ತುಂಬು ಗರ್ಭಿಣಿಯ ಕುರಿತಾದ ಕಥಾಹಂದರ ಹೊಂದಿರುವ ನಟಿ ಮಮತಾ ರಾಹುತ್ ನಾಯಕಿಯಾಗಿ ನಟಿಸಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ತಾರಿಣಿ’ ಚಿತ್ರದ ಮೊದಲ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಸಾಹಿತಿ, ಹೋರಾಟಗಾರ್ತಿ ಮತ್ತು ರಾಜಕಾರಣಿ ಬಿ. ಟಿ. ಲಲಿತ ನಾಯಕ್ ಸೇರಿದಂತೆ ಹಲವು ಗಣ್ಯರು ‘ತಾರಿಣಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
‘’ತಾರಿಣಿ’ ಗರ್ಭಿಣಿ ಹೆಣ್ಣಿನ ಕಥೆಯನ್ನು ಹೊಂದಿರುವ ಚಿತ್ರ. ನಾಯಕಿ ಮಮತ ರಾಹುತ್ ಗರ್ಭಿಣಿ ಇರುವಾಗಲೇ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಗರ್ಭಿಣಿ ಕುರಿತಾದ ಚಿತ್ರದಲ್ಲಿ ನಿಜವಾದ ಗರ್ಭಿಣಿಯೇ ನಟಿಸಿದ್ದಾರೆ. ಮಗು ಆದ ನಂತರವೂ ಅಭಿನಯಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶ ಈ ಚಿತ್ರದಲ್ಲಿದೆ ಎಂಬುದು ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಮಾತು.
‘ನಾನು ಏಳು ತಿಂಗಳ ಗರ್ಭಿಣಿ ಇದ್ದಾಗ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಕೆಲವು ದಿನಗಳ ಚಿತ್ರೀಕರಣ ನಂತರ ನನಗೆ ಅವಧಿಗೂ ಕೆಲವು ದಿನಗಳ ಮುಂಚೆಯೇ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದೆ’ ಎನ್ನುವುದು ಚಿತ್ರದ ನಾಯಕಿ ಮಮತಾ ರಾಹುತ್ ಮಾತು. ನಟಿ ಮಮತ ರಾಹುತ್ ಅವರ ಪತಿ ಸುರೇಶ್ ಕೊಟ್ಯಾನ್ ಚಿತ್ರಾಪು ‘ಶ್ರೀಗಜನಿ ಪ್ರೊಡಕ್ಷನ್ಸ್’ ಲಾಂಛನದಲ್ಲಿ ‘ತಾರಿಣಿ’ ಸಿನಿಮಾವನ್ನು ನಿರ್ಮಿಸಿದ್ದಾರೆ.
‘ತಾರಿಣಿ’ ಯಾಗಿ ಸಿನಿಮಾದಲ್ಲಿ ಮಮತಾ ರಾಹುತ್ ನಟಿಸಿದ್ದು, ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ. ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ತೇಜಸ್ವಿನಿ, ಕವಿತಾ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜ, ಅರ್ಚನ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.