‘ಇಕ್ಕಟ್’, ‘ಬಡವ ರಾಸ್ಕಲ್’ ಸಿನಿಮಾಗಳ ಖ್ಯಾತಿಯ ನಟ ನಾಗಭೂಷಣ್ ಮತ್ತು ನಟ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ಅಭಿನಯಿಸಿರುವ ‘ಟಗರು ಪಲ್ಯ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ‘ಟಗರು ಪಲ್ಯ’ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಿದೆ.
‘ಟಗರು ಪಲ್ಯ’ ಸಿನಿಮಾದ ನಾಯಕ ನಟ ನಾಗಭೂಷಣ್ ಅವರ ಜನ್ಮದಿನದಂದು ವಿಶೇಷ ಉಡುಗೊರೆಯಾಗಿ ಚಿತ್ರತಂಡ ‘ಟಗರು ಪಲ್ಯ’ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದೆ. ‘ಟಗರು ಪಲ್ಯ’ ನಟ ಕಂ ನಿರ್ಮಾಪಕ ಡಾಲಿ ಧನಂಜಯ್ ತಮ್ಮದೇ ‘ಡಾಲಿ ಪಿಕ್ಚರ್ಸ್’ ನಡಿ ನಿರ್ಮಿಸುತ್ತಿರುವ ಮೂರನೇ ಸಿನಿಮಾವಾಗಿದೆ. ಯುವ ನಿರ್ದೇಶಕ ಉಮೇಶ್ ಕೆ. ಕೃಪಾ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ.
ನಾಗಭೂಷಣ್, ಅಮೃತಾ ಪ್ರೇಮ್ ಅವರೊಂದಿಗೆ ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಮೊದಲಾದವರು ‘ಟಗರು ಪಲ್ಯ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್. ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ.
ಇನ್ನು ಬಿಡುಗಡೆಯಾಗಿರುವ ‘ಟಗರು ಪಲ್ಯ’ ಸಿನಿಮಾದ ಟೈಟಲ್ ಟ್ರ್ಯಾಕಿಗೆ ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತದ ಗೀತೆಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಸದ್ಯ ತನ್ನ ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ‘ಟಗರು ಪಲ್ಯ’ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.