ಚಿತ್ರ: ಸೋಮು ಸೌಂಡ್ ಇಂಜಿನಿಯರ್
ನಿರ್ದೇಶನ: ಅಭಿ
ನಿರ್ಮಾಪಕ: ಕಿಸ್ಟೋಫರ್ ಕಿಣಿ
ಸಂಗೀತ ನಿರ್ದೇಶನ: ಚರಣ್ ರಾಜ್,
ಛಾಯಾಗ್ರಹಣ: ಶಿವಸೇನಾ
ತಾರಾಬಳಗಳ :ಶ್ರೇಷ್ಠ, ನಿವಿಷ್ಕ ಪಾಟೀಲ್, ಗಿರೀಶ್ ಜತ್ತಿ, ಜಹಾಂಗೀರ್, ಯಶ್ ಶೆಟ್ಟಿ
ದುನಿಯಾ ಸೂರಿ (Duniya Suri) ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಅಭಿ ನಿರ್ದೇಶನದ ಚೊಚ್ಚಲ ಸಿನಿಮಾ ಸೋಮು ಸೌಂಡ್ ಇಂಜಿನಿಯರ್. ಉತ್ತರ ಕರ್ನಾಟಕ ಭಾಗದ ಹುಡುಗನೊಬ್ಬನ ಜೀವನ ಸುತ್ತ ಹೆಣೆಯಲಾದ ಕಥೆಯಿದು. ಅಲ್ಲಿಯ ಹೊಸ ಪ್ರತಿಭೆ ಶ್ರೇಷ್ಠ ಈ ಚಿತ್ರದ ನಾಯಕ ನಟ. ಸಾಕಷ್ಟು ಭರವಸೆ ಮೂಡಿಸಿದ್ದ ಈ ಚಿತ್ರ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಭರವಸೆಯ ಬೆಳಕಾಗುತ್ತಾರೆ ಅನ್ನೋದಕ್ಕೆ ಒಂದು ಸಾಕ್ಷಿ ಎನ್ನಬಹುದು. ಉತ್ತರ ಕರ್ನಾಟಕ ಭಾಗದ ಭಾಷೆ ಸೊಗಡು ತುಂಬಿರೋ ಈ ಸಿನಿಮಾ ಅಲ್ಲಿನ ಸಿನಿ ಪ್ರೇಕ್ಷಕರಿಗೆ ಮಾತ್ರವಲ್ಲ ಆ ಭಾಷೆ ಸೊಗಡನ್ನು ಆಸ್ವಾದಿಸುವ ಪ್ರತಿ ಕನ್ನಡ ಮನಸ್ಸುಗಳಿಗೂ ಖುಷಿ ನೀಡುತ್ತದೆ. ಕೇವಲ ಅಲ್ಲಿನ ಭಾಷೆ ಮಾತ್ರವಲ್ಲ ಸಿನಿಮಾ ಕೂಡ ಮನರಂಜಿಸುತ್ತೆ.
ನಾಯಕ ನಟ ಸೋಮು ಕೋಪಿಷ್ಟ, ಮಾತ್ತೆತ್ತಿದ್ರೆ ಜಗಳ, ಹೊಡೆದಾಟ, ಒರಡು ಸ್ವಭಾವ. ಹಾಗಂತ ಈತ ದುಷ್ಟ ಅಲ್ಲ. ಆದ್ರೆ ಈತನ ಈ ಒರಟು ನಡವಳಿಕೆ ಊರ ತುಂಬೆಲ್ಲ ವಿರೋಧಿಗಳನ್ನು ಹುಟ್ಟು ಹಾಕಿರುತ್ತೆ. ಹೊಡೆದಾಟ ಬಡಿದಾಟದ ನಡುವೆ ಚೆಂದದ ಪ್ರೀತಿ ಕಥೆಯೂ ಇದೆ. ಆದ್ರೆ ಆತನ ಕೋಪ, ಅಹಂಕಾರವೇ ಆತನ ಬದುಕಲ್ಲಿ ದೊಡ್ಡದಾದ ಬಿರುಗಾಳಿ ಎಬ್ಬಿಸುತ್ತೆ. ಆ ಬಿರುಗಾಳಿಯ ಹೊಡೆತಕ್ಕೆ ಸಿಕ್ಕ ಸೋಮು ಬದುಕಲ್ಲಿ ಏನೆಲ್ಲ ನಡೆಯುತ್ತೆ, ಬದಲಾವಣೆಗೆ ಹಾತೊರೆಯುವವನ ಜೀವನದಲ್ಲಿ ಏನೆಲ್ಲ ನಡೆಯುತ್ತೆ ಅನ್ನೋದೇ ಈ ಸಿನಿಮಾ.
ಸಿಂಪಲ್ ಕಥೆಯಾದ್ರು ಕಥೆ ಹೆಣೆದ ರೀತಿ ತೆರೆಮೇಲೆ ಕಟ್ಟಿಕೊಟ್ಟ ರೀತಿಗೆ ಭೇಷ್ ಎನ್ನಲೇಬೇಕು. ಎಲ್ಲೂ ತಾಳ್ಮೆ ಪರೀಕ್ಷಿಸದೇ ಸಲೀಸಾಗಿ ಸಾಗುವ ಸಿನಿಮಾ ದ್ವಿತಿಯಾರ್ಧದಲ್ಲಿ ಭಾವನೆಗಳ ಅಲೆಯಲ್ಲಿ ತೇಲಿಸುತ್ತೆ. ನಿರೂಪಣೆ, ಸಂಭಾಷಣೆಯಲ್ಲಿ ಅಭಿ ಹಾಗೂ ಮಾಸ್ತಿಯವರ ಬರವಣಿಗೆ ಮೆಚ್ಚುಗೆ ಪಡೆದುಕೊಳ್ಳುತ್ತೆ. ಇವರಿಬ್ಬರ ಜುಗಲ್ಬಂಧಿಗೆ ಸಾಥ್ ನೀಡಿದವರು ಕ್ಯಾಮೆರಾಮ್ಯಾನ್ ಶಿವಸೇನಾ, ಸಂಗೀತ ನಿರ್ದೇಶಕ ಚರಣ್ ರಾಜ್( Charan Raj). ಮಾಸ್ತಿ( Masthi) ಹಾಗೂ ಅಭಿ ಅವರ ಸಂಭಾಷೆಣೆ ಕಚಗುಳಿ ನೀಡೊದ್ರ ಜೊತೆಗೆ ಅರಗಿಸಿಕೊಳ್ಳಲೇಬೇಕಾದ ಕೆಲ ಕಹಿ ಸತ್ಯವನ್ನು ಚುಟುಕಾಗಿ, ಮೊನಚಾಗಿ ಹೇಳುವ ಪರಿ ಇಷ್ಟವಾಗುತ್ತೆ. ನಾಯಕ ನಟ ಶ್ರೇಷ್ಠ ಮೊದಲ ಸಿನಿಮಾವಾದರೂ ಭೇಷ್ ಎನ್ನವಂತೆ ನಟಿಸಿದ್ದಾರೆ. ತಂದೆಯಾಗಿ ಗಿರೀಶ್ ಜತ್ತಿ ಅಭಿನಯದ ಎಲ್ಲರಿಗೂ ಇಷ್ಟವಾಗುತ್ತೆ. ತೆರೆಮೇಲೆ ಬಂದಾಗೆಲ್ಲ ಫುಲ್ ಮಾರ್ಕ್ಸ್ ಸ್ಕೋರ್ ಮಾಡೋ ಜಹಾಂಗೀರ್ ತಮ್ಮ ಮಾತಿನ ಛಾಟಿಯಲ್ಲೇ ನಗೆಗಡಲಲ್ಲಿ ತೇಲಿಸುತ್ತಾರೆ.
ಮೊದಲಾರ್ಧ ರಗಡ್ ಆಗಿ ದ್ವಿತಿಯಾರ್ಧ ಭಾವ ಜೀವಿಯಾಗಿ ಕಾಡುವ ಸೋಮು ಸೌಂಡ್ ಇಂಜಿನಿಯರ್ ಇಷ್ಟವಾಗುತ್ತಾನೆ. ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಭರವಸೆಯ ಅಲೆ ಮೂಡಿಸಿದ್ದಾರೆ. ಜವಾರಿ ಭಾಷೆ ಸವಿ ಸವಿಯಬೇಕು, ಫ್ಯಾಮಿಲಿ ಸಮೇತ ಸಿನಿಮಾ ನೋಡಬೇಕು ಅಂತಿದ್ರೆ ಮಿಸ್ ಮಾಡದೇ ಈ ಸಿನಿಮಾ ನೋಡಬಹುದು.