‘ಉಗ್ರಂ’ ಸಿನಿಮಾದ ಖ್ಯಾತಿಯ ನಟ ತಿಲಕ್ ಶೇಖರ್ ನಾಯಕರಾಗಿ ನಟಿಸಿರುವ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಚಿವ ಹೆಚ್. ಸಿ ಮಹದೇವಪ್ಪ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿರಿಯ ನಿರ್ದೇಶಕ ಎಸ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ಆನಂದ್ ಆಡಿಯೋ ಶ್ಯಾಮ್ ಅವರು ಸಹ ಸಮಾರಂಭಕ್ಕೆ ಆಗಮಿಸಿ ಯಶಸ್ಸನ್ನು ಹಾರೈಸಿದರು.
‘ಈ ಹಿಂದೆ ನಾನು ‘ಭಾವಚಿತ್ರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ಈ ಸಿನಿಮಾದಲ್ಲಿ ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿದ್ದೇನೆ. ತಿಲಕ್ ಅವರು ‘ಗ್ಯಾಂಗ್ ಸ್ಟರ್’ ಆಗಿ, ನಾನು ‘ಫ್ರಾಂಕ್ ಸ್ಟರ್’ ಆಗಿ ನಟಿಸಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇದು ಯೂಟ್ಯೂಬರ್ ಒಬ್ಬನ ಕಥೆಯಾಗಿದೆ’ ಎನ್ನುವುದು ನಟ ಕಂ ನಿರ್ದೇಶಕ ಗಿರೀಶ್ ಕುಮಾರ್ ಮಾತು. ‘ಈ ಸಿನಿಮಾದಲ್ಲಿ ನಾನು ‘ಗ್ಯಾಂಗ್ ಸ್ಟರ್’ ಆಗಿ ಕಾಣಿಸಿಕೊಂಡಿದ್ದೇನೆ. ಗಿರೀಶ್ ಕುಮಾರ್ ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರ ಜನರಿಗೆ ಹತ್ತಿರವಾಗಲಿದೆ’ ಎಂಬುದು ನಾಯಕ ತಿಲಕ್ ಶೇಖರ್ ಅಭಿಪ್ರಾಯ.
‘ವುಡ್ ಕ್ರೀಪರ್ಸ್’ ಲಾಂಛನದಲ್ಲಿ ನಿರ್ಮಾಣವಾಗಿರುವ, ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಸಿನಿಮಾದಲ್ಲಿ ವಿರಾನಿಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರು ಈ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಸಿನಿಮಾದ ನಾಲ್ಕು ಹಾಡುಗಳಿಗೆ ಜಾನ್ ಕೆನಡಿ ಸಂಗೀತ ಸಂಯೋಜಿಸಿದ್ದು, ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನವಿದೆ. ಸದ್ಯ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ, ಸೆಪ್ಟೆಂಬರ್ ಅಂತ್ಯಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.