Dr. Rajkumar: ಏಪ್ರಿಲ್ 24 ವರನಟನ ಅಭಿಮಾನಿಗಳಿಗೆ, ಕರುನಾಡ ಜನತೆಗೆ ಅಪಾರ ಪ್ರಿಯವಾದ ದಿನ. ಕಾರಣ ಇಂದು ನಟ ಸಾರ್ವಭೌಮ ಡಾ.ರಾಜ್ ಕುಮಾರ್(Dr. Rajkumar) 95ನೇ ವರ್ಷದ ಹುಟ್ಟುಹಬ್ಬ.
ಕನ್ನಡಕ್ಕೊಬ್ಬರೇ ರಾಜ್‌ಕುಮಾರ್(Dr. Rajkumar). ಅವರ ಹೆಸರಿನೊಂದಿಗೆ ಕನ್ನಡ ಭಾಷೆ, ಕನ್ನಡ ನಾಡು ಬೆರೆತು ಹೋಗಿದೆ. ವರನಟನೆಂದರೆ ಕೇವಲ ಹೆಸರಲ್ಲ. ಅದೊಂದು ಶಕ್ತಿ. ಕನ್ನಡಿಗರ ಭಾವನೆ, ಉಸಿರು. ಕರುನಾಡು ಇರುವವರೆಗೆ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಒಬ್ಬನೇ ಅಧಿಪತಿ ಎಂದರೆ ಅದುವೇ ಡಾ. ರಾಜ್. ಅಣ್ಣಾವ್ರು ಇದ್ದಾಗ ಅವರ ಮೇಲೆ ಸಾಗರದಷ್ಟು ಪ್ರೀತಿಯಿತ್ತೋ ಇಂದಿಗೂ ಅಭಿಮಾನದಲ್ಲಿ ಗುಲಗಂಜಿಯಷ್ಟು ಕಮ್ಮಿಯಾಗಿಲ್ಲ. ಇದು ಮುತ್ತುರಾಜ್ ಎಂಬ ಅದ್ಭುತ ವ್ಯಕ್ತಿತ್ವ ಗಳಿಸಿದ ಎಂದು ಮುರಿಯಲಾಗದ ಸಂಪತ್ತು.
ಅಣ್ಣಾವ್ರ ಅಭಿನಯಕ್ಕೆ ದಿಗ್ಗಜರಷ್ಟೇ ಅಲ್ಲ, ಕರುನಾಡು ಮಾತ್ರವಲ್ಲ, ದೇಶ-ವಿದೇಶದ ಕಲಾರಸಿಕರೇ ಮನಸೋತಿದ್ದಾರೆ. ಕಲಾ ಸೇವೆಯಲ್ಲಿ ಇವರು ಕಾಣಸಿಗದ ಪಾತ್ರಗಳಿಲ್ಲ. ಅದಕ್ಕೆ ಅಮೇರಿಕಾದ ಕೆಂಟಕಿ ರಾಜ್ಯ ಇವರಿಗೆ ಕೆಂಟಕಿ ಕರ್ನಲ್ ಎಂಬ ಬಿರುದು ನೀಡಿ ಗೌರವಿಸಿತು. ಇದು ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ. ಗಮನಾರ್ಹ ಸಾಧನಗೈದ ವ್ಯಕ್ತಿಗೆ ನೀಡುವ ಅತ್ಯುನ್ನತ ಗೌರವ, ಈ ಗೌರವಕ್ಕೆ ಪಾತ್ರರಾದ ಏಕೈಕ ನಟ ಕಲಾ ಭೂಷಣ ರಾಜ್‌ಕುಮಾರ್.
ಯುಗಪುರುಷ ರಾಜ್ ಕುಮಾರ್(Dr. Rajkumar) ಹುಟ್ಟಿದ್ದು, 1929 ಏಪ್ರಿಲ್ 24ರಂದು. ಮೂಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಈ ಮುತ್ತುರಾಜ್ ಮುಂದೆ ಕನ್ನಡಿಗರ ಹೃದಯ ಸಾಮ್ರಾಜ್ಯದ ಅಧಿಪತಿಯಾಗಿ ಬೆಳೆದಿದ್ದೇ ಒಂದು ಇತಿಹಾಸ. ಓದು ನಾಲ್ಕಕ್ಕೆ ಮುಗಿದರು ಕಲೆಯಲ್ಲಿ ಶಿಖರದಷ್ಟು ಸಾಧಿಸಿರುವ ಇವರು ಇಂದಿಗೂ ನಟನೆ ಅರಸಿ ಬರುವವರ ಮನೆ ದೇವರು. ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ವಿಶ್ವವೇ ಮೆಚ್ಚಿದ ಈ ವ್ಯಕ್ತಿತ್ವಕ್ಕೆ ಸರಿಸಾಟಿ ರಾಜ್ ಕುಮಾರ್ ಮಾತ್ರವೇ ಹೊರತು ಮತ್ತೊರ್ವರಿಲ್ಲ ಎಂದರೇ ಅದು ಅತಿಶಯೋಕ್ತಿಯಲ್ಲ.
ರೀಲ್‌ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‌ನಲ್ಲೂ ಹೀರೋ ಆಗಿದ್ದ ಮುತ್ತುರಾಜ್ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಂದೇ ಒಂದು ಸಿನಿಮಾದಲ್ಲೂ ಸಿಗರೇಟ್, ಕುಡಿತದ ದೃಶ್ಯದಲ್ಲಿ ಕಾಣಿಸಿಕೊಂಡಿಲ್ಲ. ಈ ರೀತಿ ಮಾಡಿದ್ರೆ ತನ್ನ ಕೋಟ್ಯಾಂತರ ಅಭಿಮಾನಿಗಳು ಸಹ ಪ್ರಚೋಧನೆಗೊಳಗಾಗುತ್ತಾರೆ ಎನ್ನುವುದು ರಾಜ್ ಕಾಳಜಿ. ಅದರಂತೆ ಕೊನೆಯ ಸಿನಿಮಾವರೆಗೂ ನಡೆದುಕೊಂಡಿದ್ದರು. ಸಾಮಾಜಿಕ ಕಳಕಳಿ ಸಿನಿಮಾಗಳ ಮೂಲಕ ಬಂಗಾರದ ಮನುಷ್ಯನಾಗಿ ಎಷ್ಟೋ ಜನರ ಮನಸ್ಥಿತಿಯನ್ನು ಬದಲಿಸಿದ ಕೀರ್ತಿ ಕೂಡ ಇವರದ್ದು. ಕನ್ನಡ ಭಾಷೆ, ನೆಲ, ಜಲ ವಿಚಾರಕ್ಕೆ ಮುಂದೆ ನಿಂತು ಹೋರಾಡಿದ್ದಾರೆ. ಇಂತಹ ಅದ್ಭುತ ವ್ಯಕ್ತಿತ್ವ ನಮ್ಮ ನಾಡಲ್ಲಿ, ನಮ್ಮೊಂದಿಗೆ ಇದ್ದರು ಎನ್ನುವುದೇ ಒಂದು ದೊಡ್ಡ ಶಕ್ತಿ.