ದಕ್ಷಿಣ ಭಾರತ ಸಿನಿಮಾಗಳ ಹಬ್ಬ – ‘ಸೈಮಾ’ (South Indian International Movies Awards – SIIMA) ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಸೆಪ್ಟಂಬರ್ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಅತ್ಯತ್ತುಮ ನಟನೆ, ನಿರ್ದೇಶನ, ನಿರ್ಮಾಣ ಹೀಗೆ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ನೀಡ ಸಿನಿಮಾ ಮಂದಿಯನ್ನು ಗೌರವಿಸುವ ಈ ಸಮಾರಂಭದಲ್ಲಿ ದಕ್ಷಿಣ ಭಾರತದ ವಿವಿಧ ಚಿತ್ರರಂಗಗಳ ಬಹುತೇಕ ತಾರೆಯರು ಭಾಗಿಯಾಗಲಿದ್ದಾರೆ.
ಈ ಬಾರಿ ‘ಸೈಮಾ’ 11ನೇ ಆವೃತ್ತಿ ನಡೆಯಲಿದ್ದು, ಕಳೆದ ಕೆಲ ತಿಂಗಳಿನಿಂದ ‘ಸೈಮಾ’ಕ್ಕೆ ತಯಾರಿ ಕೂಡ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ‘ಸೈಮಾ’ ಕುರಿತು ಮಾಹಿತಿ ನೀಡಲು ಬೆಂಗಳೂರಿಗೆ ಆಗಮಿಸಿದ್ದ ನಟಿ ಶ್ರುತಿ ಹಾಸನ್, ‘ಮೊದಲ ವರ್ಷ ‘ಸೈಮಾ’ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದೆ. ಈಗ ‘ಸೈಮಾ’ 11ನೇ ವರ್ಷಕ್ಕೆ ಕಾಲಿಟ್ಟಿದೆ. ಮತ್ತಷ್ಟು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಚಿತ್ರರಂಗದ ಮಂದಿಯನ್ನು, ಪ್ರತಿಭಾವಂತರನ್ನು ಗೌರವಿಸುವ ಕೆಲಸ ಮುಂದುವರಿಸಲಿ’ ಎಂದು ಹಾರೈಸಿದರು. ನಟ ಡಾಲಿ ಧನಂಜಯ ಮಾತನಾಡಿ, ‘ಎರಡನೇ ‘ಸೈಮಾ’ದಿಂದ ಅದರೊಂದಿಗೆ ನಂಟು ಬೆಳೆಯಿತು. ಈಗ ಆ ನಂಟು ಇನ್ನಷ್ಟು ಗಟ್ಟಿಯಾಗಿದೆ. ಬೇರೆ ಬೇರೆ ಸಿನಿಮಾರಂಗದವರೊಂದಿಗೆ ಸಂಬಂಧ ಬೆಳೆಸಲು ‘ಸೈಮಾ’ ಒಳ್ಳೆಯ ವೇದಿಕೆ’ ಎಂದರು.
ನಟಿ ಪ್ರಣೀತಾ ಸುಭಾಷ್ ಮಾತನಾಡಿ, ಸೈಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ಮಾತನಾಡಿ, ‘ಸತತ 11 ನೇ ವರ್ಷದಿಂದ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಶಸ್ತಿ ನೀಡುವಲ್ಲಿ ಮುಂಚೂಣಿಯಲ್ಲಿದ್ದೇವೆ. ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ಗುರುತಿಸಿ ಬೆಂಬಲಿಸಲಾಗುವುದು. ಈ ಬಾರಿ ‘ಸೈಮಾ’ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭದ ದುಬೈನಲ್ಲಿ ನಡೆಯಲಿದೆ. ದಕ್ಷಿಣ ಭಾರತದ ಪ್ರತಿಭೆಗಳನ್ನು ಈ ಬಾರಿ ಹೆಚ್ಚು ಹೆಚ್ಚು ಪ್ರದರ್ಶನ ಮಾಡಲಾಗುವುದು. ಅನೇಕ ಜನಪ್ರಿಯ ಸಿನಿಮಾಗಳು ಈ ಬಾರಿ ‘ಸೈಮಾ’ದಲ್ಲಿವೆ’ ಎಂದರು. ಸದ್ಯ ‘ಸೈಮಾ’ಕ್ಕೆ ತಯಾರಿ ಜೋರಾಗಿ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲು ತಾರೆಯರು ಮತ್ತು ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸಿನಿಪ್ರಿಯರೂ ಕಾತುರರಾಗಿದ್ದಾರೆ.