ಭಾರತದ ರಾಷ್ಟ್ರಪ್ರಾಣಿ ಹುಲಿಯನ್ನು ರಕ್ಷಿಸಲು ದೇಶಾದ್ಯಂತ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ೨೦೧೩ರಿಂದ ಈ ತನಕ ದೇಶದಲ್ಲಿ ೬೮ ಹುಲಿಗಳು ಸಾವಿಗೀಡಾಗಿವೆ. ೨೦೧೨ ವರ್ಷ ೭೨ ವ್ಯಾಘ್ರಗಳು ಅಸುನೀಗಿದ್ದವು. ಇದರೊಂದಿಗೆ ಕರ್ನಾಟಕದಲ್ಲಿ ಹುಲಿಗಳ ಮರಣದೊಂದಿಗೆ ನಮ್ಮ ರಾಜ್ಯ ಪಟ್ಟಿಯ ಅಗ್ರ ಸ್ಥಾನದಲ್ಲಿರುವುದು ದುರಂತ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಉತ್ತರಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ. ಈ ಅವಧಿಯ ಏಳು ತಿಂಗಳಲ್ಲೇ ೪೬ ಹುಲಿಗಳು ಸತ್ತಿರುವುದು ವನರಾಜನ ಅವನತಿಯನ್ನು ಸೂಚಿಸುತ್ತದೆ. ವರ್ಷದಿಂದ ವರ್ಷಕ್ಕೆ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಲ್ಲಿ ಬೇಟೆ ಮತ್ತು ವಿಷ ಹಾಕುವಿಕೆಯಿಂದಾಗಿ ಬಹುತೇಕ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹುಲಿ ಅಭಯಾರಣ್ಯ ಪ್ರದೇಶಗಳಲ್ಲಿ ಹೈಡೆಫಿನೇಷನ್ ಕ್ಯಾಮೆರಾಗಳನ್ನು ಬಳಸಿ ದಿನದ ೨೪ ತಾಸುಗಳ ಕಾಲ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಿದರೂ ವನರಾಜನ ರಕ್ಷಣೆಗೆ ಸಮಾಧಾನಕರ ಫಲಿತಾಂಶ ಲಭಿಸಿಲ್ಲ. ಈ ಯೋಜನೆ ಅನ್ವಯ ಗೋಪುರಗಳ ಮೇಲೆ ಹೈ ರೆಸೊಲ್ಯುಷನ್ ಥರ್ಮಲ್ ಮತ್ತು ಇನ್‌ಫ್ರಾರೆಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ೩-೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ೨೦ ಕೆ.ಜಿ.ಗಿಂತ ಹೆಚ್ಚಿನ ತೂಕದ ವಸ್ತುಗಳ ಚಲನವಲನಗಳು ಮತ್ತು ಪ್ರತಿಬಿಂಬವನ್ನು ಇದು ಸೆರೆ ಹಿಡಿಯಲಿದೆ ಹಾಗೂ ಗಡಿಯನ್ನು ದಾಟಿದರೆ ಅರಣ್ಯ ಸಿಬ್ಬಂದಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಹುಲಿ ವಾಸವಿರುವ ಪ್ರದೇಶಗಳಿಗೆ ಅನಧಿಕೃತ ವ್ಯಕ್ತಿಗಳು ನುಸುಳುವುದನ್ನು ತಪ್ಪಿಸಲು ನಿಗಾ ವಹಿಸುವುದು ಹಾಗೂ ಮನುಷ್ಯರ ವಾಸ ಸ್ಥಳಗಳಿಗೆ ಹುಲಿಗಳು ನುಸುಳುವುದನ್ನು ತಪ್ಪಿಸುವುದು ಈ ವಿದ್ಯುನ್ಮಾನ ಕಣ್ಗಾವಲು ವ್ಯವಸ್ಥೆಯ ಉದ್ದೇಶವಾಗಿದೆ.
ಹೀಗಿದ್ದರೂ ಹುಲಿಗಳ ಸಾವು ಮುಂದುವರೆದಿದೆ. ಬೇಟೆಗಾರರಿಗೆ ಬಲಿಯಾದ ೫೩ ಹುಲಿಗಳು ಸೇರಿದಂತೆ ೮೮ ವ್ಯಾಘ್ರಗಳ ಸಾವಿನೊಂದಿಗೆ ಕಳೆದ ಒಂದು ದಶಕದಲ್ಲಿ ಅತ್ಯಧಿಕ ಹುಲಿಗಳ ಸಾವು ೨೦೧೨ರಲ್ಲಿ ನಡೆದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಹುಲಿ ಸಾವಿನ ಬಹುತೇಕ ಪ್ರಕರಣಗಳು ಹೆಚ್ಚಾಗಿವೆ. ೨೦೧೧ರಲ್ಲಿ ೫೬, ೨೦೧೦ರಲ್ಲಿ ೫೨ ಹಾಗೂ ೨೦೦೯ರಲ್ಲಿ ೬೬ ಹುಲಿಗಳು ಮೃತಪಟ್ಟಿದ್ದವು. ಅರಣ್ಯಾಧಿಕಾರಿಗಳ ಪ್ರಕಾರ, ಮನುಷ್ಯರು ವಾಸಿಸುವ ಪ್ರದೇಶಗಳಿಗೆ ನುಗ್ಗಿ ಹುಲಿಗಳ ದಾಳಿ ಮಾಡಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರು ಅನೇಕ ಹುಲಿಗಳಿಗೆ ವಿಷಪ್ರಾಷನ ಮಾಡಿ ಕೊಂದಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಡಿಐಜಿ ಎಸ್.ಪಿ.ಯಾದವ್ ಹೇಳುವಂತೆ ದೇಶದಲ್ಲಿರುವ ಪ್ರತಿ ಹುಲಿಯೂ ಬೇಟೆಗೆ ಸಿಲುಕುವ ಆತಂಕದಲ್ಲಿದೆ. ಹುಲಿಗಳ ಸಾವಿನ ಸಂಖ್ಯೆ ಕುರಿತು ಎನ್‌ಟಿಸಿಎ ಜಾರಿಗೊಳಿಸಿರುವ ಹೊಸ ಪ್ರೊಟೊಕಾಲ್ ಅನ್ವಯ ಸೂಕ್ತ ಸಾಕ್ಷ್ಯಾಧಾರವನ್ನು ರಾಜ್ಯ ಸರ್ಕಾರ ಒದಗಿಸುವ ತನಕ ಪ್ರತಿ ಹುಲಿಯ ಸಾವನ್ನು ಬೇಟೆಯಿಂದಲೇ ನಡೆದಿದೆ ಎಂದು ಪರಿಗಣಿಸಲಾಗುವುದು ಎನ್ನುತ್ತಾರೆ ಯಾದವ್.
ಹುಲಿಗಳ ಸಾವಿನ ಸರಿಯಾದ ಕಾರಣವನ್ನು ಮರೆ ಮಾಚುವುದು ಈ ಹಿಂದೆ ರಾಜ್ಯಗಳಿಗೆ ಪರಿಪಾಠವಾಗಿತ್ತು. ಈಗ ಕಾನೂನುಗಳು ಬದಲಾಗಿವೆ. ಹೀಗಾಗಿ ವ್ಯಾಘ್ರಗಳ ಮರಣಕ್ಕೆ ನಿಜವಾದ ಕಾರಣಗಳನ್ನು ನೀಡಲೇಬೇಕಾಗುತ್ತದೆ. ವನರಾಜನ ಮರಣೋತ್ತರ ಪ್ರಕ್ರಿಯೆಯಲ್ಲಿ ಎನ್‌ಟಿಸಿಎ ಮಾರ್ಗಸೂಚಿಗಳು ಹೆಚ್ಚು ಪಾರದರ್ಶಕತೆಯನ್ನು ತರಲಿದೆ ಎಂದು ಯಾದವ್ ಹೇಳುತ್ತಾರೆ. ಚೀನಾ, ಬರ್ಮಾ ಮತ್ತು ನೇಪಾಳ ದೇಶಗಳಲ್ಲಿನ ಮಾರುಕಟ್ಟೆಗಳಿಗೆ ಪೂರೈಸಲು ಭಾರತದಲ್ಲಿ ಹುಲಿಗಳ ಬೇಟೆ ಹೆಚ್ಚಾಗುತ್ತಿದೆ. ಹುಲಿಯ ದೇಹದ ಅಮೂಲ್ಯ ಭಾಗಗಳನ್ನು ಕಳ್ಳಸಾಗಣೆ ಮಾಡಲು ಹೊಸ ಮಾರ್ಗಗಳನ್ನು ಬೇಟೆಗಾರರು ಮತ್ತು ಸ್ಮಗ್ಲರ್‌ಗಳು ಕಂಡುಕೊಂಡಿದ್ದಾರೆ. ಆದಾಗ್ಯೂ, ಬೇಟೆಯನ್ನು ತಡೆಗಟ್ಟಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹೆಚ್ಚು ಸುಧಾರಿತ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವ್ಯವಸ್ಥೆಗಳ ಬಳಕೆಯೊಂದಿಗೆ ಉಪಗ್ರಹ ಮೂಲಕ ಹುಲಿ ಸಂರಕ್ಷಣೆಗೆ ವ್ಯಾಪಕ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಅವರು ವಿವರಿಸುತ್ತಾರೆ.
ಭಾರತದಲ್ಲಿ ಈಗ ಸುಮಾರು ೧,೭೦೦ ಹುಲಿಗಳಿವೆ ಹಾಗೂ ಎನ್‌ಟಿಸಿಎ ಪ್ರತಿ ಹುಲಿಯ ಫೋಟೋಗ್ರಫಿಕ್ ರೆಕಾರ್ಡ್ (ಛಾಯಾಚಿತ್ರ ದಾಖಲೆ) ನಿರ್ವಹಿಸುತ್ತಿವೆ. ಭಾರತದಲ್ಲಿನ ಪ್ರತಿ ಹುಲಿಗೆ ಅವುಗಳ ಪಟ್ಟೆಗಳನ್ನು ಆಧರಿಸಿ ವಿಶಿಷ್ಟ ಗುರುತಿನ ಮಾರ್ಕಿಂಗ್ ನೀಡಲಾಗಿದೆ. ಬೆರಳಚ್ಚಿನಂತೆ ಪ್ರತಿ ಹುಲಿಯ ಗುರುತು ವಿಶಿಷ್ಟವಾಗಿದೆ. ಬೇಟೆಗಾರರು ಹುಲಿಗಳನ್ನು ಶಿಕಾರಿ ಮಾಡಿ ಕೊಂದು ಅಕ್ರಮವಾಗಿ ಹುಲಿಚರ್ಮ ಮಾರಾಟ ಮಾಡಿದಾಗ ಅದನ್ನು ಜೀವಂತ ಹುಲಿಗಳ ಚಿತ್ರದೊಂದಿಗೆ ಹೊಂದಾಣಿಕೆ ಮಾಡುವ ಕಂಪ್ಯೂಟರ್ ಆಧರಿತ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ನೇಪಾಳದಲ್ಲಿ ಇತ್ತೀಚೆಗೆ ವಶಪಡಿಸಿಕೊಂಡ ಮೂರು ಹುಲಿಗಳ ಚರ್ಮಗಳನ್ನು ಅವುಗಳ ವಿಶಿಷ್ಟ ಗುರುತಿನ ಆಧರದ ಮೇಲೆ ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ಒಂದು ಹುಲಿ ಮಧ್ಯಪ್ರದೇಶದ್ದು ಎಂಬುದು ತಿಳಿದುಬಂದಿತು ಎಂದು ಹುಲಿ ಸಂರಕ್ಷಣೆಗೆ ಕೈಗೊಂಡಿರುವ ಹೊಸ ತಂತ್ರಜ್ಞಾನ ಕೌಶಲ್ಯದ ಬಗ್ಗೆ ಯಾದವ್ ವಿವರಿಸಿದ್ದಾರೆ.
ಹುಲಿಗಳು ಮತ್ತು ಮಾನವ ಸಂಘರ್ಷ ಸಂಭವಿಸಿದಾಗ ಅದರ ಫಲಿತಾಂಶ ಹಿಂಸೆ ಮತ್ತು ಮರಣಾಂತಿಕವಾಗಿರುತ್ತದೆ. ಎರಡು ಕಡೆ ಸಾವು ನೋವು ಸಂಭವಿಸುತ್ತದೆ. ಜನಸಂಖ್ಯಾ ಸ್ಫೋಟ ಮತ್ತು ಕಿರಿದಾಗುತ್ತಿರುವ ಕಾಡುಗಳು ವನ್ಯ ಜೀವಿ ಸಂಕುಲಗಳ ಮೇಲೆ ಒತ್ತಡ ಉಂಟು ಮಾಡಿವೆ. ಈ ಎಲ್ಲ ಕಾರಣಗಳಿಂದ ಹುಲಿಗಳ ಸಂತತಿ ಅವನತಿಯತ್ತ ಸಾಗಿದೆ. ಮನುಷ್ಯ ಮತ್ತು ಹುಲಿ ಸಂಘರ್ಷ ಕೊನೆಗೊಳಿಸಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಹುಲಿಗಳ ಸಂರಕ್ಷಣೆ ಕಾರ್ಯದಲ್ಲಿ ಎದುರಾಗಿರುವ ದೊಡ್ಡ ಸವಾಲುಗಳಲ್ಲಿ ಪ್ರಮುಖವಾಗಿವೆ. ವಿಶ್ವದ ಹುಲಿ ಸಂಖ್ಯೆಯಲ್ಲಿ ಶೇಕಡ ೬೦ರಷ್ಟು ಭಾರತದಲ್ಲಿದೆ. ನಮ್ಮ ದೇಶದಲ್ಲಿ ಗರಿಷ್ಟ ೨,೪೦೦ ಹುಲಿಗಳು ವಾಸಿಸುವ ಸಂಖ್ಯೆ ಹೊಂದುವ ಸಾಮರ್ಥ್ಯವಿದ್ದರೂ, ಈಗ ಇರುವುದು ಕೇವಲ ೧,೭೦೦ ಹುಲಿಗಳು ಮಾತ್ರ. ಈ ಸಂಖ್ಯೆ ಇದಕ್ಕಿಂತ ಹೆಚ್ಚಿಗೆ ದಾಟಿದರೆ ಇದರಿಂದ ಇನ್ನಷ್ಟು ಸವಾಲು-ಸಮಸ್ಯೆಗಳು ಎದುರಾಗುತ್ತವೆ.
ವಿಶ್ವದಲ್ಲಿರುವ ಹುಲಿಗಳ ಪೈಕೆ ಅರ್ಧಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿವೆ. ಒಂದು ದಶಕದ ಹಿಂದೆ ವಿಶ್ವದಲ್ಲಿ ೭,೦೦೦ ವ್ಯಾಘ್ರಗಳಿದ್ದವು. ಈಗ ಪ್ರಪಂಚದಲ್ಲಿ ಉಳಿದಿರುವುದು ೩೦೦೦ ಹುಲಿಗಳು ಎಂಬುದು ವನ್ಯಜೀವಿ ಸಂಘಟನೆಗಳ ಅಂದಾಜು. ಈಗ ಭಾರತದಲ್ಲಿ ಉಳಿದುಕೊಂಡಿರುವ ಹುಲಿಗಳ ಸಂಖ್ಯೆ ೧,೭೦೦. ಇವುಗಳಲ್ಲಿ ನಮ್ಮ ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ ೩೦೦. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಸಂಖ್ಯೆ ಕರ್ನಾಟಕದಲ್ಲೇ ಹೆಚ್ಚು ಎಂಬುದು ನಾವು ಹೆಮ್ಮೆ ಪಡುವ ಸಂಗತಿಯಾದರೂ ೨೦೧೩ರಲ್ಲಿ ಈವರೆಗೂ ೧೩ ಹುಲಿಗಳ ಮರಣದೊಂದಿಗೆ ನಮ್ಮ ರಾಜ್ಯ ಪಟ್ಟಿಯ ಅಗ್ರ ಸ್ಥಾನದಲ್ಲಿರುವುದು ದುರಂತ. ಒಂದು ಶತಮಾನದ ಹಿಂದೆ ಭಾರತದಲ್ಲಿ ೪೦,೦೦೦ಕ್ಕೂ ಹೆಚ್ಚು ಹುಲಿಗಳು ಇದ್ದವು ಎಂದರೆ ವ್ಯಾಘ್ರಗಳ ವಿನಾಶ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದನ್ನು ಊಹಿಸಬಹುದು. ಹುಲಿಗಳ ಚರ್ಮ, ಪಂಜ, ಮೂಳೆಗಳು, ಹಲ್ಲುಗಳೆಲ್ಲವೂ ಅಮೂಲ್ಯ. ಚೀನಿ ವೈದ್ಯಕೀಯ ಪದ್ದತಿಯಲ್ಲಂತೂ ಹುಲಿಯ ದೇಹದ ಭಾಗಗಳಿಗೆ ಅಪಾರ ಬೇಡಿಕೆ. ಹೀಗಾಗಿ ಹುಲಿಗಳನ್ನು ನಿರಂತರವಾಗಿ ಬೇಟೆಯಾಡುಲಾಗುತ್ತಿದ್ದು, ಭಾರತದಲ್ಲಿ ವನರಾಜನ ಮಾರಣಹೋಮ ಅವ್ಯಾಯತವಾಗಿ ಮುಂದುವರೆದಿದೆ.
ಹುಲಿಗಳ ಸಂರಕ್ಷಣೆಗೆಂದು ೪೦ ವರ್ಷಗಳ ಹಿಂದೆ ೧೯೭೨ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ‘ಹುಲಿ ಯೋಜನೆ’ ಕಾರ್ಯಕ್ರಮ ಆರಂಭಿಸಿದಾಗ ಭಾರತದಲ್ಲಿ ೩೦೦೦ಕ್ಕೂ ಹೆಚ್ಚು ಹುಲಿಗಳು ಇದ್ದವು. ಆಗಿನಿಂದಲೂ ಹುಲಿಗಳ ಸಂರಕ್ಷಣೆಗೆ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚಾಗಿದೆ. ಇದರ ಫಲವಾಗಿ ಈಗ ೧,೭೦೦ ಹುಲಿಗಳನ್ನಾದರೂ ರಾಷ್ಟ್ರದಲ್ಲಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಆದರೆ ಮುಖ್ಯವಾಗಿ ಬೇಟೆ, ಹುಲಿ-ಮಾನವ ಸಂಘರ್ಷ ಹಾಗೂ ಇನ್ನಿತರ ಕಾರಣಗಳಿಂದ ವ್ಯಾಘ್ರಗಳ ಸಂಖ್ಯೆ ಇಳಿಮುಖವಾಗುತ್ತಾ ಅವನತಿಯತ್ತ ಸಾಗುತ್ತಿರುವುದು ದುರಂತ. ಭಾರತದಲ್ಲಿ ಒಟ್ಟು ೪೦ ಹುಲಿ ಅಭಯಾರಣ್ಯಗಳಿವೆ. ಅವುಗಳೆಂದರೆ ಕಾರ್ಬೆಟ್, ದುದ್ವಾ, ವಲ್ಮಿಕ, ಬುಕ್ಸಾ, ಮಾನಸ, ನಮೇರಿ, ಪಕ್‌ಹುಯಿ, ನಮ್ದಫಾ, ಕಾಜಿರಂಗ, ಡಂಪಾ, ಸುಂದರ್‌ಬನ್, ಸಿಮ್ಲಿಪಾಲ್, ಪಲಮವು, ಸಂಜಯ ದುಬ್ರಿ, ಬಾಂದವಗಢ್, ಪನ್ನಾ, ಸರಿಸ್ಕಾ, ರಣಥಂಬೋರ್, ಸತ್ಪುರ, ಪೆಂಚ್-ಎಂಎಚ್, ಕಸ್ಹ, ಪೆಂಚ್-ಎಂಪಿ, ಮೇಲ್‌ಘಾಟ್, ತಡೋಬಾ ಅಂಧೇರಿ, ಇಂದ್ರಾವತಿ, ಉದಂತಿ-ಸೀತಾನದಿ, ಸತ್ಕೋಸಿಯಾ, ನಾಗಾರ್ಜುನ ಸಾಗರ, ಸಹ್ಯಾದ್ರಿ, ದಾಂಡೇಲಿ-ಅಣಶಿ, ಭದ್ರಾ, ನಾಗರಹೊಳೆ, ಬಂಡೀಪುರ, ಮದುಮಲೈ, ಪರಂಬಿಕುಲಂ, ಅಣ್ಣಾಮಲೈ, ಪೆರಿಯಾರ್, ಕಲಕ್ಕಡ್-ಮುಂದಂತುರೈ, ಬಿಳಿಗಿರಿರಂಗನ ಬೆಟ್ಟ, ಅಚಾನಕ್‌ಮಾರ್. ಈ ನಲವತ್ತು ಹುಲಿ ಅಭಯಾರಣ್ಯಗಳ ಪೈಕಿ ಕರ್ನಾಟಕದಲ್ಲೇ ೫ ರಕ್ಷಿತಾರಣ್ಯಗಳಿವೆ.
ದೇಶಿ ಪ್ರವಾಸೋದ್ಯಮ ಹೆಚ್ಚಾದಂತೆ ಈ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಿದೆ. ಈ ಪ್ರದೇಶಗಳ ಸುತ್ತಮುತ್ತ ಐಷಾರಾಮಿ ಹೋಟೆಲುಗಳು, ಜೀಪ್ ಸಫಾರಿಗಳು ಹಾಗೂ ಹೊಸ ವರ್ಷಗಳ ಪಾರ್ಟಿಗಳು ಹೆಚ್ಚಾಗಿವೆ ಎಂಬ ದೂರುಗಳು ಇವೆ. ಅಳಿವನ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟ ಸುಪ್ರೀಂಕೋರ್ಟ್ ಜುಲೈ ೨೪, ೨೦೧೨ರಂದು ಅಭಯಾರಣ್ಯಗಳಲ್ಲಿ ಹುಲಿಗಳು ಅಧಿಕ ಸಂಖ್ಯೆಯಲ್ಲಿರುವ ಕಡೆಗಳಲ್ಲಿ, ರಾಷ್ಟ್ರದ ಹುಲಿ ಅಭಯಾರಣ್ಯಗಳ ಹೃದಯ ಭಾಗಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿತು. ಸುಪ್ರೀಂಕೋರ್ಟ್ ನಿಷೇಧ ಹೇರಿದ್ದರಿಂದ ಭಾರತದ ಪ್ರವಾಸೋದ್ಯಮಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟವಾಗಿರುವುದು ಒಂದು ಕಡೆಯಾದರೆ, ವನ್ಯಜೀವಿ ಪ್ರವಾಸೋದ್ಯಮ ನಿಷೇಧದಿಂದ ಕಳ್ಳಬೇಟೆಗಾರರಿಗೆ ಅನುಕೂಲವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹುಲಿಗಳ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ.
ಹುಲಿಗಳನ್ನು ಚರ್ಮ, ಉಗುರು, ಮೂಳೆ, ಹಲ್ಲು ಮತ್ತು ದೇಹದ ವಿವಿಧ ಭಾಗಗಳಿಗಾಗಿ ಕೊಲ್ಲುತ್ತಿರುವ ಪ್ರಕರಣಗಳು ಸಹ ಕರ್ನಾಟಕದಲ್ಲಿ ಹೆಚ್ಚಾಗಿದೆ. ರಾಜ್ಯದ ಐದು ಸಂರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಹುಲಿ ಮತ್ತು ಚಿರತೆಗಳನ್ನು ಕೊಂದು ಚರ್ಮಗಳ ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರು ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕುಖ್ಯಾತಿ ಹುಲಿ ಹಂತಕರು ಖುಲಾಸೆಗೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಇದಕ್ಕೊಂದು ಸ್ಪಷ್ಟ ಉದಾಹರಣೆ ಎಂದರೆ ಕುಪ್ರಸಿದ್ದ ಹುಲಿ ಬೇಟೆಗಾರ ಸಂಸಾರ್ ಚಂದ್. ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೇ ಅತನನ್ನು ಇತ್ತೀಚೆಗೆ ಖುಲಾಸೆಗೊಳಿಸಲಾಯಿತು. ಕಾನೂನಿನಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ಪಡೆದಿರುವುದು ಇತನೊಬ್ಬನೇ ಅಲ್ಲ. ಹಲವಾರು ಹುಲಿಗ ಸಾವಿಗೆ ಕಾರಣವಾದ ಕರ್ನಾಟಕದ ಅನೇಕ ಬೇಟೆಗಾರರು ಬಂಧಮುಕ್ತಗೊಂಡು ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ. ಇದರಿಂದ ರಾಜ್ಯದ ಅಭಯಾರಣ್ಯಗಳಲ್ಲಿ ಶಿಕಾರಿದಾರರ ಗ್ಯಾಂಗ್ ಸಕ್ರಿಯವಾಗಿರುವುದು ಸಾಬೀತಾಗುತ್ತದೆ.
ನಾಗರಹೊಳೆ, ಬಂಡೀಪುರ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಇತ್ತೀಚೆಗೆ ಹುಲಿಗಳಿಗೆ ವಿಷ ಹಾಕಿ ಕೊಂದಿರುವ ಪ್ರಕರಣಗಳು ನಡೆದಿವೆ. ಈ ಘಟನೆಗಳ ಬಗ್ಗೆ ನಡೆಯುತ್ತಿರುವ ತನಿಖೆ ಆಮೆಗತಿಯದ್ದಾಗಿದ್ದು, ಶಿಕಾರಿದಾರರಿಗೆ ಅನುಕೂಲವಾಗಿದೆ. ಕರ್ನಾಟಕದಲ್ಲಿ ಈ ವರ್ಷ ನಾಗರಹೊಳೆ ಮತ್ತು ಬಂಡೀಪುರ ನ್ಯಾಷನಲ್ ಪಾರ್ಕ್‌ಗಳಲ್ಲಿ ೧೩ ಹುಲಿಗಳು ಸಾವಿಗೀಡಾದ ಪ್ರಕರಣಗಳ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದ ಮಟ್ಟಕ್ಕೂ ಇದು ಹೋಯಿತು ಎಂದರೆ ಪರಿಸ್ಥಿತಿಯ ಗಂಭೀರತೆ ಮನದಟ್ಟಾಗುತ್ತದೆ. ಹುಲಿಗಳ ಸಂತತಿ ಈ ಪರಿಯಾಗಿ ನಶಿಸುತ್ತಿರೋದಕ್ಕೆ ಪ್ರಧಾನ ಕಾರಣ ಕಾಡಿನ ಹನನ. ಕಾಡು ಕಡಿಮೆಯಾಗಿರೋದರಿಂದಾಗಿ ಹುಲಿಗಳು ಆಗಾಗ ಆಹಾರ ಅರಸಿಕೊಂಡು ನಾಡಿಗೂ ಲಗ್ಗೆ ಇಡುತ್ತಿವೆ. ಕೆಲ ಸಂದರ್ಭಗಳಲ್ಲಿ ನರ ಬಲಿಯನ್ನಾಊ ಪಡೆದುಕೊಳ್ಳುತ್ತಿವೆ. ಹೀಗೆ ಒಂದು ಬಾರಿ ಮನುಷ್ಯರ ರಕ್ತದ ರುಚಿ ಹಿಡಿದ ಹುಲಿಗಳು ಪದೇ ಪದೆ ನರ ಬಲಿಗಾಗಿ ಹೊಂಚು ಹಾಕುತ್ತವೆ. ಇಂಥಾ ನಲಭಕ್ಷಕ ಹುಲಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕೊಲ್ಲುವ ಕೆಲಸವೂ ನಡೆಯುತ್ತಿದೆ. ಇದೆಲ್ಲ ಕಾರಣದಿಂದ ಹುಲಿಯ ಸಂತತಿ ಭಾರತದಲ್ಲಿ ದಿನೇ ದಿನೆ ಗಣನೀಯವಾಗಿ ಕಡಿಮೆಯಾಗುತ್ತಿರೋದು ನಿಜಕ್ಕೂ ಆತಂಕದ ವಿಚಾರ.