ಸಿನಿಮಾ: ʻಆಡು ಜೀವಿತಂʼ
ನಿರ್ದೇಶನ: ಬ್ಲೆಸ್ಸಿ
ಸಂಗೀತ: ಎ. ಆರ್. ರೆಹಮಾನ್
ಛಾಯಾಗ್ರಹಣ: ಸುನೀಲ್.ಕೆ.ಎಸ್, ಕೆ.ಯು.ಮೋಹನನ್
ತಾರಾಬಳಗ: ಪೃಥ್ವಿರಾಜ್ ಸುಕುಮಾರನ್, ಅಮಲಾ ಪೌಲ್, ಕೆ.ಆರ್.ಗೋಕುಲ್, ಜಿಮ್ಮಿ ಜೀನ್ ಲೂಯಿಸ್.
Aadujeevitham: ಮಲಯಾಳಂ ಸೂಪರ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್(Prithviraj Sukumaran) ಅಭಿನಯದ ಬಹು ನಿರೀಕ್ಷಿತ ಸಿನಿಮಾ ʻಆಡು ಜೀವಿತಂʼ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ವಿಮರ್ಶೆ ಇಲ್ಲಿದೆ…
ಕಥೆ: ಕೇರಳದ ತೀರಾ ಸಾಮಾನ್ಯ ಕೂಲಿ ಕೆಲಸದಾತ ಅರಭ್ ರಾಷ್ಟ್ರಕ್ಕೆ ತೆರಳಿ ಹಣ ಸಂಪಾದಿಸಿ ತನ್ನ ಕುಟುಂಬವನ್ನು ಪೊರೆಯುವ ಕನಸು ಕಾಣುತ್ತಾನೆ. ಆತನೇ ನಜೀಬ್ ಮೊಹಮ್ಮದ್ (ಪೃಥ್ವಿರಾಜ್ ಸುಕುಮಾರನ್). ಯಾರದ್ದೋ ಸಹಾಯದ ಬೆನ್ನುಹತ್ತಿ ಅರಭ್ ರಾಷ್ಟ್ರಕ್ಕೆ ಹೋದ ಆತ ಮೋಸ ಹೋಗುತ್ತಾನೆ. ಆತನ ಮುಂದಿನ ಹಾದಿ ಮುಳ್ಳಿನ ಹಾಸಿಗೆ. ಗುಲಾಮಗಿರಿಗೆ ಒಳಗಾಗುವ ನಜೀಬ್ ಬದುಕು ಅಕ್ಷರಶಃ ನರಕ. ಮರಳುಗಾಡಿನಲ್ಲಿ ಕುರಿ ಕಾಯುತ್ತಾ ಬಿಸಿಲ ಬೆಂಗಾಡಿನಲ್ಲಿ ನೊಂದು ಬೇಯುವ ಆತನ ಮನದಲ್ಲಿ ತನ್ನೂರಿಗೆ ಮರಳುವ ಭರವಸೆಯ ಕಿರಣವೂ ಇದೆ. ಜೀವ ತೆಗೆಯಲು ಹೇಸದ ಕ್ರೂರಿಗಳಿಂದ ಕಣ್ತಪ್ಪಿಸಿ ಬರುವುದು ಸಾವಿಗೆ ಕೊರಳೊಡ್ಡಿದ್ದಂತೆ. ಕಣ್ಣು ಹಾಯಿಸಿದಷ್ಟು ಮರಳುಗಾಡೇ ಕಾಣುವ ಅಲ್ಲಿ ದಾರಿ ಕಾಣುವುದು ಸ್ವರ್ಗದ ಬಾಗಿಲು ತೆರೆದಂತೆ. ಈ ಹಾವು ಏಣಿ ಆಟದಲ್ಲಿ ನಜೀಬ್ ಬದುಕುಳಿಯುತ್ತಾನಾ..? ತನ್ನೂರಿಗೆ ಮರಳಿ ಬರುತ್ತಾನ..? ಎನ್ನುವುದರ ರೋಚಕತೆಯೇ ʻಆಡು ಜೀವಿತಂʼ.
ಸಿನಿಮಾ ಹಾಗೂ ಅಭಿನಯ: ಆಡು ಜೀವಿತಂ ಅಕ್ಷರಶಃ ಕಾಡುವ ಸಿನಿಮಾ, ಸಿನಿಮಾದ ಸಬ್ ಟೈಟಲ್ನಲ್ಲೇ ಇರುವಂತೆ ಇಲ್ಲಿ ನಾಯಕ ತೆಗೆದುಕೊಳ್ಳೋ ಪ್ರತಿ ಉಸಿರು ಅಕ್ಷರಶಃ ಹೋರಾಟದ್ದೇ ಆಗಿದೆ. ಇಲ್ಲಿ ಮನಕಲುಕುವ ದೃಶ್ಯವೂ ಇದೆ, ವ್ಯಕ್ತಿಯೋರ್ವನ ಮೌನದ ಆರ್ತನಾದವೂ ಇದೆ. ಇಲ್ಲಿ ಉದ್ದುದ್ದ ಸಂಭಾಷಣೆಗೆ ಜಾಗವಿಲ್ಲ, ಬದಲಾಗಿ ಮೌನಕ್ಕೆ ಹೆಚ್ಚು ಬೆಲೆ. ಹಾಗಂತ ಈ ಸಿನಿಮಾ ಎಲ್ಲಾ ರೀತಿಯ ಪ್ರೇಕ್ಷಕರನ್ನು ಹಿಡಿದು ಕೂರಿಸುವುದಿಲ್ಲ, ಬದಲಾಗಿ ಒಂದಿಷ್ಟು ಮೆಚೂರ್ಡ್ ಪ್ರೇಕ್ಷಕರನ್ನು ಬೇಡುತ್ತೆ. ಮೂರು ಗಂಟೆಯ ಸಿನಿಮಾ ಕೊಂಚ ತಾಳ್ಮೆಯನ್ನು ಬೇಡೋದಂತೂ ಸತ್ಯ. ಒಂದಿಷ್ಟು ದೃಶ್ಯಕ್ಕೆ ಕತ್ತರಿ ಹಾಕಿ ಸಿನಿಮಾದ ಅವಧಿ ಕಡಿಮೆ ಮಾಡಿದ್ರೆ ʻಆಡು ಜೀವಿತಂʼ ಇನ್ನಷ್ಟು ಮಜಭೂತಾಗಿರುತ್ತೆ. ಅಡ್ವೆಂಚರಸ್ ಸಿನಿಮಾ ಪ್ರಿಯರಿಗೆ ಈ ಸಿನಿಮಾ ಬಾಡೂಟ.
ಇಡೀ ಸಿನಿಮಾ ಒಬ್ಬ ವ್ಯಕ್ತಿ ಮೇಲೆ ಕೇಂದ್ರವಾಗಿದೆ. ಪೃಥ್ವಿರಾಜ್ ಸುಕುಮಾರನ್(Prithviraj Sukumaran) ಅಭಿನಯ ಕಣ್ಣಾಲಿಯನ್ನು ಒದ್ದೆಯಾಗಿಸುತ್ತೆ. ನಿರ್ದೇಶಕರ ಕನಸಿಗೆ ಜೀವ ತುಂಬಿರುವ ಪೃಥ್ವಿರಾಜ್ ತೆರೆಯ ಮೇಲೂ, ಅದರಾಚೆಯೂ ಕಾಡುತ್ತಾರೆ. ನಜೀಬ್ ಪಾತ್ರವನ್ನು ಪೃಥ್ವಿರಾಜ್(Prithviraj Sukumaran) ಅಕ್ಷರಶಃ ಜೀವಿಸಿದ್ದಾರೆ. ನೈಜತಗೆ ಹತ್ತಿರವಾದ ಅಭನಯ ಅವರದ್ದು, ಒಂದೇ ಮಾತಲ್ಲಿ ಹೇಳಬೇಕೆಂದರೆ ರಾಕ್ಷಸನಂತ ಅಭಿನಯ. ಈ ಚಿತ್ರ ಜೀವಮಾನದ ಶ್ರೇಷ್ಠ ಸಿನಿಮಾವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ಚಿತ್ರಕ್ಕಾಗಿ ಇವರ ರೂಪಾಂತರವನ್ನು ನಿಸ್ಸಂಶಯವಾಗಿ ಶ್ಲಾಘಿಸಲೇಬೇಕು. ದೊಡ್ಡ ಪರದೇ ಮೇಲೆ ಅದನ್ನು ಸವಿದಾಗಲೇ ಅದರ ಗುಟ್ಟು ಅರಿವಾಗುತ್ತೆ.
ನಿರ್ದೇಶನ:ಕಾದಂಬರಿ ಕಥೆಯನ್ನು ಸಿನಿಮಾವಾಗಿಸೋದು ಸುಲಭದ ಮಾತಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ, ದೊಡ್ಡ ಸ್ಕೇಲ್ ನಲ್ಲಿ ತೆರೆ ಮೇಲೆ ತರೋದಕ್ಕೆ ಹೆಚ್ಚಿನದ್ದೆ ಶ್ರಮ, ಪ್ರತಿಭೆ ಬೇಕು. ಆ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ನಿರ್ದೇಶಕ ಬ್ಲೆಸ್ಸಿ(Blessy). ಯುವ ನಟ ಕೆ. ಆರ್. ಗೋಕುಲ್ ತಮ್ಮ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಹಾಗೂ ಕೆಲವೇ ಕೆಲವು ನಿಮಿಷ ತೆರೆ ಮೇಲೆ ಕಾಣ ಸಿಗುವ ಅಮಲಾ ಪೌಲ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ತಾಂತ್ರಿಕ ವರ್ಗ: ಈ ಚಿತ್ರದ ಅತಿ ದೊಡ್ಡ ಶಕ್ತಿ ತಾಂತ್ರಿಕ ವರ್ಗ. ಮೇಕಿಂಗ್ ಅಧ್ಬುತವಾಗಿ ಮೂಡಿ ಬಂದಿದೆ. ಪೃಥ್ವಿರಾಜ್ ಸುಕುಮಾರನ್(Prithviraj Sukumaran) ನಟನೆಯಲ್ಲಿ ಸಿನಿಮಾವನ್ನು ನೆಕ್ಸ್ಟ್ ಲೆವಲ್ಗೆ ಕೊಂಡೊಯ್ದರೆ, ಛಾಯಾಗ್ರಾಹಕರಾದ ಸುನೀಲ್.ಕೆ.ಎಸ್ ಹಾಗೂ ಕೆ.ಯು.ಮೋಹನನ್ ಕ್ಯಾಮೆರಾ ಕಣ್ಣಲ್ಲೇ ಕಾಡುತ್ತಾರೆ. ಸಂಕಲನ ಈ ಸಿನಿಮಾದ ಮತ್ತೊಂದು ಶಕ್ತಿಯಾಗಿದ್ದು, ಎ.ಆರ್.ರೆಹಮಾನ್ (A.R.Rahman) ಸಂಗೀತ ಸಿನಿಮಾಗೆ ಪೂರಕವಾಗಿದೆ.
ಖಂಡಿತವಾಗಿ ʻಆಡು ಜೀವಿತಂʼ(Aadujeevitham) ಒಂದೊಳ್ಳೆ ಅನುಭವವನ್ನು ನೀಡುತ್ತದೆ. ಎಲ್ಲಾ ರೀತಿಯ ಪ್ರೇಕ್ಷಕರನ್ನು ಈ ಸಿನಿಮಾ ಬೇಡದಿದ್ರೂ, ಸಿನಿಮಾ ನೋಡಿದ ಮೇಲಂತೂ ಕಾಡದೇ ಇರುವುದಿಲ್ಲ. ಇಡೀ ಸಿನಿಮಾದ ಶಕ್ತಿ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯ, ಅದನ್ನು ದೊಡ್ಡ ಪರದೆ ಮೇಲೆ ನೋಡಿದರೇನೆ ಮಜ.