ಈ ದಿನಕ್ಕಾಗಿ ಈ ಕ್ಷಣಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮಾತ್ರವಲ್ಲ ಸಮಸ್ತ ಸಿನಿದುನಿಯಾವೇ ಕಾದು ಕುಳಿತಿತ್ತು. ರಾಕಿಭಾಯ್ ಮುಂದಿನ ಸಿನಿಮಾ ಹೇಗಿರಬಹುದು? ಕಳೆದ ಹದಿನೆಂಟು ತಿಂಗಳಿಂದ ಕಾಯಿಸಿರುವ ಮಾನ್ಸ್ಟರ್ ಅದೆಂತಾ ಸಿನಿಮಾ ಮಾಡಬಹುದು? ಅದ್ಯಾರ ಜೊತೆ ಕೈ ಜೋಡಿಸಬಹುದು? ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಖ್ಯಾತಿಗೆ ಪಾತ್ರವಾಗಿರೋ ಯಶ್ಗೆ ಅದ್ಯಾರು ಆ್ಯಕ್ಷನ್ ಕಟ್ ಹೇಳಬಹುದು. ಇಂಡಿಯನ್ ಬಾಕ್ಸ್ ಆಫೀಸ್ ಸಿಇಓಗೆ ಅದ್ಯಾರು ಬಂಡವಾಳ ಹೂಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಧೀರ ಸುಲ್ತಾನನ ಮುಂದಿನ ಚಿತ್ರದ ಟೈಟಲ್ ಹಾಗೂ ಲುಕ್ಕು-ಗೆಟಪ್ನ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಇವತ್ತು ಆ ಎಲ್ಲಾ ಕೌತುಕಕ ತೆರೆಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್ 19 ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರಕ್ಕೆ ಟಾಕ್ಸಿಕ್ ಅನ್ನೋ ಟೈಟಲ್ ಇಡಲಾಗಿದೆ.
ಟಾಕ್ಸಿಕ್ ಅಂದರೆ ವಿಷಕಾರಿ ಅನ್ನೋ ಮೀನಿಂಗ್ ಬರುತ್ತೆ. ಈ ಹಿಂದೆ ಬಜಾರ್ನಲ್ಲಿ `ಯಶ್-19′ ಚಿತ್ರ ಡ್ರಗ್ ಮಾಫಿಯಾ ಕಥೆಯನ್ನೊಳಗೊಂಡಿರುತ್ತೆ ಎಂದು ಸುದ್ದಿಯಾಗಿತ್ತು. ಇದೀಗ ಚಿತ್ರಕ್ಕೆ ಟಾಕ್ಸಿಕ್ ಅಂತ ಟೈಟಲ್ ಫಿಕ್ಸ್ ಆಗಿರೋದು ನೋಡಿದರೆ, ಮಾನ್ಸ್ಟರ್ ಡ್ರಗ್ ಮಾಫಿಯಾ ವಿರುದ್ದ ತೊಡೆತಟ್ಟಿರೋದು ಪಕ್ಕಾ ಅನ್ಸ್ತಿದೆ. ಚಿತ್ರಕ್ಕೆ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನವಿದೆ. ಮಫ್ತಿ ನರ್ತನ್ ಅವರಿಂದ ಹಿಡಿದು ಮೋಹನ್ದಾಸ್ ವರೆಗೆ ಹತ್ತಾರು ನಿರ್ದೇಶಕರ ಹೆಸರು ಕೇಳಿಬಂದಿತ್ತು. ಕೊನೆಗೆ, ಕೆಜಿಎಫ್ ಕಿಂಗ್ಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ನ್ಯಾಷನಲ್ ಅವಾರ್ಡ್ ವಿನ್ನರ್ ಗೀತುಮೋಹನ್ದಾಸ್ ಅವ್ರಿಗೆ ಸಿಕ್ಕಿದೆ. ನ್ಯಾಷನಲ್ ಸ್ಟಾರ್ ಪ್ಲಸ್ ನ್ಯಾಷನಲ್ ಅವಾರ್ಡ್ ವಿನ್ನರ್ ಕಾಂಬೋದಲ್ಲಿ ಟಾಕ್ಸಿಕ್ ತಯಾರಾಗುತ್ತಿದ್ದು, ಕೆವಿಎನ್ ಸಂಸ್ಥೆ ಬಂಡವಾಳ ಹೂಡ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಯಶ್ಭಾಯ್ ಈ ಭಾರೀ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಟಾಕ್ಸಿಕ್ ಮೂಲಕ ಅನ್ನದಾತನಾಗಿ ಅಖಾಡಕ್ಕಿಳಿದಿದ್ದಾರೆ
ಹೌದು, ಟಾಕ್ಸಿಕ್ ಮೂಲಕ ಯಶ್ ಪ್ರೊಡ್ಯೂಸರ್ ಆಗಿದ್ದಾರೆ. ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ಹುಟ್ಟುಹಾಕಿ ಅದರ ಅಡಿಯಲ್ಲಿ `ಟಾಕ್ಸಿಕ್’ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ. ಕೆವಿಎನ್ ಸಂಸ್ಥೆಯ ಜೊತೆಗೆ ಜಂಟಿಯಾಗಿ ತಮ್ಮ ಸಿನಿಮಾ ನಿರ್ಮಾಣ ಮಾಡ್ತಿದ್ದು, ಟಾಕ್ಸಿಕ್ ಚಿತ್ರ ಹಾಲಿವುಡ್ ಲೆವೆಲ್ನಲ್ಲಿ ತಯಾರಾಗಲಿದೆ. ಸದ್ಯ ರಿಲೀಸ್ ಆಗಿರೋ ಟೈಟಲ್ ಟೀಸರ್ ನೋಡಿದರೆ, ಮಾನ್ಸ್ಟರ್ ಮಾಸ್ಟರ್ ಪೀಸ್ನಂತಿರೋ ಲುಕ್ ನೋಡಿದರೆ, `ಟಾಕ್ಸಿಕ್’ ಪ್ಯಾನ್ ವರ್ಲ್ಡ್ ನ ಟಾರ್ಗೆಟ್ ಮಾಡಿರೋದು ಪಕ್ಕಾ, ಅಷ್ಟಕ್ಕೂ, ಈ ಪ್ಯಾನ್ ವಲ್ರ್ಡ್ ಪ್ರಾಜೆಕ್ಟ್ ನಲ್ಲಿ ಯಾರ್ಯಾರು ದುಡಿದು ದಣಿಯಲ್ಲಿದ್ದಾರೆ ಗೊತ್ತಿಲ್ಲ. ಆದರೆ, ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿಯವರಿಂದ ಹಿಡಿದು ಹೆಸರಾಂತ ತಂತ್ರಜ್ಞರು ಟಾಕ್ಸಿಕ್ ಭಾಗವಾಗೋದು ಖರ್ರೆ. ಶೂಟಿಂಗ್ ಎಲ್ಲೆಲ್ಲಿ ಪ್ಲ್ಯಾನ್ ಮಾಡಿದ್ದಾರೆ, ಆಸ್ಟ್ರೇಲಿಯಾ, ಅಮೇರಿಕಾ, ಲಂಡನ್, ಸಿಡ್ನಿ, ಕೀನ್ಯಾ ಸೇರಿದಂತೆ ದೇಶ-ವಿದೇಶ ಸುತ್ತಿಬಂದ ಕೆಜಿಎಫ್ ಸುಲ್ತಾನ್ `ಟಾಕ್ಸಿಕ್’ ಚಿತ್ರಾನ ಎಲ್ಲೆಲ್ಲಿ ಕ್ಯಾಪ್ಚರ್ ಮಾಡ್ತಾರೆ ಗೊತ್ತಿಲ್ಲ. ಆದರೆ, ಯೂನಿವರ್ಸಲ್ ಸಬ್ಜೆಕ್ಟ್ ಮೂಲಕ ಸಮಸ್ತ ಸಿನಿದುನಿಯಾ ತಲುಪಲು ಸ್ಕೆಚ್ ಹಾಕಿದ್ದಾರೆ. ಕೆಜಿಎಫ್ ಸರಣಿ ಸಿನಿಮಾಗಳ ನಂತರ ಜಗದಗದಲ ಹಬ್ಬಿರೋ ನಿರೀಕ್ಷೆಯನ್ನ ಫುಲ್ ಫಿಲ್ ಮಾಡೋದಕ್ಕೆ ರಾಕಿ ಪಣತೊಟ್ಟು ನಿಂತಿದ್ದಾರೆ.
ಸದ್ಯಕ್ಕೆ ಟೈಟಲ್ ಘೋಷಣೆಯಾಗಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ತಂತ್ರಜ್ಞರ ಬಳಗವನ್ನ ರಾಕಿ ಅಫೀಷಿಯಲ್ಲಾಗಿ ಅನೌನ್ಸ್ ಮಾಡಲಿದ್ದಾರೆ. `ನೀವು ಹುಡುಕುತ್ತಿರುವುದು ನಿಮ್ಮನ್ನ ಹುಡುಕ್ತಿದೆ’. ಟಾಕ್ಸಿಕ್ ವಯಸ್ಕರಿಗೆ ಮಾತ್ರ. ಇದೊಂದು ಕಾಲ್ಪನಿಕ ಕಥೆ ಅನ್ನೋದನ್ನ ಸ್ವತಃ ಸುಲ್ತಾನ್ ತಿಳಿಸಿದ್ದಾರೆ. ಸಿನಿಮಾ ಘೋಷಣೆಯಂದೇ ಚಿತ್ರ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. 2025 ಏಪ್ರಿಲ್ 10ರಂದು ಟಾಕ್ಸಿಕ್ ವಿಶ್ವವ್ಯಾಪಿ ರಿಲೀಸ್ ಆಗಲಿದೆ. ಅದರ ತೀವ್ರತೆ ಎಷ್ಟಿರಲಿದೆ ಅನ್ನೋದನ್ನ ತೂಫಾನ್ ಬರೋವರೆಗೂ ಕಾಯಬೇಕು ಅಷ್ಟೇ.