ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೌಂಟರ್ ಜೊತೆ ಕ್ಲ್ಯಾರಿಟಿ ಕೊಡುವ ಕೆಲಸ ಮಾಡಿದ್ದಾರೆ. ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೇಳುವ ನೆಪದಲ್ಲಿ ಕೆಣಕಿದವರಿಗೆ ಮತ್ತು ಟೀಕಿಸಿದವರಿಗೆ ಬಾದ್ ಷಾ ಕಿಚ್ಚ ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ನೀಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾಗಳಂದ್ರೆ ಅಭಿಮಾನಿಗಳ ಜೊತೆಗೆ ಸಮಸ್ತ ಸಿನಿಮಾ ಪ್ರೇಮಿಗಳ ಕುತೂಹಲ ಇದ್ದೇ ಇರುತ್ತೆ. ಅದರಂತೇ, ಕಿಚ್ಚನ ʻಮ್ಯಾಕ್ಸ್ʼ ಚಿತ್ರದ ಬಗ್ಗೆ ಇನ್ನಿಲ್ಲದ ನಿರೀಕ್ಷೆಯಿದೆ. ಆ ಸಿನಿಮಾ ಎಲ್ಲಿಗೆ ಬಂತು? ಏನಾಗ್ತಿದೆ ಎನ್ನುವ ಕುತೂಹಲ ಸಹಜವಾದರೂ ಕೂಡ ಆ ಸಿನಿಮಾದ ಬಗ್ಗೆ ಅಪ್‌ಡೇಟ್ ಸಿಗ್ತಿಲ್ಲವೆಂದು ಬಿಗ್‌ಬಾಸ್ ಶೋ ಹಾಗೂ ಸಿಸಿಎಲ್ ಬಗ್ಗೆ ಕೆಲವರು ವ್ಯಂಗ್ಯವಾಡಿದ್ದಾರೆ. ಅಂತವರಿಗೆ ಕಿಚ್ಚ ಕೌಂಟರ್ ಜೊತೆ ಕ್ಲ್ಯಾರಿಟಿನೂ ಕೊಟ್ಟಿದ್ದಾರೆ. ಬೇರೆ ಸಿನಿಮಾಗಳ ಜೊತೆ ಅಥವಾ ಸ್ಟಾರ್ಸ್‌ಗಳ ಜೊತೆ ಕಾಂಪಿಟ್ ಮಾಡೋದಕ್ಕೋಸ್ಕರ ತನ್ನ ಸಿನಿಮಾದ ಅಪ್‌ಡೇಟ್ ಕೊಡುವುದಕ್ಕೆ ಆಗಲ್ಲ ಎಂದಿದ್ದಾರೆ. ಅಟ್ ದಿ ಸೇಮ್ ಟೈಮ್ ಚಿತ್ರತಂಡದಿಂದ ಒಂದು ಸಾಲಿಡ್ ಕಂಟೆಂಟ್ ರೆಡಿಯಾದಾಗ ಅದು ಮಾರುಕಟ್ಟೆಗೆ ಬರಲೇಬೇಕು ಬರುತ್ತೆ ಕೂಡ. ಆ ಟೈಮ್‌ಗೋಸ್ಕರ ಕಾಯಬೇಕು ಎಂದಿದ್ದಾರೆ.
ಇನ್ನೂ ‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಹಾಗಾಗಿ ಜನವರಿ 16 ರಂದು ಚಿತ್ರದ ಕೆಲಸ ಎಲ್ಲಿಯವರೆಗೂ ಬಂತು ಎಂದು ಸುದೀಪ್ (Sudeep) ಮಾಹಿತಿ ನೀಡಿದ್ದರು. ‘ಮ್ಯಾಕ್ಸ್’ ಸಿನಿಮಾದ ಮೇಲಿರುವ ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ ಅನ್ನೋದು ಸುದೀಪ್ ಅವರ ಪ್ರಶ್ನೆ. ನವೆಂಬರ್‌ನಲ್ಲಿ ಮಳೆಯಿಂದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್‌ನಲ್ಲಿ ಕೆಲವು ಅಡೆತಡೆಗಳು ಎದುರಾದವು. ಈಗ ಸಂಕ್ರಾಂತಿ ಬಳಿಕ ಮತ್ತೆ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದರು. ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ. ಚಿತ್ರದ ಉಳಿದ ಭಾಗಗಳ ಚಿತ್ರೀಕರಣ ಪ್ರಗತಿಯಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇಷ್ಟು ಹೇಳಿದ್ಮೇಲೂ ಕೂಡ ಕಿಚ್ಚನಿಗೆ ಸೋಷಿಯಲ್ ಮೀಡಿಯಾ ಮೂಲಕ ʻಮ್ಯಾಕ್ಸ್ʼ ಬಗ್ಗೆ ಪ್ರಶ್ನೆ ಮಾಡುವವರು ಮತ್ತು ಸಿಸಿಎಲ್ ಹಾಗೂ ಬಿಗ್‌ಬಾಸ್ ಬಗ್ಗೆ ವ್ಯಂಗ್ಯವಾಡುವವರು ಹೆಚ್ಚಾಗಿದ್ದರು. ಇದಕ್ಕೆ ಬ್ರೇಕ್ ಹಾಕಬೇಕು ಅಂತಲೇ ಮಾಣಿಕ್ಯ ಒಂದು ಲೆಟರ್ ಬರೆದು ಪೋಸ್ಟ್ ಮಾಡಿದ್ದಾರೆ. ಯಾರದೋ ಸಿನಿಮಾ ರಿಲೀಸ್ ಆಯಿತು ಅಂತ ಪೈಪೋಟಿಗಾಗಿ ಹಾಗೆಲ್ಲ ಅಪ್ ಡೇಟ್ ಕೊಡೋಕೆ ಆಗಲ್ಲವೆಂದು ಅವರು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಕಿಚ್ಚ ಬಾಸ್ ಕೈಯಲ್ಲಿ ಐದು ಸಿನಿಮಾಗಳಿವೆ. ಅಟ್ ದಿ ಸೇಮ್ ಟೈಮ್ ಬಿಗ್ ಬಾಸ್ ಟಿವಿ ಶೋ ಮುಗಿಸಿ ಓಟಿಟಿ ಶೋಗೆ ಸಜ್ಜಾಗ್ತಿದ್ದಾರೆ. ಇತ್ತ ಸಿಸಿಎಲ್ ಸೀಸನ್ ಕೂಡ ಶುರುವಾಗ್ತಿದ್ದು, ಇತ್ತೀಚೆಗಷ್ಟೇ ದುಬೈನ ಬುರ್ಜ್ ಖಲೀಫಾದಲ್ಲಿ ಪ್ರೋಮೋ ರಿಲೀಸ್ ಮಾಡಲಾಯ್ತು. ಈ ವೇಳೆ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರ ಸಮಾಗಮವಾಗಿತ್ತು.