ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಣ್ಣನ್ನ ಊರಗಲ ಮಾಡಿಕೊಂಡು ನೋಡ್ತಿರೋ ಸಿನಿಮಾಗಳ ಪೈಕಿ ʻದಿ ಗೋಟ್ ಲೈಫ್- ಆಡುಜೀವಿತಂʼ ಸಿನಿಮಾ ಕೂಡ ಒಂದು. ಮಲೆಯಾಳಂ ಸೂಪರ್ ಸ್ಟಾರ್, ಮ್ಯಾನ್ ಆಫ್ ಮಲ್ಟಿಟ್ಯಾಲೆಂಟೆಡ್ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದ ನಾಯಕ. ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಬ್ಲೆಸ್ಸಿ ಈ ಸಿನಿಮಾದ ಸಾರಥಿ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ತಯಾರಾಗ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಪ್ಲಸ್ ಇವರಿಬ್ಬರ ಡ್ರೀಮ್ ಪ್ರಾಜೆಕ್ಟ್ ಕೂಡ ಹೌದು. ಭರ್ತಿ 16 ವರ್ಷಗಳ ತಪಸ್ಸಿನ ಫಲವಾಗಿರೋ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್‌ನಲ್ಲಿ ತೆರೆಕಾಣಬೇಕಿದ್ದ ಈ ಸಿನಿಮಾ ಒಂದು ತಿಂಗಳ ಮೊದಲೇ ಬೆಳ್ಳಿತೆರೆಗೆ ಲಗ್ಗೆ ಇಡುತ್ತಿದ್ದು ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದೆ. ಮಾರ್ಚ್ 28ರಂದು ವರ್ಲ್ಡ್‌ವೈಡ್ ʻದಿ ಗೋಟ್ ಲೈಫ್- ಆಡುಜೀವಿತಂʼ ದರ್ಬಾರ್ ಶುರುವಾಗಲಿದೆ.
ʻದಿ ಗೋಟ್ ಲೈಫ್ʼ …. ಬರಹಗಾರ ಬೆನ್ಯಾಮಿನ್ ಅವರು ಬರೆದಿರುವ ಜನಪ್ರಿಯ ಕಾದಂಬರಿ ‘ಆಡು ಜೀವಿತಂ’ ಆಧರಿಸಿ ತಯಾರಾಗಿರೋ ಸಿನಿಮಾ. 90 ರ ದಶಕದಲ್ಲಿ ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನ ನಿಜ ಜೀವನದ ಕಥೆಯನ್ನ ಈ ಚಿತ್ರ ಒಳಗೊಂಡಿದೆ. ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತೆ. ಅದು ಯಾಕ್ ಬಂತು? ಕೊನೆಗೆ ಆತ ಅದರಿಂದ ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಆ ಕಥೆನಾ ನಿರ್ದೇಶಕ ಬ್ಲೆಸ್ಸಿ ಅವ್ರು ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಈ ಚಿತ್ರದಲ್ಲಿ ನಜೀಬ್ ಮೊಹಮ್ಮದ್ ಪಾತ್ರಕ್ಕೆ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ ಐದು ವರ್ಷಗಳ ಕಾಲ ಈ ಪಾತ್ರಕ್ಕಾಗಿ ಶ್ರಮವಹಿಸಿದ್ದಾರಂತೆ. ನಜೀಬ್ ಪಾತ್ರಕ್ಕೆ ನ್ಯಾಯ ಸಲ್ಲಿಸೋಕೆ ದೇಹ ದಂಡಿಸಿದ್ದಾರೆ. ಮಾನಸಿಕವಾಗಿಯೂ ಸಾಕಷ್ಟು ತಯಾರಿ ನಡೆಸಿಕೊಂಡೇ ಅಖಾಡಕ್ಕಿಳಿದ ಬಗ್ಗೆ ಹಿಂದೊಮ್ಮೆ ಹೇಳಿಕೊಂಡಿದ್ದರು. ಸದ್ಯ, ರಿವೀಲ್ ಆಗಿರುವ ಲುಕ್‌ನಲ್ಲಿ ಪೃಥ್ವಿರಾಜ್‌ನ ಗುರ್ತಿಸಲು ಅಸಾಧ್ಯ. ಯಾಕಂದ್ರೆ, ಅಷ್ಟರ ಮಟ್ಟಿಗೆ ಫಿಸಿಕಲ್ ಟ್ರಾನ್ಸರ್ಫಾಮೇಷನ್ ಮಾಡಿಕೊಂಡಿದ್ದಾರೆ. ಸುಕ್ಕುಗಟ್ಟಿರೋ ಮುಖ, ಗಡ್ಡಮೀಸೆ, ಕಣ್ಣಂಚಲ್ಲಿ ತುಂಬಿರೋ ಆ ನೀರು ಕಲಾಭಿಮಾನಿಗಳ ಕಣ್ಣರಳಿಸಿದೆ. ದಿ ಗೋಟ್ ಲೈಫ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.
ಒಂದು ದಶಕದ ಪ್ರಯತ್ನದ ನಂತರ, ನೈಜ ಕಥೆ ಆಧರಿಸಿದ ಈ ಕಾದಂಬರಿ ದೃಶ್ಯ ರೂಪಕ್ಕೆ ಬಂದಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಲ್ಲದೇ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್ ಲೈಫ್ ಸಿನಿಮಾಗೆ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎ.ಆರ್. ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವಿದೆ. ಚಿತ್ರದ ಅದ್ಭುತ ದೃಶ್ಯಗಳನ್ನು ಸುನಿಲ್ ಕೆ.ಎಸ್ ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದು, ಶ್ರೀಕರ್ ಪ್ರಸಾದ್ ಸಂಕಲನವಿದೆ. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮಲಯಾಳಂ ಚಿತ್ರೋದ್ಯಮದ ಅತಿದೊಡ್ಡ ಸಿನಿಮಾ ಎನಿಸಿದೆ. ಬ್ಲೆಸ್ಸಿ ನಿರ್ದೇಶನದ ಈ ಸಿನಿಮಾವನ್ನು ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದೆ. ಅಂದಹಾಗೆ, ಗೋಟ್ ಲೈಫ್ ಸಿನಿಮಾ 2024ರ ಮಾರ್ಚ್ 28 ರಂದು ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.