ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಸ್ಪೆಷಲ್ ರೋಲ್‌ನಲ್ಲಿ ಧಗಧಗಿಸಿರೋ, ಐಶ್ವರ್ಯ ರಜನಿಕಾಂತ್ ಆಕ್ಷನ್ ಕಟ್ ಹೇಳಿರೋ ʻಲಾಲ್ ಸಲಾಂʼ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಒಂದು ನಿಮಿಷ 29 ಸೆಕೆಂಡ್ ಇರುವ ಲಾಲ್ ಸಲಾಂ ಟ್ರೇಲರ್ ತಲೈವಾ ಅಭಿಮಾನಿಗಳನ್ನ ಮಾತ್ರವಲ್ಲ ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿದೆ. ಜೈಲರ್ ನಂತರ ಅನದರ್ ಬ್ಲಾಕ್‌ಬಸ್ಟರ್ ಲೋಡಿಂಗ್ ಎನ್ನುವ ಮಾತುಗಳು ಕೇಳಿಬರ್ತಿದೆ.
ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ತಲೈವಾ ಘರ್ಜಿಸಿದ್ದು, ಗಲ್ಲಾಪೆಟ್ಟಿಗೆನಾ ಶೇಕ್ ಶೇಕ್ ಮಾಡಿ 650 ಕೋಟಿ ಕೊಳ್ಳೆ ಹೊಡೆದು ಕೊಟ್ಟಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ, ಲಾಲ್ ಸಲಾಂ ಮೂಲಕ ಮೊಯ್ದೀನ್ ಭಾಯ್ ಆಗಿ ಕಣಕ್ಕಿಳಿಯುತ್ತಿರೋ ತಲೈವಾ ಟ್ರೇಲರ್ ಮೂಲಕವೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸೋ ಸೂಚನೆ ಕೊಟ್ಟಿದ್ದಾರೆ. ಕ್ಲಾಸ್ ಅಂಡ್ ಮಾಸ್ ಎರಡು ಲುಕ್‌ನಲ್ಲಿ ಶಿವಾಜಿ ಕಿಕ್ಕೇರಿಸುತ್ತಿದ್ದು, ಬೆಳ್ಳಿಭೂಮಿ ಮೇಲೆ ಮೊಯ್ದೀನ್ ಭಾಯ್ ಅಬ್ಬರ- ಆರ್ಭಟ ನೋಡೋದಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ.
ಐಶ್ವರ್ಯ ರಜನಿಕಾಂತ್ ಆಕ್ಷನ್ ಕಟ್ ಹೇಳಿರೋ ʻಲಾಲ್ ಸಲಾಂʼ ಚಿತ್ರ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ವಿವರಿಸಲಿದೆ. ಕಥೆಯ ಬಗ್ಗೆ ಸುಳಿವು ನೀಡುವಂತಹ ಅನೇಕ ಡೈಲಾಗ್ಗಳು ಟ್ರೇಲರ್ನಲ್ಲಿವೆ. ‘ಜನರು ಯಾವ ದೇವರ ಮೇಲೆ ನಂಬಿಕೆ ಇಡುತ್ತಾರೆ ಎಂಬುದು ಮುಖ್ಯವಲ್ಲ. ಎಲ್ಲ ದೇವರೂ ಒಂದೇ’ ಎಂಬಿತ್ಯಾದಿ ಡೈಲಾಗ್ಗಳು ಗಮನ ಸೆಳೆಯುತ್ತಿವೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳೂ ಇವೆ. ‘ಲಾಲ್ ಸಲಾಂ’ ಚಿತ್ರದಲ್ಲಿ ಕ್ರೀಡೆಯ ಕುರಿತಾದ ಕಥೆ ಕೂಡ ಇದೆ. ಕ್ರಿಕೆಟ್ನ ಕೇಂದ್ರವಾಗಿ ಇಟ್ಟುಕೊಂಡು ಕಥೆ ಹೇಳಿದ್ದಾರೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್. ಹಾಗಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರದ್ದು ಈ ಸಿನಿಮಾದಲ್ಲಿ ಅತಿಥಿ ಪಾತ್ರ. ರಜನಿಕಾಂತ್ ಮತ್ತು ಕಪಿಲ್ ದೇವ್ ಅವರು ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಈ ದೃಶ್ಯಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.
ರಜನಿಕಾಂತ್ ಜೊತೆ ವಿಷ್ಣು ವಿಶಾಲ್, ವಿಕ್ರಾಂತ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಲಾಲ್ ಸಲಾಂ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಟ್ರೇಲರ್ ಬಿಡುಗಡೆ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.‘ಲೈಕಾ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ಮೂಡಿಬಂದಿದ್ದು, ಸುಭಾಸ್ಕರನ್ ಅವರು ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಲಾಲ್ ಸಲಾಂ’ ಸಿನಿಮಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರತಂಡವು ಕಾರಣಾಂತರಗಳಿಂದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿತ್ತು. ಈಗ ಈ ಸಿನಿಮಾದ ಬಿಡುಗಡೆಗೆ ಸಮಯ ಕೂಡಿಬಂದಿದೆ. ಫೆಬ್ರವರಿ 9ರಂದು ಈ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ.