ಶೆಟ್ರ ನಾಯಕಿಯರ ಮೇಲೆ ಪರಭಾಷಾ ಮಂದಿಯ ಕಣ್ಣು ಬಿದ್ದಿದೆಯಾ? ಈ ಕುತೂಹಲದ ಪ್ರಶ್ನೆಗೆ ಕಣ್ಣುಮುಚ್ಚಿಕೊಂಡೇ ಉತ್ತರ ಕೊಡಬಹುದು, ಹೌದು ಬಿದ್ದಿದೆ ಅಂತ. ಯಾಕಂದ್ರೆ, ಕಿರಿಕ್ ಬ್ಯೂಟಿ ರಶ್ಮಿಕಾ, ಕಾಂತಾರ ಚೆಲುವೆ ಸಪ್ತಮಿ ನಂತರ ಶೆಟ್ರ ಮತ್ತೊಬ್ಬ ನಾಯಕಿಗೆ ರೆಡ್‍ಕಾರ್ಪೆಟ್ ಹಾಕಿ ಕರ್ಕೊಂಡು ಹೋಗಿದ್ದಾರೆ. ಮೊನ್ನೆ ಮೊನ್ನೆ ತನಕ ಶೆಟ್ರ ಪಕ್ಕದಲ್ಲಿ ನಿಂತು `ಮನು ನನ್ನ ಸಮುದ್ರ ನೀನು’ ಎನ್ನುತ್ತಿದ್ದ ರುಕ್ಮಿಣಿ, ಟಾಟಾ… ಬಾಯ್ ಬಾಯ್… ಸೀ ಯೂ ಸೂನ್ ಎನ್ನುತ್ತಾ ಸಪ್ತ ಸಾಗರ ದಾಟಿದ್ದಾರೆ.
ನಟಿ ರುಕ್ಮಿಣಿ ಸಪ್ತಸಾಗರ ದಾಟುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೆ, ಮನು ಜೊತೆ ಮೆರವಣಿಗೆ ಹೊರಡೋ ಮೊದಲೇ ಪರಭಾಷೆಯವರು ಆರಿಸಿಕೊಂಡು ಹೋಗಬಹುದು ಎಂದು ಯಾರೂ ಊಹಿಸಿರಲಿಲ್ಲ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆಗೂ ಮೊದಲೇ ರುಕ್ಮಿಣಿ ಗಡಿ ದಾಟಬಹುದೆಂದೂ ಅಂದಾಜಿಸಿರಲಿಲ್ಲ. ಆದರೆ, ಅದೃಷ್ಟ ರುಕ್ಮಿಣಿ ವಸಂತ್‍ರನ್ನು ಅರಸಿಕೊಂಡು ಬಂತು. ಸಿಂಪಲ್ ಸ್ಟಾರ್ ಜೊತೆ ಸಿಲ್ವರ್ ಸ್ಕ್ರೀನ್ ಮೇಲೆ ಶೈನ್ ಆಗುವ ಮೊದಲೇ ಕಾಲಿವುಡ್ ಸ್ಟಾರ್ ನಟನಿಗೆ ಜೋಡಿಯಾಗುವ ಅವಕಾಶ ಸಿಗ್ತು. ಅಷ್ಟಕ್ಕೂ, ಆ ಸ್ಟಾರ್ ನಟ ಬೇರಾರು ಅಲ್ಲ ವಿಜಯ್ ಸೇತುಪತಿ
ವಿಜಯ್ ಸೇತುಪತಿಗೆ ನಟಿ ರುಕ್ಮಿಣಿ ಜೋಡಿಯಾಗಿರುವುದು, ಇವರಿಬ್ಬರ ಕಾಂಬಿನೇಷನ್‍ನಲ್ಲಿ ಸಿನಿಮಾ ಬರುತ್ತಿರುವುದು ತಾಜಾ ಸಮಾಚಾರವೇನಲ್ಲ. ಕಳೆದ ಎರಡು ತಿಂಗಳ ಹಿಂದೆಯೇ ಇವರಿಬ್ಬರ ಸಿನಿಮಾ ಬಗ್ಗೆ ಸುದ್ದಿಯಾಗಿತ್ತು. ಮಲೇಷಿಯಾದಲ್ಲಿ ಅದ್ದೂರಿಯಾಗಿ ಸಿನಿಮಾ ಸೆಟ್ಟೇರಿತ್ತು. ಇದೀಗ ಈ ಚಿತ್ರದ ಶೂಟಿಂಗ್ ಶುರುವಾಗಿದೆ. ಆರ್ಮುಗ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಟಿ ರುಕ್ಮಿಣಿ ವಸಂತ್ ಫ್ಲೈಟ್ ಏರಿದ್ದಾರೆ.
ಇನ್ನೂ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಸೆಪ್ಟೆಂಬರ್ 01ರಂದು ಚಿತ್ರ ತೆರೆಗೆ ಬರಲಿದ್ದು, ಟ್ರೇಲರ್ ಲಾಂಚ್ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ಇದೀಗ, ನಟಿ ರುಕ್ಮಿಣಿ ತಮಿಳು ಚಿತ್ರವೊಂದರ ಶೂಟಿಂಗ್ ಗಾಗಿ ಹೊರರಾಜ್ಯದಲ್ಲಿ ಬೀಡು ಬಿಟ್ಟಿರೋದ್ರಿಂದ, `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಪ್ರಮೋಷನ್ ಕಾರ್ಯ ಮುಂದೂಡಲಾಗಿದೆಯಂತೆ. ರುಕ್ಮಿಣಿ ವಾಪಾಸ್ ಬೆಂಗಳೂರಿಗೆ ಬಂದ ತಕ್ಷಣ ಪ್ರಮೋಷನ್‍ಗೆ ಕಿಕ್ ಸ್ಟಾರ್ಟ್ ನೀಡಲಿದ್ದಾರಂತೆ. ಒಟ್ನಲ್ಲಿ ಶೆಟ್ರ ನಾಯಕಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗ್ತಿದೆ. ರಶ್ಮಿಕಾ, ಸಂಯುಕ್ತ ಹೆಗ್ಡೆ, ಸಪ್ತಮಿಗೌಡ ಕನ್ನಡದಲ್ಲಿ ಸಿನಿಮಾ ರಿಲೀಸ್ ಆದ್ಮೇಲೆ ಪರಭಾಷೆಗೆ ಹೋಗುವ ಅವಕಾಶ ಸಿಗ್ತು. ಆದರೆ, `ಸಪ್ತಸಾಗರದಾಚೆ ಎಲ್ಲೋ’ ಚೆಲುವೆಗೆ ಸಿನಿಮಾ ಬಿಡುಗಡೆಗೂ ಮೊದಲೇ ಪರಭಾಷೆಯಲ್ಲಿ ಮಿಂಚುವ ಚಾನ್ಸ್ ಸಿಕ್ಕಿದೆ.
ಖುಷಿ ಸಮಾಚಾರ ಅಂದರೆ ರುಕ್ಮಿಣಿ ಕೂಡ ಕನ್ನಡತಿಯೇ. ಮೂಲತಃ ಬೆಂಗಳೂರಿನವರಾದ ರುಕ್ಮಿಣಿ, ಲಂಡನ್‍ನಲ್ಲಿ ಅಭಿನಯ ತರಭೇತಿ ಪಡೆದುಕೊಂಡಿದ್ದಾರೆ. ನಟ ಕಂ ನಿರ್ದೇಶಕ ಶ್ರೀನಿಯವರು ತಮ್ಮ ಬೀರ್ ಬಲ್ ಸಿನಿಮಾದ ಮೂಲಕ ಈಕೆಯನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದರು. ಈ ಸಿನಿಮಾ ರಿಲೀಸ್‍ಗೂ ಮುನ್ನವೇ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ `ಬಘೀರ’ ಚಿತ್ರಕ್ಕೆ ಸೆಲೆಕ್ಟ್ ಆದರು. ಈ ಚಿತ್ರವೂ ತೆರೆಗಪ್ಪಿಳಿಸುವ ಮುನ್ನವೇ `ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಅವನೇ ಶ್ರೀಮನ್ನಾರಾಯಣನಿಗೆ ಜೊತೆಯಾದರು. ಫೈನಲೀ, ಸಿನಿಮಾ ರಿಲೀಸ್‍ಗೆ ರೆಡಿಯಿದೆ. ಕರ್ಣನ ಜೊತೆ ರುಕ್ಮಿಣಿ ಕೆಮಿಸ್ಟ್ರಿ ಹೆಂಗ್ ವರ್ಕ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.