ಉತ್ತರಕಾಂಡ ಅಂಗಳದಿಂದ ಪವರ್ ಫುಲ್ ಖಬರ್ ವೊಂದು ಹೊರಬಿದ್ದಿದೆ. ನಾನಾ ಕಾರಣಗಳಿಂದ ಸುದ್ದಿ-ಸದ್ದು ಮಾಡಿದ್ದ ಈ ಚಿತ್ರ ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಉತ್ತರಕಾಂಡದ ಸೆನ್ಸೇಷನ್ ಸುದ್ದಿ ಅಧಿಕೃತವಾಗಿದ್ದು, ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಟಗರು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ನಂತರ, ಡಾಲಿ ಧನಂಜಯ ಮತ್ತು ಶಿವಣ್ಣ ಬೈರಾಗಿಯಲ್ಲಿ ಮತ್ತೆ ಒಟ್ಟಾಗಿ ದರ್ಶನ ಕೊಟ್ಟಿದ್ದರು. ಇದೀಗ ಉತ್ತರಕಾಂಡದಲ್ಲಿ 3ನೇ ಬಾರಿಗೆ ಒಟ್ಟಾಗಿದ್ದಾರೆ. ಉತ್ತರ ಕರ್ನಾಟಕದ ಶೈಲಿಯ ಈ ಸಿನಿಮಾಗೆ ಇಬ್ಬರ ಮುಖಾಮುಖಿಯಾಗುತ್ತಾ? ಇಲ್ಲಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ? ಅನ್ನೋ ಕುತೂಹಲ ಎಲ್ಲರದ್ದು. ಏಕೆಂದರೆ ಈಗಾಗಲೇ ಒಂದು ಪುಟ್ಟ ಟೀಸರ್ನಲ್ಲಿ ಡಾಲಿ ಧನಂಜಯ ಅವರನ್ನು ಗಬ್ರು ಸತ್ಯನ ಅವತಾರದಲ್ಲಿ ನೋಡಿರುವ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಉತ್ತರಕಾಂಡ ಸಿನಿಮಾ ಮೂಲಕ ಮೋಹಕತಾರೆ ರಮ್ಯಾ ಮತ್ತೆ ನಟಿಯಾಗಿ ಕಂಬ್ಯಾಕ್ ಆಗ್ತಿದ್ದಾರೆ. ಆದ್ರೆ ಗೌರಮ್ಮನ ಲುಕ್ ಸೇರಿದಂತೆ ಯಾವುದನ್ನೂ ಚಿತ್ರತಂಡ ರಿವೀಲ್ ಮಾಡಿಲ್ಲ. ರಮ್ಯಾ ಉತ್ತರ ಕರ್ನಾಟಕ ಭಾಷೆಯಲ್ಲಿ ಬಿಟ್ಟ ಡೈಲಾಗ್ಗಳು ಕುತೂಹಲ ಕೆರಳಿಸಿತ್ತು. ಈಗ ಡಾಲಿ ಧನಂಜಯ್, ರಮ್ಯಾ ಜೊತೆಗೆ ಶಿವರಾಜ್ಕುಮಾರ್ ಚಿತ್ರತಂಡ ಸೇರಿಕೊಂಡಿದ್ದು, ಉತ್ತರಕಾಂಡಗೆ ಸೆಂಚೂರಿ ಕಿಚ್ಚು ಸಿಕ್ಕಿದೆ. ಅಂದಹಾಗೇ ಈ ಚಿತ್ರ ಸೆಟ್ಟೇರಿದಾಗಿಂದಲೂ ಶಿವಣ್ಣ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.