ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪದಾರ್ಪಣೆ ಮಾಡಿದ ವಿರಾಟ್, ಚೊಚ್ಚಲ ಚಿತ್ರದಲ್ಲೇ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸ್ಯಾಂಡಲ್‍ವುಡ್‍ನ ಭರವಸೆಯ ನಟನ ಪಟ್ಟಕ್ಕೇರಿ ಕಲಾಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದರು. ಇದೀಗ ಭವಿಷ್ಯ ನಿಜವಾಗ್ತಿದೆ, ಕಿಸ್ ಹೀರೋ ವಿರಾಟ್‍ಗೆ ಅದೃಷ್ಟ ಖುಲಾಯಿಸ್ತಿದೆ. ಸ್ಯಾಂಡಲ್‍ವುಡ್ ಸ್ಟಾರ್ ಡೈರೆಕ್ಟರ್‍ಗಳ ಚಿತ್ರದಲ್ಲಿ ನಾಯಕನಟನಾಗಿ ಧಗಧಗಿಸುವ ಅವಕಾಶ ಸಿಗ್ತಾಯಿದೆ.
ಕಿಸ್ ಚಿತ್ರದ ನಂತರ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಮಗದೊಮ್ಮೆ ಕೈ ಜೋಡಿಸಿದ ವಿರಾಟ್, ಅದ್ಧೂರಿ ಲವ್ವರ್ ಆಗಲಿಕ್ಕೆ ಒಪ್ಪಿಕೊಂಡರು. ಆದರೆ, ಆ ಸಿನಿಮಾ ಕರೋನಾ ಹಾಗೂ ಮತ್ತಿತ್ತರೆ ಕಾರಣಗಳಿಂದ ತಡವಾಗ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ ಮಾರ್ಟಿನ್ ಚಿತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇತ್ತ ವಿರಾಟ್, ದಿನಕರ್ ತೂಗುದೀಪ್ ನಿರ್ದೇಶನದ ರಾಯಲ್ ಸಿನಿಮಾಗೆ ಹೀರೋ ಆಗಿದ್ದಾರೆ
ಅಂದ್ಹಾಗೇ, ರಾಯಲ್ ಕಥೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೋಸ್ಕರವೇ ಕೆತ್ತಿದ್ದಂತಹ ಕಥೆ. ಆದರೆ, ವಿಧಿಯ ಕೈವಾಡದಿಂದ ಅಪ್ಪುನಾ ಕಳೆದುಕೊಂಡ ಕಾರಣ ನಿರ್ದೇಶಕ ದಿನಕರ್ ತೂಗುದೀಪ್ ಅವರು ಈ ಸಿನಿಮಾನ ವಿರಾಟ್‍ಗೆ ಮಾಡ್ತಿದ್ದಾರೆ. ಜಯ್ಯಣ್ಣ, ಭೋಗೇಂದ್ರ ನಿರ್ಮಾಣದಲ್ಲಿ ರಾಯಲ್, ರಾಯಲ್ಲಾಗೇ ನಿರ್ಮಾಣಗೊಂಡಿದ್ದು ಇದೇ ವರ್ಷ ತೆರೆಗೆ ಅಪ್ಪಳಿಸುತ್ತಿದೆ.
ರಾಯಲ್ ರಿಲೀಸ್‍ಗೂ ಮೊದಲೇ ಕಿಸ್ ಹೀರೋ ವಿರಾಟ್‍ಗೆ ಮತ್ತೊಂದು ಸಿನಿಮಾ ಸಿಕ್ಕಿದೆ. ಅದು ಸ್ಟಾರ್ ಮೇಕರ್ ಸುಕ್ಕಾ ಸೂರಿ ಸಿನಿಮಾ ಎಂಬುದು ಗಮನಿಸಬೇಕಾದ ವಿಚಾರ. ದುನಿಯಾ ಸೂರಿಯವರ ಡೈರೆಕ್ಷನ್‍ನಲ್ಲಿ ಕೆಲಸ ಮಾಡಬೇಕು, ಅವರೊಟ್ಟಿಗೆ ಒಂದು ಸಿನಿಮಾ ಮಾಡಬೇಕು ಎಂಬುದು ಅದೆಷ್ಟೋ ಯವಪ್ರತಿಭೆಗಳ ಕನಸು. ಅಂತಹದ್ದೇ ಕನಸು ಕಂಡಿದ್ದ ವಿರಾಟ್ ಡ್ರೀಮ್ ಕಮ್ ಟ್ರೂ ಎನ್ನುವ ಖುಷಿಯಲ್ಲಿದ್ದಾರೆ. ರಾಯಲ್ ಸಿನಿಮಾ ಪ್ರೊಡ್ಯೂಸರ್ ಜಯಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಿರ್ಮಾಪಕರಾದ ಜಯ್ಯಣ್ಣ ಅವರು ನನ್ನ ಕರಿಯರ್ ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ರಾಯಲ್ ಬೆನ್ನಲ್ಲೇ ನಂಗೆ ಮತ್ತೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾನೆಂದೆಂದೂ ಆಭಾರಿ ಎನ್ನುತ್ತಿದ್ದಾರೆ. ಇದೇ ಮೊದಲ ಭಾರಿಗೆ ಕೈಜೋಡಿಸಿರುವ ನಿರ್ಮಾಪಕ ಜಯ್ಯಣ್ಣ ಹಾಗೂ ಸುಕ್ಕಾ ಸೂರಿಯವರು ವಿರಾಟ್‍ಗೆ ಪಕ್ಕಾ ಮಾಸ್ ಎಂಟರ್ ಟೈನರ್ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ
ದುನಿಯಾ ಸಿನಿಮಾ ಟೈಮ್‍ನಿಂದನೂ ಜಯ್ಯಣ್ಣ ಹಾಗೂ ಸೂರಿಯವರು ಒಟ್ಟಿಗೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದರಂತೆ ಆದರೆ, ಕಾಲಕೂಡಿಬಂದಿರಲಿಲ್ಲ. ಈ ಬಗ್ಗೆ ಖಾಸಗಿ ಪತ್ರಿಕೆ ಜೊತೆಗೆ ಸಂದರ್ಶನ ನೀಡಿರುವ ಡೈರೆಕ್ಟರ್ ಸೂರಿಯವರು, ದುನಿಯಾ ಸಿನಿಮಾ ರಿಲೀಸ್ ಆಗಲಿಕ್ಕೆ ಜಯ್ಯಣ್ಣ ಅವರ ಸಹಕಾರ ದೊಡ್ಡದಿದೆ. ಅನಂತರದ ದಿನಗಳಲ್ಲಿ ಬಹುತೇಕ ನನ್ನ ಸಿನಿಮಾಗಳನ್ನ ವಿತರಣೆ ಮಾಡಿ ನಂಗೆ ಬೆಂಬಲವಾಗಿ ನಿಂತಿದ್ದಾರೆ. ಇದೀಗ ಅವರೊಟ್ಟಿಗೆ ಕೈ ಜೋಡಿಸ್ತಿರುವುದಕ್ಕೆ ಖುಷಿಯಿದೆ. ದೊಡ್ಡ ಬ್ಯಾನರ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಗ್ತಿದ್ದು, ಸಿಕ್ಕಾಪಟ್ಟೆ ಎಕ್ಸೈಟ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ಹೀರೋ ವಿರಾಟ್ ಆಯ್ಕೆ ಬಗ್ಗೆ ಮಾತನಾಡಿರೋ ಸೂರಿ ಸಾಹೇಬ್ರು, ನಟನೆಯಲ್ಲಿ ಕಿಚ್ಚಿದೆ, ಅದ್ಭುತ ಪ್ರತಿಭೆಯಿದೆ ಎಂದು ಹಾಡಿಹೊಗಳಿದ್ದಾರೆ. ಬ್ಯಾಡ್‍ಮ್ಯಾನರ್ಸ್ ನಂತರ ಸಿನಿಮಾ ಟೇಕಾಫ್ ಮಾಡೋ ಬಗ್ಗೆ ತಿಳಿಸಿದ್ದಾರೆ. ಇತ್ತ ನಿರ್ಮಾಪಕರಾದ ಜಯ್ಯಣ್ಣ ಅವರು ಕೂಡ ರಾಯಲ್ ತೆರೆಗೆ ತಂದು, ವಿರಾಟ್ ಹಾಗೂ ಸೂರಿ ಜೊತೆಗಿನ ಮುಂದಿನ ಸಿನಿಮಾನ ರಾಯಲ್ಲಾಗೇ ಶುರುಮಾಡುವ ತವಕದಲ್ಲಿದ್ದಾರೆ. ಒಟ್ನಲ್ಲಿ ಕಿಸ್ ಹೀರೋಗೆ ಸ್ಟಾರ್ ಮೇಕರ್ಸ್ ಗಳ ಜೊತೆಯಲ್ಲೇ ಕೆಲಸ ಮಾಡುವ ಅದೃಷ್ಟ ಸಿಗ್ತಾಯಿದೆ. ಗಂಧದಗುಡಿಯಲ್ಲಿ ಗಟ್ಟಿಯಾಗಿ ನಿಲ್ಲೋ ಭರವಸೆ ಮೂಡಿದೆ.