇಲ್ಲದಿದ್ದರೂ ಮೈ ಪುಳಕವಾಗಲಿದೆ.
ಆಗದಿದ್ದರೇ? ಧರಿಸಿದ ಗಂಡಿನಲ್ಲಿಯೇ ‘ಮಿಸ್ಟೀಕ್’ ಇದೆ ಎನ್ನಬಹುದು! ಹೊಮೆಮಿಸ್ಟರ್ ಬ್ರಾಗಳಿಗೆ ಮಿಸ್ಟರ್ಗಳಿಂದಲ್ಲದೆ ಮಿಸೆಸ್ಗಳಿಂದಲೂ ಬೇಡಿಕೆ ಬರುತ್ತಿದೆ. ಒಟ್ಟಿನಲ್ಲಿ ಆಸ್ಟ್ರೇಲಿಯದಲ್ಲಿ ಬ್ರಾಗಳದ್ದೇ ಅ’ಬ್ರಾ’ ನಮ್ಮಲ್ಲೂ ಇಂತಹ ಬ್ರಾಗಳನ್ನು ಧರಿಸುವ ‘ಬ್ರಾ’ಂತಿ ಆರಂಭವಾದರೇ? ಉನ್ಮಾದ, ಕಾಮಾನಂದಗಳಿಲ್ಲದೆ ೧೨೫ ಕೋಟಿ ಜನ ಸಂಖ್ಯೆಯಲ್ಲಿದ್ದೇವೆ. ಇಂತಹ ಬ್ರಾಗಳು ಗಂಡುಗಳ ಮೇಲೆ ಬಿದ್ದರೆ ಮುಂದಿನ ವರ್ಷಕ್ಕೆ ನಮ್ಮ ಸಂಖ್ಯೆ ೨೦೦ ಕೋಟಿಗೇರಬಹುದು…!