ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ರೈತ ಏನು ಮಾಡಬೇಕು? ಏನು ಮಾಡಬಾರದು? ಎಂದು ಹೇಳುವ ಕಥಾಹಂದರ ಹೊಂದಿರುವ ‘ಆದರ್ಶ ರೈತ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ತನ್ನ ಚಿತ್ರೀಕರಣ ಮತ್ತಿತರ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಆದರ್ಶ ರೈತ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.
ನಟಿ ಪ್ರಿಯಾ ಹಾಸನ್, ವೇಗಸ್ ಆಸ್ಪತ್ರೆಯ ಸಿ.ಇ.ಒ ಡಾ. ನಾರಾಯಣ ಸ್ವಾಮಿ, ‘ಸಿರಿ ಮ್ಯೂಸಿಕ್’ನ ಸುರೇಶ್ ಚಿಕ್ಕಣ್ಣ, ಪೊಲೀಸ್ ಅಧಿಕಾರಿ ಆರ್. ವಿ ಚೌಡಪ್ಪ ಹಾಗೂ ನಿರ್ಮಾಪಕ ಆಂತರ್ಯ ಸತೀಶ್ ಮೊದಲಾದವರು ‘ಆದರ್ಶ ರೈತ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಡಾ. ಅಮರನಾಥ ರೆಡ್ಡಿ ವಿ. ನಟಿಸಿ ನಿರ್ಮಿಸಿರುವ ‘ಆದರ್ಶ ರೈತ’ ಸಿನಿಮಾಕ್ಕೆ ರಾಜೇಂದ್ರ ಕೊಣದೆಲ ವಿರ್ದೇಶನ ಮಾಡಿದ್ದಾರೆ.
‘ಆದರ್ಶ ರೈತ’ ಸಿನಿಮಾದ ಟೈಟಲ್ಲೇ ಹೇಳುವಂತೆ, ‘ನಮ್ಮ ಚಿತ್ರದಲ್ಲಿ ರೈತ ಹೆಚ್ಚಿನ ಬಡ್ಡಿಗೆ ಸಾಲ ಮಾಡಬಾರದು. ಸರ್ಕಾರ ಬ್ಯಾಂಕ್ ನಿಂದ ನೀಡುವ ಸಾಲವನ್ನೇ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೇವೆ. ಒಬ್ಬ ರೈತ ಇಂತಹ ಅನೇಕ ವಿಷಯಗಳನ್ನು ತಿಳಿದು ವ್ಯವಸಾಯ ಮಾಡಿದಾಗ ‘ಆದರ್ಶ ರೈತ’ ಆಗುತ್ತಾನೆ ಎಂಬುದೆ ಚಿತ್ರದ ಕಥಾಹಂದರ’ ಎನ್ನುವುದು ಚಿತ್ರತಂಡದ ವಿವರಣೆ. ಉಳಿದಂತೆ ರೇಖಾದಾಸ್, ಸಿದ್ಧಾರ್ಥ್, ಮೈಸೂರು ಸುಜಾತ, ಸೂಫಿಯಾ, ಖುಷಿ ಮೆಹ್ತಾ ಮೊದಲಾದವರು ‘ಆದರ್ಶ ರೈತ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ ಶೀಘ್ರದಲ್ಲಿಯೇ ‘ಆದರ್ಶ ರೈತ’ ಸಿನಿಮಾವನ್ನ ತೆರೆಗೆ ತರುವ ಯೋಜನೆಯಲ್ಲಿದೆ.