ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ‘ಗೆಜ್ಜೆನಾದ’ ವಿಜಯ್ ಕುಮಾರ್ ಪುತ್ರ ಅಥರ್ವ್ ನಾಯಕನಾಗಿ ನಟಿಸಿರುವ ‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅಂದಹಾಗೆ, ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾ ಇದೇ ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಪ್ರಚಾರದ ಭಾಗವಾಗಿ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆ ಮಾಡಿದೆ.
ಈ ಹಿಂದೆ ಕಿರುತೆಯಲ್ಲಿ ‘ಪುನರ್ ವಿವಾಹ’ ಹಾಗೂ ‘ಪತ್ತೆಧಾರಿ ಪ್ರತಿಭಾ’ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಥರ್ವ್ ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾದಲ್ಲಿ ನಾಯಕ ಅಥರ್ವಗೆ ನಾಯಕಿ ರೆಮೋಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಆರ್. ಜೆ ಅನೂಪ, ನಾಗರಾಜ್, ವಿಜಯಕುಮಾರ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಮೊದಲಾರ್ಧ ಮೂರು ಬೇರೆ ಕಥೆಗಳ ಸುತ್ತ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮೂರು ಕಥೆಗಳು ಒಂದೇ ಆಗುತ್ತದೆ. ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಈ ವಿಭಿನ್ನ ಕಥಾನಕವನ್ನು ಸೆಪ್ಟೆಂಬರ್ 15 ರಂದು ತೆರೆಗೆ ತರುತ್ತಿದ್ದೇವೆ ಎಂದಿದೆ ಚಿತ್ರತಂಡ. ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾಕ್ಕೆ ಕಿರಣ್ ವೆನಿಯಲ್ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಸಿದ್ದಾರ್ಥ್ ಪರಾಶರ್ ಸಂಗೀತ ಸಂಯೋಜಿಸಿದ್ದಾರೆ.