ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತೆ, ಆದರೆ ಕೆಲವರನ್ನ ಮಾತ್ರ ಕೈ ಹಿಡಿಯುತ್ತೆ. ಅದ್ರಂತೇ ಮಾಯಲೋಕ ಕೂಡ ನೋಡುಗರನ್ನೆಲ್ಲಾ ಆಕರ್ಷಣೆಗೊಳಪಡಿಸುತ್ತೆ. ಹಾಗಂತ ಎಲ್ಲರನ್ನೂ ತಲೆ ಮೇಲೆ ಹೊತ್ತು ಮೆರೆಸಲ್ಲ. ಕೆಲವೇ ಕೆಲವು ಕಲಾವಿದರಿಗೆ ಮಾತ್ರ ಆಯ್ಕೆಮಾಡಿಕೊಳ್ಳುತ್ತೆ. ಮುತ್ತಿನ ತೇರು ಕಟ್ಟಿ ಮೆರವಣಿಗೆ ಮಾಡುತ್ತೆ. ಕೇಳಿದ್ದೆಲ್ಲಾ ಕೊಟ್ಟು, ಒಂದಿಡೀ ಜನ್ಮಕ್ಕಾಗುವಷ್ಟು ನೇಮುಫೇಮು ನೀಡಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುತ್ತೆ. ಯಾಕ್ ಈ ಬಗ್ಗೆ ಹೇಳ್ತಿದ್ದೀವಿ ಅಂದರೆ ಕಾಕ್ರೋಚ್ ಸುಧಿ ಹೀರೋ ಆಗ್ತಿದ್ದಾರೆ. ನಾಯಕನಟನಾಗಿ ಬೆಳ್ಳಿಭೂಮಿ ಮೇಲೆ ದಿಬ್ಬಣ ಹೊರಡಲಿದ್ದಾರೆ.
ಕಾಕ್ರೋಚ್ ಸುಧಿ ಹೀರೋ ಆಗ್ತಿದ್ದಾರೆ ಅಂದಾಕ್ಷಣ ಕಣ್ಣರಳಿಸ್ತೀರಾ? ಏನು ಸುಧಿ ಹೀರೋನಾ ಅಂತ ಪ್ರಶ್ನೆ ಹಾಕ್ತೀರಿ? ನಿನ್ನೆ ಮೊನ್ನೆ ತನಕ ಸ್ಟಾರ್ ಗಳ ಪಕ್ಕದಲ್ಲಿದ್ದ ಕಲಾವಿದ, ಹೀರೋ ಆಗ್ತಾನೆ ಎಂದಾಗ ನೀವೆಲ್ಲರೂ ಪ್ರಶ್ನೆ ಮಾಡೋದು? ಅಚ್ಚರಿ ಪಡೋದು ಸಹಜನೇ. ಆದರೆ, ಆ ಕಲಾಸರಸ್ವತಿ ಯಾರು ಏನಾಗಬೇಕು? ಯಾವಾಗ ? ಯಾರಿಗೆ? ಏನು ಕೊಡಬೇಕು ಅಂತ ಡಿಸೈಡ್ ಮಾಡಿರ್ತಾಳೋ ಅದನ್ನೇ ಕೊಟ್ಟೇ ತೀರ್ತಾಳೆ. ಇದಕ್ಕೆ ಕಲಾವಿದ ಕಾಕ್ರೋಚ್ ಸುಧಿನೇ ಸಾಕ್ಷಿ
ಅಷ್ಟಕ್ಕೂ ಕಾಕ್ರೋಚ್ ಸುಧಿ ಹೀರೋ ಆಗುವ ಕನಸು ಕಂಡವರಲ್ಲ. ಮುಖಕ್ಕೆ ಮೇಕಪ್ ಹಾಕ್ಕೊಂಡು, ಕ್ಯಾಮೆರಾ ಎದುರಿಸ್ತೀನಿ ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ಆದರೆ, ಆ ತಾಯಿ ಸರಸ್ವತಿಯ ಕೃಪೆಯಿಂದ ಕಲಾಲೋಕಕ್ಕೆ ಎಂಟ್ರಿ ಕೊಟ್ಟರು . ಅಲೆಮಾರಿ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿ, ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸ್ತಾ ಸಾಗಿದ ಸುಧಿ, ನಿರ್ದೇಶಕ ಸುಕ್ಕಾ ಸೂರಿಯ ಆಶೀರ್ವಾದದಿಂದ, ಕಾಕ್ರೋಚ್ ಎನ್ನುವ ಪಾತ್ರದಿಂದ ಗುರ್ತಿಸಿಕೊಂಡಿದ್ದು, ಸ್ಟಾರ್ ಕಲಾವಿದನಾಗಿದ್ದು ಕಣ್ಣ ಮುಂದಿರುವ ಸತ್ಯ.
ಹೌದು, ಟಗರು ಸಿನಿಮಾದ ನಂತರ ಕಾಕ್ರೋಚ್ ಸುಧಿಗೆ ಡಿಮ್ಯಾಂಡ್ ಹೆಚ್ಚಿತು. ಸಲಗ ಚಿತ್ರದ ಸಾವಿತ್ರಿ ಪಾತ್ರವೂ ಖ್ಯಾತಿ ತಂದುಕೊಡ್ತು. ಇಲ್ಲಿಂದ ಸುಧಿ ರೇಂಜೇ ಚೇಂಜ್ ಆಗಿದೆ. ಟಗರು ನಂತರ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಾಯಕನಾಗಿ, ಸಹಕಲಾವಿದನಾಗಿ ನಟಿಸಿರೋ ಸುಧಿಗೆ ಹೀರೋ ಪಟ್ಟಕ್ಕೇರುವ ಅವಕಾಶ ಸಿಕ್ಕಿದೆ. ನಾಯಕನಟನಾಗಿ ಬಿಗ್ ಸ್ಕ್ರೀನ್ ನಲ್ಲಿ ಧಗಧಗಿಸುವ ಸುವರ್ಣವಕಾಶ ಸುಧಿ ಪಾಲಾಗಿದೆ.
ಅಂದ್ಹಾಗೇ, ಕಾಕ್ರೋಚ್ ಸುಧಿಗೆ ಹೀರೋ ಪಟ್ಟ ಕಟ್ಟುತ್ತಿರೋದು ವೀಲ್ ಚ್ಹೇರ್ ರೋಮಿಯೋ ಖ್ಯಾತಿಯ ನಿರ್ದೇಶಕ ನಟರಾಜ್. ಚೊಚ್ಚಲ ಚಿತ್ರದಲ್ಲಿ ಚಿತ್ರಪ್ರೇಮಿಗಳಿಂದ ಜೈಕಾರ ಹಾಕಿಸಿಕೊಂಡಿರೋ ನಟರಾಜ್, ಈಗ ಕಾಕ್ರೋಚ್ ಗೆ ಕ್ರೈಮ್ ಜಾನರ್ ಸಿನಿಮಾ ಮಾಡ್ತಿದ್ದಾರೆ. ಗಜೇಂದ್ರ ಗಢದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಲೀಡ್ ರೋಲ್ನಲ್ಲಿ ಸುಧಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಇದರ ಜೊತೆಗೆ ಗೀತ ರಚನೆಕಾರ ಕಮ್ ನಿರ್ದೇಶಕ ರಾಘವೇಂದ್ರ ಕಾಮತ್ ಚಿತ್ರದಲ್ಲೂ ನಾಯಕನಟನಾಗಿ ತೊಡಗಿಸಿಕೊಂಡಿದ್ದಾರೆ. ಈ ಎರಡು ಚಿತ್ರವಲ್ಲದೇ ಮತ್ತಿಬ್ಬರು ನಿರ್ದೇಶಕರು ಕಾಕ್ರೋಚ್ ಸುಧಿನಾ ಅಪ್ರೋಚ್ ಮಾಡಿದ್ದಾರಂತೆ. ನೀವೇ ಹೀರೋ ಆಗಿ ಆ್ಯಕ್ಟ್ ಮಾಡಿ ಎಂದು ಕೇಳಿಕೊಂಡಿದ್ದು, ಆ ಬಗ್ಗೆ ಡಿಸ್ ಕಷನ್ ನಡೀತಿರೋದಾಗಿ ಸುಧಿ ಇಂಗ್ಲೀಷ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲಿಗೆ ಒಂದಲ್ಲ. ಎರಡಲ್ಲ. ಒಟ್ಟು ನಾಲ್ಕು ಸಿನಿಮಾಗಳಿಗೆ ಸುಧಿ ಹೀರೋ ಆಗ್ತಿರೋದು ಪಕ್ಕಾ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳೋ ಇವರು, ಸ್ಟೋರಿನೇ ಹೀರೋ, ನಾನು ಮುಖ್ಯ ಪಾತ್ತದಲ್ಲಿ ಮಿಂಚ್ತಿದ್ದೇನೆ ಅಷ್ಟೇ ಅಂತೇಳಿ ದೊಡ್ಡತನ ಮೆರಿತಾರೆ. ನಾನು ಇವತ್ತು ಈ ಹಂತದಲ್ಲಿ ಇರೋದಕ್ಕೆ ಕಾರಣ ಸೂರಿ ಸರ್ ಹಾಗೂ ವಿಜಿಯಣ್ಣ ಅಂತ ಇಬ್ಬರನ್ನೂ ನೆನಪು ಮಾಡಿಕೊಳ್ಳುವ ಕಾಕ್ರೋಚ್ ಸುಧಿ, ಹೀರೋ ಆದೇ ಅಂತ ಸಣ್ಣಪುಟ್ಟ ಪಾತ್ರ ಮಾಡೋದು ಬಿಡಲ್ಲ. ನನ್ನ ಅರಸಿಕೊಂಡು ಯಾವುದೇ ಪಾತ್ರ ಬಂದರೂ, ಅದನ್ನ ಕಣ್ಣಿಗೆ ಹೊತ್ತಿಕೊಂಡು ಮಾಡ್ತೀನಿ ಅಂತಾರೇ. ಇಂತಹ ಕಲಾವಿದ ಬೆಳಿಬೇಕು. ಬಡವರ ಮನೆ ಮಕ್ಳು ಹೀರೋ ಆಗಬೇಕು. ಆಲ್ ದಿ ಬೆಸ್ಟ್ ಕಾಕ್ರೋಚ್, ಕೀಪ್ ರಾಕಿಂಗ್.