ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಯುಐ. ಇಂದು ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಎಂದಿನಂತೆ ಬುದ್ದಿವಂತ ಉಪ್ಪಿ ಕಲಾಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ . ಡೈಲಾಗ್ ಹೊಡೆಯದೇ ಯುಐ ಜಗತ್ತಿನೊಳಗೆ ಏನೆಲ್ಲಾ ಇರಬಹುದು ನೀವೇ ಥಿಂಕ್ ಮಾಡಿ ಥಿಯೇಟರ್ ಗೆ ಬನ್ನಿ ಅನ್ನೋ ಹಾಗೇ ಮೆದುಳಿಗೆ ಕೆಲಸ ಕೊಟ್ಟಿದ್ದಾರೆ. ಕೊಂಬಿರೋ ಕುದುರೆ ಏರಿ ಆಸ್ಥಾನಕ್ಕೆ ಅದ್ದೂರಿ ಎಂಟ್ರಿಕೊಡುವ ಸೂಪರ್ ರಂಗ, ಮಫ್ತಿ ಲುಕ್ನಲ್ಲಿ ಕಾಣಿಸಿಕೊಂಡು ಕಣ್ಣಲ್ಲೇ ಭಯನೂ ಹುಟ್ಟಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ದುಬೈ ಬಾಬು ಉಪ್ಪಿಯ ಲುಕ್ಕು ಗೆಟಪ್ ಮಾತ್ರವಲ್ಲ ಯುಐ ಕಲಾಬಳಗದ ಲುಕ್ಕು ಕೂಡ ಕ್ರೇಜಿಯಾಗಿದೆ. ಆರ್ಮುಗಂ ರವಿಶಂಕರ್, ಸಾಧುಕೋಕಿಲ, ಅಚ್ಯುತ್ ಕುಮಾರ್ ಸೇರಿದಂತೆ ತಾರಾಬಳಗದ ನಯಾ ಅವತಾರ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.
ಯುಐ ಸ್ಯಾಂಡಲ್ವುಡ್ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಸೌತ್ ಸಿನಿಮಾ ಪ್ರೇಕ್ಷಕರು ಕಣ್ಣರಳಿಸಿರೋ ಸಿನಿಮಾ. ಕಬ್ಜ ಚಿತ್ರದ ನಂತರ ಸೌತ್-ನಾರ್ತ್ ತುಂಬೆಲ್ಲಾ ನಯಾ ಮೇನಿಯಾ ಕ್ರಿಯೇಟ್ ಮಾಡಿರೋ ಉಪ್ಪಿ ಈಗ ತಮ್ಮದೇ ನಿರ್ದೇಶನದ ನಟನೆಯ `ಯುಐ’ ಮೂಲಕ ಸಂಚಲನ ಮೂಡಿಸಲು ಹೊರಟಿದ್ದಾರೆ. ಉಪ್ಪಿ-2 ಆದ್ಮೇಲೆ ಬರೋಬ್ಬರಿ ಎಂಟು ವರ್ಷಗಳು ಡೈರೆಕ್ಷನ್ನಿಂದ ದೂರ ಉಳಿದಿದ್ದರು. ಇದೀಗ `ಯುಐ’ ಮೂಲಕ ಮತ್ತೆ ಡೈರೆಕ್ಟರ್ ಹ್ಯಾಟ್ ತೊಟ್ಟು ಅಖಾಡಕ್ಕಿಳಿದಿದ್ದಾರೆ. ಟೈಟಲ್ನಿಂದನೇ ಈ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿತ್ತು. ಇದೀಗ ರಿಲೀಸ್ ಆಗಿರೋ ಟೀಸರ್ ಹಲ್ಚಲ್ ಎಬ್ಬಿಸುತ್ತಿದೆ. ರಿಯಲ್ ಸ್ಟಾರ್ ಯುಐ ಜಗತ್ತು ಹಾಲಿವುಡ್ ಲೋಕಕ್ಕೆ ಕರೆದೊಯ್ಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸೌತ್-ನಾರ್ತ್ಗೆ ಮಾತ್ರವಲ್ಲ ಇಡೀ ಜಗತ್ತಿಗೆ ಉಪ್ಪಿಯ ಬುದ್ದಿವಂತಿಕೆ ಏನು?ಸಿನಿಮಾ ಚಾಕಚಕ್ಯತೆ ಎಂತಹದ್ದು ಅನ್ನೋದು ಯುಐ ಮೂಲಕ ತಿಳಿಯಲಿದೆ.
ಉಪ್ಪಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾಗೆ ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಸಾಥ್ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದರೆ, ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ ಟೈನರ್ಸ್ ಸಹಭಾಗಿತ್ವದಲ್ಲಿ `ಯುಐ’ ನಿರ್ಮಾಣಗೊಳ್ಳುತ್ತಿದ್ದು, ಕೆ.ಪಿ. ಶ್ರೀಕಾಂತ್, ಜಿ.ಮನೋಹರನ್ ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ. ರಿಯಲ್ ಸ್ಟಾರ್ ಉಪ್ಪಿ ಜೊತೆಗೆ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಮುರುಳಿ ಶರ್ಮಾ, ಇಂದ್ರಜಿತ್ ಲಂಕೇಶ್. ಪ್ರಶಾಂತ್ ಸಂಬರ್ಗಿ ಸೇರಿದಂತೆ ಇತರರು ಪಾರ್ತವರ್ಗದಲ್ಲಿದ್ದಾರೆ. ಮಾಜಿ ಪೋರ್ನ್ ಬ್ಯೂಟಿ ಸನ್ನಿ ಸ್ಯಾಂಡಲ್ವುಡ್ಗೆ ಮತ್ತೆ ಬಂದಿದ್ದಾರೆ. ಸೂಪರ್ ರಂಗನ ಜೊತೆಗೆ ಸನ್ನಿಲಿಯೋನ್ ಸೊಂಟ ಬಳುಕಿಸಿದ್ದಾರೆ. ಪ್ರಜ್ವಲ್ ಕ್ಯಾಮರಾ ಕೈಚಳಕ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಬಹುಕೋಟಿ ವೆಚ್ಚದ ಯುಐ ಟೀಸರ್ನಿಂದಲೇ ಕಮಾಲ್ ಮಾಡ್ತಿದೆ. ಐದು ಭಾಷೆಗಳಲ್ಲಿ ಅದ್ದೂರಿಯಾಗಿ ತಯಾರಾಗಿರೋ `ಯುಐ’ 2024 ಫಸ್ಟ್ ಹಾಪ್ನಲ್ಲಿ ಹವಾ ಎಬ್ಬಿಸಲಿದೆ