ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ‘ಭಾವಪೂರ್ಣ’ ಎಂಬ ಮತ್ತೊಂದು ಸಿನಿಮಾಕ್ಕೆ ಚೇತನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ‘ಭಾವಪೂರ್ಣ’ ಸಿನಿಮಾದ ಮೊದಲ ಟ್ರೇಲರ್ ಮತ್ತು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕರಾದ ಬಿ. ಎಸ್ ಲಿಂಗದೇವರು, ಡಿ. ಸತ್ಯಪ್ರಕಾಶ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು ‘ಭಾವಪೂರ್ಣ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
‘ಜಿ. ಎಲ್ ಮೋಶನ್ ಪಿಕ್ಚರ್ಸ್’ ಬ್ಯಾನರಿನಲ್ಲಿ ಪ್ರಶಾಂತ್ ಅಂಜನಪ್ಪ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಭಾವಪೂರ್ಣ’ ಸಿನಿಮಾದ ಹಾಡುಗಳಿಗೆ ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಕ್ಷಯ್ ಎಸ್. ರಿಷಭ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗೊರಲಕೆರೆ ಛಾಯಾಗ್ರಹಣ, ಕೀರ್ತಿರಾಜ್ ಡಿ. ಸಂಕಲನವಿದೆ.ರಮೇಶ್ ಪಂಡಿತ್, ಅಥರ್ವ ಪ್ರಕಾಶ್, ಮಂಜುನಾಥ ಹೆಗ್ಡೆ, ಶೈಲಶ್ರೀ ಧರ್ಮೇಂದ್ರ ಅರಸ್, ವಿನ್ಯಾ ಚೇತನ್ ರೈ, ಮಂಗಳಾ, ಎಂ. ಕೆ ಮಠ, ನಾಗೇಂದ್ರ ಶಾ, ಶಿವಾಜಿರಾವ್ ಜಾಧವ್, ಪವನ ಮೊದಲಾದವರು ‘ಭಾವಪೂರ್ಣ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪೋಟೋಗಳಲ್ಲಿ ಕಾಲಘಟ್ಟವನ್ನು ಬೆಸೆಯುವ ಕಥೆ ಈ ಸಿನಿಮಾದಲ್ಲಿದೆ. ಜನರಿಗೆ ಮನರಂಜನೆ ನೀಡುವ ಸಿನಿಮಾ ಇದಾಗಿದೆ. ಕೊರೊನಾ ಸಮಯದಲ್ಲಿ ಹೊಳೆದ ಕಥೆಯನ್ನು ಸಿನಿಮಾ ಮಾಡಿದ್ದೇವೆ. ಅಂಕೋಲ, ತಾಳಗುಪ್ಪ, ಸೌತಡ್ಕ ಸುತ್ತಮುತ್ತ ಚಿತ್ರೀಕರಣ ಸುಮಾರು 45 ದಿನಗಳ ಕಾಲ ನಡೆಸಲಾಗಿದೆ ಎಂಬುದು ಚಿತ್ರತಂಡದ ಮಾಹಿತಿ. ಇದೇ ವರ್ಷಾಂತ್ಯದೊಳಗೆ ‘ಭಾವಪೂರ್ಣ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.