ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ರಾಜ್ ಬಿ ಶೆಟ್ಟಿ ಡೈರೆಕ್ಟ್ ಮಾಡಿ ಆ್ಯಕ್ಟ್ ಮಾಡಿದ್ದು, ಸಿರಿ ರವಿಕುಮಾರ್ ಶೆಟ್ರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸಾವು-ಬದುಕಿನ ಹೋರಾಟದ ನಡುವೆ ಹುಟ್ಟುವ ಪ್ರೀತಿನಾ ಮುಖ್ಯಭೂಮಿಕೆಗೆ ತಂದಿರುವ ಶೆಟ್ರು ಅದ್ಭುತವಾಗಿ ಸ್ವಾತಿ ಮುತ್ತನ್ನ ಕಟ್ಟಿಕೊಟ್ಟಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಎಮೋಷನಲಿ ಕನೆಕ್ಟ್ ಆಗ್ತಿದ್ದು, ಸಮಸ್ತ ಸಿನಿಮಾ ಪ್ರೇಮಿಗಳು ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡದೇ ಸಿನಿಮಾ ನೋಡಲಿಕ್ಕೆ ಕಾತುರರಾಗಿದ್ದಾರೆ.
ಸಿನಿಮಾದಲ್ಲಿ ಅನಿಕೇತ್ (ರಾಜ್ ಬಿ ಶೆಟ್ಟಿ ) ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೇನು ಕೆಲವು ತಿಂಗಳಿಗೆ ಸಾಯಲಿರುವ ವ್ಯಕ್ತಿಯ ಪಾತ್ರವದು. ಸಿನಿಮಾದ ನಾಯಕಿ ಪ್ರೇರಣಾ( ಸಿರಿ ರವಿಕುಮಾರ್ )ಸಾವು ನಿಶ್ಚಯವಾದವರಿಗೆ ಧೈರ್ಯ ತುಂಬುವ, ಅವರನ್ನು ಸಾವಿಗೆ ಅಣಿ ಮಾಡುವ ಕೌನ್ಸಲರ್ ಪಾತ್ರ. ಈ ಇಬ್ಬರ ನಡುವೆ ಆತ್ಮೀಯತೆ ಉಂಟಾಗಿದೆ, ಅಂದಹಾಗೆ ಸಿನಿಮಾದ ನಾಯಕಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಾಯಲು ಸಿದ್ಧವಾದ ವ್ಯಕ್ತಿಯೊಬ್ಬನನ್ನು ಅತಿಯಾಗಿ ಹಚ್ಚಿಕೊಂಡಿದ್ದಾರೆ. ಇವರ ‘ಸಂಬಂಧ’ದ ಭವಿಷ್ಯವೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಿದೆ.
ಹಸಿರಿನ ಮಡಿಲಲ್ಲಿ ಸಾವಿಗೆ ಸಿದ್ಧವಾದವರ ಕತೆ ನಡೆಯುತ್ತಿದೆ. ಕಣ್ಣಿಗೆ ತಂಪೆನಿಸುವ ಜಾಗಗಳಲ್ಲಿ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಚಿತ್ರೀಕರಣ ಮಾಡಿದ್ದಾರೆ, ರಾಜ್ ಬಿ ಶೆಟ್ಟಿಯ ಈ ಹಿಂದಿನ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಿನಿಮಾಟೊಗ್ರಾಫರ್ ಪ್ರವೀಣ್ ಶ್ರಿಯಾನ್ ಹಾಗೂ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಈ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ ಸಹ ಇದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ನಟಿ ರಮ್ಯಾ. ಇದು ಅವರ ಮೊದಲ ನಿರ್ಮಾಣದ ಸಿನಿಮಾ ಆಗಿದ್ದು, ನವೆಂಬರ್ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ಅವರೇ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗದೆ, ಕೊನೆಗೆ ಆ ಜಾಗಕ್ಕೆ ನಟಿ ಸಿರಿ ರವಿಕುಮಾರ್ ಆಗಮಿಸಿದರು. ಈ ಬಗ್ಗೆ ಸ್ವತಃ ರಮ್ಯಾ ಅವರು ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿದ್ದರು. ‘ಸ್ವಾತಿ ಮುತ್ತಿನ ಮಳೆ ಹನಿಯೇ’- ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ, ಬದಲಿಗೆ ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ. ಪ್ರೀತಿಸಿದವರ ಅಗಲಿಕೆಯ ನೋವು, ಅದರಿಂದ ಹೊರ ಬರಲು ಅಸಾಧ್ಯವೆಂದು ತಿಳಿದಿದ್ದರೂ, ನಾವು ಮಾಡುವ ಪ್ರಯತ್ನ. ಈ ಅನುಭವವು ನಮ್ಮನ್ನು ಹೆಚ್ಚು ಪಕ್ಷಗೊಳಿಸುತ್ತದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ಈ ಪ್ರಕ್ರಿಯೆಯನ್ನು ಮನಸ್ಸಿಗೆ ನಾಟುವಂತೆ ಸೆರೆಹಿಡಿದಿದೆ” ಎಂದು ರಮ್ಯಾ ಬರೆದುಕೊಂಡಿದ್ದರು.
“ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ, ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಂಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ” ಎಂದು ರಮ್ಯಾ ಹೇಳಿದ್ದರು.
“ಸಿನಿಮಾದಲ್ಲಿನ ಸಿರಿಯ ನಟನೆ ಅದ್ಭುತ. ರಾಜ್ ತಾವು ಒಬ್ಬ ಪ್ರತಿಭಾನ್ವಿತ ನಟರೆಂದು ನಿರೂಪಿಸಿದ್ದಾರೆ. ಕಥೆಯನ್ನು ಅವರು ವಿವರಿಸಿದಾಗ, ಕಥೆಯ ಬಗೆಗಿನ ವಿವರಣೆ ನನ್ನನ್ನು ಭಾವುಕಳನ್ನಾಗಿಸಿತು. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿ ಮೂಡಿಬಂದಿದ್ದು, ‘ಪ್ರೇರಣಾ ಥೀಮ್..’ ನನ್ನ ನೆಚ್ಚಿನ ಹಾಡಾಗಿದೆ. ನೀವೆಲ್ಲರೂ ಈ ಹಾಡು ಕೇಳಬೇಕೆಂಬ ಕಾತುರ ನನಗಿದೆ. ಈ ಚಿತ್ರದ ತಿರುಳು ನಿಮ್ಮ ಮನದಲ್ಲಿ ಬಹಳ ಸಮಯ ಉಳಿಯುತ್ತದೆ ಎಂಬುದು ನನ್ನ ಆಶಯ, ಇಡೀ ಚಿತ್ರತಂಡಕ್ಕೆ, ವಿಶೇಷವಾಗಿ ಸುನಯನಾ, ಕೆವಿನ್, ಕಾರ್ತಿಕ್ ಮತ್ತು ಯೋಗಿ ಇವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು” ಎಂದು ಈ ನಟಿ ತಿಳಿದ್ದಾರೆ. ನಟಿ ರಮ್ಯಾ ಕೊನೆಯದಾಗಿ “ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ನಾವು ಹುಡುಕುತ್ತೇವೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ಇದೇ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಿನಿಮಾವನ್ನು ವೀಕ್ಷಿಸಿ. ಪ್ರೀತಿಯ ಸ್ವಾದವನ್ನು ಸವಿಯಿರಿ..’ ಎಂದು ಅಭಿಮಾನಿಗಳ ಬಳಿ ಕೇಳಿಕೊಂಡಿದ್ದರು.