ಎಲ್ಲೋ ಇದ್ದವರನ್ನ ಪರಸ್ಪರ ಪರಿಚಯ ಮಾಡಿಸಿ, ಸ್ನೇಹ-ಪ್ರೀತಿ ಬೆಳೆಯುವಂತೆ ಮಾಡಿ, ಮದುವೆ -ಮಕ್ಕಳು ಮಾಡ್ಕೊಂಡು ಸಂಸಾರ ಮಾಡುವುದಕ್ಕೂ ಅವಕಾಶ ಮಾಡಿಕೊಡುವ ಭಗವಂತ, ಕೊನೆತನಕ ಒಟ್ಟಿಗೆ ಬಾಳೋದಕ್ಕೆ ಯಾಕೇ ಅಡ್ಡಿಯಾಗ್ತಾನೆ? ನಡು ನಡುವಲ್ಲೇ ಯಾಕೇ ಬೆರೆತ ಹೃದಯಗಳನ್ನು ಬೇರ್ಪಡಿಸ್ತಾನೆ? ಒಟ್ಟಿಗೆ ಬದುಕಬೇಕು, ಬಾಳಬೇಕು ಅಂತ ಜೀವನದ ಮೇಲೆ ನೂರೆಂಟು ಕನಸು ಕಟ್ಟಿಕೊಳ್ಳುವ ಜೋಡಿಗಳನ್ನೇಕೆ ಅಗಲಿಸಿ ಗಹಗಹಿಸ್ತಾನೆ? ಹಾಲು-ಜೇನಿನಂತೆ ಬೆರೆತು ಬಾಳುವ ಮನಸ್ಸುಗಳನ್ನ ದೂರ ದೂರ ಮಾಡೋದ್ರಿಂದ ಏನ್ ಸಿಗುತ್ತೆ. ಈ ಎಲ್ಲಾ ಪ್ರಶ್ನೆಗಳನ್ನ ಕಣ್ಣಿಗೆ ಕಾಣಿಸದೇ ಅಲೆಲ್ಲೋ ಕುಂತಿರೋ ಆ ಭಗವಂತನಿಗೆ ಕೇಳಲೆಬೇಕು. ಚಿನ್ನಾರಿ ಮುತ್ತನ ಪತ್ನಿ ಸ್ಪಂದನಾರನ್ನ ಏಕಾಏಕಿ ಹೊತ್ತೊಯ್ದಿದ್ದೇಕೆ ಆ ವಿಧಿ? ಈ ಪ್ರಶ್ನೆಗೆ ಆ ಭಗವಂತ ಉತ್ತರ ಕೊಡ್ಲೆಬೇಕು. ಆದರೆ, ಆತ ಕೊಡಲ್ಲ, ನಾವು ಆತನಿಗೆ ಹಿಡಿಶಾಪ ಹಾಕೋದನ್ನ ನಿಲ್ಲಿಸಿಲ್ಲ.
ಆ ವಿಧಿಯ ಕೆಟ್ಟ ಕಣ್ಣು ಚಿನ್ನಾರಿ ಮುತ್ತನ ಮುತ್ತಿನಂತಹ ಸಂಸಾರದ ಮೇಲೆ ಬೀಳದೇ ಹೋಗಿದ್ದರೆ ಇವತ್ತು ವಿಜಯ್ ಮನೆ ಸ್ವರ್ಗ ಸ್ವರ್ಗ ಆಗಿರುತ್ತಿತ್ತು. ಚಿನ್ನಾರಿ ಮುತ್ತನ ಮನೆಯಲ್ಲಿ ಸಂಭ್ರಮ-ಸಡಗರ ಮನೆ ಮಾಡಿರುತ್ತಿತ್ತು. ಅಷ್ಟೇ ಅಲ್ಲ ಈ ಮನೆಗೆ ಮದುವಣಗಿತ್ತಿಯ ಕಳೆ ಬಂದಿರುತ್ತಿತ್ತು. ಯಾಕಂದ್ರೆ, ಕಳೆದ ಹದಿನಾರು ವರ್ಷಗಳ ಹಿಂದೆ ಇದೇ ದಿನವೇ ವಿಜಯ್ ಹಾಗೂ ಸ್ಪಂದನಾ ಮದುವೆ ಗಂಡು ಹೆಣ್ಣಾಗಿದ್ದರು. ಮನಮೆಚ್ಚಿದ ಹುಡುಗಿ ಕೈ ಹಿಡಿದ ಸಂತೋಷದಲ್ಲಿ ವಿಜಯ್ ಸೀಟಿ ಹೊಡೆದರೆ, ಮನಸ್ಸು ಗೆದ್ದ ಹುಡುಗನ ಜೊತೆ ಸಪ್ತಪದಿ ತುಳಿದು, ಅಗ್ನಿಸಾಕ್ಷಿಯಾಗಿ ಕೊರಳಿಗೆ ತಾಳಿಕಟ್ಟಿಸಿಕೊಂಡ ಖುಷಿಯಲ್ಲಿ ಸ್ಪಂದನಾ ಸಂಭ್ರಮಿಸುತ್ತಿದ್ದರು. ಹಾಲು-ಜೇನಂತೆ ಬೆರೆತ ಈ ಎರಡು ಜೀವಗಳನ್ನು ಕಂಡು ಎರಡು ಕುಟುಂಬಸ್ಥರು ಮಾತ್ರವಲ್ಲ ಇಡೀ ಕರುನಾಡಿಗೆ ಕರುನಾಡೇ ಖುಷಿಪಟ್ಟಿತ್ತು. ನೂರ್ಕಾಲ ಸುಖವಾಗಿ, ಸಂತೋಷವಾಗಿ, ನೆಮ್ಮದಿಯಿಂದ ಬದುಕಿ ಬಾಳಿ ಎಂದು ಶುಭಹಾರೈಸಿತ್ತು. ಆದರೆ, ಆ ಹಾರೈಕೆ ಫಲ ಕೊಡುವುದಕ್ಕೆ ಆ ವಿಧಿ ಬಿಡಲಿಲ್ಲ. ರಾಮ-ಸೀತೆಯಂತಿದ್ದ, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬದುಕುತ್ತಿದ್ದ ವಿಜಯ್-ಸ್ಪಂದನಾ ದಾಂಪತ್ಯವನ್ನು ನೋಡಿ ಆ ವಿಧಿ ಸಹಿಸಿಕೊಳ್ಳಲಿಲ್ಲ.
ಅಷ್ಟಕ್ಕೂ, ನಾವು ಇವತ್ತು ವಿಜಯ್-ಸ್ಪಂದನಾ ದಾಂಪತ್ಯದ ಬಗ್ಗೆ ಬರೆಯಲು ಕಾರಣ ಅವರಿಬ್ಬರ ವಾರ್ಷಿಕೋತ್ಸವ. ಇವತ್ತಿಗೆ, ಇವರಿಬ್ಬರು ಸತಿ-ಪತಿಗಳಾಗಿ ಹದಿನಾರು ವರ್ಷ. ಆಗಸ್ಟ್ 26 2007ರಲ್ಲಿ ಹಸೆಮಣೆ ಏರಿದ್ದರು. ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಅವರ ಸಮ್ಮುಖದಲ್ಲೇ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅಲ್ಲಿಂದ ಭರ್ತಿ ಹದಿನೈದು ವರ್ಷಗಳ ಕಾಲ ಸುಖಿ ದಾಂಪತ್ಯ ನಡೆಸಿ, ತಮ್ಮ ಸುಂದರ ಸಂಸಾರಕ್ಕೆ ಸಾಕ್ಷಿಯಾಗಿ ಶೌರ್ಯನಿಗೆ ಜನ್ಮಕೊಟ್ಟಿದ್ದರು. ಹಲವರಿಗೆ ಮಾಧರಿಯಾಗಿ ಜೀವನ ನಡೆಸುತ್ತಿದ್ದರು. ಇದನ್ನ ನೋಡಿ ಅದ್ಯಾವ ಕೆಟ್ಟ ಕಣ್ಣು ಕರುಳು ಹಿಸುಕಿಕೊಂಡು ಒಳಗೊಳಗೆ ಉರಿಯಿತೋ ಏನೋ ಗೊತ್ತಿಲ್ಲ. ವಿಜಯ್ ಬದುಕಿನ ನಂದಾ ದೀಪವೇ ಬತ್ತಿಹೋಯ್ತು. ಚಿನ್ನಾರಿ ಮುತ್ತನ ಮನೆಮನದಲ್ಲಿ ಕತ್ತಲೆ ಆವರಿಸಿಬಿಡ್ತು. ಆ ಕಗ್ಗತಲೆಯಲ್ಲಿ ಈಗ ವಿಜಯ್ ಒಬ್ಬಂಟಿಯಾಗಿ ನಿಂತಿದ್ದಾರೆ. ಇಂತಹ ಹೊತ್ತಲ್ಲಿ ವಿವಾಹವಾದ ಆ ದಿನ ಮತ್ತೆ ಬಂದಿದೆ, ನೂರೆಂಟು ನೆನಪುಗಳನ್ನು ಹೊತ್ತುತಂದಿದೆ. ಆದರೆ, ಆ ನೆನಪುಗಳನ್ನು ಸಂಭ್ರಮಿಸೋಕೆ, ಸಿಹಿಮುತ್ತುಗಳನ್ನು ವಿನಿಮಯ ಮಾಡ್ಕೊಂಡು ವೆಡ್ಡಿಂಗ್ ಆ್ಯನಿವರ್ಸರಿ ಸೆಲಬ್ರೇಟ್ ಮಾಡೋಕೆ ಸ್ಪಂದನಾ ಜೊತೆಗಿಲ್ಲ, ಜೀವಂತವಾಗಿ ಉಳಿದಿಲ್ಲ. ಆದರೆ, ಸ್ಪಂದನಾ ನೆನಪಿನಂಗಳಕ್ಕೆ ಹೋಗಿರುವ ವಿಜಯ್, ತಮ್ಮ ಮನದಾಳವನ್ನು ಹರವಿಟ್ಟಿದ್ದಾರೆ. ಬಾಳ ಸಂಗಾತಿ ಮೇಲಿರುವ ಭಾವೆನಗಳನ್ನ ಬರಹರೂಪಕ್ಕಿಳಿಸಿದ್ದಾರೆ. ಅದನ್ನು ಯಥಾವತ್ತಾಗಿ ನಿಮ್ಮ ಮುಂದೆಯೇ ಬಿಚ್ಚಿಡಿದ್ದೇವೆ. ಒಮ್ಮೆ ನೀವು ಓದಿಕೊಳ್ಳಿ.
ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ
ಬದುಕನ್ನು ಕಟ್ಟಿ ಸರ್ವಸ್ವವಾದೆ
ಉಸಿರಲ್ಲಿ ಬೆರೆತು ಜೀವಂತವಾದೆ
ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು
ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ
ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು
ಇಷ್ಟು ಸಾಲುಗಳು ಸಾಕು ಚಿನ್ನಾರಿ ಮುತ್ತನ ಬದುಕಲ್ಲಿ ಸ್ಪಂದನಾ ಏನಾಗಿದ್ದರು ಅನ್ನೋದಕ್ಕೆ. ಬಹುಷಃ ಇದೇ ಕಾರಣಕ್ಕೆ ವಿಜಯ್ `ನಾನೆಂದೂ ನಿನ್ನವ, ಕೇವಲ ನಿನ್ನವ’ ಅಂತ ಮೊನ್ನೆ ಹೇಳಿಕೊಂಡಿದ್ದು. ಅಂದ್ಹಾಗೇ, ವಿಜಯ್ ನಮ್ಮ ಪತ್ನಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಚಿನ್ನಾ.. ಚಿನ್ನಾ.. ಚಿನ್ನಾ ಅಂತ ಬಾಯ್ತುಂಬ ಕರೆಯುತ್ತಿದ್ದರು. ನನ್ನ ಜೀವ, ಜೀವನ ಎಲ್ಲವೂ ನೀನೆ. ನನ್ನ ಬಾಳು ಇಷ್ಟೊಂದು ಸುಂದರವಾಗಲಿಕ್ಕೆ ಕಾರಣಾನೇ ನೀನು ಮತ್ತು ನಿನ್ನ ನಗು. ನನ್ನ ಬಾಳಲ್ಲಿ ನೀನಿರುವಾಗ ಮತ್ತೇನು ಬಯಸಲಿ ನಾನು. ನಿನ್ನ ಪ್ರೀತಿ ಹೊರೆತು ಮತ್ತೇನು ಬೇಕಾಗಿಲ್ಲ ನಂಗೆ. ನೀನೊಬ್ಬಳು ನನ್ನ ಜೊತೆ ಇರು ಚಿನ್ನಾ ಅಂತ ಪತ್ನಿ ಮುಂದೆ ಹೇಳಿಕೊಳ್ಳುತ್ತಿದ್ದರು. ಆದರೆ ಜೊತೆ ಇರುವುದಕ್ಕೆ ಆ ಭಗವಂತ ಅವಕಾಶ ಮಾಡಿಕೊಡಲಿಲ್ಲ.
ಅಂದ್ಹಾಗೇ, ಕಳೆದ ವರ್ಷ ಇದೇ ದಿನ ಸ್ಪಂದನಾ ಸಾಕ್ಷಾತ್ ಲಕ್ಷ್ಮಿಯಂತೆ ರೆಡಿಯಾಗಿದ್ದರು. ವಿಜಯ್ ಸಿಂಪಲ್ ಆಗಿ ರೆಡಿಯಾಗಿದ್ರೂ ಥೇಟ್ ಮದುಮಗನ ಕಳೆ ಮುಖದಲ್ಲಿತ್ತು. ಮನೆಯಲ್ಲಿ ಸಂಭ್ರಮ-ಸಡಗರದ ವಾತಾವರಣ ಮನೆಮಾಡಿತ್ತು. ಮನೆ ದೇವರಿಗೆ ಪೂಜೆ ಸಲ್ಲಿಸಿ, ಸಿಹಿಯೂಟ ಮಾಡಿದ ಸ್ಪಂದನಾ, ವಿಜಯ್ ಹಾಗೂ ಮಗನನ್ನ ಕರ್ಕೊಂಡು ತಾಯಿ ಮನೆಗೆ ಹೋಗಿಬಂದರು. ಅಲ್ಲಿ ಅಣ್ಣನಿಂದ ಉಡುಗೊರೆ, ಅಪ್ಪ, ಅಮ್ಮನಿಂದನೂ ಗಿಫ್ಟ್‍ಗಳ ಸುರಿಮಳೆ. ಇನ್ನೂ ವಿಜಯ್ ಕೇಳಬೇಕಾ ತನ್ನ ಬಾಳಸಂಗಾತಿಗೆ ಬೆಲೆಯೇ ಕಟ್ಟಲಾಗದ ಸಪ್ರೈಸ್ ನೀಡಿದ್ದರು. ಅದೇನು ಅಂತ ಹೇಳುವುದಕ್ಕೆ ಸ್ಪಂದನಾ ನಮ್ಮ ಜೊತೆಗಿಲ್ಲ.
ಅಷ್ಟಕ್ಕೂ, ಸ್ಪಂದನಾ ಇಲ್ಲದ ದಿನಗಳು ಬರಬಹುದು. ಆ ದಿನಗಳಲ್ಲಿ ವಿವಾಹ ವಾರ್ಷಿಕೋತ್ಸವ ಮರುಕಳಿಸಬಹುದು ಅಂತ ಸ್ವತಃ ವಿಜಯ್ ಕನಸು-ಮನಸಲ್ಲೂ ಎಣಿಸಿರಲಿಲ್ಲ. ನನ್ನ ಕನಸು ನನ್ನ ಕಣ್ಣಮುಂದೆಯೇ ಕಣ್ಮುಚ್ಚಬಹುದು ಅಂತ ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ, ಆ ವಿಧಿಯಾಟದಿಂದ ವಿಜಯ್ ತನ್ನ ಕನಸು ಕಮರಿಹೋಗುವುದನ್ನು ಕಣ್ಣಮುಟ್ಟ ನೋಡಬೇಕಾಗಿ ಬಂತು. ಬಾಳಿಗೆ ಬೆಳಕಾದ ದೇವತೆಯ ದೇಹಕ್ಕೆ ಬೆಂಕಿಹಚ್ಚುವ ಕೆಲಸ ಮಾಡಬೇಕಾಯ್ತು. ಆ ಕ್ಷಣ ಚಿನ್ನಾರಿ ಮುತ್ತನ ದೇಹದ ಕರುಳು ಅದೆಷ್ಟು ಹೊತ್ತಿ ಉರಿದವೋ ಆ ಭಗವಂತನಿಗೆ ಗೊತ್ತು.
ಏನೇ ಆಗಲೀ ವಿಧಿ ಇಷ್ಟೊಂದು ಕ್ರೂರಿಯಾಗಬಾರದು. ಆ ಭಗವಂತನೂ ಇಷ್ಟೊಂದು ನಿಷ್ಕರುಣಿಯಾಗಬಾರದು. ಅಷ್ಟಕ್ಕೂ, ಈ ರಾಮ-ಸೀತೆಯಂತಿದ್ದ ದಂಪತಿಗಳನ್ನ ದೂರ ಮಾಡಿದ್ರಿಂದ ಆ ದೇವರಿಗೇನು ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ, ಸ್ವತಃ ಭಗವಂತನದ್ದು ಪಾಪದ ಕೊಡವಂತೂ ತುಂಬುತ್ತೆ. ವಿಜಯ್-ಸ್ಪಂದನ ಮುದ್ದಿನ ಮಗನ ಹಿಡಿಶಾಪವೂ ಆ ಭಗವಂತನಿಗೆ ತಟ್ಟುತ್ತೆ. . ಯಾಕಂದ್ರೆ ನಟ ಚಿನ್ನಾರಿ ಮುತ್ತನ ಪಾಲಿಗೆ ಮಗ ಒಂದು ಕಣ್ಣಾದರೆ, ಪತ್ನಿ ಇನ್ನೊಂದು ಕಣ್ಣಾಗಿದ್ದರು. ಹೀಗ ಅದರಲ್ಲಿ ಒಂದು ಕಣ್ಣನ್ನ ವಿಜಯ್ ಕಳೆದುಕೊಂಡಿದ್ದಾರೆ. ಹರುಷದ ಕಡಲು, ನಮ್ಮನೆ ಒಡಲು ಎಂದ ಚಿನ್ನಾರಿ ಮುತ್ತನ ಒಡಲಿಗೆ ಆ ಭಗವಂತ ಬೆಂಕಿಹಾಕಿದ್ದಾನೆ. ಅದನ್ನ ಆತನೇ ಆರಿಸಬೇಕು. ಅದ್ಹೇಗೆ ಆರಿಸುತ್ತಾನೋ ನೋಡೋಣ. ಆರಿಸಿಲಿಲ್ಲ ಅಂದರೆ ನಾವು ಸಾಯೋತನಕ ಹಿಡಿಶಾಪ ಹಾಕುತ್ತಲೇ ಇರೋಣ.