ನಟ, ನಿರ್ಮಾಪಕ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಉತ್ತರಕಾಂಡ’ ಚಿತ್ರತಂಡ ಅವರಿಗಾಗಿ ಸ್ಪೆಷಲ್ ಗಿಫ್ಟ್ ನೀಡಿದೆ. ಆ ಗಿಫ್ಟ್ ಏನೆಂದರೆ, ಧನಂಜಯ್ ಕ್ಯಾರೆಕ್ಟರ್ ಟೀಸರ್.ಹೌದು, ‘ಉತ್ತರಕಾಂಡ’ ಸಿನಿಮಾದಲ್ಲಿ ಧನಂಜಯ್ ಅವರ ಪಾತ್ರ ಪರಿಚಯ ಮಾಡುವ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಹುಟ್ಟುಹಬ್ಬದ ಪೂರ್ವಭಾವಿಯಾಗಿ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಧನಂಜಯ್ ಪಾತ್ರವಾದ ‘ಗಬ್ರು ಸತ್ಯ’ನ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಲಾಯಿತು. ‘ಉತ್ತರಕಾಂಡ’ ಚಿತ್ರವು ಉತ್ತರ ಕರ್ನಾಟಕದ ಪ್ರದೇಶದಲ್ಲಿ ನಡೆಯುವ ಕಥೆಯಾಗಿದ್ದು, ಗಬ್ರು ಸತ್ಯ ಎಂಬ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತು ದಿಗಂತ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಕೆ ಆರ್ ಜಿ ಸ್ಟುಡಿಯೋಸ್’ ಲಾಂಛನದಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ. ಸದ್ಯ ಬಿಡುಗಡೆಯಾಗಿರುವ ಈ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸದ್ದು ಮಾಡುತ್ತಿದೆ.