ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

unbelievable but true facts: ತಲೆಗೆ ಹುಳ ಬಿಡುವ ಸುದ್ದಿಗಳು!

Majja Webdeskby Majja Webdesk
27/03/2025
in Lifestyle, Majja Special
Reading Time: 2 mins read
unbelievable but true facts: ತಲೆಗೆ ಹುಳ ಬಿಡುವ ಸುದ್ದಿಗಳು!

-ಕೊಲ್ಲಲು ಪ್ರಯೋಗಿಸುತ್ತಿದ್ದ ಹಿಟ್ಲರ್ ಫಾರ್ಮುಲಾ!

-ತರಕಾರಿ ಕಂಡ್ರೂ ಬೆಚ್ಚಿಬೀಳೋ ಕಾಯಿಲೆ!

 

ಇದು ಸುದ್ದಿಗಳ ಸಂತೆಯಲ್ಲಿ ನಿಂತಂಥಾ ಜಗತ್ತು. ಒಂದು ಕಾಲದಲ್ಲಿ ವಾರ್ತೆಗಳ ಮೂಲಕ ಮಾತ್ರವೇ ಜನರನ್ನು ದಾಟಿಕೊಳ್ಳುತ್ತಿದ್ದ ಸುದ್ದಿಗಳು, ಈವತ್ತಿಗೆ ನಾನಾ ದಾರಿಗಳ ಮೂಲಕ ಶರವೇಗದಲ್ಲಿ ಎಲ್ಲರನ್ನೂ ಆವರಿಸಿಕೊಳ್ಳುತ್ತಿವೆ. ಆದರೆ, ಹೀಗೆ ಎಲ್ಲೆಂದರಲ್ಲಿ ಹರಿದಾಡುವ ಸುದ್ದಿಗಳೀಗ ಸಂಪೂರ್ಣವಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿವೆ. ವೀಡಿಯೋಗಳನ್ನೂ ನಂಬುವಂತಿಲ್ಲ, ಸುದ್ದಿಗಳ ಮೇಲೂ ಭರವಸೆ ಇಡುವಂತಿಲ್ಲ ಎಂಬಂಥಾ ವಿಷಮ ಸನ್ನಿವೇಶವೊಂದು ಎಲ್ಲರನ್ನೂ ಆವರಿಸಿಕೊಂಡಿದೆ. ಇಂಥಾ ಸುದ್ದಿಗಳ ಸಂತೆಯಲ್ಲಿ ಅಷ್ಟು ಸಲೀಸಾಗಿ ಯಾರ ಕಣ್ಣಿಗೂ ಬೀಳದ ಬೆರಗಿನವುಗಳೂ ಒಂದಷ್ಟಿದ್ದಾವೆ. ನಾನಾ ಕ್ಷೇತ್ರಕ್ಕೆ ಸಂಬಂಧಿಸಿದ ಇಂಥಾ ಸುದ್ದಿಗಳದ್ದೊಂದು ಜೊಂಪೆ ಇಲ್ಲಿದೆ. ಇಂಥಾ ತುಣುಕು ಸುದ್ದಿಗಳು, ಅದರೊಳಗಿರೋ ವಿಚಾರಗಳು ಖಂಡಿತವಾಗಿಯೂ ಒಂದರೆಕ್ಷಣವಾದರೂ ಅಚ್ಚರಿಗೀಡು ಮಾಡುತ್ತವೆ; ಆಹ್ಲಾದ ತುಂಬುತ್ತವೆ!

ನೀಲಿ ವೈರಸ್ಸು


ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ. ಇಂಥಾ ನೀಲಿ ಚಿತ್ರಗಳನ್ನ ಹುಡುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ.

ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು ವೈರಸ್ ದಾಳಿಗೀಡಾಗಬಹುದು. ನಿಮ್ಮ ಫೈಲುಗಳೆಲ್ಲ ಸರ್ವನಾಶವಾಗಿ ಜುಟ್ಟು ಕೆದರಿಕೊಳ್ಳುವ ಸ್ಥಿತಿಯೂ ಎದುರಾಗಬಹುದು. ಇತ್ತೀಚೆಗೆ ನಡೆದಿರೋ ಕೆಲ ಶೋಧನೆಗಳು ಇಂಥಾದದ್ದೊಂದು ಎಚ್ಚರಿಕೆಯನ್ನ ರವಾನಿಸಿವೆ. ಇಂಥಾ ಪಾರ್ನ್ ಸೈಟ್‌ಗಳು ನಾಯಿ ಕೊಡೆಗಳಂತೆ ಹಬ್ಬಿಕೊಂಡಿವೆ. ಅಂಥವೆಲ್ಲ ಭಾರೀ ಪ್ರಮಾಣದಲ್ಲಿ ಕಮಾಯಿಯನ್ನೂ ಮಾಡಿಕೊಳ್ಳುತ್ತಿವೆ. ಇಂಥವಕ್ಕೆ ಕಾನೂನು ಕಟ್ಟಳೆಗಳ ಬಂಧವಿದ್ದರೂ ಬಿಂದಾಸಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಇಂಥವೆಲ್ಲ ಬೇಕೆಂದೇ ವೈರಸ್ ಹಬ್ಬಿಸೋ ಕೆಲಸವನ್ನೂ ಮಾಡ್ತಿವೆಯಂತೆ. ಈ ಮೂಲಕವೇ ಆಂಟಿ ವೈರಸ್ ಕಂಪೆನಿಗಳಿಗೆ ಸಹಕಾರಿಯಾಗಿಯೂ ನಡೆದುಕೊಳ್ತಿವೆಯಂತೆ. ಇಂಥಾ ಪಾರ್ನ್ ವೆಬ್‌ಸೈಟ್‌ಗಳಲ್ಲಿ ಕೆಲವೊಮ್ಮೆ ಸಿಸ್ಟಮ್ ಅನ್ನು ಸರ್ವನಾಶ ಮಾಡಿ ಬಿಡಬಲ್ಲ ರಕ್ಕಸ ವೈರಸ್‌ಗಳೂ ದಾಳಿಯಿಡುತ್ತವೆ ಅಂತ ವರದಿಗಳು ಹೇಳುತ್ತಿವೆ.

ಹಿಟ್ಲರ್ ಫಾರ್ಮುಲಾ


ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯದ ಅಧ್ಯಾಯಗಳನ್ನು ಉಳಿಸಿ ಹೋದವನು ಅಡಾಲ್ಫ್ ಹಿಟ್ಲರ್. ಕ್ರೂರತನದ ಉತ್ತುಂಗದಂತಿದ್ದ ಹಿಟ್ಲರ್ ವಿಶ್ವ ಕಂಡ ಅಪಾಯಕಾರಿ ಸರ್ವಾಧಿಕಾರಿಗಳಲ್ಲೊಬ್ಬ. ವಿರೋಧಿಗಳನ್ನು ಇರುವೆಗಳಿಗಿಂತ ಕಡೆಯಾಗಿ ಹೊಸಕಿದ ಹಿಟ್ಲರನದ್ದು ರಕ್ತಸಿಕ್ತ ವ್ಯಕ್ತಿತ್ವ. ಕರುಣೆಯ ಪರಿಚಯವೇ ಇಲ್ಲದಂತಿದ್ದ ಈತ ಕೊಲ್ಲಲು ಬಳಸುತ್ತಿದ್ದ ವಿಧಾನಗಳೇ ನಡುಕ ಹುಟ್ಟಿಸುವಂತಿವೆ. ಆತ ವಿಷಾನಿಲ ಬಿಟ್ಟು ಜನರನ್ನು ಕೊಂದ ಕಥೆ ಜನಜನಿತ. ಆದ್ರೆ ಆತ ಚಪ್ಪರಿಸಿ ತಿನ್ನೋ ಚಾಕೋಲೇಟ್ ಅನ್ನೂ ಕೂಡಾ ಕೊಲ್ಲಲು ಬಳಸಿದ್ದ ಮಹಾ ಕಿರಾತಕ. ಇಡೀ ಜಗತ್ತನ್ನೇ ತನ್ನ ಕೈ ವಶ ಮಾಡಿಕೊಳ್ಳಬೇಕೆಂಬ ರಣ ಹಸಿವಿಂದ ತೊನೆದಾಡಿದ್ದವನು ಹಿಟ್ಲರ್. ಆರಂಭದಲ್ಲಿ ಭಾವನೆ ಕೆರಳಿಸಿ ಜನರನ್ನ ಮರುಳು ಮಾಡಿದ್ದ ಆತ ಅದನ್ನೇ ಅಸ್ತ್ರವಾಗಿಸಿಕೊಂಡಿದ್ದ. ಆದರೂ ಅವನ ಹಿಕಮತ್ತಿನ ವಿರುದ್ಧ ಅನೇಕರು ಬಂಡೆದ್ದಿದ್ದರು. ಅಂಥವರನ್ನೆಲ್ಲ ಕ್ರೂರ ಹಾದಿಯಲ್ಲಿ ಕೊಂದ ಹಿಟ್ಲರ್‌ಗೆ ಎಥಿಕ್ಸ್ ಅನ್ನೋದರ ಪರಿಚಯವೇ ಇರಲಿಲ್ಲ. ಅದಿದ್ದಿದ್ದರೆ ಚಾಕೋಲೇಟ್ ಬಾಂಬು ತಯಾರಿಸಿ ಮೋಸದಿಂದ ಕೊಲ್ಲೋ ಮಾರ್ಗವನ್ನಾತ ಅನುಸರಿಸುತ್ತಿರ್‍ಲಿಲ್ಲ.

ಹಿಟ್ಲರ್ ಮಾರ್ಗದರ್ಶನದಲ್ಲಿಯೇ ಚಾಕೋಲೇಟ್ ಕೋಟೆಡ್ ಬಾಂಬು ತಯಾರಾಗಿತ್ತು. ಸ್ಫೋಟಕ ಸಾಧನಗಳನ್ನ ಡಾರ್ಕ್ ಚಾಕೋಲೇಟಿನಿಂದ ಮುಚ್ಚಿ ಅದಕ್ಕೆ ಆಕರ್ಷಕವಾದ ಗೋಲ್ಡನ್ ರ್‍ಯಾಪರ್ ಸುತ್ತಲಾಗುತ್ತಿತ್ತು. ಅದನ್ನು ವಿರೋಧಿಗಳು ತಿಂದರೆ ಬಾಯಿ ಸ್ಫೋಟವಾಗಿ ಸತ್ತೇ ಹೋಗ್ತಿದ್ರು. ಹಾಗೆಯೇ ಹಿಟ್ಲರ್ ತನ್ನ ವಿರೋಧಿ ವಿನ್ಸಂಟ್ ಚರ್ಚಿಲ್‌ನನ್ನು ಕೊಲ್ಲಲೆತ್ನಿಸಿದ್ದ. ವಿನ್ಸೆಂಟ್ ಚರ್ಚಿಲ್ ಮಹಾನ್ ಆಹಾರಪ್ರಿಯ. ಆಗಾಗ ಅಂತಃಪುರಕ್ಕೆ ಬಂದು ಗಡದ್ದಾಗಿ ತಿಂದು ಸುಖಿಸುವ ರೂಢಿ ಆತನದ್ದಾಗಿತ್ತು. ಅಂಥಾ ಚರ್ಚಿಲ್‌ನನ್ನು ಚಾಕೋಲೇಟ್ ಬಾಂಬಿಟ್ಟು ಉಡಾಯಿಸಲು ಹಿಟ್ಲರ್ ಯೋಜಿಸಿದ್ದ. ಚರ್ಚಿಲ್‌ನ ಟೇಬಲ್ಲಿನಲ್ಲಿಯೇ ಚಾಕೋಲೇಟ್ ಬಾಂಬಿಡಲೂ ವ್ಯವಸ್ಥೆ ಮಾಡಿದ್ದ. ಆದರೆ ಅದನ್ನು ಚರ್ಚಿಲ್ಲನ ಬೇಹುಗಾರಿಕಾ ಪಡೆ ಹೇಗೋ ಪತ್ತೆ ಹಚ್ಚಿತ್ತು. ಆ ಕಾರಣದಿಂದಾನೇ ಹಿಟ್ಲರನ ಪ್ಲ್ಯಾನು ಠುಸ್ ಆಗಿತ್ತು. ಕೊಂಚ ಯಾಮಾರಿದ್ದರೂ ಚರ್ಚಿಲ್ ಚಾಕೋಲೆಟ್ ಬಾಂಬ್ ತಿಂದು ಸತ್ತೇ ಹೋಗಿರ್‍ತಿದ್ದ.

ನಗಿಸಿ ಗೆದ್ದವನ ನೋವು


ನೋವೆಲ್ಲವನ್ನೂ ಎದೆಯಲ್ಲಿಯೇ ಹುಗಿದಿಟ್ಟುಕೊಂಡು ನಗುತ್ತಾ ಬದುಕೋದಿದೆಯಲ್ಲಾ? ಅದು ಸಾಮಾನ್ಯರಿಗೆ ಸಿದ್ಧಿಸೋ ಸಂಗತಿಯೇನಲ್ಲ. ಅದರಲ್ಲೂ ಅಂಥ ನೋವಿಟ್ಟುಕೊಂಡು ನಗಿಸೋದನ್ನೇ ಬದುಕಾಗಿಸಿಕೊಳ್ಳೋದೊಂದು ಸಾಹಸ. ನೀವೇನಾದ್ರೂ ಕಮೇಡಿಯನ್ನುಗಳಾಗಿ ಗೆದ್ದವರ ಬದುಕಿನ ಹಿನ್ನೆಲೆ ಹುಡುಕಿದ್ರೆ ಅಲ್ಲೊಂದು ನೋವಿನ ಕಥೆ ಇದ್ದೇ ಇರುತ್ತೆ. ಈಗ ಹೇಳ ಹೊರಟಿರೋ ಕಥೆ ಕೂಡಾ ಅಂಥದ್ದೆ. ಜಿಮ್ ಕ್ಯಾರಿ ಈ ಕಥೆಯ ನಾಯಕ. ಈತ ಕೆನಡಿಯನ್, ಅಮೆರಿಕನ್ ನಟ. ಇತ್ತೀಚಿನ ದಿನಗಳಲ್ಲಿ ಸ್ಟ್ಯಾಂಡಪ್ ಕಮೆಡಿಯನ್ ಆಗಿಯೂ ಬಲು ವಿಖ್ಯಾತಿ ಗಳಿಸಿಕೊಂಡಿರುವಾತ. ಈವತ್ತಿಗೆ ಆತ ಖ್ಯಾತಿಯ ಉತ್ತುಂಗವೇರಿದ್ದಾನೆ. ಆರ್ಥಿಕವಾಗಿಯೂ ಸಾಕಷ್ಟು ಬಲಾಢ್ಯನಾಗಿದ್ದಾನೆ. ಆದರೆ ಆತನ ಕಾಮಿಡಿ ಪ್ರೋಗ್ರಾಮುಗಳನ್ನು ನೋಡಿದವರ್‍ಯಾರೂ ಆತ ನಡೆದು ಬಂದು ಕಡು ಕಷ್ಟದ ಹಾದಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಜಗತ್ತಿನ ಅದೃಷ್ಟವಂತ ಮಕ್ಕಳೆಲ್ಲ ಬದುಕನ್ನು ಬೆರಗಿಂದ ನೋಡೋ ಕಾಲದಲ್ಲಿಯೇ ಜಿಮ್ ಪಾಲಿಗೆ ದುರಾದೃಷ್ಟ ವಕ್ಕರಿಸಿಕೊಂಡಿತ್ತು. ಆತನದ್ದು ತೀರಾ ಬಡತನದ ಫ್ಯಾಮಿಲಿ. ಅಪ್ಪ ಹೇಗೋ ಕಷ್ಟಪಟ್ಟು ಒಂದು ಕೆಲಸ ಮಾಡುತ್ತಾ ಸಂಸಾರವನ್ನ ನಿಭಾಯಿಸ್ತಿದ್ದ. ಆದ್ರೆ ಅದೊಂದು ದಿನ ಇದ್ದೊಂದು ಕೆಲಸವೂ ಕೈತಪ್ಪಿ ತಂದೆ ದಿಕ್ಕು ತೋಚದಂತಾಗಿ ಕ್ರಮೇಣ ಹಾಸಿಗೆ ಹಿಡಿದು ಬಿಟ್ಟಿದ್ದ.  ಆ ಹೊತ್ತಿನಲ್ಲಿ ಇಡೀ ಸಂಸಾರ ನಿಭಾಯಿಸುವ ಜವಾಬ್ದಾರಿ ಕಿಮ್‌ನ ಹೆಗಲೇರಿಕೊಂಡಿತ್ತು. ಆತ ಕೆಲಸಕ್ಕಾಗಿ ಅಲ್ಲಿಲ್ಲಿ ಅಡ್ಡಾಡಿ ಕಡೆಗೂ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಅದರ ನಡುವೆಯೇ ಓದನ್ನೂ ಮುಂದುವರೆಸಿದ್ದ. ಹಾಗೆ ಕಷ್ಟ ಹೆಗಲೇರಿಕೊಳ್ಳೋ ಕಾಲದಲ್ಲಿ ಕಿಮ್‌ಗೆ ಕೇವಲ ಹದಿನಾಲಕ್ಕು ವರ್ಷ. ಅಂಥಾ ಕಷ್ಟವಿದ್ದರೂ ಕೂಡಾ ಕಿಮ್ ಶೋ ಒಂದರಲ್ಲಿ ಪರ್ಫಾರ್ಮೆನ್ಸ್ ನೀಡಿ ನಂತರ ನಟನಾಗಿ ಹೊರಹೊಮ್ಮಿದ್ದೊಂದು ಸ್ಫೂರ್ತಿದಾಯಕ ಕಥೆ.

ತರಕಾರಿ ಕಂಡ್ರೆ ಭಯ


ಮನುಷ್ಯ ಕೇವಲ ಬುದ್ಧಿವಂತ ಮಾತ್ರವಲ್ಲ, ಧೈರ್ಯವಂತ ಜೀವಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಯಾವ ಧೈತ್ಯರೇ ಎದುರಾಗಿ ನಿಂತರೂ ಬಡಿದು ಬಿಸಾಡಬಲ್ಲ ಪರಾಕ್ರಮಿಗಳೂ ಮನುಷ್ಯ ಜೀವಿಗಳ ನಡುವಲ್ಲಿದ್ದಾರೆ. ಹಾಗೆ ನಾನಾ ಪರಾಕ್ರಮ ತೋರಿಸುವವರೊಳಗೂ ವಿಚಿತ್ರವಾದ ಭಯಗಳು ತಣ್ಣಗೆ ಕೂತು ಬಿಟ್ಟಿರುತ್ತವೆ. ಮನಃಶಾಸ್ತ್ರ ಈ ವಿಚಾರವನ್ನ ದಾಖಲೆ ಸಮೇತವಾಗಿ ಪ್ರಚುರಪಡಿಸ್ತಾನೆ ಬಂದಿದೆ. ಕೆಲವರಿಗೆ ಎತ್ತರದ ಭಯ. ಮತ್ತೆ ಕೆಲ ಮಂದಿಗೆ ಪಾತಾಳ, ನೀರು ಗಾಳಿ, ಬೆಂಕಿ, ಕ್ರಿಮಿ ಕೀಟಗಳು…

ಮನುಷ್ಯ ಹೀಗೆ ಹೆಜ್ಜೆ ಹೆಜ್ಜೆಗೂ ಭಯ ಪಡ್ತಾನೇ ಬದುಕ್ತಿರ್‍ತಾನೆ. ನೀವು ತೀರಾ ಜಿರಳೆಗಳಿಗೂ ಭಯ ಪಡುವ ಒಂದಷ್ಟು ಮಂದಿಯನ್ನ ನೋಡಿರ್‍ತೀರಿ. ಆದ್ರೆ ಈ ಜಗತ್ತಲ್ಲಿ ನಿರುಪದ್ರವಿ ತರಕಾರಿಗಳಿಗೂ ಭಯ ಬೀಳೋ ಜನರಿದ್ದಾರೆ, ಅಂಥಾದ್ದೊಂದು ಕಾಯಿಲೆ ಇದೆ ಅಂದ್ರೆ ನಂಬೋದು ತುಸು ಕಷ್ಟವಾದೀತೇನೋ. ಆದ್ರೆ ನಂಬದೆ ವಿಧಿಯಿಲ್ಲ. ಯಾಕಂದ್ರೆ ಲ್ಯಾಚನೋಫೋಭಿಯಾ ಬಾಧಿತ ವ್ಯಕ್ತಿಗಳಿಗೆ ಕೆಲ ತರಕಾರಿಗಳೂ ಕೂಡಾ ಹಾವು, ಹುಳು ಹುಪ್ಪಟೆಗಳಂತೆ ಭಯ ಬೀಳಿಸ್ತಾವಂತೆ. ಪುಟ್ಟ ಮಕ್ಕಳು ಕೆಲ ತರಕಾರಿಗಳನ್ನ ಮುಟ್ಟೋದಿಲ್ಲ. ದೊಡ್ಡವರಿಗೂ ಕೂಡಾ ಆಗಿ ಬರದ ತರಕಾರಿಗಳ ಪಟ್ಟಿಯೊಂದಿರತ್ತೆ. ಹಾಗಂತ ಅದು ಬರೀ ಬಾಯಿರುಚಿಯ ಮ್ಯಾಟರ್ ಖಂಡಿತಾ ಅಲ್ಲ. ಅಲ್ಲಿ ಲ್ಯಾಚನೋಫೋಭಿಯಾದ ಹಾಜರಿ ಇದ್ದಿರಬಹುದು. ಅದುವೇ ತರಕಾರಿಗಳ ರೂಪದಲ್ಲಿ ಭಯ ಹುಟ್ಟಿಸ್ತಿರಬಹುದು.

ಇದು ಕಿವಿಯ ವಿಷಯ! 


ಪ್ರಕೃತಿ ಪ್ರತೀ ಜೀವಿಗಳಿಗೂ ಕೂಡಾ ಅಗತ್ಯಕ್ಕನುಗುಣವಾಗುವಂತೆ ಕೆಲ ಅಂಗಗಳನ್ನ ಸೃಷ್ಟಿಸಿದೆ. ಅದರಲ್ಲಿಯೇ ಒಂದಷ್ಟು ಸೂಕ್ಷ್ಮಾತಿ ಸೂಕ್ಷ್ಮವಾದ, ಅತೀ ಅಗತ್ಯವಾದ ಅಂಗಾಂಗಗಳೂ ಇದ್ದಾವೆ. ಅದರಲ್ಲಿ ಕಿವಿಯದ್ದು ಅಗ್ರ ಸ್ಥಾನ. ಅದು ಬರೀ ಕೇಳಿಸಿಕೊಳ್ಳೋದಕ್ಕೆ ಮಾತ್ರವಲ್ಲದೆ ಬೇರೊಂದಷ್ಟು ಕನೆಕ್ಷನ್ನುಗಳನ್ನೂ ಒಳಗೊಂಡಿದೆ. ಹಾಗಂತ ಪ್ರತೀ ಜೀವ ಸಂಕುಲಕ್ಕೂ ಕಿವಿಯ ಸಿಸ್ಟಮ್ಮು ಒಂದೇ ತೆರನಾಗಿಲ್ಲ. ಮನುಷ್ಯರ ಕಿವಿ ಮುಖಕ್ಕೆ ಹೊಂದಿಕೊಂಡಂತೆ, ಸೌಂದರ್ಯವನ್ನ ದ್ವಿಗುಣಗೊಳಿಸುವಂತೆ ರಚನೆಯಾಗಿರುತ್ತೆ. ಅದರಲ್ಲಿಯೂ ನಾನಾ ಬಗೆಯ ಆಕಾರಗಳಿವೆ.

ಇನ್ನು ಬಹುತೇಕ ಪ್ರಾಣಿಗಳಲ್ಲಿಯೂ ಕಿವಿಯ ರಚನೆ ಕಾಮನ್ನಾಗಿದೆ. ಆದ್ರೆ ಇನ್ನೂ ಒಂದಷ್ಟು ಜೀವಿಗಳಿಗೆ ಕಿವಿ ಅನ್ನೋದು ಹೊರಗೆ ಕಾಣಿಸೋದಿಲ್ಲ. ಅವುಗಳ ಬೇರೆ ಬೇರೆ ಪಾರ್ಟುಗಳಿಗೆ ಶಬ್ಧವನ್ನ ಗ್ರಹಿಸೋ ಶಕ್ತಿ ಸಿಕ್ಕಿದೆ. ಕೇಳಿಸಿಕೊಳ್ಳೋದೆಂದರೆ ಅದು ಕಿವಿಯಿಂದ ಮಾತ್ರವೇ ಸಾಧ್ಯವಾಗುತ್ತೆ ಅನ್ನೋದು ನಮ್ಮ ನಂಬಿಕೆ. ಆದ್ರೆ ಹಾವುಗಳಿಗೆ ಕಿವಿಯೇ ಇರೋದಿಲ್ಲ. ಆದರೂ ಅವು ಶಬ್ಧವನ್ನ ಗ್ರಹಿಸುತ್ತವೆ. ಅವುಗಳು ವೈಬ್ರೇಷನ್ ಅನ್ನು ದವಡೆಯ ಮೂಳೆಯ ಮೂಲಕ ಗ್ರಹಿಸ್ತಾವೆ. ಮೀನುಗಳು ನೀರಿನ ಒತ್ತಡದ ಮೂಲಕವೇ ಶಬ್ದಗಹಣ ಮಾಡುತ್ವೆ. ಇನ್ನು ಗಂಡು ಸೊಳ್ಳೆಗಳ ಆಂಟೆನಾಗಳೇ ಗ್ರಹಣದ ವಾಹಕಗಳಾಗಿರುತ್ವೆ.

ತೀರ್ಥ ಕ್ಷೇತ್ರ!


ನಮ್ಮಲ್ಲಿ ಹೊಟ್ಟೆಗೆ ಹೆಚ್ಚಾಗಿ ನವರಂಧ್ರಗಳಲ್ಲಿಯೂ ಚಿಮ್ಮುವ ರೇಂಜಿಗೆ ಎಣ್ಣೆ ಹೊಡೆಯುವವರಿದ್ದಾರೆ. ಹಾಗೆ ಭರ್ಜರಿ ಕಿಕ್ಕೇರಿಸಿಕೊಂಡು ಫುಟ್ಪಾತು ಸರ್ವೆ ಮಾಡುವವರು, ಅಲ್ಲೇ ಬೋರಲಾಗಿ ಬಿದ್ದುಕೊಳ್ಳುವವರು, ಗಲ್ಲಿ ಗಟಾರ ಕೊಚ್ಚೆ ಕೊಳಕೆನ್ನದೆ ಉಳ್ಳಾಡುವವರೆಲ್ಲ ನಮಗೆ ಪರಿಚಿತರಾಗಿರ್‍ತಾರೆ. ಅಂಥಾ ಕುಡುಕರಿಗೆಲ್ಲ ಕಾಸಿಲ್ಲದ ಟೈಮಲ್ಲಿ ಎಣ್ಣೆಯೆಂಬುದು ಮಾಯೆಯಂತೆ ಕಾಡಿರುತ್ತೆ. ಬರಿದಾದ ಜೇಬಲ್ಲಿ ಬಾಯಾರಿ ಕುಂತ ಪ್ರತೀ ಕುಡುಕರಿಗೂ ಹಗಲು ಹೊತ್ತಲ್ಲೇ ಪುಗಸಟ್ಟೆ ಎಣ್ಣೆಯ ಕನಸು ಬಿದ್ದಿರುತ್ತೆ.

ಕಾಸಿಲ್ಲದಿದ್ದರೂ ಮೊಗೆ ಮೊಗೆದು ಮನಸಾರೆ ಕುಡಿಯುವಂಥಾ ವ್ಯವಸ್ಥೆ ಇರಬೇಕಿತ್ತೆಂದು ಹಲುಬಾಡುತ್ತಾರೆ. ನಮ್ಮ ದೇಶದ ಸಮಸ್ತ ಕುಡುಕರಿಗೆ ಬೀಳೋ ಆ ಕನಸು ಇಟಲಿ ದೇಶದಲ್ಲಿ ವಾಸ್ತವದ ಅವತಾರವೆತ್ತಿದೆ. ಇಟಲಿಯ ಕ್ಯಾಲ್ಟಾರಿ ಡಿ ಒರ್ಟೋನಾ ಎಂಬಲ್ಲಿ ಕುಡುಕರ ಪಾಲಿನ ಸ್ವರ್ಗದಂಥಾ ತೀರ್ಥಕ್ಷೇತ್ರವೊಂದಿದೆ. ಅಲ್ಲಿ ರೆಡ್ ವೈನ್ ಕಾರಂಜಿಯಾಗಿ ಸದಾ ಚಿಮ್ಮುತ್ತಿರುತ್ತೆ. ದಿನದ ಇಪ್ಪತ್ನಾಲಕ್ಕು ಗಂಟೆ ನಿರಂತರವಾಗಿ ಚಿಮ್ಮೋ ಈ ವೈನನ್ನು ಜನ ಫ್ರೀಯಾಗಿಯೇ ಮೊಗೆದು ಕುಡಿಯುತ್ತಾರೆ. ಅಂದ ಹಾಗೆ ಈ ರೆಡ್ ವೈನಿನ ಪುಗಸಟ್ಟೆ ಕಾರಂಜಿ ದ್ರಾಕ್ಷಿ ತೋಟದ ನಡುವಲ್ಲಿದೆ. ನಮ್ಮ ದೇಶದಲ್ಲಿಯಾದರೆ ಅಂಥ ಸಾವಿರ ಕಾರಂಜಿಗಳಿದ್ರೂ ಕ್ಷಣಾರ್ಧದಲ್ಲಿಯೇ ಬರಿದಾಗಿಯಾವೇನೋ…

ಬುದ್ಧಿವಂತ ಗೂಬೆ!


ನೀವೇನಾದ್ರೂ ಸರಿರಾತ್ರಿಯವರೆಗೂ ಕೆಲಸ ಮಾಡೋ ರೂಢಿಯಿಟ್ಟುಕೊಂಡಿದ್ರೆ ನಿಮ್ಮನ್ನ ಥರ ಥರದ ಗೊಂದಲಗಳು ಮುತ್ತಿಕೊಂಡಿರುತ್ವೆ. ಯಾಕಂದ್ರೆ ಬೆಳಗ್ಗೆ ಬೇಗನೆ ಏಳಲಾರದ ಸ್ಥಿತಿ ಒಟಾರೆ ಬದುಕಿನ ಟೈಂ ಟೇಬಲ್ಲನ್ನೇ ಅದಲು ಬದಲು ಮಾಡಿರತ್ತೆ. ಯಾಕಂದ್ರೆ ನಮ್ಮಲ್ಲಿ ಬೆಳಗ್ಗೆ ಬೇಗನೆದ್ದು ದಿನಚರಿ ಆರಂಭಿಸೋದು ಜೀವನ ಕ್ರಮವಾಗಿ ಬಿಟ್ಟಿದೆ. ದಿನಾ ಬೆಳಗ್ಗೆ ಸೂರ್ಯೋದಯಕ್ಕಿಂತಲೂ ಮುಂಚೆ ಏಳೋದು ಸಾತ್ವಿಕ ವಿದ್ಯಮಾನ ಅಂತಲೂ ಬಿಂಬಿತವಾಗಿದೆ. ಇನ್ನುಳಿದಂತೆ ಅಧ್ಯಾತ್ಮಿಕವಾಗಿಯೂ ಬೆಳಗ್ಗೆ ಬೇಗನೆ ಏಳೋದರ ಮಹತ್ವದ ಬಗ್ಗೆ ಮಣಗಟ್ಟಲೆ ವಿವರಣೆಗಳಿದ್ದಾವೆ. ಆದ್ರೆ ರಾತ್ರಿ ಕೆಲಸದ ಗುಂಗು ಹತ್ತಿಸಿಕೊಂಡವರಿಗೆ ಬದುಕಲ್ಲೇನೋ ಅಮೂಲ್ಯ ಕ್ಷಣಗಳು ಮಿಸ್ ಆದಂತೆ ಭಾಸವಾಗುತ್ತಿರುತ್ತೆ. ಬೆಳಗಿನ ಆ ಸ್ಫಟಿಕದಂಥಾ ವಾತಾವರಣಕ್ಕೆ ಕಣ್ತೆರೆಯುವ ಮುದ, ಎಳೇಯ ಸೂರ್ಯ ರಶ್ಮಿಗಳ ಹಿಮ್ಮೇಳದ ಆಹ್ಲಾದಗಳನ್ನೆಲ್ಲ ಮಿಸ್ ಮಾಡ್ಕೋತಿದ್ದೀವೇನೋ ಅನ್ನೋ ಭಾವ ಬಿಡದೇ ಕಾಡುತ್ತಿರುತ್ತೆ.

ಇದು ಮಾನಸಿಕ ತೊಳಲಾಟವಾದ್ರೆ, ಮನೆಮಂದಿಯಿಂದ ದಿನಾ ಲೇಟಾಗಿ ಏಳ್ತಾರೆನ್ನೋ ಕಂಪ್ಲೇಟಂತೂ ಇದ್ದೇ ಇರುತ್ತೆ. ಇಂಥಾ ಸಂದರ್ಭದಲ್ಲಿ ಬದುಕು ಗೂಬೆಗಿಂತಲೂ ಕಡೆಯಾಗ್ತೇನೋ ಅಂತ ಕೊರಗ್ತಿರೋರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಬೆಳಗ್ಗೆ ಬೇಗನೆದ್ದು ಮೈ ಮುರಿದು ಹಾರಾಡೋ ಆಕ್ಟೀವ್ ಹಕ್ಕಿಗಳಂಥವರಿಗಿಂತ, ರಾತ್ರಿಯಿಡೀ ಕೆಲಸ ಮಾಡೋ ಗೂಬೆಯಂಥವರಿಗೇ ಬುದ್ಧಿವಂತಿಕೆ ಜಾಸ್ತಿ. ಹಾಗಂತ ಒಂದು ಸಂಶೋಧನೆ ಸಾಬೀತು ಪಡಿಸಿದೆ. ಬೆಳಗ್ಗೆ ಬೇಗನೆದ್ದು ದಿನಚರಿ ಆರಂಭಿಸುವವರಿಗಿಂತ ರಾತ್ರಿ ಎಷ್ಟು ಹೊತ್ತಾದರೂ ಕೆಲಸ ಮಾಡೋ ಮಂದಿಗೆ ಐಕ್ಯೂ ಲೆವೆಲ್ ಜಾಸ್ತಿ ಅಂತ ಈ ಸಂಶೋಧನೆ ಹೇಳಿದೆ. ಅತ್ತ ನಿದ್ದೆಯಿಲ್ಲದೆ, ರಾತ್ರಿ ಹಗಲುಗಳ ವ್ಯತ್ಯಾಸವೂ ಗೊತ್ತಾಗದೆ ಇರೋ ಬುದ್ಧಿಯೆಲ್ಲ ಸವೆಯುತ್ತಿದೆ ಅನ್ನೋ ಕೊರಗಿಟ್ಟುಕೊಂಡೋರಿಗೆಲ್ಲ ಇದು ಪಕ್ಕಾ ರಿಲ್ಯಾಕ್ಸಿಂಗ್ ಸುದ್ದಿ.

ಟೆಡ್ಡಿಬೇರ್ ಸೀಕ್ರೆಟ್ 


ಅದ್ಯಾವುದೇ ದೇಶ ಆಗಿದ್ರೂ ಅಲ್ಲಿ ಕಾನೂನು ಸುವ್ಯವಸ್ಥೆಯನ್ನ ಸರಿಕಟ್ಟಾಗಿರೋವಂತೆ ನೋಡ್ಕೊಳ್ಳೋ ಭಾರ ಪೊಲೀಸರ ಮೇಲಿರುತ್ತೆ. ಇಡೀ ಸಮಾಜದಲ್ಲಿ ಯಾವುದೇ ದುಷ್ಟ ದಂಧೆಗಳು ನಡೆಯದಂತೆ ತಡೆಯುವಲ್ಲಿ ಪೊಲೀಸರ ಪಾತ್ರವನ್ನ ಯಾರೂ ಶ್ಲಾಘಿಸದಿರೋಕೆ ಸಾಧ್ಯಾನೆ ಇಲ್ಲ. ಹಾಗೆ ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರೋ ಪೊಲೀಸ್ ಇಲಾಖೆಯ ಕಾನೂನು ರೀತಿ ರಿವಾಜುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ವೆ. ಅದು ಕೇವಲ ಯೂನಿಫಾಂಗೆ ಮಾತ್ರ ಸೀಮಿತವಲ್ಲ; ಕಾರ್ಯವೈಖರಿಯಲ್ಲೂ ವ್ಯತ್ಯಾಸಗಳಿರುತ್ವೆ.  ಅನ್ಯಾಯ ನಡೀತಿದ್ರೆ ಯಾವ ಮೂಲಾಜೂ ಇಲ್ಲದೆ ಎದುರಾಗಿ ನಿಲ್ಲೋ ಪೊಲೀಸರ ಪಾಲಿಗೆ ಮಾನವೀಯ ಗುಣಗಳೂ ಮುಖ್ಯ.

ನಮ್ಮಲ್ಲಿ ಕೆಲ ಖಡಕ್ ಅಧಿಕಾರಿಗಳೂ ಕೂಡಾ ಅಂಥಾ ಮಾನವೀಯತೆಯಿಂದಾನೇ ಪ್ರಸಿದ್ಧಿ ಪಡೆಯೋದಿದೆ. ನಿಷ್ಠುರತೆ, ಪ್ರಾಮಾಣಿಕತೆ ಮತ್ತು ಮನುಷ್ಯತ್ವವನ್ನ ಜೊತೆಯಾಗಿಸಿಕೊಂಡವರು ಮಾತ್ರವೇ ಅಂಥಾ ಮನ್ನಣೆ ಪಡೆಯೋಕೆ ಸಾಧ್ಯ. ಸದ್ಯ ಡಚ್ ಪೊಲೀಸರು ಕೂಡಾ ಅಂಥಾದ್ದೊಂದು ಮಾನವೀಯ ವಿಚಾರದ ಮೂಲಕ ಗಮನ ಸೆಳೆಯುತ್ತಾರೆ. ಪ್ರತೀ ಡಚ್ ಪೊಲೀಸರೂ ಕೂಡಾ ಡ್ಯೂಟಿಗೆ ತೆರಳುವಾಗ ಟೆಡ್ಡಿಬೇರ್‌ಗಳನ್ನ ಜೊತೆಗಿಟ್ಟುಕೊಳ್ತಾರಂತೆ. ಅವರ ಕಾರುಗಳಲ್ಲಿ ಟೆಡ್ಡಿಬೇರ್‌ಗಳು ಇದ್ದೇ ಇರುತ್ವೆ. ಅರೇ ಪೊಲೀಸರಿಗೂ ಟೆಡ್ಡಿ ಬೇರ್‌ಗಳಿಗೂ ಯಾವ ಸಂಬಂಧ ಅನ್ನಿಸೀತೇನೋ. ಅದಕ್ಕೆ ಉತ್ತರವಾಗಿ ಆರಕ್ಷಕರ ಮಾನವೀಕ ಮುಖವೊಂದು ಎದುರಾಗುತ್ತೆ. ಒಂದು ವೇಳೆ ಅಪಘಾತಗಳಾದಾಗ ಪುಟ್ಟ ಮಕ್ಕಳು ಗಾಯಗೊಂಡಿದ್ರೆ ಅಥವಾ ಎಲ್ಲರೂ ಗಾಯಗೊಂಡು ಮಗುವನ್ನು ಸಂಭಾಳಿಸಬೇಕಾಗಿ ಬಂದ್ರೆ ಸಹಾಯವಾಗುತ್ತೆ ಅಂತ ಟೆಡ್ಡಿ ಬೇರ್ ಮೊರೆ ಹೋಗಲಾಗಿದ್ಯಂತೆ. ಅಲ್ಲಿನ ಪೊಲೀಸರ ಪಾಲಿಗೆ ಲಾಠಿ, ರಿವಾಲ್ವರುಗಳಂತೆ ಟೆಡ್ಡಿಬೇರ್‌ಗಳು ಕೂಡಾ ಡ್ಯೂಟಿಯ ಭಾಗವಾಗಿವೆಯಂತೆ.

ಪೈಲಟ್‌ಗಳ ಭಾಷೆ


ಈವತ್ತು ಇಡೀ ಜಗತ್ತು ಅಂಗೈಲಿರುವಂತೆಯೇ ಫೀಲ್ ಆಗುವಂಥಾ ವಾತಾವರಣವಿದೆ. ಈ ಆಧುನಿಕ ಜಗತ್ತಿನಲ್ಲೀಗ ಯಾವುದೂ ನಿಗೂಢವಾಗುಳಿದಿಲ್ಲ. ನಮಗೆಲ್ಲ ಯಾವ ವಿಚಾರಗಳೂ ವಿಸ್ಮಯ ಅನ್ನಿಸೋದಿಲ್ಲ. ಹೀಗೆ ಎಲ್ಲ ತಂತ್ರಜ್ಞಾನಗಳೂ ಖುಲ್ಲಂಖುಲ್ಲ ಆಗಿರೋ ಈ ಘಳಿಗೆಯಲ್ಲಿಯೂ ಕೆಲವೊಂದು ವಿಚಾರಗಳು ಮಾತ್ರ ಯಥಾಪ್ರಕಾರ ಆಕರ್ಷಣೆ ಉಳಿಸಿಕೊಂಡಿವೆ. ಅದರಲ್ಲಿ ಇದೀಗ ವಿಶ್ವದ ತುಂಬೆಲ್ಲ ಹಾರಾಡಿಕೊಂಡಿರೋ ವಿಮಾನಗಳದ್ದು ಅಗ್ರ ಸ್ಥಾನ. ಆಕಾಶದಲ್ಲಿ ವಿಮಾನದ ಸೌಂಡು ಕೇಳಿದರೆ ಪುಟ್ಟ ಮಕ್ಕಳಂತೆ ಅದರತ್ತ ನೋಡುವಂಥ ಬೆರಗು ಈಗಲೂ ಉಳಿದು ಹೋಗಿದೆ. ಮೋಡದ ಮುದ್ದೆ ಸೀಳಿಕೊಂಡು ಪುಟ್ಟ ಹಕ್ಕಿಯಂತೆ ಹಾರಾಡೋ ದೈತ್ಯ ವಿಮಾನ ಎವರ್‌ಗ್ರೀನ್ ಆಕರ್ಷಣೆ. ಅದೆಷ್ಟೋ ಸಾವಿರ ಮೈಲಿಗಳಷ್ಟು ಎತ್ತರದಲ್ಲಿ ವಿಮಾನ ಚಲಾಯಿಸೋ ಪೈಲಟ್ ಅಂತೂ ದೇವಮಾನವನಂತೆಯೇ ಕಾಣ್ತಾನೆ.

ಹಾಗೆ ವಿಮಾನಗಳು ಹೇಗೆ ಹಾರಾಡ್ತಾವೆ, ಅವುಗಳನ್ನ ಪೈಲಟ್ ಹೇಗೆ ಗಮ್ಯ ಸೇರಿಸ್ತಾನನ್ನೋದೆಲ್ಲ ಕುತೂಹಲದ ಸಂಗತಿಗಳೇ. ಹಾಗೆ ಆ ಪಾಟಿ ಗಾತ್ರದ ವಿಮಾನವನ್ನು ವಿಶ್ವದ ನಾನಾ ದೇಶಗಳಿಗೆ ಮುಟ್ಟಿಸ್ತಾನಲ್ಲಾ ಪೈಲಟ್? ಅದರ ಹಿಂದೆ ಮುನ್ನೂರು ಪದಗಳದ್ದೊಂದು ಸಪರೇಟ್ ಆದ ಭಾಷೆಯ ಪಾತ್ರವೂ ಇದೆ. ಪ್ರತೀ ಪೈಲಟ್‌ಗಳೂ ಅದನ್ನು ಕರತಲಾಮಲಕ ಮಾಡಿಕೊಂಡಿರ್‍ತಾರೆ. ಪೈಲಟ್‌ಗಳು ಮತ್ತು ತಾಂತ್ರಿಕ ವರ್ಗದ ಸಂಭಾಷಣೆ ಅದೇ ಭಾಚೆಯಲ್ಲಿ ನಡೆಯುತ್ತೆ. ಅದರಿಂದಲೇ ವಿಮಾನಗಳು ಯಾವುದೇ ಅವಘಡಗಳಾಗದಂತೆ ಯಶಸ್ವಿಯಾಗಿ ಹಾರಾಡ್ತಾವೆ. ಆ ಮುನ್ನೂರು ಪದಗಳಿರೋ ವಿಶೇಷ ಭಾಷೆಗೆ ಆವಿಯೇಷನ್ ಇಂಗ್ಲೀಷ್ ಅಂತಾರೆ.

ಜೋಳದ ಸಿಪ್ಪೆಯ ಆವಿಷ್ಕಾರ


ಇದು ಹೊಸ ಹೊಸಾ ಆವಿಷ್ಕಾರಗಳಿಂದಲೇ ಕಳೆಗಟ್ಟಿಕೊಂಡಿರೋ ಯುಗ. ನಿಂತಿದ್ದಕ್ಕೆ ಕುಂತಿದ್ದಕ್ಕೆಲ್ಲ ನಮಗೆ ಕೆಲಸ ಆರಾಮಾಗಬೇಕು. ಎಲ್ಲದಕ್ಕೂ ಅತ್ಯಾಧುನಿಕ ಆವಿಷ್ಕಾರದ ಫಲಗಳಂತೂ ಬೇಕೇ ಬೇಕು. ಹಾಗೆ ಇಂದು ನಮಗೆಲ್ಲ ಕೈಗೆಟುಕುತ್ತಿರೋ ಕೆಲ ವಸ್ತುಗಳಿಲ್ಲದ ಕಾಲದಲ್ಲಿ ಈ ಜಗತ್ತು ಹೇಗಿತ್ತು? ಆ ಕಾಲದಲ್ಲಿ ಜನ ಆಯಾ ಕೆಲಸಕ್ಕಾಗಿ ಏನನ್ನು ಬಳಸ್ತಿದ್ರು ಅನ್ನೋದೆಲ್ಲ ಶೋಧನಾರ್ಹ ಅಂಶಗಳೇ. ಈ ನಿಟ್ಟಿನಲ್ಲಿ ನೋಡ ಹೋದ್ರೆ ಮುಂದುವರೆದು ಬೀಗುತ್ತಿರೋ ಕೆಲ ದೇಶಗಳಲ್ಲಿನ ಇಂಟರೆಸ್ಟಿಂಗ್ ಪುರಾಣಗಳು ಗರಿಬಿಚ್ಚಿಕೊಳ್ಳುತ್ವೆ.

ಈವತ್ತಿಗೆ ಅಮೆರಿಕಾ ಇಡೀ ಜಗತ್ತಿನ ದೊಡ್ಡಣ್ಣ ಎಂಬಂತೆ ಮೆರೆಯುತ್ತಿದೆ. ಜಗತ್ತಿನ ಇತರೇ ರಾಷ್ಟ್ರಗಳ ಆಂತರಿಕ ವಿಚಾರಗಳಲ್ಲಿಯೂ ಮೂಗು ತೂರಿಸ್ತಾ ದೊಡ್ಡಸ್ತಿಕೆ ಪ್ರದರ್ಶಿಸ್ತಿದೆ. ಅಲ್ಲಿನ ಜನರಂತೂ ತೀರಾ ಅಪ್‌ಡೇಟೆಡ್ ವರ್ಷನ್ನುಗಳು. ಅವರದ್ದು ಹೈಫೈ ಕಲ್ಚರ್. ನಮಗೆ ವಿಚಿತ್ರ ಅನ್ನುವಂಥ ನಡವಳಿಕೆ, ಜೀವನ ಕ್ರಮ ಅವರದ್ದು. ಈಗ ಪಾಯಿಖಾನೆ ಬಳಸಿದ ನಂತ್ರ ಶುಚಿತ್ವಕ್ಕೆ ಟಾಯ್ಲೆಟ್ ಪೇಪರ್ ಬಂದಿದೆಯಲ್ಲಾ? ನಮ್ಮ ದೇಶದಲ್ಲಿ ಚೊಂಬು ಹಿಡಿದು ಪೊದೆ ಹುಡುಕುತ್ತಿದ್ದ ಕಾಲದಲ್ಲಿಯೇ ಅಮೆರಿಕನ್ನರು ಒರೆಸಿಕೊಳ್ಳುವ ತಂತ್ರಜ್ಞಾನವನ್ನ ಆವಿಷ್ಕರಿಸಿದ್ರು.

ಆದ್ರೆ ಟಾಯ್ಲೆಟ್ ಪೇಪರ್ ಅನ್ನೋದು ಆಧುನಿಕ ಆವಿಷ್ಕಾರ. ಅದಕ್ಕೂ ಮುನ್ನ ಅಮೆರಿಕನ್ನರು ಆ ಕೆಲಸಕ್ಕಾಗಿ ಏನನ್ನು ಬಳಸ್ತಿದ್ರು ಅನ್ನೋ ಕುತೂಹಲ ಸಹಜಾನೆ. ಆ ಕಾಲದಲ್ಲಿ ಅವರು ಜೋಳದ ಮೇಲಿನ ಸಿಪ್ಪೆಯನ್ನೇ ಆ ಕಾರ್ಯಕ್ಕಾಗಿ ಬಳಸ್ತಿದ್ರಂತೆ. ಜೋಳದ ಹಸೀ ಸಿಪ್ಪೆಯನ್ನು ಒಂದಷ್ಟು ಕಾಲ ಒಣಗಿಸಿದ್ರೆ ಅದ್ರ ಒಳಭಾಗ ಸಾಫ್ಟ್ ಆಗತ್ತೆ. ಆ ನಂತ್ರ ಅದನ್ನ ಶೇಖರಿಸಿಟ್ಕೊಂಡು ಅದನ್ನೇ ಟಾಯ್ಲೆಟ್ ಪೇಪರ್‌ನಂತೆ ಬಳಸಿಕೊಳ್ತಿದ್ರಂತೆ. ನಂತರ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಜೋಳದ ಸಿಪ್ಪೆ ಈ ಕಾರ್ಯಕ್ರಮಕ್ಕೆ ಬಳಕೆಯಾಗ್ತಿತ್ತಂತೆ. ಈಗಲೂ ಕೆಲ ಪಾಶ್ಚಾತ್ಯರು ನೈಸರ್ಗಿಕ ಉತ್ಪನ್ನಗಳ ಮೇಲಿನ ಪ್ರೇಮ, ಆರೋಗ್ಯದ ಕಾಳಜಿಯಿಂದ ಜೋಳದ ಸಿಪ್ಪೆಗೆ ಅಂಟಿಕೊಂಡಿದ್ದಾರಂತೆ.

Tags: #interestingfacts#stunningfacts#weirdnews

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
massage parlour scandals: ಐಟಿ ಸಿಟಿಯನ್ನು ಆವರಿಸಿಕೊಂಡಿದೆ ಸ್ಪಾ ದಂಧೆ!

massage parlour scandals: ಐಟಿ ಸಿಟಿಯನ್ನು ಆವರಿಸಿಕೊಂಡಿದೆ ಸ್ಪಾ ದಂಧೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.