ಕುಟುಂಬ ನಿರ್ವಹಣೆಗಾಗಿ ಮದುವೆ ಮನೆಯಲ್ಲಿ ಕುಣಿಯುತ್ತಿದ್ದರಂತೆ ಬೇಬಿ ನಟಿ. ಹೀಗೊಂದು ಸುದ್ದಿ ಕೇಳಿದಾಕ್ಷಣ ಅಚ್ಚರಿಯಾಗೋದು ಸಹಜ. ಜೊತೆಗೆ ಸಂಶಯಾಸ್ಪದ ನೂರೆಂಟು ಪ್ರಶ್ನೆಗಳು ಹುಟ್ಟಿಕೊಳ್ಳೋದು ಅಷ್ಟೇ ಸತ್ಯ. ಆ ಎಲ್ಲಾ ಕೌತುಕದ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಅಂದರೆ ಅಸಲಿಯತ್ತನ್ನ ನಿಮ್ಮ ಮುಂದೆ ಹರವಿಡಬೇಕು. `ಬೇಬಿ’ ಸಿನಿಮಾದ ಮೂಲಕ ಬೆಳ್ಳಿಭೂಮಿಗೆ ಬಂದು ನಿಮ್ಮೆಲ್ಲರನ್ನೂ ರಂಜಿಸುತ್ತಿರುವ ಬೇಬಿ ಉರುಫ್ ವೈಷ್ಣವಿ ಚೈತನ್ಯ ಸಿನಿಮಾ ಜರ್ನಿಯನ್ನು ನಿಮ್ಮ ಕಣ್ಣಮುಂದೆ ಕಟ್ಟಿಕೊಡಬೇಕು.
ಬೇಬಿ ಇತ್ತೀಚೆಗೆಷ್ಟೇ ತೆರೆಕಂಡ ತೆಲುಗು ಸಿನಿಮಾ. ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ಕಾಂಬಿನೇಷನ್‍ನಲ್ಲಿ ಮೂಡಿಬಂದಂತಹ ರೊಮ್ಯಾಂಟಿಕ್ ಡ್ರಾಮ. ಇದಕ್ಕೆ ಸಾಯಿ ರಾಜೇಶ್ ನಿರ್ದೇಶನವಿತ್ತು. ಚಿತ್ರ ನಿಮ್ಮೆಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಹೀಗಾಗಿಯೇ ಸಿನಿಮಾ ಗಲ್ಲಾಪೆಟ್ಟಿಯಲ್ಲಿ 70 ಕೋಟಿ ಕಲೆಕ್ಷನ್ ಮಾಡಲಿಕ್ಕೆ ಸಾಧ್ಯವಾಯ್ತು. ಚಿತ್ರಕ್ಕೋಸ್ಕರ ದುಡಿದವರೆಲ್ಲರಿಗೂ ಪ್ಲಸ್ ಆಯ್ತು ವಿಶೇಷವಾಗಿ ಬೇಬಿ ಬ್ಯೂಟಿಗೆ ಈ ಸಿನಿಮಾದಿಂದ ಬಿಗ್ ಬ್ರೇಕ್ ಸಿಗ್ತು. ಲೈಮ್ ಲೈಟ್‍ಗೆ ಬರುವುದಕ್ಕೆ ಅವಕಾಶ ಸಿಗ್ತು. ಫ್ಯಾನ್ಸು, ಕ್ರೇಜು, ಸ್ಟಾರ್ ಢಮ್ ಎಲ್ಲವೂ ಬೇಬಿನಾ ಆವರಿಸಿಕೊಂಡವು. ಇಷ್ಟೆಲ್ಲಾ ದಕ್ಕೋದಕ್ಕೆ ಬೇಬಿ ಸಿನಿಮಾ ಕಾರಣ ಆಗಿರಬಹುದು. ಆದರೆ, ಈ ಹಂತಕ್ಕೆ ಬರಲು ನಟಿ ವೈಷ್ಣವಿ ಸಾಕಷ್ಟು ಕಷ್ಟಪಟ್ಟಿದ್ದಾರೆ.
ಕೆಲವರಿಗೆ ದಣಿಯದೇ ಎಲ್ಲವೂ ದಕ್ಕಿಬಿಡುತ್ತೆ. ಇನ್ನೂ ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತೆ. ಆದರೆ, ಬಹುಪಾಲು ಮಂದಿ ಮೈ ಬೆವರಿನ ಹನಿಯನ್ನ ಮಣ್ಣಿಗೆ ತಾಗಿಸಿಯೇ ಮುನ್ನಲೆಗೆ ಬರಬೇಕು. ಕನಸಿನ ಬೆನ್ನೇರಿ ಹೊರಟ ಮೇಲೆ ನಿದ್ದೆಗೆ ಚಟ್ಟಕಟ್ಟಿ ದುಡಿಬೇಕು. ಹಸಿವು, ಅವಮಾನ, ಅಪಮಾನ, ನಿಂದನೆ ಎಲ್ಲವನ್ನೂ ಸಹಿಸಿಕೊಂಡು ಮುಂದೆ ಸಾಗಬೇಕು. ಇದೇ ಹಾದಿಯಲ್ಲಿ ಸಾಗುತ್ತಾ, ಬಡತನಕ್ಕೆ ಸೆಡ್ಡು ಹೊಡೆದು ಬದುಕುತ್ತಾ, ಬಣ್ಣದ ಜಗತ್ತಿಗೆ ಬಂದ ಬೇಬಿ ಬ್ಯೂಟಿ ಇವತ್ತು ಸ್ಟಾರ್ ನಾಯಕಿ ಪಟ್ಟಕ್ಕೇರಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಅಷ್ಟಕ್ಕೂ, ಬೇಬಿ ಬ್ಯೂಟಿ ಅನುಭವಿಸಿದ ಕಷ್ಟಗಳೇನು? ನೋವುಗಳೇನು? ಆಕೆ ಎಷ್ಟೆಲ್ಲಾ ಚಾಲೆಂಜಸ್‍ಗಳನ್ನ ಫೇಸ್ ಮಾಡಿದ್ಳು? ಅನ್ನೋದನ್ನ ತಿಳಿದುಕೊಂಡರೆ ನೀವೆಲ್ಲರೂ ಆಕೆಗೆ ಹ್ಯಾಟ್ಸಾಫ್ ಹೇಳ್ತೀರಿ. ಯಾಕಂದ್ರೆ, ಒಬ್ಬ ಹೆಣ್ಣುಮಗಳಾಗಿ ಇಡೀ ಕುಟುಂಬದ ಜವಬ್ದಾರಿಯನ್ನ ಆಕೆ ತನ್ನ ಹೆಗಲಿಗೆ ಹಾಕ್ಕೊಂಡಿದ್ಳು. ಅದು 16ನೇ ವಯಸ್ಸಿಗೆ ಅನ್ನೋದು ಗಮನಿಸಬೇಕಾದ ಅಂಶ. ಹೌದು, ಎಸ್ ಎಸ್ ಎಲ್ ಸಿ ಓದುತ್ತಿದ್ದ ಸಮಯದಲ್ಲಿ ಫ್ಯಾಮಿಲಿ ನಿರ್ವಹಣೆಯ ಹೊಣೆ ಹೊತ್ತುಕೊಂಡ ವೈಷ್ಣವಿ, ಕುಟುಂಬದ ಅಗತ್ಯಗಳನ್ನು ಪೂರೈಸೋದಕ್ಕೆ ಡ್ಯಾನ್ಸ್ ಮೊರೆ ಹೋದರಂತೆ. ಮದುವೆ ಮನೆಗಳಲ್ಲಿ, ಬರ್ತ್‍ಡೇ ಪಾರ್ಟಿಗಳಲ್ಲಿ ಕುಣಿಯೋದಕ್ಕೆ ಶುರುಮಾಡಿದ್ರಂತೆ. ಹೀಗೆ ಮಾಡೋದ್ರಿಂದ ಆಕೆಗೆ 700 ರೂ ದುಡ್ಡು ಸಿಗ್ತಿತ್ತಂತೆ. ಅದನ್ನು ತಗೊಂಡು ಅಕ್ಕಿ ಹಾಗೂ ದಿನಸಿ ಪದಾರ್ಥಗಳನ್ನ ಮನೆಗೆ ಕೊಂಡ್ಯೊಯುತ್ತಿದ್ದೆ ಅಂತ ಕಷ್ಟದ ದಿನಗಳನ್ನ ಕಣ್ಮುಂದೆ ತಂದುಕೊಂಡು ಭಾವುಕರಾಗಿದ್ದಾರೆ ಬೇಬಿ ನಟಿ ವೈಷ್ಣವಿ
ಇನ್ನೂ ನಟಿ ವೈಷ್ಣವಿ ಸಿನಿಮಾಗೂ ಬರುವ ಮೊದಲು ಡಬ್‍ಸ್ಮ್ಯಾಶ್ ಹಾಗೂ ಟಿಕ್‍ಟಾಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಹಂತಕ್ಕೆ ಫೇಮಸ್ ಆಗಿದ್ದರು. ನಂತರ ಯೂಟ್ಯೂಬ್ ಕಿರುಚಿತ್ರಗಳು ಹಾಗೂ ಕವರ್ ಸಾಂಗ್‍ಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಕೊನೆಗೆ 2018ರಲ್ಲಿ ಮಾಸ್ ಮಹರಾಜ ರವಿತೇಜ ಅಭಿನಯದ `ಟಚ್ ಚೇಸಿ ಚೂಡು’ ಚಿತ್ರದಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಸಿನಿಮಾ ಜರ್ನಿ ಶುರುವಾಯ್ತು. ಅಲಾ ವೈಕುಂಟಪುರಮುಲೋ, ವಲಿಮೈ ಸೇರಿದಂತೆ ಸ್ಟಾರ್ ಗಳ ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಪ್ಲೇ ಮಾಡುವುದಕ್ಕೆ ಅವಕಾಶ ಸಿಗ್ತು. ಹೀಗೆ ಸಾಗುತ್ತಾ, ಸಣ್ಣ ಪುಟ್ಟ ಕ್ಯಾಮಿಯೋ ಪ್ಲೇ ಮಾಡುತ್ತಿದ್ದ ವೈಷ್ಣವಿಗೆ `ಬೇಬಿ’ ಚಿತ್ರದಲ್ಲಿ ಲೀಡ್ ಹೀರೋಯಿನ್ ಆಗೋದಕ್ಕೆ ಅವಕಾಶ ಸಿಗ್ತು. ಫುಲ್ ಫ್ಲೆಡ್ಜ್ ನಾಯಕಿಯಾಗಿ ಕಾಣಿಸಿಕೊಂಡ ಬೇಬಿ ಬ್ಲಾಕ್‍ಬಸ್ಟರ್ ಹಿಟ್ಟಾಯ್ತು. ಈಗ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯೇ ಈ ನಟಿ ಬಗ್ಗೆ ಮಾತನಾಡ್ತಿದೆ. ಸ್ಟಾರ್ ಸಿನಿಮಾಗಳಿಂದ ಅವಕಾಶಗಳು ಅರಸಿಕೊಂಡು ಬರುತ್ತಿದ್ದು, ಉಸ್ತಾದ್ ರಾಮ್ ಪೋತಿನೇನಿ ಅಭಿನಯದ ಡಬಲ್ ಇಸ್ಮಾರ್ಟ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಅಂದರೆ ತಪ್ಪಾಗುತ್ತೆ. ಆದರೆ, ಸಿನಿಮಾ ಕುಟುಂದ ಹಿನ್ನಲೆ ಇಲ್ಲದಿದ್ರೂ ಕೂಡ ಹಂತ ಹಂತವಾಗಿ ಮೇಲೆ ಬಂದು ಟಿಟೌನ್ ನಂಥ ಟಿಟೌನ್‍ನಲ್ಲಿ ಸ್ಟಾರ್ ನಾಯಕಿಯಾಗುವತ್ತು ಹೆಜ್ಜೆ ಹಾಕ್ತಿರುವುದು ಮಾಧರಿಯೇ ಸರೀ. ಎನಿವೇ ಆಲ್ ದಿ ಬೆಸ್ಟ್ ಬೇಬಿ, ಕೀಪ್ ರಾಕಿಂಗ್ ಅಂಡ್ ಕೀಪ್ ಗ್ರೋಯಿಂಗ್ ಅಂಡ್ ಗ್ರೋಯಿಂಗ್