ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗೆ ಟೈಟಲ್ ಫಿಕ್ಸಾಗಿದೆ. ಚಿತ್ರಕ್ಕೆ `ವೆಟ್ಟಯ್ಯನ್’ ಅನ್ನೋ ಪವರ್ ಫುಲ್ ಟೈಟಲ್ ಇಡಲಾಗಿದೆ. ವೆಟ್ಟಯ್ಯನ್ ಅಂದರೆ ಬೇಟೆಗಾರ ಅಂತ ಅರ್ಥ. ಸೋ ಶಿವಾಜಿ ಈಗ `ಬೇಟೆಗಾರ’ನಾಗಿ ಕಣಕ್ಕಿಳಿದಿದ್ದಾರೆ. `ಜೈಲರ್’ ಸಿನಿಮಾದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ಖದರ್ ತೋರಿಸಿ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದ ಬಾಷಾ, ಈಗ `ಬೇಟೆಗಾರ’ನಾಗಿ ಗಲ್ಲಾಪೆಟ್ಟಿಗೆ ಖಲ್ಲಾಸ್ ಮಾಡೋದಕ್ಕೆ ಬರುತ್ತಿದ್ದಾರೆ.
ಯಸ್, `ಜೈಲರ್’ ಸಿನಿಮಾ ಮ್ಯಾಸೀವ್ ಹಿಟ್ಟಾಗಿದ್ದು, ಅದರ ಬೆನ್ನಲ್ಲೇ `ತಲೈವಾ-170′ ಸಿನಿಮಾ ಸೆಟ್ಟೇರಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ ಆ ಚಿತ್ರಕ್ಕೆ `ವೆಟ್ಟಯ್ಯನ್’ ಅನ್ನೋ ಶೀರ್ಷಿಕೆ ನೀಡಿ ಟೀಸರ್ ರಿಲೀಸ್ ಮಾಡಿದ್ದಾರೆ. ನಿನ್ನೆ ಪಡೆಯಪ್ಪನ ಹುಟ್ಟುಹಬ್ಬವಿತ್ತು. ಚೆನ್ನೈ ಚಂಡಮಾರುತದಿಂದ ಜನ ತತ್ತರಿಸೋ ಕಾರಣಕ್ಕೆ ರಜನಿಕಾಂತ್ ಬರ್ತ್ಡೇಗೆ ಬ್ರೇಕ್ ಹಾಕಿದ್ದರು. ಆದರೆ, ಅವರ ಅಭಿಮಾನಿಗಳು ಹಾಗೂ ಸಿನಿಮಾ ಟೀಮ್ ಸ್ಪೆಷಲ್ ಗಿಫ್ಟ್ ಗಳನ್ನ ನೀಡೋ ಮೂಲಕ ಶಿವಾಜಿ ಹುಟ್ಟುಹಬ್ಬವನ್ನ ಸ್ಪೆಷಲ್ ಆಗಿಸಿದ್ದಾರೆ. ಜೈ ಭೀಮ್ ಖ್ಯಾತಿಯ ಡೈರೆಕ್ಟರ್ ಜ್ಞಾನವೇಲ್ ಅವರು, ತಲೈವಾ ಹುಟ್ಟುಹಬ್ಬಕ್ಕೆ `ವೆಟ್ಟಯ್ಯನ್’ ಟೈಟಲ್ ಅನಾವರಣ ಮಾಡಿ ಸಮಸ್ತ ರಜನಿ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದಾರೆ.
ವೆಟ್ಟಯ್ಯನ್ ಟೈಟಲ್ ಟೀಸರ್ನಲ್ಲಿ ರಜಿನಿಕಾಂತ್ ಲಾಠಿ ಹಿಡಿದು ಸ್ಟೈಲಿಸ್ಟ್ ಆಗಿ ನಡೆದುಕೊಂಡು ಬಂದಿದ್ದಾರೆ. “ಬೇಟೆ ಆರಂಭವಾದಾಗ ಆಹಾರ ತಪ್ಪದೇ ಸಿಗುತ್ತದೆ” ಅಂತ ತಮಿಳಿನಲ್ಲಿ ಡೈಲಾಗ್ ಹೊಡೆದಿದ್ದಾರೆ. ಸಿನಿಮಾದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಕರಣವೊಂದನ್ನು ರೀ ಓಪನ್ ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎನ್ನಲಾಗಿದೆ. ಎಂದಿನಂತೆ ರಜನಿ ಸ್ಟೈಲ್, ಸ್ವ್ಯಾಗ್, ಮ್ಯಾನರಿಸಂನ `ಬೇಟೆಗಾರ’ ಟೀಸರ್ ನಲ್ಲಿ ನೋಡಿ ತಲೈವಾ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಅಚ್ಚರಿ ಅಂದರೆ ಈ ಸಿನಿಮಾ ಮೂಲಕ ರಜನಿ ಹಾಗೂ ಅಮಿತಾಬ್ ಮತ್ತೆ ಒಂದಾಗಿದ್ದಾರೆ. 33 ವರ್ಷಗಳು ಕಳೆದ್ಮೇಲೆ ಬಿಗ್ ಬಿ ಹಾಗೂ ಬಾಬಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಇವರಿಬ್ಬರ ಸೀಕ್ವೆನ್ಸ್ ಗಳನ್ನು ಚಿತ್ರತಂಡ ಸೆರೆಹಿಡಿದಿತ್ತು. ರಜನಿ ಹಾಗೂ ಅಮಿತಾಬ್ ಇಬ್ಬರು ಕೂಡ ತಮ್ಮ ಸೋಷಿಯಲ್ ಪುಟದಲ್ಲಿ ಫೋಟೋ ಶೇರ್ ಮಾಡಿ ತಮ್ಮ ತಮ್ಮ ಭಾವನೆಗಳನ್ನ ಹಂಚಿಕೊಂಡಿದ್ದರು. 33 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಒಟ್ಟಿಗೆ ದರ್ಶನ ಕೊಡ್ತಿರುವ ಈ ಇಬ್ಬರು ಘಟಾನುಘಟಿ ನಾಯಕರ ಕಾಂಬೋ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿ ಕಮಾಲ್ ಮಾಡಿತ್ತು. ಹಮ್ ಸಿನಿಮಾ ನಂತರ ಇವರಿಬ್ಬರನ್ನು ತೆರೆಮೇಲೆ ತರುವ ಪ್ರಯತ್ನ ನಡೆದಿತ್ತಾದರೂ ಸಾಧ್ಯವಾಗಿರಲಿಲ್ಲ. ಇದೀಗ ಲೈಕಾ ಸಂಸ್ಥೆ ಆ ವಿಚಾರದಲ್ಲಿ ಯಶಸ್ವಿಯಾಗಿದೆ.
ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಹೂಡುವ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇನ್ನೂ ಈ ಸಿನಿಮಾವನ್ನು ನಿರ್ದೇಶಕ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ರಜನಿ- ಅಮಿತಾಭ್ ಬಚ್ಚನ್ ನಂತಹ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಲೈವರ್ 170 ಸಿನಿಮಾದಲ್ಲಿ ರಜನಿ- ಬಿಗ್ ಬಿ ಮಾತ್ರವಲ್ಲ ಬಾಹುಬಲಿ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಭಾಟಿ, ಪುಷ್ಪ ಖ್ಯಾತಿಯ ಫಹಾದ್ ಫಾಸಿಲ್, ಮಂಜು ವಾರಿಯರ್, ದುಶಾರಾ ವಿಜಯನ್, ರಿತಿಕಾ ಸಿಂಗ್ ನಂತಹ ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿದೆ. ರಾಕ್ ಸ್ಟಾರ್ ಅನಿರುದ್ಧ್ ಒನ್ಸ್ ಎಗೇನ್ ರಜನಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತ ರಜನಿ ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಪ್ರೂ ಮಾಡುತ್ತಾ ಬೆಳ್ಳಿತೆರೆ ಮೇಲೆ ನಾಗಾಲೋಟ ಮುಂದುವರೆಸಿದ್ದಾರೆ. 72 ಮುಗಿಸಿ 73ಕ್ಕೆ ಕಾಲಿಟ್ಟಿರೋ ತಲೈವಾ ದಣಿವರಿಯದೇ ದುಡಿಯುತ್ತಿದ್ದಾರೆ. ಸಿನಿಮಾ ಪ್ರೇಮಿಗಳನ್ನು ರಂಜಿಸೋದಕ್ಕೆ ಇಳಿವಯಸ್ಸಿನಲ್ಲೂ ಹೊಸ ಹುರುಪು, ಹುಮ್ಮಸ್ಸಿನಿಂದ ಕೆಲಸ ಮಾಡ್ತಿದ್ದಾರೆ. ಭರ್ತಿ 50 ವರ್ಷಗಳಿಂದ ಕಲಾಸರಸ್ವತಿಯ ಸೇವೆ ಮಾಡುತ್ತಾ, ನಾನಾ ಅವತಾರವೆತ್ತುತ್ತಾ, ಕಲಾಭಿಮಾನಿಗಳಿಗೆ ಹಬ್ಬದೂಟ ಬಡಿಸುತ್ತಿರುವ ಶಿವಾಜಿ ಈಗ 170ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ 171 ಚಿತ್ರ ಕೂಡ ಅನೌನ್ಸ್ ಆಗಿದೆ. `ಜೈಲರ್’ ನಂತರ ಸನ್ ಪಿಕ್ಚರ್ಸ್ ಸಂಸ್ಥೆ ಪಡೆಯಪ್ಪನ ಜೊತೆ ಕೈ ಜೋಡಿಸಿದೆ. ಪಡೆಯಪ್ಪನ್ನ ಹಿಂದ್ಯಾರು ತೋರಿಸಿರದ ಲೆವೆಲ್ಗೆ ತೋರಿಸಬೇಕು ಅಂತ ನಿರ್ದೇಶಕ ಲೋಕೇಶ್ ಕನಗರಾಜ್ 6 ತಿಂಗಳು ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡೋದಕ್ಕೆ ಫಿಕ್ಸ್ ಆಗಿದ್ದಾರಂತೆ. ಎಲ್ಸಿಯೂ ಕಾನ್ಸೆಪ್ಟ್ ನಲ್ಲಿ ತಲೈವರ್-171 ತೆಗಿತೀನಿ ಎಂದಿರೋ ಲೋಕೇಶ್, ಸಿನಿಮಾ ಪ್ರೇಮಿಗಳು ಈಗಿಂದಲೇ ಕುತೂಹಲದಿಂದ ಕಾಯುವಂತೆ ಮಾಡಿದ್ದಾರೆ. ಮಾಸ್ಟರ್, ಖೈದಿ, ವಿಕ್ರಮ್ ಸಾರಥಿಯ ಕಲ್ಪನೆಯಲ್ಲಿ ಬಾಷಾ ಬಾಸ್ ಹೇಗೆ ಕಾಣ್ತಾರೆ? ಕಾದುನೋಡಬೇಕು.
ತಲೈವಾ-170 ಹಾಗೂ ತಲೈವಾ 171 ಜೊತೆಗೆ ಮಗಳು ಐಶ್ವರ್ಯ ನಿರ್ದೇಶನದ, ಲೈಕಾ ನಿರ್ಮಾಣದ ಲಾಲಾ ಸಲಾಂನಲ್ಲಿ ರಜನಿಕಾಂತ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ಮೊಯ್ದೀನ್ ಭಾಯಿ ಎಂಬ ಪಾತ್ರದಲ್ಲಿ ಪಡೆಯಪ್ಪ ಕಾಣಿಸಿಕೊಂಡಿದ್ದು, ಸ್ನೇಹ ಮತ್ತು ಕ್ರಿಕೆಟ್ ಸುತ್ತಾ ಸಾಗುವ ಕಥೆ ಇದಾಗಿದೆ. ಐಶ್ವರ್ಯಾ ನಿರ್ದೇಶನ ಚಿತ್ರ ಎಂಬ ನಿರೀಕ್ಷೆ ಜೊತೆಗೆ ರಜನಿಕಾಂತ್ ಅತಿಥಿ ಪಾತ್ರ ಎಂಬ ಕುತೂಹಲ ಲಾಲಾಂ ಸಲಾಂಗಾಗಿ ಫ್ಯಾನ್ಸ್ ತುದಿಗಾಲಲ್ಲಿ ಕಾಯುವಂತೆ ಮಾಡಿದೆ. ಪೊಂಗಲ್ ಹಬ್ಬಕ್ಕೆ ಬಾಕ್ಸಾಫೀಸ್ ದಂಗಲ್ ಜೊತೆ ಮೊಯ್ದೀನ್ ಭಾಯಿ ಆಗಿ ಮಿಸ್ಟರ್ ತಲೈವಾ ನಿಮ್ಮ ಎದುರಿಗೆ ಬರ್ತಿದ್ದಾರೆ.